ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವಲ್ಲಿ ಈ ಮಸೂದೆ ಹೊಸ ಹೆಜ್ಜೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಖಾಸಗಿ ಸದಸ್ಯರೊಬ್ಬರ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವುದು ಚಾರಿತ್ರಿಕ ನಡೆ. ಈ ಖಾಸಗಿ ಮಸೂದೆಯನ್ನು ಮಂಡಿಸಿದವರು ಡಿಎಂಕೆ ಸದಸ್ಯ ತಿರುಚ್ಚಿ ಶಿವ. ‘ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಮಸೂದೆ 2014’, ಲೈಂಗಿಕ ಅಲ್ಪಸಂಖ್ಯಾತರ ಏಳಿಗೆಗಾಗಿ ರಾಷ್ಟ್ರೀಯ ನೀತಿಯನ್ನು ರೂಪಿಸಿ ಜಾರಿಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಮಸೂದೆ ಲೋಕಸಭೆಯ ಅಂಗೀಕಾರವನ್ನೂ ಪಡೆದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಆಯೋಗಗಳು ಸ್ಥಾಪನೆಯಾಗಲಿವೆ. ಹಾಗೆಯೇ ವಿಶೇಷ ಲೈಂಗಿಕ ಅಲ್ಪಸಂಖ್ಯಾತರ ನ್ಯಾಯಾಲಯಗಳು ಸ್ಥಾಪನೆಯಾಗಲಿವೆ. ಇದರಿಂದ ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಹಿಂಸಾಚಾರ ತಡೆಗೆ ಭಾರತಕ್ಕೆ ಬಲವಾದ ಕಾನೂನು ಸಿಕ್ಕಿದಂತಾಗುತ್ತದೆ. ‘ಇತರ ಹಿಂದುಳಿದ ವರ್ಗಗಳ ಸಮುದಾಯಗಳಿಗೆ (ಒಬಿಸಿ) ಸಮಾನವಾಗಿ ಲೈಂಗಿಕ ಅಲ್ಪಸಂಖ್ಯಾತರನ್ನೂ ಪರಿಗಣಿಸಬೇಕು’ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಏಪ್ರಿಲ್‌ನಲ್ಲಿ ನಿರ್ದೇಶನ ನೀಡಿತ್ತು. ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಈ ಮೀಸಲು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈಗ ಇಂತಹದೊಂದು ಮಸೂದೆ, ಈ ನಿಟ್ಟಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಅನುಷ್ಠಾನಕ್ಕೆ ಮತ್ತಷ್ಟು ಪುಷ್ಟಿ ಒದಗಿಸುವಂತಹದ್ದು. ಖಾಸಗಿ ಸದಸ್ಯರೊಬ್ಬರ ಮಸೂದೆ, ಈ ಹಿಂದೆ ಅಂಗೀಕಾರವಾಗಿದ್ದು 1970ರಲ್ಲಿ ಎಂಬುದನ್ನು ನೆನಪಿಸಿಕೊಳ್ಳಬಹುದು. ಈಗ 45 ವರ್ಷಗಳ ಸುದೀರ್ಘ ಅಂತರದ ನಂತರ ಮತ್ತೊಮ್ಮೆ ಖಾಸಗಿ ಸದಸ್ಯರ ಮಸೂದೆಗೆ ಈ ಬಗೆಯ ಬೆಂಬಲ ದೊರಕಿರುವುದು ಸಕಾರಾತ್ಮಕ ನಡೆ. ಭಾರತದ ಸಂಸದೀಯ ಇತಿಹಾಸದಲ್ಲಿ ಈವರೆಗೆ 14 ಖಾಸಗಿ ಸದಸ್ಯರ ಮಸೂದೆಗಳು ಕಾನೂನಾಗಿ ಪರಿವರ್ತಿತವಾಗಿವೆ ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಈ ರಾಷ್ಟ್ರದ ಎಲ್ಲಾ ನಾಗರಿಕರಿಗೆ ರಾಜಕೀಯ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಸಂವಿಧಾನ ನೀಡಿದೆ. ಹೀಗಿದ್ದೂ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಿ ಪರಿಗಣಿಸದೇ ಇರುವಂತಹ ದೃಷ್ಟಿಕೋನ ಮುಂದುವರಿದಿರುವುದು ದುರದೃಷ್ಟಕರ. ನಗರ ಪ್ರದೇಶಗಳಲ್ಲಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಕನಿಷ್ಠ ಗುರುತಿನ ಚೀಟಿ ಸೇರಿದಂತೆ ಅನೇಕ ಸೌಲಭ್ಯಗಳು ಕೆಲವರಿಗಾದರೂ ಸಿಕ್ಕಿರಬಹುದು. ಆದರೆ ದೂರದ ಗ್ರಾಮಗಳಲ್ಲಿರುವ ಜನರಿಗೆ ಈ ಯಾವ ಸೌಲಭ್ಯಗಳೂ ತಲುಪಿಲ್ಲ. ಸಮಾಜದ ಮುಖ್ಯವಾಹಿನಿಯ ಹೊರಗೇ ಅವರು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಈ ಸಮುದಾಯದ ಕ್ಷೇಮಾಭಿವೃದ್ಧಿಗೆ ಸ್ಪಂದಿಸಿ ಕಾಳಜಿ ತೋರಬೇಕಾದುದು ಅಗತ್ಯ. ಕಾನೂನಿನಿಂದ ಲಭ್ಯವಾಗುವ ಹಕ್ಕುಗಳನ್ನು ಎತ್ತಿಹಿಡಿಯುವುದಲ್ಲದೆ ಈ ವರ್ಗದ ಜನರಿಗೆ ಕೌಶಲ ತರಬೇತಿ, ಉದ್ಯೋಗ ಅವಕಾಶಗಳು, ಪುನರ್ವಸತಿ ಹಾಗೂ ಸಾಮಾಜಿಕ ಭದ್ರತೆಗೆ ಅವಕಾಶಗಳನ್ನು ಕಲ್ಪಿಸಿಕೊಡ ಬೇಕಾದುದೂ ಮುಖ್ಯ. ಈಗ, ಈ ಕುರಿತಾದ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಮಸೂದೆಗೆ ಎಲ್ಲಾ ರಾಜಕೀಯ ಪಕ್ಷಗಳ ಸಕಾರಾತ್ಮಕ ಸ್ಪಂದನ ದೊರೆತಿರುವುದು ಒಳ್ಳೆಯ ಬೆಳವಣಿಗೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಹೆಚ್ಚುತ್ತಿರುವ ಸಂವೇದನಾಶೀಲತೆಗೆ ಇದು ಸಾಕ್ಷಿ. ಇತ್ತೀಚಿನ ವರ್ಷಗಳಲ್ಲಷ್ಟೇ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಸಹಾನುಭೂತಿಪರವಾಗಿ ಅರಿತುಕೊಳ್ಳುವ ಪ್ರಯತ್ನ ಸಮಾಜದಲ್ಲಾಗುತ್ತಿದೆ. ಆದರೆ ಈ ಮಸೂದೆ ಅನೇಕ ಆಯಾಮಗಳನ್ನು ಚರ್ಚಿಸುವುದಿಲ್ಲ ಎಂಬುದೂ ನಿಜ. ಹೀಗಾಗಿ ವಿವಿಧ ಇಲಾಖೆಗಳು ಹಾಗೂ ಸಚಿವಾಲಯಗಳೊಂದಿಗೆ ಈ ಮಸೂದೆ ವ್ಯಾಪಕ ಚರ್ಚೆಗೆ ಒಳಪಡಬೇಕಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಷ್ಟ್ರದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಕೇವಲ 4.5 ಲಕ್ಷ ಮಂದಿ. ಆದರೆ ಪೂರ್ಣ ಎಣಿಕೆಗೆ ಸಿಕ್ಕಿಲ್ಲದ ಈ ಮಂದಿ 20– 25 ಲಕ್ಷದಷ್ಟಿದ್ದಾರೆ ಎಂಬುದು ಈ ಸಮುದಾಯದ ಜೊತೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರ ಅಂದಾಜು. ಹೀಗಾಗಿ ಅಗೋಚರತೆಯಲ್ಲೇ ಎಷ್ಟೋ ಮಂದಿ ಬದುಕುತ್ತಿದ್ದಾರೆ ಎಂಬುದು ಸ್ಪಷ್ಟ. ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಈ ಮಸೂದೆ ಹೊಸ ಹೆಜ್ಜೆಯಾಗಲಿ. ಈ ಜನರಿಗೆ ಘನತೆಯುಕ್ತ ಬಾಳು ಸಾಧ್ಯವಾಗುವಂತೆ ಮಾಡುವಲ್ಲಿ ಈ ಪ್ರಯತ್ನ ಯಶಸ್ವಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.