ಪ್ರತೀಕಾರದ ಕ್ರಮ ಪ್ರಜಾಸತ್ತೆಗೆ ಸಲ್ಲದು ಎನ್‌ಜಿಒಗಳಿಗೆ ಕಿರುಕುಳ ನೀಡುವಂತಹದ್ದು ಅಧಿಕೃತ ನೀತಿ ಆಗುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಪ್ರವೃತ್ತಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು. ಸ್ವರ್ಕಾರೇತರ ಸಂಸ್ಥೆಗಳಿಗೆ (ಎನ್ ಜಿಒ) ಹರಿದುಬರುವ ವಿದೇಶಿ ದೇಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಗೃಹ ಸಚಿವಾಲಯ, ಅಮೆರಿಕದ ಫೋರ್ಡ್‌ ಪ್ರತಿಷ್ಠಾನವನ್ನು ‘ಕಣ್ಗಾವಲು ಪಟ್ಟಿ’ಯಲ್ಲಿ ಇರಿಸಿದೆ. ಗುಜರಾತ್‌ ಸರ್ಕಾರ ಸಲ್ಲಿಸಿದ ದೂರಿನ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ‘ದೇಶದ ಆಂತರಿಕ ವಿಚಾರದಲ್ಲಿ ಫೋರ್ಡ್‌ ಪ್ರತಿಷ್ಠಾನ ಮೂಗು ತೂರಿಸುತ್ತಿದೆ ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಮೂಲಕ ಕೋಮು ಸೌಹಾರ್ದ ಕದಡಲು ಅದು ಯತ್ನಿಸುತ್ತಿದೆ’ ಎಂಬುದು ಗುಜರಾತ್ ಸರ್ಕಾರದ ಆರೋಪ. ಈ ಆರೋಪ ಅನುಸರಿಸಿ ಕೈಗೊಂಡಿರುವ ಈ ನಿರ್ಧಾರ ಪ್ರತೀಕಾರದ ದೃಷ್ಟಿ ಬಿಂಬಿಸುವಂತಹದ್ದು. ಭಾರತದಲ್ಲಿ ಅನೇಕ ಸಾಮಾಜಿಕ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಫೋರ್ಡ್ ಪ್ರತಿಷ್ಠಾನ ದೇಣಿಗೆ ನೀಡಿರುವುದು ಸುಪರಿಚಿತ. ಆದರೆ, ಸರ್ಕಾರೇತರ ಸಂಸ್ಥೆಗಳ ಮೇಲೆ ನಿರಂತರವಾಗಿ ಕೇಂದ್ರ ಸರ್ಕಾರ ಅಸಹನೆಯ ದೃಷ್ಟಿಯನ್ನು ವ್ಯಕ್ತಪಡಿಸುತ್ತಾ ಬರುತ್ತಿರುವುದು ಎದ್ದುಕಾಣಿಸುವ ಅಂಶ. ನಿಜ. ವಿದೇಶಿ ಧನಸಹಾಯದ ಉದ್ದೇಶ ಸ್ಪಷ್ಟವಾಗಿರಬೇಕು. ಹಾಗೆಯೇ ಸರ್ಕಾರ ಕೈಗೊಳ್ಳುವ ಕ್ರಮದ ಉದ್ದೇಶವೂ ಸ್ಪಷ್ಟವಾಗಿರಬೇಕು. ಆದಿವಾಸಿ ಸಮುದಾಯದ ಹಕ್ಕುಗಳ ವಿಚಾರ ಮಾತನಾಡಲು ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರು ಬ್ರಿಟನ್ಗೆ ತೆರಳುವುದನ್ನು ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ತಡೆದಿತ್ತು. ‘ವಿದೇಶಿ ನೆಲದಲ್ಲಿ ಅವರ ಮಾತುಗಳು ಭಾರತವನ್ನು ಸರಿಯಾಗಿ ಬಿಂಬಿಸುವುದಿಲ್ಲ. ಇದರಿಂದ ವಿದೇಶಿ ಹಣಹೂಡಿಕೆಗೆ ಅಡ್ಡಿಯಾಗುತ್ತದೆ’ ಎಂದು ಕೇಂದ್ರ ಸರ್ಕಾರ, ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ ಇದು ಮೂಲಭೂತ ಹಕ್ಕುಗಳ ಅತಿಕ್ರಮಣ ಎಂದು ದೆಹಲಿ ಹೈಕೋರ್ಟ್ ಘೋಷಿಸಿ ದ್ದುದನ್ನು ಇಲ್ಲಿ ಸ್ಮರಿಸಬಹುದು. ಈಗ ರಾಷ್ಟ್ರಕ್ಕೆ ಬರಲಿರುವ ಫೋರ್ಡ್ ಪ್ರತಿಷ್ಠಾನದ ಹಣಕ್ಕೆ ಪೂರ್ವ ಅನುಮತಿ ಇರಬೇಕು ಎಂಬಂಥ ಭಾರತದ ಆದೇಶ ಹಾಗೂ ಗ್ರೀನ್ ಪೀಸ್ ಹಣಕಾಸು ಖಾತೆಯನ್ನು ಸ್ಥಗಿತಗೊಳಿಸಿರುವ ವಿಚಾರಗಳು ವಿವಾದಾತ್ಮಕವಾಗಿವೆ. ಪರಿಸರ ವಿಚಾರಗಳಿಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಗ್ರೀನ್ ಪೀಸ್ ಸಂಘಟನೆ ಸಕ್ರಿಯವಾಗಿದೆ. ಉದ್ಯಮಗಳು ಹಾಗೆಯೇ ಸರ್ಕಾರಗಳ ಜೊತೆಗೆ ಅದು ಸಂಘರ್ಷ ಹೊಂದುವುದು ಸಹಜವಾದದ್ದೇ. ಆದರೆ ಪರಿಸರದಾಚೆಗೂ ಗುರಿಯನ್ನು ಈ ಸಂಘಟನೆ ಹೊಂದಿದೆ ಎಂಬುದು ಈವರೆಗೆ ಸಾಬೀತಾಗಿಲ್ಲ. ಇದೇ ಮಾತು ಫೋರ್ಡ್ ಪ್ರತಿಷ್ಠಾನಕ್ಕೂ ಅನ್ವಯಿಸುತ್ತದೆ. ಶಿಕ್ಷಣ, ಸಂಶೋಧನೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಫೋರ್ಡ್ ಪ್ರತಿಷ್ಠಾನ ದೇಣಿಗೆ ನೀಡುತ್ತಿದೆ. ಬಡತನ ನಿವಾರಣೆ ಕಾರ್ಯಕ್ರಮ ಹಾಗೂ ಸಾಮಾಜಿಕ ಚಟುವಟಿಕೆಗಳ ಕಾರಣದಿಂದಾಗಿ ಅದು ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಗಳಿಸಿದೆ. ಅಮರ್ತ್ಯ ಸೇನ್ ಹಾಗೂ ‘ಹಸಿರು ಕ್ರಾಂತಿಯ ಜನಕ’ ನೆನಿಸಿದ ನಾರ್ಮನ್ ಬೋರ್ಲಾಗ್ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಸಂಶೋಧನಾ ಚಟುವಟಿಕೆಗಳಿಗೆ ಬೆಂಬಲ ಒದಗಿಸಿದ ಪ್ರತಿಷ್ಠಾನ ಇದು ಎಂಬುದನ್ನು ಮರೆಯಲಾಗದು. ಭಾರತದ ಹಿತಕ್ಕೆ ತೊಂದರೆ ಮಾಡುವ ಭಾರತೀಯ ಎನ್ಜಿಒಗಳು ಮುಂದುವರಿಯಲು ಅವಕಾಶ ನೀಡಬೇಕೆಂದು ಯಾರೂ ಪ್ರತಿಪಾದಿಸುವುದಿಲ್ಲ. ಆದರೆ ಒಂದಿಷ್ಟು ವಿದೇಶಿ ದೇಣಿಗೆಯಿಂದ ರಾಷ್ಟ್ರದ ಹಿತಾಸಕ್ತಿ ಬುಡಮೇಲಾಗುವಷ್ಟು ಭಾರತ ದುರ್ಬಲವಾಗಿಲ್ಲ. ಹೀಗಾಗಿ ಯಾವ ಸಂಘಟನೆಗಳನ್ನು ಅಥವಾ ಚಟುವಟಿಕೆಗಳನ್ನು ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಬಗ್ಗೆ ವಿವೇಚನೆ ಬಳಸಬೇಕು. ಆದರೆ ಸರ್ಕಾರದ ಟೀಕಾಕಾರರನ್ನು ಜನರ ಶತ್ರುಗಳಾಗಿ ಪರಿಭಾವಿಸುವ ಸರ್ಕಾರದ ಮನೋಭಾವ ಸರಿಯಲ್ಲ. ಇದೇನೂ ಹೊಸ ದೃಷ್ಟಿಕೋನವಲ್ಲ. 1970 ಹಾಗೂ 1980ರ ದಶಕದಲ್ಲೂ ಜನಪರಚಳವಳಿಗಳಲ್ಲಿ ‘ವಿದೇಶಿ ಕೈವಾಡ’ ಶೋಧಿಸುವ ಪ್ರವೃತ್ತಿ ಇದ್ದೇ ಇತ್ತು. ಇತ್ತೀಚೆಗೆ, ಕೂಡಂಕುಳಂ ಅಣು ಶಕ್ತಿ ಘಟಕದ ವಿರುದ್ಧ 2011ರಲ್ಲಿ ಪ್ರತಿಭಟನೆಗಳು ನಡೆದಾಗ ವಿದೇಶಿ ಸಂಸ್ಥೆಗಳಿಂದ ಪ್ರತಿಭಟನಾಕಾರರಿಗೆ ಹಣಕಾಸು ನೆರವು ಸಿಗುತ್ತಿದೆ ಎಂದು ಯುಪಿಎ ಆಡಳಿತವೂ ದೂರಿತ್ತು. ಯುಪಿಎ ಸರ್ಕಾರ ವಿದ್ಯುತ್, ಗಣಿ ವಿಚಾರಗಳಿಗೆ ಗಮನ ನೀಡಿತ್ತು. ಆದರೆ ಇವುಗಳ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ನೀತಿಗಳ ಮೇಲೂ ಎನ್‌ಡಿಎ ಸರ್ಕಾರ ಪ್ರಭಾವ ಬೀರಲು ಯತ್ನಿಸುತ್ತಿದೆ. ಎನ್ ಜಿಒಗಳಿಗೆ ಕಿರುಕುಳ ನೀಡುವಂತಹದ್ದು ಅಧಿಕೃತ ನೀತಿಯಾಗುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಪ್ರವೃತ್ತಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.