ಪಶ್ಚಿಮಘಟ್ಟ ಉಳಿಸುವ ಬದ್ಧತೆ ಪ್ರಕಟಿಸಲಿ ಪಶ್ಚಿಮಘಟ್ಟ ಕೇವಲ ಇಂದಿನ ಪೀಳಿಗೆಯ ಸೊತ್ತಲ್ಲ. ಮುಂದಿನ ಪೀಳಿಗೆಗೂ ಸೇರಬೇಕು. ಆರು ರಾಜ್ಯಗಳಲ್ಲಿ ಹಾದುಹೋಗುವ ಪಶ್ಚಿಮಘಟ್ಟದ ಜೀವವೈವಿಧ್ಯವನ್ನು ಉಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಚಿಸಿದ ಡಾ.ಕೆ.ಕಸ್ತೂರಿರಂಗನ್‌ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಲು ಸಂಬಂಧಿಸಿದ ರಾಜ್ಯ ಸರ್ಕಾರಗಳಿಗೆ ಕಾಳಜಿ ಇದ್ದಂತಿಲ್ಲ. ಈ ಹಿಂದೆ ಕೇರಳ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ತಕರಾರು ಎತ್ತಿದ್ದವು. ಈಗ ಕರ್ನಾಟಕವೂ ಇದೇ ಹಾದಿ ಹಿಡಿದು, ‘ಸೂಕ್ಷ್ಮ ಪರಿಸರ ಪ್ರದೇಶ’ದ ಬಗ್ಗೆ ತಕರಾರು ಎತ್ತಿದೆ. ಮಾನವ ನಿರ್ಮಿತ ಅರಣ್ಯ ಪ್ರದೇಶ ಮತ್ತು ನೈಸರ್ಗಿಕ ಅರಣ್ಯ ವರ್ಗೀಕರಣವೇ ಸರಿಯಲ್ಲ ಎಂದು ವಾದಿಸುತ್ತಿದೆ. ‘ಅರಣ್ಯ ಕಾಯ್ದೆ ಜಾರಿಯಲ್ಲಿರುವ ಸಂರಕ್ಷಿತ ಪ್ರದೇಶ, ಮೀಸಲು ಅರಣ್ಯ, ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಅಭಯಾರಣ್ಯಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸಬಹುದು. ಆದರೆ, ಕಸ್ತೂರಿರಂಗನ್‌ ಸಮಿತಿಯು ಸರಿಯಾದ ಮಾನದಂಡವನ್ನು ಅನುಸರಿಸದ ಕಾರಣದಿಂದ ಶೇ 80ರಷ್ಟು ಮಾನವ ನಿರ್ಮಿತ ಅರಣ್ಯ ಹೊಂದಿರುವ ಪ್ರದೇಶವೂ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದೆ. ಇದಕ್ಕೆ ಈ ಪ್ರದೇಶದಲ್ಲಿ ವಾಸಿಸುವ ಜನರ ವಿರೋಧವಿದೆ’ ಎಂದು ಏಪ್ರಿಲ್‌ 24ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪತ್ರದ ಮೂಲಕ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಕಸ್ತೂರಿರಂಗನ್‌ ವರದಿಯಲ್ಲಿ ರಾಜ್ಯದ 1438 ಗ್ರಾಮಗಳನ್ನು ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಗುರುತಿಸಲಾಗಿತ್ತು. ಅದರ ವಿರುದ್ಧ ತಕರಾರು ಎತ್ತಿರುವ ರಾಜ್ಯ, ಬರಿ 153 ಗ್ರಾಮಗಳನ್ನು ಈ ವಲಯಕ್ಕೆ ಸೇರಿಸಲು ಸಮ್ಮತಿಸಿದೆ. ಈ ಗ್ರಾಮಗಳು ಈಗಾಗಲೇ ರಕ್ಷಿತ ಅರಣ್ಯ ಅಥವಾ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿದ್ದು, ಅವುಗಳಿಗೆ ಅರಣ್ಯ ಕಾಯ್ದೆ ಅನ್ವಯವಾಗುತ್ತಿದೆ. ಉಳಿದ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಬಾರದು ಎಂದಿರುವ ರಾಜ್ಯ ಸರ್ಕಾರ, ಇದರ ಜೊತೆಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಈಗಾಗಲೇ ವಿದ್ಯುತ್‌ ಉತ್ಪಾದನಾ ಘಟಕಗಳು ಕೆಲಸ ಮಾಡುತ್ತಿವೆ. ಇವುಗಳ ವಿಸ್ತರಣೆಗೆ ಮುಂದಿನ ದಿನಗಳಲ್ಲಿ ಅಡೆತಡೆ ಇರಬಾರದು ಎಂಬಂಥ ತಕರಾರನ್ನೂ ಎತ್ತಿದೆ. ಜೊತೆಗೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎನ್ನುವ ವಾದವನ್ನೂ ಕೇಂದ್ರ ಸರ್ಕಾರದ ಮುಂದಿರಿಸಿದೆ. ಮಾನವ ನಿರ್ಮಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ ಗ್ರಾಮಸ್ಥರ ವಿರೋಧವಿದೆ ಎನ್ನುವ ವಾದವನ್ನು ಇರಿಸಿಕೊಂಡು ರಾಜ್ಯ ಸರ್ಕಾರ ಕಸ್ತೂರಿರಂಗನ್‌ ಸಮಿತಿಯ ಸದುದ್ದೇಶಗಳನ್ನು ದುರ್ಬಲ ಮಾಡಲು ಹೊರಟಿದೆ ಎನ್ನುವ ಅನುಮಾನ ಮೂಡುತ್ತಿದೆ. ಅದಿರು–ಕಲ್ಲು ಗಣಿಗಾರಿಕೆ ಮತ್ತು 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಶಿಫಾರಸು ವರದಿಯಲ್ಲಿದೆ. ಇದರ ವಿರುದ್ಧ ಆರಂಭದಿಂದಲೂ ಪಶ್ಚಿಮಘಟ್ಟ ಪ್ರದೇಶದ ಜನಪ್ರತಿನಿಧಿಗಳು ಬಹಿರಂಗವಾಗಿಯೇ ವಿರೋಧವನ್ನು ವ್ಯಕ್ತಪಡಿಸಿದ್ದರು. ಮರಳು, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು. ಇದು ಸ್ಥಳೀಯ ಪ್ರದೇಶಾಭಿವೃದ್ಧಿಗೆ ಸಹಕಾರಿ ಎನ್ನುವುದು ಅವರ ಆಗ್ರಹವೂ ಆಗಿತ್ತು. ಈ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಮರಳು ಮತ್ತು ಕಲ್ಲು ಸ್ಥಳೀಯರಿಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ. ಅಂದಮಾತ್ರಕ್ಕೆ ಅಭಿವೃದ್ಧಿ ಹೆಸರಿನಲ್ಲಿ ಲೂಟಿಗೆ ಅವಕಾಶ ದೊರಕಬಾರದು. 45 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದ ಮತ್ತು 91 ಸಾವಿರ ಜೀವ ಸಂಕುಲವಿರುವ ಪಶ್ಚಿಮ ಘಟ್ಟಗಳ ಪ್ರಭೇದಗಳನ್ನು ಸಂರಕ್ಷಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ರಚಿಸಿದ್ದ ಪ್ರೊ.ಮಾಧವ ಗಾಡ್ಗೀಳ್ ಸಮಿತಿಯ ವರದಿಯು ಘಟ್ಟದ ಶೇ 64ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದೇ ಪ್ರಕಟಿಸಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಕಾರಣ ವರದಿಯ ಪರಿಶೀಲನೆಗೆ ರಚಿಸಿದ್ದ ಕಸ್ತೂರಿರಂಗನ್‌ ಸಮಿತಿ ಘಟ್ಟದ ಶೇ 37ರಷ್ಟು ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿತ್ತು. ಆಗಲೇ ವರದಿ ತನ್ನ ಬಲವನ್ನು ಕಳೆದುಕೊಂಡಿತು. ಕಸ್ತೂರಿರಂಗನ್‌ ವರದಿಗೂ ಕೇರಳದಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾದ ಕಾರಣ ಕೇಂದ್ರ ಸರ್ಕಾರವು ಕರಡು ಅಧಿಸೂಚನೆಯಲ್ಲೇ ಕೇರಳದ 3115 ಚದರ ಕಿ.ಮೀ. ಪ್ರದೇಶವನ್ನು ಹೊರಗಿಟ್ಟಿತು. ಇದೀಗ ಕರ್ನಾಟಕ ಸರ್ಕಾರ ಸಹ ಒಂದು ರೀತಿಯಲ್ಲಿ ಇದೇ ಹಾದಿ ತುಳಿದಿದೆ. ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ಪ್ರತಿರೋಧ ವ್ಯಕ್ತವಾದ ಸಂದರ್ಭದಲ್ಲಿ ವರದಿ ಏನು ಹೇಳುತ್ತಿದೆ ಎಂದು ಪ್ರಚಾರವನ್ನೂ ಮಾಡಲಿಲ್ಲ. ಹೀಗಾಗಿ ಅಪಪ್ರಚಾರವೇ ಮೆರೆಯಿತು. ಅರಣ್ಯ ಸಚಿವ ರಮಾನಾಥ ರೈ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಸಹ ಜನಾಭಿಪ್ರಾಯ ಪಡೆಯುವಾಗ ಕಸ್ತೂರಿರಂಗನ್‌ ಸಮಿತಿ ವರದಿಯ ಬಗ್ಗೆ ಅರಿವು ಮೂಡಿಸದೆ ಕೇವಲ ಜನಾಭಿಪ್ರಾಯ ಪಡೆಯಿತು. ಹೀಗಾಗಿ ಸರ್ಕಾರಕ್ಕೂ ಘಟ್ಟದ ಜೀವವೈವಿಧ್ಯ ಉಳಿಸಬೇಕು ಎನ್ನುವ ಸದಾಶಯ ಕಾಣಿಸುತ್ತಿಲ್ಲ. ಘಟ್ಟದ ಕೆಲಭಾಗಕ್ಕೆ ಯುನೆಸ್ಕೊ ಪಾರಂಪರಿಕ ಮಾನ್ಯತೆ ನೀಡುತ್ತೇವೆ ಎಂದಾಗಲೂ ರಾಜ್ಯ ವಿರೋಧ ವ್ಯಕ್ತಪಡಿಸಿತ್ತು. ಒಟ್ಟಾರೆ ಘಟ್ಟದ ಜೀವವೈವಿಧ್ಯವನ್ನು ಉಳಿಸುವ ಬದ್ಧತೆಯನ್ನು ಸರ್ಕಾರ ತೋರುತ್ತಿಲ್ಲ. ಪಶ್ಚಿಮಘಟ್ಟ ಕೇವಲ ಇಂದಿನ ಪೀಳಿಗೆಯ ಸೊತ್ತಲ್ಲ. ಮುಂದಿನ ಪೀಳಿಗೆಗೂ ಸೇರಬೇಕು. ಅಭಿವೃದ್ಧಿ ಯೋಜನೆಗಳ ಲಾಬಿಗೆ ಸರ್ಕಾರ ಮಣಿಯದೆ ಜೀವಜಾಲ ಉಳಿಸುವ ಬದ್ಧತೆ ಪ್ರಕಟಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.