ವಿಚಾರ ವಿನಿಮಯ ಮಾರ್ಗ ಸೂಕ್ತವಾಗಿ ಬಳಕೆಯಾಗಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ರಸ್ತೆಗಳಲ್ಲಿ ಸುರಕ್ಷತೆ, ಪ್ರಯಾಣಿಕರಿಗೆ ಉತ್ತಮ ಸೌಕರ್ಯ, ಸರಕು ಸಾಗಣೆ ಸೇವೆ ಸುಧಾರಣೆ ಮತ್ತು ಸಾರಿಗೆ ರಂಗದ ಮೂಲಕ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವುದು ಮಸೂದೆಯ ಉದ್ದೇಶ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳುತ್ತಿದ್ದಾರೆ. ಆದರೆ ಸರ್ಕಾರಿ ಸಾರಿಗೆ ಸಂಸ್ಥೆಗಳ ಕಾರ್ಮಿಕರು ಮತ್ತು ಸಾರಿಗೆ ಕ್ಷೇತ್ರದಲ್ಲಿನ ವಿವಿಧ ಕಾರ್ಮಿಕ ಸಂಘಟನೆಗಳಿಗೆ ಇದು ಮನವರಿಕೆಯಾಗಿಲ್ಲ. ಹೀಗಾಗಿಯೇ ಮಸೂದೆ ಯನ್ನು ಅವು ವಿರೋಧಿಸುತ್ತಿವೆ. ಇದರ ಮುಂದುವರಿದ ಭಾಗವಾಗಿ ಗುರುವಾರ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ನಡೆಸಿವೆ. ಆದರೆ ಇದರಿಂದ ಹೆಚ್ಚು ಪೆಟ್ಟು ಬಿದ್ದದ್ದು ಸಾರ್ವಜನಿಕ ಸಾರಿಗೆಗೆ. ಇದೇನೇ ಇದ್ದರೂ, ರಾಜ್ಯದ ಜನ ಒಂದೇ ತಿಂಗಳಲ್ಲಿ ಎರಡು ಮುಷ್ಕರವನ್ನು ಸಹಿಸಿಕೊಳ್ಳಬೇಕಾಗಿ ಬಂತು. ಈ ರೀತಿ ಸಾರ್ವಜನಿಕರನ್ನು ಪದೇ ಪದೇ ತೊಂದರೆಗೆ ನೂಕುವುದು ಸರಿಯೇ ಎಂಬ ಬಗ್ಗೆ ಸಂಘಟಕರು ಗಂಭೀರ ಆಲೋಚನೆ ಮಾಡಬೇಕು. ಮುಕ್ತ ಆರ್ಥಿಕ ನೀತಿ ಬರುವ ಮುನ್ನ ಮುಷ್ಕರ ಎನ್ನುವುದು ಸಂಘಟಿತ ಕಾರ್ಮಿಕ ವಲಯದ ದೊಡ್ಡ ಪರಿಣಾಮಕಾರಿ ಅಸ್ತ್ರವಾಗಿತ್ತು. ಆದರೆ ನಂತರದ ದಿನಮಾನಗಳು ಬದಲಾಗಿವೆ. ಈಗಿನ ಯುವಜನರ ಆಲೋಚನಾ ಕ್ರಮದಲ್ಲಿ ಬಹಳಷ್ಟು ಮಾರ್ಪಾಡಾಗಿದೆ. ಪೈಪೋಟಿಯ ಕಾಲ ಇದು. ‘ಮುಷ್ಕರದ ಹೆಸರಿನಲ್ಲಿ ಅರ್ಥ ವ್ಯವಸ್ಥೆಗೆ ಪೆಟ್ಟು ಕೊಡುವುದು ಸರಿಯಲ್ಲ, ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು’ ಎನ್ನುವ ಭಾವನೆ ಸಾರ್ವತ್ರಿಕವಾಗಿದೆ. ಮುಷ್ಕರದ ಬಗ್ಗೆ ಜನರ ಅನುಕಂಪ, ಬೆಂಬಲ ಕಡಿಮೆಯಾಗುತ್ತಲೇ ಬಂದಿದೆ. ಇದನ್ನು ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಮುಷ್ಕರವನ್ನು ‘ಬ್ರಹ್ಮಾಸ್ತ್ರ’ದಂತೆ ವಿರಳವಾಗಿ ಬಳಸಬೇಕು. ಸರ್ಕಾರದ ಮೇಲೆ ಒತ್ತಡ ತರಲು ಮುಷ್ಕರವೊಂದೇ ಮಾರ್ಗವೂ ಅಲ್ಲ. ಜನತಂತ್ರದಲ್ಲಿ ಶಾಸನಸಭೆಗ ಳನ್ನು, ನ್ಯಾಯಾಂಗ ವ್ಯವಸ್ಥೆಯನ್ನು, ಚುನಾವಣೆಗ ಳನ್ನು ಪರಿಣಾಮಕಾರಿ ವೇದಿಕೆಯಾಗಿ ಬಳಸಿಕೊಳ್ಳ ಬೇಕು. ಸರ್ಕಾರ ಜನವಿರೋಧಿ ನೀತಿ ಅನುಸರಿಸಲು ಮುಂದಾದರೆ ಮೂಗುದಾರ ಹಾಕಲು ಇರುವ ಅನ್ಯ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿಕೊಳ್ಳ ಬೇಕು. ಮುಷ್ಕರ ಮಾಡಿದರಷ್ಟೇ ಎಚ್ಚೆತ್ತುಕೊಳ್ಳುವ, ಮಣಿಯುವ ಮನಸ್ಥಿತಿಯಿಂದ ಸರ್ಕಾರಗಳೂ ಹೊರಬರಬೇಕು. ಜನಾಭಿಪ್ರಾಯವನ್ನು ಗೌರವಿಸ ಬೇಕು. ವಿರೋಧವನ್ನು ಕಡೆಗಣಿಸುವ, ಚರ್ಚೆಯ ಬಾಗಿಲನ್ನು ಮುಚ್ಚುವ ದಾರ್ಷ್ಟ್ಯ ಸರಿಯಲ್ಲ. ಹಾಗೇ ನಾದರೂ ಮಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ. ಉದ್ದೇಶಿತ ಮಸೂದೆ ಇನ್ನೂ ಕರಡು ಹಂತದಲ್ಲಿಯೇ ಇದೆ. ಅದರ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿ ಕವಾಗಿ ಚರ್ಚಿಸಲು ಅವಕಾಶ ಇದ್ದೇ ಇದೆ ಎಂದು ಸಚಿವ ಗಡ್ಕರಿ ಸಮಜಾಯಿಷಿ ಕೊಟ್ಟಿದ್ದಾರೆ. ನಮ್ಮ ರಸ್ತೆಗಳು ಸಾವಿನ ಮನೆಗಳಾಗಿವೆ, ವರ್ಷಕ್ಕೆ ಸುಮಾರು ಐದು ಲಕ್ಷ ಅಪಘಾತಗಳು ಸಂಭವಿಸುತ್ತಿವೆ, ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು 30 ರಿಂದ 44ರ ವಯೋಮಾನದವರು. ರಸ್ತೆ ದುರಂ ತದ ಸಾವಿನ ಸಂಖ್ಯೆ ನಮ್ಮಲ್ಲಿ ವಿಶ್ವದಲ್ಲಿಯೇ ಅತ್ಯ ಧಿಕ. ಇದಕ್ಕೆ ಇತರ ತಾಂತ್ರಿಕ ಕಾರಣಗಳ ಜತೆಗೆ ಅಜಾಗರೂಕತೆಯ ಚಾಲನಾ ವಿಧಾನ ಕೂಡ ಕಾರಣ. ಸಾರಿಗೆ ಮತ್ತು ಸಂಚಾರ ಪೊಲೀಸ್ ಕಚೇರಿ ಗಳಲ್ಲಿ ಹಣ ಕೊಟ್ಟು ಏನನ್ನು ಬೇಕಾದರೂ ದಕ್ಕಿಸಿಕೊಳ್ಳುವ ಸ್ಥಿತಿ ಇದೆ ಎನ್ನುವುದು ಎಲ್ಲರ ಅನುಭವವೂ ಹೌದು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಸಾಗಣೆ ವಾಹನಗಳು ಸರಾಗವಾಗಿ ಸಂಚರಿಸುವ ಸ್ಥಿತಿಯೇ ಇಲ್ಲ. ಇಂಥ ಲೋಪ ಸರಿಪಡಿಸುವ ಯತ್ನ ಮಸೂದೆಯಲ್ಲಿದ್ದರೆ ವಿರೋಧಿಸುವ ಅಗತ್ಯವಿಲ್ಲ. ಆದರೆ ದಂಡದ ಪ್ರಮಾಣ ತೀರಾ ಕಡಿಮೆ ಇರುವುದರಿಂದ ನಿಯಮ ಉಲ್ಲಂಘನೆಯ ಭಯವೇ ಚಾಲಕರಲ್ಲಿಲ್ಲ ಎಂಬುದೂ ನಿಜ. ಜೊತೆಗೆ ಅಪಘಾತಗಳಿಗೆ ಚಾಲಕರನ್ನಷ್ಟೇ ಹೊಣೆ ಮಾಡಲಾಗುವುದಿಲ್ಲ. ಮೂಲ ಸೌಕರ್ಯಗಳ ಕೊರತೆಗಳೂ ಕಾರಣವಾಗಬಹುದು. ಹೊಸ ಮಸೂದೆ ಆರ್‌ಟಿಒ ಕಚೇರಿಗಳ ಕಾರ್ಯವನ್ನು ಖಾಸಗೀಕರಣ ಮಾಡುತ್ತದೆ, ಸರ್ಕಾರಿ ಸಾರಿಗೆ ಸಂಸ್ಥೆಗಳ ಕತ್ತು ಹಿಸುಕಿ ಖಾಸಗಿಯವರಿಗೆ ಅನುಕೂಲ ಕಲ್ಪಿಸುತ್ತದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಆರೋಪ. ಸರ್ಕಾರ, ಸಾರಿಗೆ ಸಂಸ್ಥೆಗಳನ್ನು ಬಲಪಡಿಸಬೇಕೇ ಹೊರತು ದುರ್ಬಲ ಮಾಡಬಾರದು. ಆದರೆ ಖಾಸಗಿ ಎಂದರೆ ದೇಶ ವಿರೋಧಿ ಎಂಬ ರೂಢಿಗತ ಮನೋಭಾವದಿಂದ ಸಂಘಟನೆಗಳು ಹೊರಬರಬೇಕು. ಸರ್ಕಾರ ಸಹ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.