ಭಾರತ-ಚೀನಾ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದ ಭೇಟಿ ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಪ್ರವಾಸಕ್ಕೆ ಭಾರಿ ಪ್ರಚಾರವೂ ಸಿಕ್ಕಿದೆ, ಯಶಸ್ಸೂ ದಕ್ಕಿದೆ ಎಂದೇ ಹೇಳಬಹುದು. ವಿಶ್ವದ ಎರಡು ಅತಿ ದೊಡ್ಡ ದೇಶಗಳು ಪರಸ್ಪರರ ನಡುವಿನ ಅಪನಂಬಿಕೆಗಳನ್ನು ಮರೆತು ವ್ಯಾಪಾರ, ವ್ಯವಹಾರ ವೃದ್ಧಿಸಿಕೊಳ್ಳಲು ಮುಂದಾಗಿರುವುದು ಐತಿಹಾಸಿಕ ಬೆಳವಣಿಗೆ. ಇದು ಸುಮ್ಮನೇ ಸಾಧ್ಯವಾಗುವಂಥದ್ದಲ್ಲ. ಉಭಯ ದೇಶಗಳ ನಾಯಕರ ಮಧ್ಯೆ ದೊಡ್ಡತನ, ವಿವೇಚನೆ, ಮುಂದಾಲೋಚನೆ, ಜೊತೆಯಾಗಿ ಸಾಗಿ ಸಾಧಿಸೋಣ ಎಂಬ ಮನೋಭಾವ ಇರಬೇಕಾಗುತ್ತದೆ. ನಂಬಿಕೆ, ವಿಶ್ವಾಸವಂತೂ ಬಹಳ ಮುಖ್ಯ. ಏಕೆಂದರೆ ಚೀನಾವು ಪಾಕಿಸ್ತಾನವನ್ನು ಅತಿಯಾಗಿ ಓಲೈಸುತ್ತಿದೆ ಎಂಬ ಭಾವನೆ ನಮ್ಮಲ್ಲಿದೆ; ಅಮೆರಿಕಕ್ಕೆ ಮತ್ತು ಪೂರ್ವ ಏಷ್ಯಾದ ದೇಶಗಳಿಗೆ ಭಾರತ ಹತ್ತಿರವಾಗುತ್ತಿರುವುದನ್ನು ಚೀನಾ ಅನುಮಾನದಿಂದಲೇ ನೋಡುತ್ತಿದೆ. ಅಲ್ಲದೆ ದಕ್ಷಿಣ ಏಷ್ಯಾದಲ್ಲಿ ಮೇಲುಗೈ ಸಾಧಿಸಲು ಎರಡೂ ದೇಶಗಳು ಪೈಪೋಟಿ ನಡೆಸುತ್ತಿವೆ; ಸಿಕ್ಕ ಯಾವ ಅವಕಾಶವನ್ನೂ ಬಿಟ್ಟುಕೊಡುತ್ತಿಲ್ಲ. ಸಾಲದೆಂಬಂತೆ ಗಡಿ ವಿವಾದವಂತೂ ಬಹಳ ಕಾಲದಿಂದ ಉಭಯ ದೇಶಗಳನ್ನು ಕಾಡುತ್ತಿದೆ. ಅರುಣಾಚಲ ಪ್ರದೇಶ ಭಾರತದ ಭಾಗ ಎಂಬುದನ್ನು ಚೀನಾ ಈಗಲೂ ಒಪ್ಪುತ್ತಿಲ್ಲ. ಆದರೂ ಇಂಥ ಕಿರಿಕಿರಿಗಳನ್ನೂ ಬದಿಗಿಟ್ಟು ಆರ್ಥಿಕ ಸಹಕಾರದ 26 ಒಪ್ಪಂದಗಳಿಗೆ ಎರಡೂ ದೇಶಗಳ ನಾಯಕರ ಸಮ್ಮುಖದಲ್ಲಿ ಸಹಿ ಬಿದ್ದಿರುವುದು ಸಣ್ಣ ಸಂಗತಿಯೇನಲ್ಲ. ಇದರಿಂದಾಗಿ ಚೀನಾದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನಮ್ಮ ದೇಶದ ಇಂಧನ ಮತ್ತು ವಿದ್ಯುತ್ ಮೂಲಸೌಕರ್ಯ, ಕಬ್ಬಿಣ ಮತ್ತು ಉಕ್ಕು, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಸುಮಾರು 2200 ಕೋಟಿ ಡಾಲರ್ ಅಂದರೆ ಸುಮಾರು ₹ 1.41 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ. ವಿಶೇಷ ಎಂದರೆ, ಈ ಒಪ್ಪಂದಗಳು ಬರೀ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಸಾಂಸ್ಕೃತಿಕ ವಲಯ, ಸಿನಿಮಾ ಮತ್ತು ಮನರಂಜನೆ ಕ್ಷೇತ್ರಕ್ಕೂ ವಿಸ್ತರಣೆಯಾಗಿವೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಬೀಸುತ್ತಿರುವ ಬದಲಾವಣೆಯ ಗಾಳಿಯನ್ನು ಅನುಭವಿಸಲು, ಅದರ ಪ್ರಯೋಜನ ಪಡೆಯಲು ಮೋದಿ ಅವರು ನೀಡಿದ ಆಹ್ವಾನಕ್ಕೆ ಚೀನಾದ ಉದ್ಯಮ ವಲಯ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ. ‘ಭಾರತದಲ್ಲಿಯೇ ತಯಾರಿಸಿ’ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷಿ ಉಪಕ್ರಮಕ್ಕೆ ಒತ್ತಾಸೆಯೂ ಸಿಕ್ಕಿದೆ. ಇವೆಲ್ಲ ಸ್ವಾಗತಾರ್ಹ. ಗಡಿ ವಿವಾದವು ಎರಡೂ ದೇಶಗಳ ಸ್ನೇಹ ಸುಧಾರಣೆಗೆ ಅಡ್ಡಿಯಾಗಬಾರದು ಎಂದು ಹೇಳುತ್ತ ಪ್ರಧಾನಿ ಮೋದಿಯವರು ಅದೇ ಉಸಿರಿನಲ್ಲಿಯೇ, ಭಾರತದ ನಿಲುವಿಗೆ ಧಕ್ಕೆಯಾಗದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಕುರಿತ ತನ್ನ ಧೋರಣೆಯನ್ನು ಸ್ಪಷ್ಟಪಡಿಸಲು ಚೀನಾಕ್ಕೆ ಒತ್ತಾಯ ಮಾಡಿದ್ದಾರೆ. ವ್ಯಾಪಾರ ವ್ಯವಹಾರವೂ ಮುಖ್ಯ ಹೌದು; ಆದರೆ ಗಡಿ ಸಮಸ್ಯೆ ಕೂಡ ದೀರ್ಘ ಕಾಲ ಮುಂದುವರಿಯುವುದು ಸರಿಯಲ್ಲ ಎಂಬುದು ಅವರ ಕಾಳಜಿ. ಏಕೆಂದರೆ ಚೀನಾದ ಜತೆಗೆ ನಮಗೆ 3400 ಕಿ.ಮೀ. ಉದ್ದದ ಗಡಿಯೂ ಇದೆ, ಅಲ್ಲಿ ಸಮಸ್ಯೆಯೂ ಇದೆ. ಇನ್ನೊಂದು ಕಡೆ, ಐದು ಸಾವಿರ ವರ್ಷಗಳಷ್ಟು ಹಳೆಯ ಬಾಂಧವ್ಯವೂ ಇದೆ. ಎರಡೂ ದೇಶಗಳು ಅನೇಕ ವಿಷಯಗಳಲ್ಲಿ ಸಾಮ್ಯತೆ ಹೊಂದಿವೆ. ಎರಡು ಸಾವಿರ ವರ್ಷಗಳಷ್ಟು ಹಿಂದೆ ಭಾರತದಿಂದ ಚೀನಾಕ್ಕೆ ಕಾಲಿಟ್ಟ ಬೌದ್ಧಧರ್ಮ ಅಲ್ಲಿಂದ ಇತರ ಕಡೆಯೂ ವಿಸ್ತರಿಸಿ ಈಗ ಏಷ್ಯಾದ ದೇಶಗಳನ್ನು ಬೆಸೆಯುತ್ತಿರುವ ಪ್ರಮುಖ ಕೊಂಡಿಯಾಗಿದೆ. ಜಗತ್ತಿನ ಮೂರನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿರುವ ನಮ್ಮೆರಡು ರಾಷ್ಟ್ರಗಳು ಒಟ್ಟಾಗಿ ನಿಂತರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದು ಅತಿಶಯೋಕ್ತಿಯಲ್ಲ. ಸರಕು, ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸುವ ಪರಿಣತಿ ಚೀನಾಕ್ಕೆ ಸಿದ್ಧಿಸಿದೆ. ಸಾಫ್ಟ್‌ವೇರ್ ಸೇವೆ, ನಿಖರ ಮಾಪನದ ಮತ್ತು ಉನ್ನತ ತಂತ್ರಜ್ಞಾನದ ಉತ್ಪನ್ನಗಳಲ್ಲಿ ಭಾರತ ಮುಂದಿದೆ. ಇವೆರಡೂ ನೈಪುಣ್ಯಗಳು ಒಂದುಗೂಡಿದರೆ ಅದಕ್ಕೆ ಎಲ್ಲೆಯೇ ಇಲ್ಲ. ಇಂಥ ಅವಕಾಶವನ್ನು ಬಿಟ್ಟುಕೊಡಬಾರದು. 21ನೇ ಶತಮಾನ ಆರ್ಥಿಕವಾಗಿ ಭಾರತ ಮತ್ತು ಚೀನಾದ ಶತಮಾನ ಎಂಬುದನ್ನು ಇಡೀ ವಿಶ್ವ ಗುರುತಿಸಿದೆ. ಹೀಗಿರುವಾಗ ಉಭಯತ್ರರಿಗೂ ಹಿತವಾಗುವ ಹಾದಿಯಲ್ಲಿ ಮುನ್ನಡೆಯುವುದು ಬುದ್ಧಿವಂತಿಕೆ. ಅದನ್ನು ಮೋದಿ ಮತ್ತು ಚೀನಾದ ನಾಯಕರು ಪ್ರದರ್ಶಿಸಿದ್ದಾರೆ. ಅದಕ್ಕಾಗಿ ಅಭಿನಂದನೆಗೆ ಅರ್ಹರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.