ಮಾರ್ಗದರ್ಶಿ ಸೂತ್ರಗಳನ್ನು ‘ಸುಪ್ರೀಂ’ ಮರುಪರಿಶೀಲಿಸಲಿ ‘ಸರ್ಕಾರಿ ಜಾಹೀರಾತುಗಳಲ್ಲಿ ಇನ್ನು ಮುಂದೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಭಾವಚಿತ್ರಗಳನ್ನು ಮಾತ್ರ ಬಳಸಬಹುದು. ಅವರ ಹೊರತಾಗಿ ಇನ್ಯಾವ ರಾಜಕಾರಣಿಗಳ ಭಾವಚಿತ್ರಗಳನ್ನೂ ಬಳಸಬಾರದು’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಲೇವಾರಿಯಲ್ಲಿ ಸುಪ್ರೀಂಕೋರ್ಟ್‌ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿರುವುದು ವಿಚಿತ್ರವಾಗಿದೆ. ಈ ತೀರ್ಪು ಹಲವಾರು ಹೊಸ ಗೊಂದಲಗಳನ್ನು ಸೃಷ್ಟಿಸಲಿದೆ. ಈ ತೀರ್ಪಿನ ಮೂಲಕ ಕಾರ್ಯಾಂಗದ ವ್ಯಾಪ್ತಿಗೆ ಬರುವ ವಿಷಯಗಳ ಮೇಲೆ ನ್ಯಾಯಾಂಗವು ಏರಿಹೋದಂತಾಗಿದೆ. ಸರ್ಕಾರಿ ಯೋಜನೆಗಳ ಜಾಹೀರಾತಿನಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರ ಪ್ರಕಟಿಸಲು ಅವಕಾಶ ನೀಡಿರುವುದು ಏಕೆ ಎನ್ನುವುದರ ಸಹಿತ ಹಲವು ತರ್ಕಬದ್ಧ ಹಾಗೂ ನೈತಿಕ ಪ್ರಶ್ನೆಗಳನ್ನು ಈ ತೀರ್ಪು ಹುಟ್ಟುಹಾಕಿದೆ. ಈ ತೀರ್ಪಿನ ಮೂಲಕ ಸುಪ್ರೀಂಕೋರ್ಟ್‌ ಅನಗತ್ಯ ರಾಜಕೀಯ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಯಾವ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರಲಿ, ಆ ಸರ್ಕಾರ ತಾನು ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ಅಧಿಕೃತ ಜಾಹೀರಾತುಗಳನ್ನು ನೀಡುವುದು ಪ್ರಜಾಪ್ರಭುತ್ವದಲ್ಲಿ ರೂಢಿಯಲ್ಲಿರುವ ಪದ್ಧತಿ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಇದೊಂದು ಉಪಕ್ರಮ. ಸರ್ಕಾರದ ಎಷ್ಟೋ ಯೋಜನೆಗಳ ಉಪಯುಕ್ತತೆಯನ್ನು ಜನರಿಗೆ ಮನದಟ್ಟು ಮಾಡಲೂ ಈ ಜಾಹೀರಾತುಗಳು ನೆರವಾಗುತ್ತವೆ. ನಮ್ಮ ಪ್ರಜಾಸತ್ತೆಯಲ್ಲಿ ಪಕ್ಷವೊಂದರಿಂದ ಸ್ಪರ್ಧಿಸಿ, ಜನರ ಪ್ರತಿನಿಧಿಯಾಗಿ ಆಯ್ಕೆಯಾಗುವವರು ಬಳಿಕ ಸರ್ಕಾರದಲ್ಲಿ ಸಚಿವರಾಗಬಹುದು. ಅವರು ಏಕಕಾಲದಲ್ಲಿ ಒಂದು ಪಕ್ಷಕ್ಕೆ ಸೇರಿದವರೂ, ಇನ್ನೊಂದೆಡೆ ಸರ್ಕಾರದ ಪ್ರತಿನಿಧಿಯೂ ಆಗಿರುತ್ತಾರೆ. ಇಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಪ್ರತ್ಯೇಕತೆಯ ಗೆರೆ ಎಳೆಯುವುದು ಕಷ್ಟ. ರಾಜ್ಯವೊಂದರಲ್ಲಿ ಮುಖ್ಯಮಂತ್ರಿಯಾದವರು ತಮ್ಮ ಸರ್ಕಾರದ ಪ್ರಧಾನ ನೀತಿ ನಿರೂಪಕರೂ ಆಗಿರುತ್ತಾರೆ. ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಮುಖ್ಯಮಂತ್ರಿಯವರ ಭಾವಚಿತ್ರವನ್ನೂ ಹಾಕಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿರುವುದು ನಮ್ಮ ಒಕ್ಕೂಟ ವ್ಯವಸ್ಥೆಯ ಅಣಕವಲ್ಲದೆ ಬೇರೇನೂ ಅಲ್ಲ. ಮುಖ್ಯಮಂತ್ರಿಯ ಭಾವಚಿತ್ರವೇ ಬೇಡ ಎಂದಾದರೆ, ಪ್ರಧಾನ ಮಂತ್ರಿಯವರದ್ದಾದರೂ ಏಕೆ ಬೇಕು? ಇಬ್ಬರೂ ರಾಜಕಾರಣಿಗಳೇ ಅಲ್ಲವೆ? ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರ ಭಾವಚಿತ್ರ ಹಾಕಬಹುದು ಎನ್ನಲು ಅವರಿಗೂ ಸರ್ಕಾರದ ಯೋಜನೆಗಳಿಗೂ ಇರುವ ನೇರ ಸಂಬಂಧವೇನು? ಕಾರ್ಯಾಂಗ ಮತ್ತು ಶಾಸಕಾಂಗದಿಂದ ಭಿನ್ನವಾದ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಬಯಸುವ ನ್ಯಾಯಾಂಗ, ಸರ್ಕಾರದ ಜಾಹೀರಾತಿನಲ್ಲಿ ಪಾಲು ಪಡೆಯಬೇಕಾದ ಅಗತ್ಯವೇನಿದೆ? ‘ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿ ನೀಡುವ ಭಾರೀ ಜಾಹೀರಾತುಗಳಲ್ಲಿ ರಾಜಕಾರಣಿಗಳ ಭಾವಚಿತ್ರಗಳನ್ನು ಅನಗತ್ಯವಾಗಿ, ಬೇಕಾಬಿಟ್ಟಿ ಬಳಸಬೇಡಿ; ಸಣ್ಣ- ಪುಟ್ಟ ಕೆಲಸಗಳಿಗೂ ಭಾರೀ ಜಾಹೀರಾತುಗಳನ್ನು ನೀಡಿ ಹಣದ ದುಂದುವೆಚ್ಚ ಮಾಡಬೇಡಿ’ ಎಂದು ಸುಪ್ರೀಂಕೋರ್ಟ್‌ ಹೇಳಿದ್ದರೆ ಅದು ಸ್ವಲ್ಪಮಟ್ಟಿಗೆ ಒಪ್ಪಬಹುದಾದ ಮಾತಾಗುತ್ತಿತ್ತು. ಅದನ್ನು ಬಿಟ್ಟು ಸುಪ್ರೀಂಕೋರ್ಟ್‌, ಕಾರ್ಯಾಂಗದ ಅಧಿಕಾರವ್ಯಾಪ್ತಿಯ ಮೇಲೆ ಸವಾರಿ ಮಾಡಹೊರಟಿರುವುದು ಸರಿಯಲ್ಲ. ಸುಪ್ರೀಂಕೋರ್ಟಿನ ಈ ಮಾರ್ಗದರ್ಶಿ ಸೂತ್ರಗಳು ಅಸಂಬದ್ಧವಾಗಿದ್ದು, ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಣ ಸಾಮರಸ್ಯಕ್ಕೂ ಈ ಮಾರ್ಗದರ್ಶಿ ಸೂತ್ರಗಳು ಕಂಟಕವಾಗಿ ಪರಿಣಮಿಸಲಿವೆ. ವಿಭಿನ್ನ ರಾಜ್ಯಗಳಲ್ಲಿ ಅಲ್ಲಿಯ ಜನರ ಪ್ರಜಾಸತ್ತಾತ್ಮಕ ಆಯ್ಕೆಯಾಗಿರುವ ವಿಭಿನ್ನ ಪಕ್ಷಗಳ ಸರ್ಕಾರಗಳು ಕೆಲಸ ನಿರ್ವಹಿಸುತ್ತಿರುವಾಗ, ಅವುಗಳ ನಡುವೆ ಅನಗತ್ಯ ತಿಕ್ಕಾಟಗಳಿಗೆ ಅವಕಾಶ ಮಾಡಿಕೊಡುವ ಈ ತೀರ್ಪನ್ನು ಸುಪ್ರೀಂಕೋರ್ಟ್ ಮರುಪರಿಶೀಲಿಸುವುದು ಒಳ್ಳೆಯದು. ರಾಜಕೀಯದಲ್ಲಿ ವ್ಯಕ್ತಿಪೂಜೆಯ ವಿಧಾನಗಳನ್ನು ಪ್ರೋತ್ಸಾಹಿಸಬಾರದು ಎನ್ನುವುದೇ ಸುಪ್ರೀಂಕೋರ್ಟಿನ ಆಶಯವಾಗಿದ್ದರೆ, ಅದನ್ನು ತಡೆಯಲು ಬೇಕಾದ ಕ್ರಮಗಳನ್ನು ರಾಜಕೀಯ ಪಕ್ಷಗಳೇ ಕೈಗೊಳ್ಳುವಂತಾಗಬೇಕು. ಅಷ್ಟಕ್ಕೂ ಸರ್ಕಾರ ಮಾಡುವ ವೆಚ್ಚಗಳು, ಸಂಸತ್ತಿನ ಪರಿಶೀಲನೆಗೂ ಒಳಪಡುವುದಲ್ಲದೆ, ಕಠಿಣ ಲೆಕ್ಕಪತ್ರ ತಪಾಸಣೆಗೂ ಒಳಗಾಗುತ್ತವೆ. ಇಂತಹ ವಿಷಯಗಳನ್ನು ಕಾರ್ಯಾಂಗಕ್ಕೇ ಸುಧಾರಿಸಿಕೊಳ್ಳಲು ಬಿಟ್ಟುಬಿಡುವುದು ಒಳ್ಳೆಯದು. ಕಾರ್ಯಾಂಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಬಿಟ್ಟು, ನ್ಯಾಯಾಂಗವು ತನ್ನಲ್ಲೇ ತುರ್ತಾಗಿ ಮಾಡಬೇಕಾದ ಹಲವಾರು ಸುಧಾರಣಾ ಕ್ರಮಗಳತ್ತ ಗಮನ ಹರಿಸಲಿ. ನ್ಯಾಯದಾನ ವಿಳಂಬವನ್ನು ತಪ್ಪಿಸಿ ತೀರ್ಪಿನ ಗುಣಮಟ್ಟ ಹೆಚ್ಚಿಸುವ ಉಪಕ್ರಮಗಳನ್ನು ಕೈಗೊಳ್ಳಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.