ಸಂಘರ್ಷದ ಹಾದಿ ಬೇಡ ಆಡಳಿತಕ್ಕೆ ಆದ್ಯತೆ ಇರಲಿ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಹಾಗೂ ಮುಖ್ಯಮಂತ್ರಿ ಅರವಿಂದ‌ ಕೇಜ್ರಿವಾಲ್‌ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಸರ್ಕಾರದ ಪ್ರಭಾರಿ ಮುಖ್ಯ ಕಾರ್ಯದರ್ಶಿ ಆಗಿ ಶಕುಂತಲಾ ಗ್ಯಾಮ್ಲಿನ್‌ ಅವರನ್ನು ನೇಮಿಸಿದ ಬಳಿಕ ಇಬ್ಬರ ನಡುವೆ ಆರಂಭವಾದ ಸಂಘರ್ಷ ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನಕ್ಕೂ ಮುಟ್ಟಿದೆ. ಅರವಿಂದ‌ ಕೇಜ್ರಿವಾಲ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ಆರು ಕಾರ್ಯಕರ್ತರನ್ನು ವಿವಿಧ ಕಾರ್ಯಪಡೆಗಳ ಸಂಯೋಜಕರಾಗಿ ನೇಮಿಸಲು ನಿರಾಕರಿಸಿದ ದೆಹಲಿ ಡೈಲಾಗ್‌ ಕಮಿಷನ್‌ ಸದಸ್ಯ ಕಾರ್ಯದರ್ಶಿ ಆಶಿಷ್‌್‌ ಜೋಷಿ ಅವರನ್ನು ಒಂದೇ ತಿಂಗಳಲ್ಲಿ ಹುದ್ದೆಯಿಂದ ಕಿತ್ತುಹಾಕಲಾಯಿತು. ಪಕ್ಷದ ಹಿತಾಸಕ್ತಿ ವಿರುದ್ಧ ಪಿತೂರಿ ನಡೆಸಿದ್ದಾರೆಂದು ಆರೋಪಿಸಿ ಹಿರಿಯ ನಾಯಕರಾದ ಯೋಗೇಂದ್ರ ಯಾದವ್‌, ಪ್ರಶಾಂತ್‌ ಭೂಷಣ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಈಗ ಪ್ರಭಾರಿ ಮುಖ್ಯ ಕಾರ್ಯದರ್ಶಿ ನೇಮಕಾತಿ ವಿಷಯದಲ್ಲಿ ನಜೀಬ್‌ ಜಂಗ್‌ ಅವರ ವಿರುದ್ಧ ಸಂಘರ್ಷಕ್ಕಿಳಿದಿದ್ದಾರೆ. ಗ್ಯಾಮ್ಲಿನ್‌ ಅವರನ್ನು ನಜೀಬ್‌ ಜಂಗ್‌ ನೇಮಕ ಮಾಡಿದ ಮಾತ್ರಕ್ಕೆ ಎಲ್ಲ ನೀತಿ– ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಭಾವಿಸಲಾಗದು. ಸಂವಿಧಾನದ ಚೌಕಟ್ಟಿನೊಳಗೇ ಜಂಗ್‌ ನಡೆದುಕೊಂಡಿದ್ದಾರೆ. ಆದರೂ ಅಸಮಾಧಾನಗೊಂಡಿರುವ ಕೇಜ್ರಿವಾಲ್‌, ಲೆಫ್ಟಿನೆಂಟ್‌ ಗವರ್ನರ್‌ ಜತೆ ಕಾದಾಟಕ್ಕೆ ಇಳಿದಿದ್ದಾರೆ. ಸಂವಿಧಾನದ ಕಲಂ 239 ಎ.ಎ ಅನ್ವಯ ಮಂತ್ರಿಮಂಡಳ, ಲೆಫ್ಟಿನೆಂಟ್‌ ಗವರ್ನರ್‌ಗೆ ಸಲಹೆ ಕೊಡಬಹುದು. ಯಾವುದಾದರೂ ವಿಷಯದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮಂತ್ರಿ ಮಂಡಳದ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಲೆಫ್ಟಿನೆಂಟ್‌ ಗವರ್ನರ್‌, ರಾಷ್ಟ್ರಪತಿ ಮೊರೆ ಹೋಗಬಹುದು. ನಂತರ ರಾಷ್ಟ್ರಪತಿ ಆದೇಶದಂತೆ ನಡೆಯಬೇಕಾಗುತ್ತದೆ. ನಜೀಬ್‌ ಜಂಗ್‌ ಅದೇ ರೀತಿ ನಡೆದುಕೊಂಡಿದ್ದಾರೆ. ಬಿಕ್ಕಟ್ಟು ಈಗ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ವರ್ಗಾವಣೆಯಾಗಿದೆ. ಚೆಂಡು ಕೇಂದ್ರದ ಅಂಗಳದಲ್ಲಿದೆ. ಹಿಂದೆಯೂ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ಸಣ್ಣಪುಟ್ಟ ಬಿಕ್ಕಟ್ಟಗಳು ತಲೆದೋರಿದ್ದವು. ಕೇಜ್ರಿವಾಲ್‌ ಅಧಿಕಾರಕ್ಕೆ ಬಂದ ಬಳಿಕ ತಿಕ್ಕಾಟ ಜೋರಾಗಿದೆ. ಒಂದೇ ಪಕ್ಷದ ಸರ್ಕಾರ ಎರಡೂ ಕಡೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತಕರಾರು ತಲೆದೋರಿದ್ದು ಕಡಿಮೆ. ಬೇರೆ ಬೇರೆ ಪಕ್ಷಗಳ ಸರ್ಕಾರಗಳಿದ್ದಾಗ ಕಿತ್ತಾಟ ಇದ್ದಿದ್ದೇ. ಬಿಜೆಪಿ ಆಡಳಿತದಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಮದನಲಾಲ್‌ ಖುರಾನ ಅವರು ರಾಜ್ಯ ಸರ್ಕಾರಕ್ಕಿರುವ ಸೀಮಿತ ಅಧಿಕಾರ ಕುರಿತು ತಕರಾರು ತೆಗೆದಿದ್ದರು. ಉಳಿದ ರಾಜ್ಯಗಳಿಗೆ ಇರುವಂತೆ ದೆಹಲಿಗೆ ಪೂರ್ಣಪ್ರಮಾಣದಲ್ಲಿ ರಾಜ್ಯದ ಸ್ಥಾನಮಾನವಿಲ್ಲ. ದೆಹಲಿ ಸರ್ಕಾರಕ್ಕೆ ಇರುವುದು ಅತ್ಯಂತ ಸೀಮಿತ ಅಧಿಕಾರ. ಅಧಿಕಾರ ಹಂಚಿಕೆಯಲ್ಲಿ ಗೊಂದಲಗಳಿವೆ. ಈ ಕಾರಣದಿಂದ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದ ನಡುವೆ ಸ್ಪಷ್ಟ ಒಪ್ಪಂದ ಏರ್ಪಡಬೇಕಾಗಿದೆ. ಈ ಬಗ್ಗೆ ಚಿಂತಿಸಲು ಇದು ಸಕಾಲ. ಅರವಿಂದ‌ ಕೇಜ್ರಿವಾಲ್‌ ಅವರು ಪ್ರತಿಯೊಂದಕ್ಕೂ ಸಂಘರ್ಷದ ಹಾದಿ ಹಿಡಿಯುವ ಬದಲು ಚರ್ಚೆ, ಸಂಧಾನದಂಥ ಬದಲಿ ಮಾರ್ಗಗಳನ್ನು ತುಳಿಯಬೇಕಿದೆ. ಸಂಘರ್ಷದ ಹಾದಿಗೂ ಒಂದು ಮಿತಿ ಇದೆ ಎಂಬುದನ್ನು ಅವರು ಮನಗಾಣಬೇಕು. ಮುಖ್ಯಮಂತ್ರಿ ಸ್ಥಾನಮಾನದ ಘನತೆ ಮರೆತು ಹೋರಾಟಗಾರರಂತೆ ವರ್ತಿಸುವ ಬದಲು ಪ್ರಬುದ್ಧ ನಾಯಕರಾಗಿ ನಡೆದುಕೊಳ್ಳಬೇಕಿದೆ. ದೆಹಲಿ ಮುಖ್ಯಮಂತ್ರಿ ತಮ್ಮ ಕಾರ್ಯಶೈಲಿ ತಿದ್ದಿಕೊಳ್ಳದಿದ್ದರೆ ನಗೆಪಾಟಲಿಗೀಡಾಗುವ ಸಾಧ್ಯತೆ ಇಲ್ಲದಿಲ್ಲ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡ ವಿವಾದವಾಗಿ ಮಾಡಿಕೊಂಡು ಕಾಲಹರಣ ಮಾಡುವ ಬದಲು ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕಡೆ ಗಮನ ಹರಿಸಬೇಕಿದೆ. ಉತ್ತಮ ಆಡಳಿತಕ್ಕೆ ಆದ್ಯತೆ ನೀಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.