ಭಾರತ–ಬಾಂಗ್ಲಾ ಮೈತ್ರಿ ಬಲವರ್ಧನೆಗೆ ಹೊಸ ಚೈತನ್ಯ ‌ಸಂವಿಧಾನದ 119ನೇ ತಿದ್ದುಪಡಿ ಮಸೂದೆ ಅಥವಾ ಭಾರತ–ಬಾಂಗ್ಲಾದೇಶ ಭೂ ಗಡಿರೇಖೆ ಒಪ್ಪಂದ (ಎಲ್‌ಬಿಎ) ಜಾರಿಗೆ ಸಂಬಂಧಿಸಿದ ಐತಿಹಾಸಿಕ ಮಸೂದೆಗೆ ಸಂಸತ್ ಅನುಮೋದನೆ ನೀಡಿದೆ. ಹಲವು ವರ್ಷಗಳ ವಿಳಂಬದ ನಂತರ, ಅಂತೂ ಈ ಒಪ್ಪಂದ ಜಾರಿಗೆ ಮಸೂದೆ ಅಂಗೀಕಾರವಾಗಿದ್ದು ಸ್ವಾಗತಾರ್ಹ. 1947ರಲ್ಲಿ ರಾಷ್ಟ್ರ ವಿಭಜನೆಯೊಂದಿಗೇ ಈ ಸಮಸ್ಯೆ ಆರಂಭವಾಗಿತ್ತು. ನಂತರ, 1971ರಲ್ಲಿ ಬಾಂಗ್ಲಾದೇಶದ ಉದಯದ ನಂತರ ತೀವ್ರಗೊಂಡ ವಿವಾದವನ್ನು ಉಪಶಮನಗೊಳಿಸುವಂತಹ ನಡೆ ಇದು. ಈ ಸಂಬಂಧದಲ್ಲಿ ಸಂಸತ್‌ನಲ್ಲಿ ವಿರುದ್ಧ ನಿಲುವುಗಳ ಪಕ್ಷಗಳು ಮೆರೆದಿರುವಂತಹ ಹೊಂದಾಣಿಕೆ ಇತ್ತೀಚಿನ ದಿನಗಳಲ್ಲಿ ಅಪೂರ್ವವಾದದ್ದು ಎಂಬುದು ಮತ್ತೊಂದು ಹೆಗ್ಗಳಿಕೆ. ಇದಕ್ಕಾಗಿ ಪ್ರಧಾನಿಯವರೂ ವಿರೋಧ ಪಕ್ಷಗಳ ಸಾಲಿನತ್ತ ತೆರಳಿ ಕೃತಜ್ಞತೆ ಸಲ್ಲಿಸಿರುವುದು ಸಕಾರಾತ್ಮಕ ಬೆಳವಣಿಗೆ. ಈ ಒಪ್ಪಂದದ ಪ್ರಕಾರ, 10 ಸಾವಿರ ಎಕರೆ ಭೂಪ್ರದೇಶ ಬಾಂಗ್ಲಾದೇಶಕ್ಕೆ ಹಾಗೂ 510 ಎಕರೆ ಪ್ರದೇಶ ಭಾರತಕ್ಕೆ ವಿನಿಮಯಗೊಳ್ಳಲಿವೆ. ಆದರೆ ಇವು ಕೇವಲ ಸೈದ್ಧಾಂತಿಕ ಅಂಕಿಅಂಶಗಳು. ಎರಡೂ ರಾಷ್ಟ್ರಗಳ ತೀರಾ ಒಳಭಾಗಗಳಲ್ಲಿ ವಿದೇಶಿ ನೆಲದಿಂದ ಆವೃತವಾದ ಈ ಭೂಪ್ರದೇಶದ ನೆಲೆಗಳಿವೆ. ಭಾರತದೊಳಗೆ 51 ಬಾಂಗ್ಲಾದೇಶ ನೆಲೆಗಳು ಹಾಗೂ ಬಾಂಗ್ಲಾದೇಶದೊಳಗೆ 111 ಭಾರತೀಯ ನೆಲೆಗಳಿವೆ. ಇದರಿಂದ ಗಡಿಗಳು ಕುಗ್ಗುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಈ ಒಂದು ಒಪ್ಪಂದದಿಂದ ಪ್ರಮುಖ ಮಾನವೀಯ ಸಮಸ್ಯೆಯೊಂದು ಇತ್ಯರ್ಥವಾದಂತಿದೆ ಎಂಬುದು ಬಹಳ ಮುಖ್ಯವಾದ ಸಂಗತಿ. ಏಕೆಂದರೆ, ಈ ಸಮಸ್ಯೆ ಬರೀ ನೆಲ ಅಥವಾ ಗಡಿಗಳದ್ದಲ್ಲ. ಜನರದ್ದೂ ಆಗಿದೆ. ಈ ನೆಲೆಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಸರ್ಕಾರಿ ವ್ಯವಸ್ಥೆ ಇಲ್ಲ. ಸರ್ಕಾರ ಸಾಮಾನ್ಯವಾಗಿ ಒದಗಿಸುವ ಮೂಲ ಸೌಕರ್ಯಗಳೇ ಇಲ್ಲದಿರುವಂತಹ ಸ್ಥಿತಿ ಇಲ್ಲಿದೆ. ವಿದ್ಯುತ್, ರಸ್ತೆಗಳಂತಹ ಮೂಲ ಸೌಕರ್ಯಗಳಿಂದ ಈ ಜನರು ವಂಚಿತರು. ಸರ್ಕಾರದ ಶಾಲೆಗಳಾಗಲಿ, ಆಸ್ಪತ್ರೆಗಳಾಗಲಿ ಈ ನೆಲೆಗಳಲ್ಲಿ ಇಲ್ಲ. ಹಾಗೆಯೇ ಪೊಲೀಸ್ ಅಥವಾ ನ್ಯಾಯಾಂಗ ವ್ಯವಸ್ಥೆಯೂ ಇಲ್ಲ. ಒಟ್ಟು ಯಾವುದೇ ಪೂರ್ಣಪ್ರಮಾಣದ ನಾಗರಿಕ ಹಕ್ಕುಗಳು ಅಥವಾ ಮೂಲಸೌಕರ್ಯಗಳೂ ಇಲ್ಲದಂತಹ ಸ್ಥಿತಿಯಲ್ಲಿ ಜನರ ಬದುಕು ಅತಂತ್ರ ಸ್ಥಿತಿಯದಾಗಿತ್ತು. ಅಪರಾಧ ಹಾಗೂ ವಿಧ್ವಂಸಕ ಕೃತ್ಯಗಳ ತಾಣವಾಗಿ ಭದ್ರತೆಗೂ ಬೆದರಿಕೆ ಒಡ್ಡುವಂತಹದ್ದಾಗಿತ್ತು. ಕೆಲವೊಂದು ದೊಡ್ಡ ನೆಲೆಗಳು ಮಾತ್ರ ಸ್ಥಳೀಯ ಮಂಡಳಿಗಳನ್ನು ರಚಿಸಿಕೊಂಡು ಮೂಲ ಆಡಳಿತವನ್ನು ನಡೆಸಿಕೊಂಡು ಹೋಗುವಂತಹ ಸ್ಥಿತಿ ಇತ್ತು. ದಶಕಗಳಿಂದ ಅನುಭವಿಸಿಕೊಂಡು ಬಂದಿರುವ ಇಂತಹ ಸಂಕಷ್ಟಗಳಿಗೆ ಈಗ ಪರಿಹಾರ ದೊರಕುವ ಭರವಸೆ ಲಭಿಸಿದೆ. 1974ರಲ್ಲಿ ಭೂಪ್ರದೇಶಗಳ ವಿನಿಮಯಕ್ಕಾಗಿ ಇಂದಿರಾ– ಮುಜೀಬ್ ಒಪ್ಪಂದವಾಗಿತ್ತು. ಆದರೆ ಭಾರತದೊಳಗಿನ ಆಂತರಿಕ ರಾಜಕಾರಣದಿಂದ ಇದು ಜಾರಿಗೆ ಬರಲಿಲ್ಲ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ನಾಯಕರು ಈ ಒಪ್ಪಂದ ಜಾರಿಗೆ ಆಗ ತೀವ್ರ ಪ್ರತಿರೋಧ ತೋರಿದ್ದರು. ಬಾಂಗ್ಲಾದೇಶದೊಂದಿಗೆ ಪರಿಹರಿಸಿಕೊಳ್ಳಲಾಗದ ಈ ಭೂಪ್ರದೇಶಗಳ ಸಮಸ್ಯೆಯನ್ನು ಪ್ರಮುಖ ಭದ್ರತಾ ವಿಚಾರವೆಂದು ವಾಜಪೇಯಿ ನೇತೃತ್ವದ ಸರ್ಕಾರದ ಕಾರ್ಗಿಲ್ ಸಮಿತಿ ವರದಿಯೂ ಗುರುತಿಸಿತ್ತು. ನಂತರ, ಇಂದಿರಾ– ಮುಜೀಬ್ ಒಪ್ಪಂದವನ್ನು ಅಂಗೀಕರಿಸುವ ನಿಟ್ಟಿನಲ್ಲಿ 2011ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ನಡೆಸಿದ ಪ್ರಯತ್ನಗಳಿಗೂ ಬಿಜೆಪಿ ವಿರೋಧ ತೋರಿತ್ತು. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಈ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿರುವುದು ಸಮಾಧಾನಕರ. ಕಳೆದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಷೇಕ್ ಹಸೀನಾ ಅವರಿಗೆ ಈ ಬಗ್ಗೆ ಮೋದಿಯವರು ಭರವಸೆ ನೀಡಿದ್ದರು. ಕಡೆಗೂ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿರೋಧಗಳನ್ನು ಬಗೆಹರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದರಿಂದಾಗಿ ಬಾಂಗ್ಲಾ ದೇಶದೊಂದಿಗೆ ನದಿ ನೀರು ಹಂಚಿಕೆ ಮತ್ತಿತರ ವಾಣಿಜ್ಯ ವಹಿವಾಟು ವಿಚಾರಗಳಲ್ಲಿ ಪಾಲುದಾರಿಕೆ ವೃದ್ಧಿಗೆ ಸಹಕಾರಿಯಾಗಲಿದೆ. ರಾಜಕಾರಣ ಎಂಬುದು ರಾಷ್ಟ್ರೀಯವಾಗಿ ಪ್ರಮುಖವಾದ ವಿಚಾರಗಳ ಬಗ್ಗೆ ಸಂಧಾನ ಹಾಗೂ ಸಂಸತ್‌ನಲ್ಲಿ ಒಮ್ಮತ ಮೂಡಿಸುವುದೂ ಆಗಿರುತ್ತದೆ ಎಂಬುದು ಈ ವಿಚಾರದಲ್ಲಿ ನಿಜವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.