ಸಮಸ್ಯೆ ಆಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಕೇರಳದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದ (ಎಸ್ಎಐ) ವಸತಿ ನಿಲಯದಲ್ಲಿ ವಿಷಕಾರಕ ಹಣ್ಣು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಾಲ್ವರು ಯುವ ಕ್ರೀಡಾಪಟುಗಳ ಪೈಕಿ ಒಬ್ಬರು ಗುರುವಾರ ಮೃತಪಟ್ಟಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾಲಕಿಯರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸುವಂತಹ ಮಟ್ಟಿಗೆ ಕ್ರೀಡಾ ವಸತಿ ನಿಲಯದಲ್ಲಿ ಉಂಟಾದ ಸಮಸ್ಯೆ ಏನು ಎಂಬ ಬಗ್ಗೆ ಅನೇಕ ಪ್ರಶ್ನೆಗಳನ್ನು ಈ ಘಟನೆ ಹುಟ್ಟುಹಾಕಿದೆ. ಈ ವಿದ್ಯಮಾನವನ್ನು ಯಾವುದೋ ಒಂದು ಪ್ರತ್ಯೇಕ ಘಟನೆಯಾಗಿ ನೋಡುವುದು ಸರಿಯಲ್ಲ. ಯುವ ಅಥ್ಲೀಟ್‌ಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ತಲುಪುವುದು ಸಮಾಜದ ಓರೆಕೋರೆಗಳಿಗೆ ಹಿಡಿದ ಕೈಗನ್ನಡಿ. ಅಲೆಪ್ಪಿಯಲ್ಲಿರುವ ಎಸ್ಎಐ ಜಲ ಕ್ರೀಡಾಕೇಂದ್ರದಲ್ಲಿ ಈ ಬಾಲಕಿಯರು ತರಬೇತಿ ಪಡೆಯುತ್ತಿದ್ದರು. ಆತ್ಮಹತ್ಯೆಗೆ ಮುನ್ನ ಈ ಬಾಲಕಿಯರು ಬರೆದಿಟ್ಟಿರುವ ಪತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೀನಿಯರ್‌ಗಳ ಕಿರುಕುಳ ತಾಳಲಾಗದೆ ಈ ತೀವ್ರ ಕ್ರಮ ಕೈಗೊಳ್ಳುತ್ತಿರುವುದಾಗಿ ಬಾಲಕಿಯರು ಈ ಪತ್ರದಲ್ಲಿ ಹೇಳಿದ್ದಾರೆನ್ನಲಾಗಿದೆ. ಆದರೆ ಬಿಯರ್ ಸೇವಿಸಿದ ಬಾಲಕಿಯರ ನಡವಳಿಕೆ ಕುರಿತಂತೆ ತರಬೇತಿದಾರರು ನಿಂದಿಸಿದ್ದರಿಂದ ಹೆದರಿ ಈ ಸಾಮೂಹಿಕ ಆತ್ಮಹತ್ಯೆ ಯತ್ನ ನಡೆದಿದೆ ಎಂದೂ ಹೇಳಲಾಗಿದೆ. ಒಟ್ಟಾರೆ, ದೂರದ ಊರುಗಳಿಂದ ಬಂದು ವಸತಿ ಶಾಲೆಯಲ್ಲಿರುವ ಈ ಹದಿಹರೆಯದ ಬಾಲಕಿಯರು ಮುಖಾಮುಖಿಯಾಗಬಹುದಾದ ಅತಂತ್ರ ಸ್ಥಿತಿಯನ್ನು ಈ ಪ್ರಕರಣ ಅನಾವರಣಗೊಳಿಸಿದೆ. ಹದಿಹರೆಯದ ತಾಕಲಾಟಗಳು, ಸಮಸ್ಯೆಗಳು ಹಾಗೂ ಕ್ರೀಡಾಲೋಕದ ಅತೀವ ಸ್ಪರ್ಧಾತ್ಮಕ ಒತ್ತಡಗಳನ್ನು ಮನೆಯವರಿಂದ ದೂರ ಇದ್ದು ಈ ಯುವ ಕ್ರೀಡಾಪಟುಗಳು ಒಂಟಿಯಾಗಿ ಎದುರಿಸುತ್ತಾರೆ. ಹೆದರಿಸಿ ಪೀಡಿಸುವ ಸೀನಿಯರ್‌ಗಳು ಹಾಗೂ ಕೋಚ್‌ಗಳ ಕುರಿತಾಗಿ ಸಹಜವಾಗಿಯೇ ಇರುವ ಹೆದರಿಕೆ ದೂರದ ಊರುಗಳಿಂದ ಬಂದು ಹಾಸ್ಟೆಲ್‌ನಲ್ಲಿರುವ ಈ ಯುವತಿಯರನ್ನು ದುರ್ಬಲರನ್ನಾಗಿಸಿ ಕಂಗೆಡಿಸುವುದು ಸ್ಪಷ್ಟ. ಇಂತಹ ಪರಿಸ್ಥಿತಿಗಳನ್ನು ನಿರ್ವಹಿಸಲು ಕ್ರೀಡಾ ಶಾಲೆಗಳಲ್ಲಿ ಸಾಂಸ್ಥಿಕವಾದ ಆಡಳಿತಾತ್ಮಕ ವ್ಯವಸ್ಥೆ ಇರಬೇಕಾದುದರ ಅಗತ್ಯವನ್ನು ಈ ಘಟನೆ ಪ್ರತಿಪಾದಿಸಿದೆ. ಆದರೆ ಇಂತಹ ಕುಂದುಕೊರತೆ, ಸಮಸ್ಯೆ, ಕಿರುಕುಳ ಅಥವಾ ನೋವುಗಳನ್ನು ಹೇಳಿಕೊಳ್ಳಲು ಹಾಸ್ಟೆಲ್‌ನಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಎಂಬುದು ದುರದೃಷ್ಟಕರ. ಭಾರತ ಕ್ರೀಡಾ ಪ್ರಾಧಿಕಾರ, ಸುಮಾರು 250 ಸ್ಥಳಗಳಲ್ಲಿ 10 ಸಾವಿರ ಅಥ್ಲೀಟ್‌ಗಳಿಗೆ ವಸತಿಸಹಿತ ತರಬೇತಿ ಕಾರ್ಯಕ್ರಮ ನಿರ್ವಹಿಸುತ್ತದೆ. ಇವು ಭಾರತದ ಕ್ರೀಡೆಯ ಮುಖ್ಯ ನೆಲೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿ ಈ ತರಹದ ಘಟನೆಗಳು ನಡೆಯುವುದು ವಿಶ್ವಾಸವನ್ನು ಕುಂದಿಸುವಂತಹದ್ದು. ಯುವ ಕ್ರೀಡಾ ಪ್ರತಿಭೆಗಳು ಅರಳಲು ಸರಿಯಾದ ವಾತಾವರಣ ನಿರ್ಮಾಣವಾಗಬೇಕಾದದ್ದು ಇಂದಿನ ತುರ್ತು ಅಗತ್ಯ. ಈ ದುರಂತದಲ್ಲಿ ಸತ್ತ ಅಪರ್ಣಾ ರಾಮಭದ್ರನ್ (16) ಹಾಗೂ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಯುವತಿಯರು ಭವಿಷ್ಯದಲ್ಲಿ ಕ್ರೀಡಾಲೋಕದಲ್ಲಿ ಪ್ರತಿಭೆಗಳಾಗಿ ಬೆಳೆಯಬೇಕಾಗಿದ್ದ ಎಳೆಯರು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತವಾದ ಸಮಗ್ರ ತನಿಖೆ ನಡೆಯಬೇಕಾಗಿದೆ. ಹದಿಹರೆಯದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿನ ವೈಫಲ್ಯದಿಂದಾಗಿ ಇಂತಹ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕ್ರೀಡಾ ಕೋಚ್‌ಗಳ ವಿರುದ್ಧ ಈ ಹಿಂದೆ ಲೈಂಗಿಕ ಕಿರುಕುಳಗಳ ಅನೇಕ ಪ್ರಕರಣಗಳು ದಾಖಲಾಗಿರುವ ಘಟನೆಗಳನ್ನೂ ನಾವು ನೆನಪಿಸಿಕೊಳ್ಳಬೇಕು. ಕ್ರೀಡೆ ಎಂಬುದೇ ಸ್ಪರ್ಧಾತ್ಮಕವಾದದ್ದು. ಇದರ ಜೊತೆಗೆ ಸಮವಯಸ್ಕರು ಸೃಷ್ಟಿಸುವ ಮಾನಸಿಕ ಒತ್ತಡಗಳು ಮತ್ತಷ್ಟು ತೀವ್ರವಾದದ್ದು, ಸಂಕೀರ್ಣವಾದದ್ದು. ಈಗ ಅಲೆಪ್ಪಿಯಲ್ಲಿನ ಈ ದುರಂತದ ನಂತರ ಅನೇಕ ಅಥ್ಲೀಟ್‌ಗಳು ರಜೆ ಪಡೆದು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ ಎಂಬುದು ಈ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾದುದರ ಅಗತ್ಯವನ್ನು ಎತ್ತಿ ಹೇಳುತ್ತದೆ. ಯುವಜನರ ಮನಸ್ಸುಗಳಲ್ಲಿ ಸೃಷ್ಟಿಯಾಗಬಹುದಾದ ಯಾವುದೇ ಆತಂಕ, ಅಭದ್ರತೆಗಳು ನಿವಾರಣೆಯಾಗಬೇಕು. ಸಮಸ್ಯೆಗಳನ್ನು ಆಲಿಸುವಂತಹ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುವುದು ಅತ್ಯಗತ್ಯ. ಭಾವನಾತ್ಮಕವಾದ ಗಟ್ಟಿತನ ಯುವ ಮನಗಳಲ್ಲಿ ರೂಪುಗೊಳ್ಳುವುದು ಅವಶ್ಯ. ಆಲೋಚನೆ ಹಾಗೂ ಚಿಂತನಾವಿಧಾನಗಳಲ್ಲಿ ಇಂತಹ ಗಟ್ಟಿತನ ರೂಪಿಸುವಂತಹ ಸೂಕ್ತ ಮಾರ್ಗದರ್ಶನ ಯುವಮನಸ್ಸುಗಳಿಗೆ ಅತ್ಯಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.