ಎಲ್ಲರಿಗೂ ವಿಮೆ: ಸಾಮಾಜಿಕ ಸುರಕ್ಷತೆಯತ್ತ ಹೊಸ ಹೆಜ್ಜೆ ಸಾಮಾಜಿಕ ಸುರಕ್ಷತೆಯ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ಈ ಯೋಜನೆಗಳ ಚಾಲನೆಗೆ ಅವರು ಆಯ್ಕೆ ಮಾಡಿಕೊಂಡಿದ್ದು ಕೋಲ್ಕತ್ತ ನಗರವನ್ನು. ಅದೂ ತಮ್ಮ ವಿರುದ್ಧ ಆಗಾಗ್ಗೆ ವಾಗ್ದಾಳಿ ನಡೆಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಮೋದಿಯವರು ಈ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವಿಚಾರದ ರಾಜಕೀಯ ಏನೇ ಇರಲಿ, ಭಾರತದಲ್ಲಿ ಎಲ್ಲಾ ನಾಗರಿಕರನ್ನೂ ಒಳಗೊಳ್ಳುವಂತಹ ಸಾಮಾಜಿಕ ಸುರಕ್ಷತೆಯ ಯೋಜನೆಗಳ ಅನುಷ್ಠಾನದಲ್ಲಿ ಇದು ಹೊಸ ಪ್ರಯತ್ನ ಎಂಬುದಂತೂ ನಿಜ. ರಾಷ್ಟ್ರದಾದ್ಯಂತ 115 ಸ್ಥಳಗಳಲ್ಲಿ ಮೋದಿ ಸಂಪುಟದ ಸಚಿವರು ಈ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಪ್ರಕಾರ, ಮಾಸಿಕ ಒಂದು ರೂಪಾಯಿಗೆ ₨ 2 ಲಕ್ಷ ಅಪಘಾತ ವಿಮೆ ಒದಗಿಸುವ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ವಾರ್ಷಿಕ ₨ 330ಕ್ಕೆ ₨ 2 ಲಕ್ಷ ಜೀವವಿಮೆ ಒದಗಿಸುವ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಸರ್ಕಾರದಿಂದ ನಿಶ್ಚಿತ ಪಿಂಚಣಿ ಒದಗಿಸುವ ಅಟಲ್‌ ಪಿಂಚಣಿ ಯೋಜನೆ ಜಾರಿಗೊಳ್ಳಲಿವೆ. ದೇಶದ ಪ್ರತಿಯೊಬ್ಬರಿಗೂ ವಿಮಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ. ರಾಷ್ಟ್ರದಲ್ಲಿ ಹೆಚ್ಚಿನ ಮಂದಿ ಜೀವವಿಮೆ, ಅಪಘಾತ ವಿಮೆ ಹಾಗೂ ಪಿಂಚಣಿ ಯೋಜನೆಗಳನ್ನು ಹೊಂದಿಲ್ಲ. ಹೀಗಾಗಿ ಕಡಿಮೆ ದರದಲ್ಲಿ ಎಲ್ಲರಿಗೂ ಲಭ್ಯವಾಗಲಿರುವ ಈ ಯೋಜನೆಗಳು ಹೊಸ ಆರಂಭ. ನಿಜಕ್ಕೂ ಸಾಮಾಜಿಕ ಭದ್ರತೆ ಎಂಬುದು ನಾಗರಿಕರ ಮೂಲಭೂತ ಅಗತ್ಯ. ಬದುಕಿನಲ್ಲಿ ಸಂಭವಿಸಬಹುದಾದ ಅವಘಡಗಳು ಹಾಗೂ ವೃದ್ಧಾಪ್ಯದ ಸಂಕಷ್ಟಗಳಿಗೆ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ಇಲ್ಲಿ ಪ್ರದರ್ಶಿಸಿದೆ. ಯೋಜನೆಗಳ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಉಳಿತಾಯ ಖಾತೆಯಲ್ಲಿ ಪ್ರೀಮಿಯಂಗೆ ಬೇಕಾದ ಹಣ ಇದ್ದರೆ ಸಾಕು. ‘ಜನ್ ಧನ್’ ಯೋಜನೆ ನಂತರ ಆರ್ಥಿಕ ಒಳಗೊಳ್ಳುವಿಕೆಯ ಯತ್ನದಲ್ಲಿ ಇದು ಮತ್ತೊಂದು ಪ್ರಮುಖ ಹೆಜ್ಜೆ. ಬಡವರ ವಿರೋಧಿ, ರೈತ ವಿರೋಧಿ ಹಾಗೂ ವಾಣಿಜ್ಯೋದ್ಯಮಿಗಳ ಪರ ಇರುವ ‘ಸೂಟುಬೂಟಿನ ಸರ್ಕಾರ’ ಎಂಬ ಭಾವನೆ ನರೇಂದ್ರ ಮೋದಿ ಸರ್ಕಾರ ಕುರಿತು ಬಲವಾಗಿಯೇ ಇದೆ. ಹೀಗಾಗಿ ತಾವು ಬಡವರ ಪರ ಎಂಬುದನ್ನು ಬಿಂಬಿಸಿಕೊಳ್ಳುವುದಕ್ಕೂ ಈ ಯೋಜನೆ ಅನುಷ್ಠಾನ ಸಹಕಾರಿ. ಭಾರಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಭಾರತ. ಜೊತೆಗೆ ಅನಕ್ಷರತೆ ಹಾಗೂ ಬಡತನ ತಾಂಡವವಾಡುತ್ತಿದೆ. ಈ ಅರ್ಹ ಜನಸಂಖ್ಯೆಯಲ್ಲಿ ಹೆಚ್ಚು ಜಾಗೃತರಾಗಿರುವವರು ಮಾತ್ರ ಬ್ಯಾಂಕ್ ಆಧಾರಿತ ಯೋಜನೆಗಳ ಲಾಭ ಪಡೆದುಕೊಳ್ಳುತ್ತಾರೆ ಎಂಬುದು ಕಟು ವಾಸ್ತವ. ಹೀಗಾಗಿ, ಸದುದ್ದೇಶದ ಸಾಮಾಜಿಕ ಭದ್ರತಾ ಯೊಜನೆಗಳ ಅನುಷ್ಠಾನ ಸುಲಭವಲ್ಲ. ಈ ಬಗ್ಗೆ ಗಮನ ವಹಿಸುವುದು ಮುಖ್ಯ. ಒಟ್ಟು ಕಾರ್ಮಿಕ ಶಕ್ತಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಪ್ರಮಾಣ ಶೇ 88ರಷ್ಟಿದೆ. ಇವರಿಗೆ ಯಾವುದೇ ಔಪಚಾರಿಕ ಪಿಂಚಣಿ ಯೋಜನೆ ಇಲ್ಲ. ಈಗ ಈ ಯೋಜನೆಗಳಿಂದ ಆರ್ಥಿಕ ಒಳಗೊಳ್ಳುವಿಕೆಯ ಪ್ರಕ್ರಿಯೆ ವಿಸ್ತೃತಗೊಂಡಂತಾಗಿದೆ. ದೀರ್ಘಾವಧಿಯಲ್ಲಿ ರಾಷ್ಟ್ರದಲ್ಲಿ ವಿಮೆ ಜಾಗೃತಿ ಹೆಚ್ಚಿಸುವಲ್ಲಿಯೂ ಇದು ಸಹಾಯಕ. ಬಡವರನ್ನು ಒಳಗೊಳ್ಳದಿದ್ದಲ್ಲಿ ಅಭಿವೃದ್ಧಿ ಪ್ರಕ್ರಿಯೆಯೇ ಅಪೂರ್ಣವಾಗುತ್ತದೆ. ಹಾಗೆಯೇ ಪಿಂಚಣಿ, ವಿಮೆಗಾಗಿ ಸಂಗ್ರಹಿಸಿದ ಹಣವನ್ನು ರಾಷ್ಟ್ರದ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸುವುದಕ್ಕೂ ಸರ್ಕಾರಕ್ಕೆ ಅವಕಾಶವಿದೆ. ಇದರಿಂದ ಮೂಲಸೌಕರ್ಯಗಳ ಗುಣಮಟ್ಟ ಹೆಚ್ಚಾಗುತ್ತದೆ. ಆದರೆ ಈ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಬದ್ಧತೆ ಬೇಕು. ಇಲ್ಲದಿದ್ದಲ್ಲಿ ಈ ಯೋಜನೆಗಳು ಇನ್ನಿತರ ಸರ್ಕಾರಿ ಕಾರ್ಯಕ್ರಮಗಳಂತೆ ಕಾಗದದಲ್ಲಷ್ಟೇ ಉಳಿದುಬಿಡುತ್ತವೆ ಎಂಬ ಎಚ್ಚರವನ್ನು ಆಡಳಿತಯಂತ್ರ ಸದಾ ಹೊಂದಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.