ದೋಷಮುಕ್ತ ಜಯಲಲಿತಾ ಮುಂದಿನ ನಡೆಯೇನು? ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಪ್ರಾಯಶಃ ತಮ್ಮ ಬದುಕಿನ ಅತಿ ದೊಡ್ಡ ಮತ್ತು ನಿರ್ಣಾಯಕವಾದ ಕಾನೂನು ಹೋರಾಟದಲ್ಲಿ ಗೆದ್ದಿದ್ದಾರೆ. ಅವರ ಮೇಲಿನ ಆರೋಪಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ರಾಜ್ಯ ಹೈಕೋರ್ಟ್‌ನ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟು, ಅವರನ್ನು ಖುಲಾಸೆ ಮಾಡಿದೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರೂ ಅವರ ತಲೆ ಮೇಲೆ ತೂಗುತ್ತಿದ್ದ ಬಂಧನದ ಭೀತಿ ಇದರಿಂದ ದೂರವಾಗಿದೆ. 10 ವರ್ಷ ಚುನಾವಣೆ ಸ್ಪರ್ಧೆಗೆ ಇದ್ದ ನಿಷೇಧವೂ ತೆರವಾದಂತಾಗಿದೆ. ಮನಸ್ಸು ಮಾಡಿದರೆ ಅವರು ಐದನೇ ಸಲ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಬಹುದು. ಈ ಹಾದಿಯಲ್ಲಂತೂ ಅವರಿಗೆ ಪಕ್ಷದೊಳಗೆ ಎದುರಾಳಿಯೇ ಇಲ್ಲ. ಉಪ ಚುನಾವಣೆಗೂ ಸ್ಪರ್ಧಿಸಿ ಸಂವಿಧಾನದ ಕಟ್ಟಳೆ ಪೂರೈಸುವ ದಾರಿಯೂ ತೆರೆದುಕೊಂಡಿದೆ. ಆದರೆ ತಮ್ಮ ಮನಸ್ಸಿನಲ್ಲಿ ಏನಿದೆ ಎಂಬುದರ ಗುಟ್ಟನ್ನಂತೂ ಅವರು ಇದುವರೆಗೂ ಬಿಟ್ಟುಕೊಟ್ಟಿಲ್ಲ. 1996 ರಿಂದ ಇದುವರೆಗೆ ಸುಮಾರು ಎಂಟು ವಿವಿಧ ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು. 1992ರಲ್ಲಿ ಜನ್ಮದಿನದಂದು ಡಿ.ಡಿಗಳ ರೂಪದಲ್ಲಿ ₨ 1.48 ಕೋಟಿ ಉಡುಗೊರೆ ಪಡೆದ ಪ್ರಕರಣ ಹೊರತುಪಡಿಸಿ ಉಳಿದೆಲ್ಲವು ಈಗಾಗಲೆ ತಾರ್ಕಿಕ ಅಂತ್ಯ ಕಂಡಿವೆ. ಇದೆಲ್ಲ ಸಹಜವಾಗಿಯೇ ಅವರಿಗೆ ಸಮಾಧಾನ ತಂದಿರಲೂಬಹುದು. ಅದಕ್ಕಾಗಿಯೇ, ತಾವೀಗ ಅಗ್ನಿಪರೀಕ್ಷೆಯನ್ನು ಗೆದ್ದು ಬಂದ ಅಪ್ಪಟ ಚಿನ್ನ ಎಂದು ಹೇಳಿಕೊಂಡಿದ್ದಾರೆ. ಅವರ ದೃಷ್ಟಿಯಲ್ಲಿ ಅದು ಸರಿಯಿರಬಹುದು. ಏಕೆಂದರೆ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದು 19 ವರ್ಷಗಳಷ್ಟು ಹಿಂದೆ. ನಂತರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದರ ಹಿಂದೆ ರಾಜಕಾರಣ ಇದ್ದೇ ಇತ್ತು. ಹೀಗಾಗಿ ರಾಜಕೀಯದ ಕಪ್ಪುಮಸಿ ಕೂಡ ಇದಕ್ಕೆ ಮೆತ್ತಿಕೊಂಡಿತ್ತು. ಈಗ ಹೈಕೋರ್ಟ್‌ ತೀರ್ಪು ಜಯಲಲಿತಾ ಅವರ ಮೇಲಿನ ಆರೋಪಗಳನ್ನು ಅಳಿಸಿಹಾಕಿದೆ. ಆದಾಗ್ಯೂ, ಅವರು ದೋಷಮುಕ್ತರಾಗಿರುವುದು ಬಹುತೇಕ ತಾಂತ್ರಿಕ ಕಾರಣಗಳಿಂದ. ‘ಒಬ್ಬ ವ್ಯಕ್ತಿಯ ಆದಾಯಕ್ಕಿಂತ ಆಸ್ತಿ ಗರಿಷ್ಠ ಶೇ 10ರಷ್ಟು ಹೆಚ್ಚಿದ್ದರೂ ಅದನ್ನು ಅಕ್ರಮ ಎಂದು ಪರಿಗಣಿಸುವುದು ಸರಿಯಲ್ಲ ಎನ್ನುವುದು ಅಗ್ನಿಹೋತ್ರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಮತ. ಆದರೆ ಜಯಲಲಿತಾ ಪ್ರಕರಣದಲ್ಲಿ ಹೆಚ್ಚಳದ ಪ್ರಮಾಣ ಶೇ 8.12ರಷ್ಟು ಮಾತ್ರ’ ಎಂದು ಹೈಕೋರ್ಟ್‌ ಬೆರಳು ಮಾಡಿ ತೋರಿಸಿದೆ. ಕಾನೂನಿನ ದೃಷ್ಟಿಯಲ್ಲಿ ಜಯಾ ಈಗ ನಿರ್ದೋಷಿ. ಆದರೆ ಗಣ್ಯ ಮತ್ತು ಪ್ರಭಾವಿ ರಾಜಕಾರಣಿಗಳ ಮೇಲಿನ ಮೊಕದ್ದಮೆಗಳು, ವಿಚಾರಣೆಗಳು, ತೀರ್ಪುಗಳನ್ನು ಹೆಚ್ಚು ಆಸಕ್ತಿ, ಕುತೂಹಲದಿಂದ ಗಮನಿಸುವ ಜನಸಾಮಾನ್ಯರ ಕಣ್ಣಲ್ಲಿ ಅನುಮಾನದ ಒಂದು ಅಂಶವಂತೂ ಸದಾ ಉಳಿದೇ ಉಳಿಯುತ್ತದೆ. ಇಂಥ ಪ್ರಕರಣಗಳ ವಿಚಾರಣೆ ಅಂತ್ಯ ಕಾಣಲು 19 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಳ್ಳುವುದು ಯಾವ ದೃಷ್ಟಿಯಿಂದಲೂ ಸಮರ್ಥನೀಯವಲ್ಲ. ಏಕೆಂದರೆ ವಿಳಂಬವಾದಷ್ಟೂ ಆರೋಪಿ ಮಾನಸಿಕ ಹಿಂಸೆ ಅನುಭವಿಸುತ್ತಲೇ ಇರಬೇಕಾಗುತ್ತದೆ. ಆದರೆ ಇಲ್ಲಿ ವಿಳಂಬ ತಂತ್ರದ ಆಟವೂ ನಡೆಯಿತು. ಅಲ್ಲದೆ ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಕೂಡ ಪದೇಪದೇ ಎಡವಿತು. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕಾತಿ ಗೊಂದಲ, ತನ್ನನ್ನು ಪ್ರತಿವಾದಿಯಾಗಿ ಮಾಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸುವಲ್ಲಿನ ಲೋಪ ಸೇರಿದಂತೆ ವಿವಿಧ ವಿಷಯಗಳಲ್ಲಿ ಅದು ಸಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಈಗ ಮರುಗಿದರೆ ಏನು ಪ್ರಯೋಜನ? ಪ್ರಾಸಿಕ್ಯೂಷನ್‌ ಪರ ಮೌಖಿಕ ವಾದ ಮಂಡಿಸಿ ಆರೋಪ ಸಾಬೀತುಪಡಿಸಲು ತಮಗೆ ಅವಕಾಶವೇ ಸಿಗಲಿಲ್ಲ ಎಂಬುದು ಈಗಿನ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ವಿ. ಆಚಾರ್ಯ ಅವರ ಕೊರಗು. ಆದರೆ ಇದರಲ್ಲಿ ರಾಜ್ಯ ಸರ್ಕಾರದ ಲೋಪವೂ ಇದೆ. ಹೀಗಾಗಿಯೇ ರಾಜ್ಯ ಸರ್ಕಾರದ ಆಕ್ಷೇಪಗಳನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ತಳ್ಳಿ ಹಾಕಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಆಚಾರ್ಯ ಅವರೇನೋ ಹೇಳಿದ್ದಾರೆ. ಆದರೆ ಇದು ರಾಜಕೀಯ ಪರಿಣಾಮ ಬೀರುವುದರಿಂದ ಸರ್ಕಾರದ ಸೂತ್ರ ಹಿಡಿದವರು ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವುದು ಸಹ ಕುತೂಹಲದ ವಿಷಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.