ಆತ್ಮಾವಲೋಕನಕ್ಕೆ ಇದು ಸಕಾಲ ರಾಜ್ಯದಲ್ಲಿ ಒಂಬತ್ತು ವರ್ಷಗಳ ನಂತರ ಸ್ವತಂತ್ರವಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು ಈಗ ಎರಡು ವರ್ಷ ಕಳೆದಿದೆ. ‘ಅಹಿಂದ’ ಹರಿಕಾರ ಎಂಬ ಬಿರುದು ಹೊತ್ತುಕೊಂಡೇ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎರಡು ವರ್ಷಗಳಲ್ಲಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸಿದ್ದಾರೆ. ನಿರ್ದಿಷ್ಟವಾದ ಭ್ರಷ್ಟಾಚಾರ ಆರೋಪಗಳು ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿಲ್ಲವಾದರೂ ಇದು ಸಿದ್ದರಾಮಯ್ಯ ಶೈಲಿಯ ಸರ್ಕಾರ ಅಲ್ಲ ಎಂಬ ಭಾವನೆ ಅವರ ಆಪ್ತರಲ್ಲಿಯೇ ಇದೆ. ಕಾಂಗ್ರೆಸ್‌ ಸರ್ಕಾರ ಮುಜುಗರ ಅನುಭವಿಸುವಂತಹ ಸಾಕಷ್ಟು ಪ್ರಸಂಗಗಳು ಈ ಅವಧಿಯಲ್ಲಿ ನಡೆದಿವೆ. ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಅಲ್ಲದೆ ಸಚಿವರ ಕಾರ್ಯದಕ್ತೆ ಕುರಿತು ಮೌಲ್ಯಮಾಪನ ನಡೆಸಿ ಆಡಳಿತಕ್ಕೆ ಚುರುಕು ಮೂಡಿಸಲೂ ಇದು ಸೂಕ್ತ ಸಮಯ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ‘ಅನ್ನಭಾಗ್ಯ’ ಯೋಜನೆಯನ್ನು ಪ್ರಕಟಿಸಿದರು. ರಾಜ್ಯವನ್ನು ಹಸಿವು ಮುಕ್ತ ಮಾಡಲು ಇದೊಂದು ಉತ್ತಮ ಯೋಜನೆ. ಈ ಬಗ್ಗೆ ಎಷ್ಟೇ ಟೀಕೆಗಳು ಬಂದರೂ ಕೆಲವು ಬದಲಾವಣೆಗಳೊಂದಿಗೆ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದೇ ರೀತಿ ‘ಕ್ಷೀರಭಾಗ್ಯ’, ‘ಕೃಷಿಭಾಗ್ಯ’ ಮುಂತಾದ ಜನಪ್ರಿಯ ಯೋಜನೆಗಳನ್ನೂ ಜಾರಿಗೊಳಿಸಲಾಗಿದೆ. ಇವೆಲ್ಲ ಸ್ವಾಗತಾರ್ಹ ಯೋಜನೆಗಳೇ ಆದರೂ ಅನುಷ್ಠಾನದ ಲೋಪ ಇದೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಕೊರತೆಯೂ ಎದ್ದು ಕಾಣುತ್ತಿದೆ. ಬೇರೆ ಬೇರೆ ಸಂದರ್ಭದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಾಗ ಪಕ್ಷದ ಮುಖಂಡರು ಸರ್ಕಾರದ ಬೆಂಬಲಕ್ಕೆ ಬರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಂಟಿಯಾದಂತೆ ಅನ್ನಿಸುತ್ತಿತ್ತು. ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಮುಖ್ಯ ಮಂತ್ರಿ ಬೆಂಬಲಕ್ಕೆ ಬಂದ ಉದಾಹರಣೆ ಕಡಿಮೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಎರಡು ವರ್ಷದ ನಂತರವೂ ಜನತಾ ಪರಿವಾರದಿಂದ ಬಂದವರು ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಭೇದಭಾವ ಇರುವುದು ಕಾಂಗ್ರೆಸ್‌ ಪಕ್ಷಕ್ಕೂ, ರಾಜ್ಯ ಸರ್ಕಾರಕ್ಕೂ ಒಳ್ಳೆಯದಲ್ಲ. ಬಿಬಿಎಂಪಿ ವಿಭಜನೆ, ಕರೆ ಒತ್ತುವರಿ ತೆರವು, ಡಿ.ಕೆ.ರವಿ ಅಸಹಜ ಸಾವು ಪ್ರಕರಣ, ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗ ರೈತರೊಬ್ಬರ ಆತ್ಮಹತ್ಯೆ, ಡಾ.ರವೀಂದ್ರನಾಥ್ ಪ್ರಕರಣ, ಶಾದಿಭಾಗ್ಯ, ಮಠಗಳ ನಿಯಂತ್ರಣ ಮಸೂದೆ, ಮೌಢ್ಯ ಪ್ರತಿಬಂಧಕ ಕಾಯ್ದೆ, ಅದ್ದೂರಿ ವಿವಾಹ ನಿಯಂತ್ರಣ ಕಾಯ್ದೆ, ಸಂತೋಷ್‌ ಲಾಡ್‌ ರಾಜೀನಾಮೆ ಪ್ರಕರಣಗಳಲ್ಲಿ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ಈ ಸಂದರ್ಭಗಳಲ್ಲಿ ಸರ್ಕಾರದ ನಿರ್ಧಾರಗಳನ್ನು ಬಹುತೇಕ ಬಾರಿ ಸಿದ್ದರಾಮಯ್ಯ ಅವರೇ ಒಬ್ಬಂಟಿಯಾಗಿ ಸಮರ್ಥಿಸಿಕೊಂಡಿದ್ದರು. ಇದು ಸಾಮೂಹಿಕ ಜವಾಬ್ದಾರಿಗೆ ಹೊರತಾದ ನಡೆ. ಇನ್ನು ಮುಂದಾದರೂ ಈ ಲೋಪವನ್ನು ಸರಿಪಡಿಸಿಕೊಳ್ಳ ಬೇಕಾಗಿದೆ. ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕೆಲಸ ಮಾಡುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಆದರೆ ಯಾವುದೇ ವರ್ಗವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅಲ್ಲದೆ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಭರಾಟೆಯಲ್ಲಿ ಅಭಿವೃದ್ಧಿಯನ್ನು ಕಡೆಗಣಿಸುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರದ ಅಭಿವೃದ್ಧಿ, ಕೈಗಾರಿಕೆ, ನೀರಾವರಿ ಕ್ಷೇತ್ರಗಳಿಗೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಗಣಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ, ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ, ಕೃಷಿ ಬೆಲೆ ಆಯೋಗಕ್ಕೆ ಹೆಚ್ಚಿನ ಅಧಿಕಾರ, ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವುದು ಸೇರಿದಂತೆ ಹಲವು ಭರವಸೆಗಳು ಇನ್ನೂ ಈಡೇರಿಲ್ಲ. ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಪೈಪೋಟಿಯೂ ಇಲ್ಲದೇ ಇರುವುದರಿಂದ ಮುಂದಿನ ಮೂರು ವರ್ಷ ಇನ್ನಷ್ಟು ಉತ್ತಮ ಆಡಳಿತ ನೀಡಲು ಸಿದ್ದರಾಮಯ್ಯ ಶ್ರಮಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.