ಮಕ್ಕಳ ದುಡಿಮೆ ವಿಸ್ತೃತ ಚರ್ಚೆಯಾಗಲಿ ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ದುಡಿಮೆಯನ್ನು ಸಂಪೂರ್ಣ ನಿಷೇಧಿಸುವ ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈಗಿರುವಂತಹ ಕಾಯಿದೆ ಅನ್ವಯ, ಹಾನಿಕಾರಕ ಅಥವಾ ಅಪಾಯಕಾರಿ ದುಡಿಮೆಗಳಲ್ಲಿ ಮಾತ್ರ ಮಕ್ಕಳ ದುಡಿಮೆಗೆ ನಿಷೇಧವಿದೆ. ಆದರೆ ಈಗಿನ ಈ ಉದ್ದೇಶಿತ ತಿದ್ದುಪಡಿ ಮಸೂದೆ, ಎಲ್ಲಾ ಉದ್ಯೋಗಗಳಲ್ಲೂ ಮಕ್ಕಳ ದುಡಿಮೆಗೆ ನಿಷೇಧ ವಿಧಿಸಿದೆ. ಹೀಗಿದ್ದೂ ರಿಯಾಯಿತಿಗಳನ್ನೂ ನೀಡಲಾಗಿದೆ. ಕುಟುಂಬ ವ್ಯವಹಾರಗಳು, ಮನರಂಜನಾ ಉದ್ಯಮ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ (ಸರ್ಕಸ್ ಬಿಟ್ಟು) ಶಾಲಾ ವೇಳೆಯ ನಂತರ ಹಾಗೂ ರಜೆ ದಿನಗಳಲ್ಲಿ ಮಕ್ಕಳ ದುಡಿಮೆಗೆ ಅವಕಾಶ ನೀಡಿರುವುದು ಜಿಜ್ಞಾಸೆಗೆ ಒಳಪಡಿಸಬೇಕಾದಂತಹ ವಿಚಾರ. ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸುವಾಗ ನಾವು ನಮ್ಮ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ ಎಂಬಂತಹ ವಾದವನ್ನು ಸರ್ಕಾರ ಮಂಡಿಸಿದೆ. ಹೊಲ ಗದ್ದೆಗಳಲ್ಲಿ ಅಥವಾ ಕುಟುಂಬದ ಕೈಕಸುಬುಗಳಲ್ಲಿ ತಂದೆ ತಾಯಿಗೆ ನೆರವಾಗುತ್ತಲೇ ಕುಟುಂಬದ ಮೂಲ ಕಸುಬು ಅಥವಾ ಕೌಶಲ ಕಲಿತುಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತದೆ ಎಂಬಂತಹ ಪ್ರತಿಪಾದನೆಗಳಿವೆ. ಒಂದು ಹಂತದವರೆಗೆ ಇದು ನಿಜ ಕೂಡ. ಆದರೆ ಸರ್ಕಾರ ತರಬಯಸಿರುವ ಈ ಬದಲಾವಣೆಗಳಿಂದ ಮಕ್ಕಳ ಶೋಷಣೆ ಇನ್ನಷ್ಟು ಹೆಚ್ಚುತ್ತದೆ ಎಂಬುದು ಮಕ್ಕಳ ಹಕ್ಕುಗಳ ಹೋರಾಟಗಾರರ ನಿಲುವು. ಕಲಿಕೆಯೊಂದಿಗೆ ದುಡಿಮೆಯ ವಿಚಾರ ಚರ್ಚಾಸ್ಪದ ಸಂಗತಿ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹೋರಾಡುತ್ತಿರುವ ಸಂಘಟನೆಗಳಲ್ಲಿ ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯಗಳು ಇವೆ. ಆದರೂ ಸರ್ಕಾರ ಈಗ ತರಬಯಸುತ್ತಿರುವ ತಿದ್ದುಪಡಿಗಳ ಬಗ್ಗೆ ವಿರೋಧದ ದನಿಗಳೇ ಕೇಳಿ ಬಂದಿವೆ. ಒಂದಂತೂ ನಿಜ. ಗೃಹ ಆಧಾರಿತ ಕುಟುಂಬದ ಉದ್ಯಮಗಳು ಕೂಡ ಮಕ್ಕಳ ಶೋಷಣೆಗೆ ಕಾರಣವಾಗಬಹುದು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಕುರಿತು ನಿಗಾ ವಹಿಸುವ ವ್ಯವಸ್ಥೆ ಇಲ್ಲದಿದ್ದಲ್ಲಿ ಬಾಲಕಾರ್ಮಿಕರಾಗಿ ಮಕ್ಕಳ ಸ್ಥಿತಿ ಶೋಚನೀಯವಾಗುತ್ತದೆ. ಅಲ್ಲದೆ ಮಕ್ಕಳಿಗೆ ಸಮಾನ ಶಿಕ್ಷಣ ಅವಕಾಶ ಒದಗಿಸಬೇಕೆನ್ನುವ 2009ರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾನೂ ನಿನ ಆಶಯಕ್ಕೂ ಇದು ವಿರುದ್ಧವಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಿಂದಾಗಿ ಪ್ರಾಥಮಿಕ ಹಂತದಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಈಗ ಹೆಚ್ಚಾಗಿದೆ. ಆದರೆ ಶಾಲೆ ಬಿಟ್ಟ ನಂತರ ದುಡಿಮೆಯಲ್ಲಿ ತೊಡಗಿಕೊಳ್ಳಬೇಕಾಗಿ ಬರುವ ಮಗುವಿಗೆ ಓದು ಬರಹಗಳಲ್ಲಿ ತೊಡಗಿಕೊಳ್ಳಲು ಸಮಯ ಸಿಗದೆ ಹೋಗಬಹುದು. ನಂತರದ ಹಂತಗಳಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವೂ ಹೆಚ್ಚಾಗಬಹುದು ಎಂಬ ದೂರಗಾಮಿ ಪರಿಣಾಮಗಳನ್ನು ಅಧ್ಯಯನ ಮಾಡಬೇಕಿರುವುದು ಅಗತ್ಯ. ಅದರಲ್ಲೂ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದು ಮನೆಗೆಲಸಗಳಲ್ಲಿ ತೊಡಗುವಂತಾಗುವುದು ಹೆಚ್ಚಾಗುತ್ತದೆ ಎಂಬ ಆತಂಕವನ್ನು ನಿರ್ಲಕ್ಷಿಸುವಂತಿಲ್ಲ. ಬೆಂಕಿಪೊಟ್ಟಣ, ಪಾದರಕ್ಷೆ, ರತ್ನಗಂಬಳಿ ತಯಾರಿಕಾ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಹೆಚ್ಚಾಗಲು ಈ ರಿಯಾಯಿತಿ ಕಾರಣವಾಗಬಹುದು ಎಂಬಂತಹ ಸಂಶಯಗಳನ್ನು ತಳ್ಳಿಹಾಕಲಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಬಾಲ ಕಾರ್ಮಿಕ ಪಿಡುಗು ನಿರ್ಮೂಲನೆ ಪ್ರಗತಿ ಕುಂಠಿತಗೊಳ್ಳುತ್ತದೆ ಅಷ್ಟೆ. ಇಂತಹ ಕಟುವಾಸ್ತವವನ್ನು ಕಾನೂನುಬದ್ಧಗೊಳಿಸುವುದು ಎಷ್ಟು ಸರಿ? ಇದರ ದೀರ್ಘಕಾಲೀನ ಪರಿಣಾಮಗಳೇನು ಎಂಬ ಬಗ್ಗೆ ವಿಸ್ತೃತ ಚರ್ಚೆಗಳು ಅಗತ್ಯ. 5–14ರ ವಯೋಮಾನದ ದುಡಿಯುವ ಮಕ್ಕಳ ಪ್ರಮಾಣ ದಶಕದ ಹಿಂದೆ 1.26 ಕೋಟಿ ಇದ್ದದ್ದು 2011ರ ವೇಳೆಗೆ 40.53 ಲಕ್ಷಕ್ಕೆ ಇಳಿಕೆಯಾಗಿದೆ ಎಂಬುದು ಭಾರತದ ಜನಗಣತಿ ಅಂಕಿಅಂಶಗಳಿಂದ ವ್ಯಕ್ತವಾಗಿದೆ. ವಾಸ್ತವವಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನವಾಗಲು ಬಡವರ ಆರ್ಥಿಕ ಸ್ಥಿತಿ ಸುಧಾರಣೆ ಕಾರ್ಯಕ್ರಮಗಳು ಸರಿಯಾಗಿ ಜಾರಿಯಾಗಬೇಕು. ಹಾಗೆಯೇ ಸಾರ್ವಜನಿಕ ಶಿಕ್ಷಣ ಮೂಲ ಸೌಕರ್ಯಗಳ ಲಭ್ಯತೆ ಹೆಚ್ಚಾಗಬೇಕಿದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಈಗಾಗಲೇ ರಾಷ್ಟ್ರದಲ್ಲಿ ಅನೇಕ ಕಾನೂನುಗಳಿದ್ದರೂ ಈ ಪಿಡುಗಿನ ನಿಯಂತ್ರಣ ಸಾಧ್ಯವಾಗಿಲ್ಲ. ಈಗಿನ ಉದ್ದೇಶಿತ ತಿದ್ದುಪಡಿಗಳಂತೂ ಉದ್ಯೋಗದಾತರಿಗೆ ಕಠಿಣಶಿಕ್ಷೆ ಒದಗಿಸುತ್ತವೆ. ಹಾಗೆಯೇ ಎರಡನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ತಂದೆತಾಯಿಗಳಿಗೂ ಶಿಕ್ಷೆ ಇದೆ. ಆದರೆ ಇಂತಹ ಕಾನೂನುಗಳ ಅನುಷ್ಠಾನದಲ್ಲಿ ಸೂಕ್ಷ್ಮತೆ ಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದು ಶೋಷಣೆಯ ಮತ್ತೊಂದು ಅಸ್ತ್ರವಾಗಿಬಿಡಬಹುದು. ಹೀಗಾಗಿ ಕಲಿಕೆಯೊಂದಿಗೆ ದುಡಿಮೆ ಎಂಬ ಪರಿಕಲ್ಪನೆಯ ಸುತ್ತ ಇರಬೇಕಾದ ಕಾಳಜಿಗಳು ಯಾವ ಬಗೆಯದಾಗಿರಬೇಕು ಎಂಬುದು ಜಿಜ್ಞಾಸೆಗೊಳಪಡಬೇಕಾದುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.