ತಾಲಿಬಾನ್‌ ಉಗ್ರರ ಉಪಟಳ ನಿಯಂತ್ರಿಸಿ ತಾಲಿಬಾನ್ ಉಗ್ರಗಾಮಿಗಳು ಮತ್ತೆ ಭಾರತದ ವಿರುದ್ಧ ಹಿಂಸಾ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ. ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅತಿಥಿ ಗೃಹವೊಂದರ ಮೇಲೆ ರಾತ್ರಿ ಹೊತ್ತು ದಾಳಿ ನಡೆಸಿ ನಾಲ್ವರು ಭಾರತೀಯರು ಸೇರಿದಂತೆ 14 ಮಂದಿಯನ್ನು ಕೊಂದಿದ್ದಾರೆ. ಇವರ ಮುಖ್ಯ ಗುರಿ ಅಲ್ಲಿನ ಭಾರತೀಯ ರಾಯಭಾರಿ ಅಮರ್ ಸಿನ್ಹಾ. ಆದರೆ ದಾಳಿ ಸಂದರ್ಭದಲ್ಲಿ ಸಿನ್ಹಾ ಅಲ್ಲಿರಲಿಲ್ಲ. ಹೀಗಾಗಿ ಅವರು ಸಾವಿನಿಂದ ತಪ್ಪಿಸಿಕೊಂಡರು. ಆಫ್ಘಾನಿಸ್ತಾನದಲ್ಲಿರುವ ಭಾರತೀಯರು ತಾಲಿಬಾನ್, ಲಷ್ಕರ್‌ ಮತ್ತಿತರ ಉಗ್ರಗಾಮಿಗಳ ದಾಳಿಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಆಫ್ಘಾನಿಸ್ತಾನದ ಪುನರ್ ನಿರ್ಮಾಣದಲ್ಲಿ ಭಾರತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ. ಭಾರತದ ಅನೇಕ ಕಂಪೆನಿಗಳ ಜೊತೆಗೆ ಕಾರ್ಮಿಕರು, ತಂತ್ರಜ್ಞರು ಅಲ್ಲಿ ರಸ್ತೆ, ಕಟ್ಟಡ, ಸಂಪರ್ಕ ಮತ್ತಿತರ ಮೂಲಸೌಲಭ್ಯ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನತಂತ್ರದ ಮರುಸ್ಥಾಪನೆಗೆ ಭಾರತ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಉಗ್ರಗಾಮಿಗಳಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ದಾಳಿ ನಡೆಸುತ್ತಲೇ ಇದ್ದಾರೆ. ಕಾಬೂಲ್‌ನ ಭಾರತದ ರಾಯಭಾರ ಕಚೇರಿಯಂತೂ ಪದೇ ಪದೇ ಅವರ ಗುರಿಯಾಗುತ್ತಿದೆ. 2008 ಮತ್ತು 2009ರಲ್ಲಿ ಅದರ ಮೇಲೆ ಉಗ್ರರು ದಾಳಿಗಳನ್ನು ನಡೆಸಿ 83 ಜನರನ್ನು ಕೊಂದಿದ್ದರು. ಹೆರಾತ್‌ ಮತ್ತು ಜಲಾಲಾಬಾದ್‌ನಲ್ಲಿರುವ ಭಾರತದ ವಾಣಿಜ್ಯ ಪ್ರತಿನಿಧಿ ಕಚೇರಿಗಳ ಮೇಲೂ ದಾಳಿಯಾಗಿತ್ತು. ಎರಡು ವರ್ಷದ ಹಿಂದೆ ಫಕ್ತಿತಾ ಪ್ರಾಂತದಲ್ಲಿ ಭಾರತೀಯ ಮೂಲದ ಲೇಖಕಿ ಸುಶ್ಮಿತಾ ಬ್ಯಾನರ್ಜಿ ಹತ್ಯೆಯಾಗಿತ್ತು. ಕಳೆದ ವರ್ಷ ಕ್ರೈಸ್ತ ಪಾದ್ರಿಯೊಬ್ಬರ ಅಪಹರಣವಾಗಿತ್ತು. ಸರ್ಕಾರದ ಸಂಧಾನದ ಫಲವಾಗಿ ಈ ಪಾದ್ರಿ ಮರಳಿ ಬಂದರು. ಮೂಲಸೌಕರ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ ಎಂಜಿನಿಯರ್‌ಗಳು, ಕಾರ್ಮಿಕರು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ಭದ್ರತಾ ಯೋಧರು ಹೀಗೆ ಅನೇಕ ಭಾರತೀಯರು ಕಳೆದ 12 ವರ್ಷಗಳಲ್ಲಿ ಉಗ್ರರ ಉಪಟಳದಿಂದ ಜೀವತೆತ್ತಿದ್ದಾರೆ. ಅಪಹರಣಕ್ಕೆ ಒಳಗಾಗಿಯೂ ಜೀವಂತ ಬಂದ ಅದೃಷ್ಟಶಾಲಿಗಳಿದ್ದಾರೆ. ಆದರೆ ಅವರ ಸಂಖ್ಯೆ ಬೆರಳೆಣಿಕೆಯಷ್ಟು. ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಆಫ್ಘಾನಿಸ್ತಾನದಿಂದ ವಾಪಸಾದ ಬಳಿಕ ಅಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚುತ್ತಲೇ ಇದೆ. ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಎದುರಿಸುತ್ತಿರುವ ಸಂಕಷ್ಟಗಳಿಗೆ ಇದು ದ್ಯೋತಕ. ಯುದ್ಧ ಸಂತ್ರಸ್ತ ವಲಯವನ್ನು ಪ್ರಾದೇಶಿಕ ಆರ್ಥಿಕ ಸಹಕಾರದ ವಲಯವಾಗಿ ಪರಿವರ್ತಿಸುವ ಮುನ್ನೋಟದೊಂದಿಗೆ ಘನಿ ಕಾರ್ಯಾರಂಭ ಮಾಡಿದ್ದರು. ಸಾವು- ನೋವು, ಜೀವ ಬೆದರಿಕೆಯಿದ್ದರೂ ಭಾರತ ಆಫ್ಘಾನಿಸ್ತಾನಕ್ಕೆ ನೆರವಾಗುವುದನ್ನು ಬಿಟ್ಟಿಲ್ಲ. ಇದನ್ನು ಸಹಿಸದ ತಾಲಿಬಾನ್, ಉಗ್ರ ಕೃತ್ಯಗಳ ಮೂಲಕ ಭಾರತಕ್ಕೆ ಸಂದೇಶ ರವಾನಿಸುವ ಯತ್ನ ಮಾಡುತ್ತಲೇ ಇದೆ. ತಾಲಿಬಾನ್‌, ಹಕ್ಕಾನಿ, ಲಷ್ಕರ್ ಮತ್ತಿತರ ಸಂಘಟನೆಗಳ ಉಗ್ರರಿಗೆ ಪಾಕ್ ಸೇನೆಯ ಅಂಗವಾದ ಐಎಸ್ಐ ಬೆಂಬಲ ಇರುವುದನ್ನು ಆಫ್ಘನ್ ಸರ್ಕಾರ ಅನೇಕ ಸಲ ಪುನರುಚ್ಚರಿಸಿತ್ತು. ಆದರೆ ಆಫ್ಘಾನಿಸ್ತಾನದಲ್ಲಿ ಭಾರತದ ಪ್ರಭಾವ ಹೆಚ್ಚುವುದು ಪಾಕಿಸ್ತಾನಕ್ಕೂ ಬೇಕಿಲ್ಲ. ಹೀಗಾಗಿ ಉಗ್ರರ ಬಗ್ಗೆ ಅದು ಮೃದು ಧೋರಣೆ ತಳೆಯುತ್ತಲೇ ಬಂದಿತ್ತು. ಆದರೆ ಉಗ್ರಗಾಮಿಗಳು ನಡೆಸುತ್ತಿರುವ ಹತ್ಯಾಕಾಂಡಕ್ಕೆ ಪಾಕಿಸ್ತಾನವೂ ಈಗ ದುಬಾರಿ ಬೆಲೆ ತೆರುತ್ತಿದೆ. ಅಲ್ಲಿನ ಸೇನಾ ನೆಲೆಗಳು, ಶಾಲೆಗಳು, ಪ್ರಾರ್ಥನಾ ಮಂದಿರಗಳನ್ನು ಬಿಡದೆ ಉಗ್ರರು ದಾಳಿ ನಡೆಸಿದ್ದಾರೆ. 2005–14ರ ಅವಧಿಯಲ್ಲಿ ಪಾಕ್‌ನಲ್ಲಿ ದಿನಕ್ಕೆ ಸರಾಸರಿ 14 ಮಂದಿಯಂತೆ 56,480 ಮಂದಿ ಉಗ್ರರಿಗೆ ಬಲಿಯಾಗಿದ್ದಾರೆ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಅದು ಭಾರತದ ಜತೆ ಕೈಜೋಡಿಸಬೇಕು. ಅದರಿಂದ ಇಡೀ ಉಪಖಂಡಕ್ಕೆ ಲಾಭವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.