ಎಫ್‌ಟಿಐಐಗೆ ಅಧ್ಯಕ್ಷರ ನೇಮಕ ಪುನರ್‌ ಪರಿಶೀಲನೆ ಅಗತ್ಯ ಪುಣೆಯಲ್ಲಿನ ‘ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ಯ (ಎಫ್‌ಟಿಐಐ) ಅಧ್ಯಕ್ಷರನ್ನಾಗಿ ಗಜೇಂದ್ರ ಚೌಹಾಣ್‌ ಅವರನ್ನು ನೇಮಿಸಿರುವುದು ಕೇಂದ್ರ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಐದೂವರೆ ದಶಕದ ಎಫ್‌ಟಿಐಐ ಇತಿಹಾಸದಲ್ಲಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ವಿವಾದ ತಲೆದೋರಿರುವುದು ಇದೇ ಮೊದಲ ಬಾರಿ. ಅಂತರರಾಷ್ಟ್ರೀಯ ವರ್ಚಸ್ಸಿನ ಈ ಸಂಸ್ಥೆಯ ಅಧ್ಯಕ್ಷರಾಗಲಿಕ್ಕೆ ಅಗತ್ಯವಾದ ‘ಕಲೆಯ ಹಿನ್ನೆಲೆ’ ಗಜೇಂದ್ರ ‌ಅವರಿಗಿಲ್ಲ ಎನ್ನುವುದು ಪ್ರತಿಭಟನಾನಿರತ ಎಫ್‌ಟಿಐಐ ವಿದ್ಯಾರ್ಥಿಗಳ ವಾದ. ಇದರಲ್ಲಿ ಹುರುಳಿದೆ. ತೊಂಬತ್ತರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರದಲ್ಲಿ ನಟಿಸಿದ್ದನ್ನು ಹೊರತುಪಡಿಸಿದರೆ ಅವರು ಹೆಚ್ಚು ಸಕ್ರಿಯರಾಗಿರುವುದು ರಾಜಕಾರಣದಲ್ಲಿ. ಬಿಜೆಪಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುವ ಅವರು, ಎರಡು ಬಾರಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರೂ ಆಗಿದ್ದರು. ಈ ರಾಜಕೀಯ ಹಿನ್ನೆಲೆಯೇ ಗಜೇಂದ್ರ ಅವರ ನೇಮಕದ ಹಿಂದೆ ಎದ್ದುಕಾಣುತ್ತಿದೆ. ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ಎಫ್‌ಟಿಐಐ, ರಾಜಕಾರಣದಿಂದ ಸಮಾನ ಅಂತರವನ್ನು ಕಾಪಾಡಿಕೊಂಡು ಬಂದಿದೆ. ಈ ಮೊದಲು ಸಂಸದ, ಬಿಜೆಪಿಯ ವಿನೋದ್‌ ಖನ್ನಾ ಅವರು ಎಫ್‌ಟಿಐಐ ಅಧ್ಯಕ್ಷರಾಗಿದ್ದಾಗ ಇಂಥ ಯಾವ ವಿರೋಧವೂ ವ್ಯಕ್ತವಾಗಿರಲಿಲ್ಲ. ವಿನೋದ್‌ ಖನ್ನಾ ಅವರ ಸಿನಿಮಾ ಬದ್ಧತೆಯ ಎದುರು ರಾಜಕಾರಣದ ಆಯಾಮ ಯಾರಿಗೂ ಮುಖ್ಯವೆನ್ನಿಸಿರಲಿಲ್ಲ. ಆದರೆ, ಈ ಮಾತನ್ನು ಗಜೇಂದ್ರ ‌ ಅವರ ಸಂದರ್ಭದಲ್ಲಿ ಹೇಳುವಂತಿಲ್ಲ. ಸಿನಿಮಾ ವ್ಯಾಕರಣವನ್ನು ಬಲ್ಲ ನಿರ್ದೇಶಕ ರಾಜಕುಮಾರ್‌ ಹಿರಾನಿ ಹಾಗೂ ಜನಪ್ರಿಯ ನಟಿ ವಿದ್ಯಾ ಬಾಲನ್‌ ಅವರಂಥವರನ್ನು ಸದಸ್ಯರನ್ನಾಗಿ ನೇಮಿಸಿ, ಗಜೇಂದ್ರ ‌ಅವರನ್ನು ಅಧ್ಯಕ್ಷರನ್ನಾಗಿಸುವ ತರ್ಕ ಸರಳವಾಗಿದೆ. ನರೇಂದ್ರ ಮೋದಿ ಅವರ ಸಾಧನೆಯನ್ನು ಬಣ್ಣಿಸಿ ಕಿರುಚಿತ್ರ ನಿರ್ಮಿಸಿದವರಿಗೆ ಕೂಡ ಆಡಳಿತ ಮಂಡಳಿಯಲ್ಲಿ ಸ್ಥಾನ ದೊರೆತಿದೆ. ನೇಮಕ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎನ್ನುವುದನ್ನು ಇದು ಸೂಚಿಸುವಂತಿದೆ. ಎಫ್‌ಟಿಐಐ ಅಧ್ಯಕ್ಷ ಸ್ಥಾನ ಎನ್ನುವುದು ಕೇವಲ ಆಡಳಿತಾತ್ಮಕ ಅಥವಾ ಆಲಂಕಾರಿಕ ಹುದ್ದೆಯಲ್ಲ. ಸಿನಿಮಾದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ಪ್ರತಿನಿಧಿಸುವ ಮತ್ತು ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಾದ ವ್ಯಕ್ತಿತ್ವ ಅವರಲ್ಲಿ ಇರಬೇಕಾಗುತ್ತದೆ. ಪರ್ಯಾಯ ಸಿನಿಮಾ ಚಳವಳಿ ಭಾರತದಲ್ಲಿ ಸಶಕ್ತಗೊಳ್ಳುವಲ್ಲಿ ಎಫ್‌ಟಿಐಐ ಕೊಡುಗೆ ದೊಡ್ಡದು. ಆ ಸಂಸ್ಥೆಯೊಂದಿಗೆ ಗುರ್ತಿಸಿಕೊಂಡವರು ಭಾರತೀಯ ಸಿನಿಮಾದಲ್ಲಿ ಬಹು ದೊಡ್ಡ ಹೆಸರು ಮಾಡಿದ್ದಾರೆ. ಶ್ಯಾಮ್‌ ಬೆನಗಲ್‌, ಅಡೂರ್‌ ಗೋಪಾಲಕೃಷ್ಣನ್‌, ಮೃಣಾಲ್‌ ಸೆನ್‌, ಗಿರೀಶ ಕಾರ್ನಾಡ, ಮಹೇಶ್‌ ಭಟ್‌, ವಿನೋದ್‌ ಖನ್ನಾ ಅವರಂಥ ಚಿತ್ರರಂಗದ ಖ್ಯಾತನಾಮರ ಜೊತೆಗೆ ಸಾಹಿತ್ಯ ಕ್ಷೇತ್ರದ ಯು.ಆರ್‌. ಅನಂತಮೂರ್ತಿ ಅವರಂಥ ಪ್ರಸಿದ್ಧರು ಕೂಡ ಎಫ್‌ಟಿಐಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಫ್‌ಟಿಐಐನ ನಿಕಟಪೂರ್ವ ಅಧ್ಯಕ್ಷ ಸಯೀದ್‌ ಮಿರ್ಜಾ ಅವರದು ಕೂಡ ಪರ್ಯಾಯ ಸಿನಿಮಾ ಚಳವಳಿಯಲ್ಲಿ ಮುಖ್ಯವಾದ ಹೆಸರು. ಇಂಥ ಘಟಾನುಘಟಿಗಳ ಸಾಲಿಗೆ ಗಜೇಂದ್ರ ಅವರನ್ನು ಹೇಗೆ ಸೇರಿಸುವುದು? ಇದು ಎಫ್‌ಟಿಐಐ ವಿಷಯದಲ್ಲಷ್ಟೇ ಆಗಿರುವ ಲೋಪವಲ್ಲ. ದೇಶದ ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಘ ಪರಿವಾರದ ನಂಟು ಹೊಂದಿರುವವರನ್ನು ನೇಮಿಸುತ್ತಿರುವ ಆರೋಪವನ್ನು ಮೋದಿ ನೇತೃತ್ವದ ಸರ್ಕಾರ ಈ ಮೊದಲೂ ಎದುರಿಸಿದೆ. ಸೆನ್ಸಾರ್‌ ಮಂಡಳಿ ಅಧ್ಯಕ್ಷರ ವಿಚಾರದಲ್ಲಿ ಕೂಡ ಕೇಂದ್ರ ಸರ್ಕಾರ ಇಂತಹುದೇ ವಿರೋಧ ಎದುರಿಸಿತ್ತು. ‘ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ’ ಹಾಗೂ ‘ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ’ಗೆ ಅಧ್ಯಕ್ಷರ ನೇಮಕದ ಸಂದರ್ಭದಲ್ಲೂ ಕೇಸರೀಕರಣದ ಆರೋಪಕ್ಕೆ ಸರ್ಕಾರ ಗುರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿ ಎನ್ನುವ ಕಾರಣಕ್ಕಾಗಿ ಯಾರನ್ನು ಯಾವ ಸ್ಥಾನಕ್ಕೆ ಬೇಕಾದರೂ ನೇಮಿಸುವುದು ಸಲ್ಲದು. ಪ್ರಸ್ತುತ ವಿರೋಧವನ್ನು ವಿದ್ಯಾರ್ಥಿಗಳ ಪ್ರತಿಭಟನೆ ದೃಷ್ಟಿಯಲ್ಲಿ ಮಾತ್ರವಲ್ಲದೆ, ದೇಶದ ಸಾಂಸ್ಕೃತಿಕ ವಲಯದ ಪ್ರತಿರೋಧದ ರೂಪದಲ್ಲಿ ಸರ್ಕಾರ ಕಾಣಬೇಕಿದೆ. ಎಫ್‌ಟಿಐಐ ಅಧ್ಯಕ್ಷರ ನೇಮಕದ ವಿಷಯವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಭಾವಿಸುವುದನ್ನು ಬಿಟ್ಟು, ತನ್ನ ನಿರ್ಧಾರದ ಪುನರ್‌ ಪರಿಶೀಲನೆಗೆ ಸರ್ಕಾರ ಮುಂದಾಗಬೇಕಿದೆ. ಸಾಂಸ್ಕೃತಿಕ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎನ್ನುವುದಕ್ಕೆ ಈ ಪ್ರಕರಣ ಸರ್ಕಾರಕ್ಕೆ ಒಂದು ಪಾಠವೂ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.