ವಿದ್ಯಾರ್ಥಿಗಳ ಆತಂಕ ನಿವಾರಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾಡಿದ ಎಡವಟ್ಟು ಮತ್ತು ಅದರ ಪರಿಣಾಮಗಳನ್ನು ನೋಡಿದರೆ ಈ ಮಾತು ನೆನಪಿಗೆ ಬರುತ್ತದೆ. ತನ್ನ ವ್ಯಾಪ್ತಿಯನ್ನು ಮೀರಿ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆ, ನಿಯಮಗಳನ್ನು ಉಲ್ಲಂಘಿಸಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದ ಮುಕ್ತ ವಿ.ವಿಯ ಮಾನ್ಯತೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರದ್ದು ಪಡಿಸಿದೆ. ಯಾವುದೋ ಒಂದೆರಡು ಕೋರ್ಸ್‌ಗಳ ಮಾನ್ಯತೆ ರದ್ದಾಗಿದ್ದರೆ ಅದರ ವಿಷಯ ಬೇರೆ. ಆದರೆ ಇಲ್ಲಿ 2012-13ನೇ ಸಾಲಿನಿಂದ ಈಚಿನ ಎಲ್ಲ ಕೋರ್ಸ್‌ಗಳು ಮಾನ್ಯತೆ ಕಳೆದುಕೊಂಡಿವೆ. ಇದರಿಂದಾಗಿ ಈ ಅವಧಿಯಲ್ಲಿ ಪದವಿ ಪಡೆದ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಅವರ ಪದವಿ ಪ್ರಮಾಣಪತ್ರಗಳಿಗೆ ಸದ್ಯಕ್ಕಂತೂ ಕಿಮ್ಮತ್ತೇ ಇಲ್ಲ. ಯುಜಿಸಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಹೇಳಿದ್ದಾರೆ. ಇದರಿಂದ ತಾತ್ಕಾಲಿಕ ಪರಿಹಾರ, ಸಮಾಧಾನ ಸಿಕ್ಕರೂ ಸಿಗಬಹುದು. ಆದರೆ ತಪ್ಪು ಮಾಡಿ ಕೋರ್ಟ್ ಮೊರೆ ಹೋಗುವ ಚಾಳಿ ವಿ.ವಿ ಆಡಳಿತಕ್ಕೆ ಖಂಡಿತವಾಗಿಯೂ ಭೂಷಣವಲ್ಲ. ಏಕೆಂದರೆ 2012ರಲ್ಲಿಯೂ ಯುಜಿಸಿ ಇಂಥದೇ ಆದೇಶ ಕೊಟ್ಟಿತ್ತು. ಆಗಲೂ ವಿಶ್ವವಿದ್ಯಾಲಯ ಹೈಕೋರ್ಟ್ ಮೆಟ್ಟಲೇರಿ ತಡೆಯಾಜ್ಞೆ ಪಡೆದುಕೊಂಡಿತ್ತು. ಪ್ರತಿ ಸಲವೂ ತಪ್ಪು ಮಾಡುವುದು, ಕೋರ್ಟ್‌ಗೆ ಹೋಗುವುದು ಒಳ್ಳೆಯ ಆಡಳಿತದ ಲಕ್ಷಣವೂ ಅಲ್ಲ. ಅಷ್ಟಕ್ಕೂ ಮಾನ್ಯತೆ ರದ್ದಿನಂತಹ ಕಠೋರ ಕ್ರಮವನ್ನು ಯುಜಿಸಿ ಏಕಾಏಕಿ ತೆಗೆದುಕೊಂಡಿಲ್ಲ. 2011ರ ಜೂನ್‌ನಲ್ಲಿಯೇ ವಿ.ವಿಗೆ ಅದು ಷೋಕಾಸ್ ನೋಟಿಸ್ ಕೊಟ್ಟಿತ್ತು. ಆಗ ಆಡಳಿತ ವರ್ಗ ನೀಡಿದ ಉತ್ತರ ಪರಿಶೀಲಿಸಿದ ಬಳಿಕವೂ ಈ ಕ್ರಮಕ್ಕೆ ಮುಂದಾಗಿದೆ ಎಂದರೆ ವಿ.ವಿಯಲ್ಲೇ ಏನೋ ಲೋಪವಿದೆ ಎಂಬುದು ಸಾಬೀತಾಗುತ್ತದೆ. ಸಮರ್ಪಕ ಸಮಜಾಯಿಷಿ ಕೊಟ್ಟು ಮನವರಿಕೆ ಮಾಡಿಕೊಡಬೇಕಾದ ಹೊಣೆಯನ್ನು ವಿ.ವಿ ಆಡಳಿತ ಸರಿಯಾಗಿ ನಿಭಾಯಿಸಿದಂತಿಲ್ಲ. ಹೊರ ರಾಜ್ಯಗಳಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು, ಕೋರ್ಸ್ ಆರಂಭಿಸಲು ವಿ.ವಿಗೆ ಅಧಿಕಾರವಿದೆ ಎಂಬುದು ಕುಲಪತಿಗಳ ವಾದ. ಇದಕ್ಕೆ ಪೂರಕವಾಗಿ ನಮ್ಮದೇ ರಾಜ್ಯದ ಕುವೆಂಪು ವಿ.ವಿ ಸೇರಿದಂತೆ ಅನೇಕ ವಿ.ವಿಗಳ ಉದಾಹರಣೆಯನ್ನೂ ಕೊಟ್ಟಿದ್ದಾರೆ. ಸಿಕ್ಕಿಂ ಹೈಕೋರ್ಟ್ ನೀಡಿದ ಆದೇಶವನ್ನೂ ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ರಕ್ಷಣೆ ಇದ್ದರೂ ಯುಜಿಸಿ ಕ್ರಮ ಕೈಗೊಂಡಿರಬೇಕಾದರೆ ಬಲವಾದ ಕಾರಣಗಳು ಇರಲೇಬೇಕು. ಏಕೆಂದರೆ ಮುಕ್ತ ವಿ.ವಿ ನಿಯಮಬಾಹಿರವಾಗಿ ನಡೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೇ ಸ್ವತಃ ಹೇಳಿದ್ದಾರೆ. ವಿ.ವಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರೊಬ್ಬರು ಸಹ ವಿ.ವಿಯ ತಪ್ಪನ್ನು ಎತ್ತಿತೋರಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಸ್ವಯಂಕೃತ ಅಪರಾಧಗಳು ಮತ್ತು ನಾವು ಮಾಡಿದ್ದೇ ಸರಿ ಎಂಬ ಉಡಾಫೆ ನಡವಳಿಕೆಯಿಂದಾಗಿ ಮುಕ್ತ ವಿ.ವಿ ಈಗ ಮಾನ್ಯತೆಯೇ ಇಲ್ಲದ ಸ್ಥಿತಿಗೆ ಬಂದು ತಲುಪಿದೆ ಎನ್ನಬಹುದೇನೋ. ಆದರೆ ಇಲ್ಲಿ ಯುಜಿಸಿಯ ವಿಳಂಬ ನೀತಿ ಕೂಡ ಖಂಡನೀಯ. ಕ್ರಮ ಜರುಗಿಸಲು ಮೂರು ವರ್ಷಗಳಷ್ಟು ಸುದೀರ್ಘ ಅವಧಿ ಬೇಕಿತ್ತೆ? ಮುಕ್ತ ವಿ.ವಿಯಲ್ಲಂತೂ ಶೈಕ್ಷಣಿಕ ಚಟುವಟಿಕೆಗಳಿಗಿಂತ ಹಗರಣಗಳೇ ಹೆಚ್ಚಾಗಿ ಸುದ್ದಿ ಮಾಡಿವೆ. ನೇಮಕಾತಿಯಲ್ಲಿ ಅವ್ಯವಹಾರ, ಉದ್ಯೋಗ ಕೊಡಿಸುವ ಹೆಸರಿನಲ್ಲಿ ವಂಚನೆ, ಪ್ರಭಾವಿ ಸಚಿವೆಯೊಬ್ಬರಿಗೆ ಅರ್ಹತೆ ಸಡಿಲಿಸಿ ಪಿಎಚ್.ಡಿ ನೀಡುವ ಯತ್ನ... ಹೀಗೆ ಕೆದಕಿದಷ್ಟೂ ಈ ವಿ.ವಿಯ ಹಗರಣಗಳು ಒಂದೊಂದಾಗಿ ಹೊರಬರುತ್ತಲೇ ಇವೆ. 2006-08ರ ಅವಧಿಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ತಿದ್ದಿದ ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ಆರು ಮಂದಿ ಸಿಬ್ಬಂದಿ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ನೌಕರಿ ಹೆಸರಲ್ಲಿ ವಂಚಿಸಿದ ಇಬ್ಬರು ನಿವೃತ್ತ ನೌಕರರನ್ನು ಪೊಲೀಸರು ಬಂಧಿಸಿದ ಪ್ರಸಂಗವೂ ನಡೆದಿತ್ತು. ಇವನ್ನೆಲ್ಲ ನೋಡಿದರೆ ಈ ವಿಶ್ವವಿದ್ಯಾಲಯಕ್ಕೆ ಮೆತ್ತಿದ ಕೊಳೆ ತೆಗೆಯಲು ದೊಡ್ಡ ಕಾರ್ಯಾಚರಣೆಯೇ ಬೇಕೆನಿಸುತ್ತದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಇಂಥ ಮುಜುಗರದ ಪ್ರಸಂಗ ಬರುವುದಿಲ್ಲ. ಈಗಲಾದರೂ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಇತರ ಸಿಬ್ಬಂದಿ ಮೇಲೆಯೇ ಎಲ್ಲ ಜವಾಬ್ದಾರಿ ಬಿಡದೇ ಸರ್ಕಾರ ಮಧ್ಯಪ್ರವೇಶಿಸಿ ಇದನ್ನು ಸರಿದಾರಿಗೆ ತರಬೇಕು. ವಿದ್ಯಾರ್ಥಿಗಳ ಆತಂಕ ನಿವಾರಿಸಿ ಅವರ ಪದವಿಗಳಿಗೆ ಮತ್ತೆ ಮಾನ್ಯತೆ ಸಿಗುವಂತೆ ಮಾಡಬೇಕು. ತಪ್ಪಿತಸ್ಥರನ್ನು ಸರಿಯಾಗಿ ಶಿಕ್ಷಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.