ಅಂತರ್ಜಲ ಮರುಪೂರಣ ಸರ್ಕಾರದ ಆದ್ಯತೆಯಾಗಲಿ ವಿಶ್ವಸಂಸ್ಥೆಯ 2015ನೇ ಸಾಲಿನ ಜಲವರದಿ ಒಳಗೊಂಡಿರುವ ಮಾಹಿತಿಗಳನ್ನು ಗಮನಿಸಿದರೆ ಆತಂಕವಾಗುತ್ತದೆ. ಈಗಿನಂತೆ ಅಂತರ್ಜಲವನ್ನು ಬತ್ತಿಸುವ ಪ್ರಮಾಣ ಮುಂದುವರಿದರೆ, 2030ರಲ್ಲಿ ವಿಶ್ವದಾದ್ಯಂತ ಶೇಕಡ 40ರಷ್ಟು ನೀರಿನ ಕೊರತೆ ಉಂಟಾಗಲಿದೆ ಎಂದು ಈ ವರದಿ ಎಚ್ಚರಿಕೆ ನೀಡಿದೆ. ಅಂತರ್ಜಲ ಬರಿದಾಗಿಸುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ಮುಂದಿದೆ ಎಂದು ಇದೇ ವೇಳೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಎರಡು ಅಧ್ಯಯನಗಳು ಬೊಟ್ಟು ಮಾಡಿರುವುದು ನಮ್ಮ ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತಿದೆ. ವೇಗವಾಗಿ ಏರುತ್ತಿರುವ ಜನಸಂಖ್ಯೆ, ಭರದಿಂದ ನಡೆದಿರುವ ನಗರೀಕರಣ, ಆಹಾರೋತ್ಪಾದನೆಯ ಮೇಲೆ ಹೆಚ್ಚುತ್ತಿರುವ ಒತ್ತಡ– ಎಲ್ಲವೂ ಅಂತರ್ಜಲ ಬತ್ತಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ನೈಸರ್ಗಿಕವಾಗಿ ನಮಗೆ ಲಭ್ಯವಿರುವ ಅಂತರ್ಜಲವನ್ನು ವೇಗವಾಗಿ ಬತ್ತಿಸುತ್ತಿರುವ ನಾವು, ಅದಕ್ಕೆ ತಕ್ಕಂತೆ ಜಲಪೂರಣಕ್ಕೆ ಕ್ರಮಗಳನ್ನು ಕೈಗೊಳ್ಳದೆ ಇರುವುದು ಚಿಂತೆಗೆ ಕಾರಣವಾಗಿದೆ. ಭಾರತದಲ್ಲಿ ಕಳೆದ ಶತಮಾನದ 60ರ ದಶಕದ ಬಳಿಕ ನೀರಾವರಿ ಸೌಲಭ್ಯಗಳು ಹೆಚ್ಚಾಗಿದ್ದು, ಅಂತರ್ಜಲದ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ. 1960ರಲ್ಲಿ ನಮ್ಮಲ್ಲಿ ಪಂಪ್‌ ಅಳವಡಿಸಿದ ಬಾವಿಗಳು ಮತ್ತು ಕೊಳವೆಬಾವಿಗಳ ಸಂಖ್ಯೆ ಕೇವಲ 10 ಲಕ್ಷದಷ್ಟಿದ್ದವು. ಆದರೆ 2000ದ ವೇಳೆಗೆ ಅವುಗಳ ಸಂಖ್ಯೆ 1.9 ಕೋಟಿಗಿಂತ ಹೆಚ್ಚಿದೆ ಎನ್ನುವುದು ಅಂತರ್ಜಲದ ಮೇಲೆ ಹೆಚ್ಚುತ್ತಿರುವ ಒತ್ತಡಕ್ಕೆ ದಿಕ್ಸೂಚಿಯಂತಿದೆ. ನೀರಾವರಿ ಸೌಲಭ್ಯಗಳ ವಿಸ್ತರಣೆ, ಕಾಲದ ಅಗತ್ಯವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆಹಾರಕ್ಕಾಗಿ ವಿಶ್ವದ ಮುಂದೆ ಕೈ ಒಡ್ಡುತ್ತಿದ್ದ ನಾವು ಕಳೆದ ಶತಮಾನದ ಉತ್ತರಾರ್ಧದಲ್ಲೇ ಹಸಿರುಕ್ರಾಂತಿಯ ಮೂಲಕ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿರುವುದು ಗಮನಾರ್ಹ ಸಂಗತಿಯೇ. ಆದರೆ ನೀರಿನ ಬಳಕೆಯಲ್ಲಿ ಪೋಲಾಗುತ್ತಿರುವ ಪ್ರಮಾಣದ ಮೇಲೆ ಸೂಕ್ತ ನಿಗಾ ವಹಿಸುತ್ತಿಲ್ಲ ಎನ್ನುವುದೂ ಸ್ಪಷ್ಟ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಅಂತರ್ಜಲದಲ್ಲಿ ಶೇಕಡ 60ರಷ್ಟು ಖಾಲಿ ಆಗಲಿದೆ ಎನ್ನುವ ವಿಶ್ವಸಂಸ್ಥೆಯ ವರದಿಯನ್ನು ಈಗಲೇ ಗಂಭೀರವಾಗಿ ಪರಿಗಣಿಸಬೇಕಿದೆ. ಮುಖ್ಯವಾಗಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ನೀರಿನ ಮಿತಬಳಕೆಯ ಕುರಿತು ಜಾಗೃತಿ ಅಭಿಯಾನ ನಡೆಸಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಂತರ್ಜಲ ಮರುಪೂರಣಕ್ಕೆ ಅವಕಾಶ ಇದ್ದಲ್ಲೆಲ್ಲ ಇಂಗುಗುಂಡಿಗಳನ್ನು ನಿರ್ಮಿಸುವ ಕೆಲಸ ಕೇವಲ ಕೃಷಿ ಇಲಾಖೆಯ ಕೆಲಸವಾಗದೆ, ಸ್ಥಳೀಯ ಸಂಸ್ಥೆಗಳ ಆದ್ಯತೆಯ ಪಟ್ಟಿಗೂ ಸೇರಬೇಕು. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಇತ್ತೀಚೆಗೆ ನೀರಿನ ದಕ್ಷ ಬಳಕೆಯ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಗಳು, ಉದ್ಯಮಗಳು ಮತ್ತು ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಿದ್ದು, ‘ಬ್ಯೂರೊ ಆಫ್‌ ವಾಟರ್‌ ಎಫಿಶಿಯನ್ಸಿ’ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿರುವುದು ಈ ನಿಟ್ಟಿನಲ್ಲಿ ಸ್ವಾಗತಾರ್ಹ ಹೆಜ್ಜೆ. ವೈಯಕ್ತಿಕ ಮಟ್ಟದಲ್ಲಿಯೂ ನಾಗರಿಕರು ನೀರಿನ ಮಿತಬಳಕೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಮುಖ್ಯವಾಗಿ ನಮ್ಮ ನಗರಗಳ ಶೌಚಾಲಯಗಳಲ್ಲಿ ಪೋಲಾಗುತ್ತಿರುವ ನೀರನ್ನು ನಿಯಂತ್ರಿಸುವಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಲಮಂಡಳಿಗಳಲ್ಲಿ ಅಸಮರ್ಪಕ ನೀರಿನ ನಿರ್ವಹಣೆಯಂತೂ ಎಲ್ಲ ರಾಜ್ಯಗಳಲ್ಲಿ ತಲೆನೋವು ತಂದಿರುವ ಸಮಸ್ಯೆ. ಜಲಮಂಡಳಿಗಳ ಆಡಳಿತದಲ್ಲಿ ಬಿಗುವನ್ನು ಸಾಧಿಸುವುದೇ ಇದಕ್ಕಿರುವ ಏಕೈಕ ಪರಿಹಾರ. ನೀರಿನ ಮಿತಬಳಕೆಗೆ ಸಂಬಂಧಿಸಿ ಉದ್ಯಮಗಳು ಉಪಕರಣಗಳ ಉತ್ಪಾದನಾ ಹಂತದಲ್ಲೇ ಕೆಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗಮನ ಹರಿಸಬೇಕು. ಈಗಾಗಲೆ ವಿದ್ಯುತ್‌ ಉಳಿತಾಯಕ್ಕೆ ಸಂಬಂಧಿಸಿ ಉದ್ಯಮಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ರೆಫ್ರಿಜರೇಟರ್‌ ಮತ್ತು ಹವಾನಿಯಂತ್ರಕಗಳ ಮೇಲೆ ವಿದ್ಯುತ್‌ನ ದಕ್ಷ ಬಳಕೆಯ ಪ್ರಮಾಣವನ್ನು ಸೂಚಿಸುವ ಲೇಬಲ್‌ಗಳಿವೆ. ಇದೇ ರೀತಿಯಲ್ಲಿ ವಾಷಿಂಗ್‌ ಮೆಶಿನ್‌ ಮೇಲೆಯೂ ನೀರಿನ ದಕ್ಷ ಬಳಕೆಯ ಪ್ರಮಾಣದ ಲೇಬಲ್‌ಗಳನ್ನು ಸೂಚಿಸಲು ಜಲ ಸಂಪನ್ಮೂಲ ಸಚಿವಾಲಯವು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ನೀರಿನ ದಕ್ಷ ಬಳಕೆಯ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ತೆರಿಗೆ ರಿಯಾಯ್ತಿ ನೀಡುವ ಪ್ರಸ್ತಾಪ ಶೀಘ್ರವೇ ಜಾರಿಗೆ ಬರಬೇಕು. ಹಾಗೆಯೇ ಪರಿಸರಸ್ನೇಹಿ ಮನೆಗಳಿಗೆ ಆಸ್ತಿ ತೆರಿಗೆಯಲ್ಲಿ ಕಡಿತ ಮಾಡುವ ಪ್ರಸ್ತಾಪವೂ ಜನರನ್ನು ನೀರಿನ ಮಿತಬಳಕೆಗೆ ಪ್ರೇರೇಪಿಸಬಹುದು. ಮನೆಗಳಲ್ಲಿ ಸೌರಶಕ್ತಿ ಬಳಕೆ ಮತ್ತು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದ್ದರೂ ಅದರ ಸಮರ್ಪಕ ಅನುಷ್ಠಾನ ನಡೆಯುತ್ತಿಲ್ಲ. ‘ಕಾಂಕ್ರೀಟ್‌ ಕಾಡು’ಗಳಾಗುತ್ತಿರುವ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪೋಲಾಗುತ್ತಿರುವ ಮಳೆಯ ನೀರಿನ ಮರುಬಳಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಅದೇ ಬಹುದೊಡ್ಡ ಸಾಧನೆಯಾಗಲಿದೆ. ಇದೇ ವೇಳೆ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳ ಪುನರುಜ್ಜೀವನ ಕೆಲಸವೂ ಭರದಿಂದ ನಡೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.