ದಾಖಲೆಯ ಸ್ಪಂದನ ಸಾಂಕೇತಿಕತೆ ಆಗದಿರಲಿ ಮೊದಲ ಬಾರಿಗೆ ಆಚರಿಸಲಾದ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವದೆಹಲಿಯ ರಾಜಪಥದಲ್ಲಿ ಭಾನುವಾರ 35,985 ಜನ ಒಟ್ಟಿಗೆ ಯೋಗ ಮಾಡಿರುವುದು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ. ಈ ಕಾರ್ಯಕ್ರಮದಲ್ಲಿ 84 ದೇಶಗಳ ನಾಗರಿಕರು ಒಟ್ಟಿಗೆ ಯೋಗ ಮಾಡಿರುವುದು ಸಹ ಗಿನ್ನೆಸ್ ದಾಖಲೆಯಾಗಿದೆ. ರಾಷ್ಟ್ರದಾದ್ಯಂತ ಲಕ್ಷಾಂತರ ಭಾರತೀಯರು ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ 21 ಆಸನಗಳನ್ನು ಮಾಡಿದ್ದಾರೆ. ಹಾಗೆಯೇ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಂಪುಟ ಸಚಿವರು ರಾಷ್ಟ್ರ ಹಾಗೂ ವಿದೇಶಗಳಲ್ಲಿ ಸಾರ್ವಜನಿಕ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಎಲ್ಲೆಲ್ಲೂ ರಾರಾಜಿಸಿವೆ. ಕಳೆದ ಅಕ್ಟೋಬರ್‌ನಲ್ಲಿ ಗಾಂಧಿ ಜಯಂತಿ ದಿನದಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲೂ ಪ್ರಧಾನಿಯವರು ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದ್ದರು. ಆಗಲೂ ರಾಷ್ಟ್ರದಾದ್ಯಂತ ಜನರು ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ದೃಶ್ಯಗಳೂ ದೊಡ್ಡದಾಗಿ ರಾರಾಜಿಸಿದ್ದವು. ಇವೆಲ್ಲಾ ಸದುದ್ದೇಶದ ಕಾರ್ಯಕ್ರಮಗಳು. ಆದರೆ ಇವು ಬರೀ ಸಾಂಕೇತಿಕತೆಗಷ್ಟೇ ಸೀಮಿತವಾಗಬಾರದು. ಭಾರತದ ಸೌಮ್ಯಶಕ್ತಿ (ಸಾಫ್ಟ್ ಪವರ್) ಬಗ್ಗೆ ನಾವು ಬಹಳಷ್ಟು ಮಾತನಾಡುತ್ತೇವೆ. ‘ಸೌಮ್ಯಶಕ್ತಿ’ ಎಂದು ಗುರುತಿಸಲಾಗುವ ಬಾಲಿವುಡ್, ಭಾರತೀಯ ಸಂಗೀತ ಮುಂತಾದವುಗಳ ಜೊತೆಗೆ ಯೋಗವೂ ಸೇರುತ್ತದೆ. ಎಂಬುದು ನಿರ್ವಿವಾದ. ಹೀಗಾಗಿಯೇ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಈ ಸೌಮ್ಯಶಕ್ತಿಯ ಪ್ರಸಾರಕ್ಕೆ ಸಂದ ಮನ್ನಣೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಈ ಕುರಿತು ಗೊತ್ತುವಳಿಯನ್ನು ಮಂಡಿಸಿದಾಗ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ 177 ರಾಷ್ಟ್ರಗಳು ಬೆಂಬಲಿಸಿದ್ದು ದೊಡ್ಡ ವಿಚಾರ. ವಿದೇಶಗಳಲ್ಲಿ ಯೋಗಾಭ್ಯಾಸ ಕಳೆದ ಅನೇಕ ದಶಕಗಳಿಂದ ಜನಪ್ರಿಯವಾಗಿದೆ. ಈಗ ಅಂತರರಾಷ್ಟ್ರೀಯ ದಿನದ ಘೋಷಣೆಯಿಂದಾಗಿ ಯೋಗಾಭ್ಯಾಸದ ಬಗ್ಗೆ ಜನರ ಗಮನವನ್ನು ಹೆಚ್ಚಿನ ರೀತಿಯಲ್ಲಿ ಸೆಳೆದುಕೊಂಡಂತಾಗಿದೆ. ಆದರೆ ಯೋಗವನ್ನು ವ್ಯವಹಾರದ ದೃಷ್ಟಿಯಿಂದ ನೋಡಬಾರದು. ಯೋಗ ಮಾರಾಟದ ಸರಕಲ್ಲ ಎಂದು ಪ್ರಧಾನಿ ಎಚ್ಚರಿಸಿರುವುದು ಸರಿಯಾಗಿಯೇ ಇದೆ. ಕಳೆದ ದಶಕದಲ್ಲಿ ಸೋನಿಯಾ ಗಾಂಧಿ ಅವರ ಉಪಕ್ರಮದಿಂದ ಅಕ್ಟೋಬರ್ 2ನ್ನು ಅಂತರರಾಷ್ಟ್ರೀಯ ಅಹಿಂಸೆ ದಿನವಾಗಿ ವಿಶ್ವಸಂಸ್ಥೆ ಘೋಷಿಸಿತ್ತು. ಯೋಗದ ಮೂಲತತ್ವವೂ ಅಹಿಂಸೆ. ಅಧ್ಯಾತ್ಮದಿಂದ ಅಹಿಂಸೆಯನ್ನು ಬೇರ್ಪಡಿಸಲಾಗದು. ಯೋಗದ ಮಹತ್ವವನ್ನು ಯಾರೂ ಅಲ್ಲಗಳೆಯುವುದಿಲ್ಲ. ದೇಹ ಹಾಗೂ ಮನಸ್ಸಿನ ಸಮತೋಲನಕ್ಕೆ ಯೋಗದಿಂದ ಅಪಾರ ಪ್ರಯೋಜನಗಳಿವೆ. ಯೋಗದ ಪ್ರಯೋಜನಗಳನ್ನು ಅನೇಕ ಅಧ್ಯಯನಗಳೂ ಸಾಬೀತುಪಡಿಸಿವೆ. ಮಾನವ ಹಾಗೂ ಪ್ರಕೃತಿಯ ನಡುವೆ ಸಮನ್ವಯ ಸೃಷ್ಟಿಸುವಂತಹದ್ದು ಯೋಗ. ಮಾನವಕುಲವನ್ನು ಶಾಂತಿ ಹಾಗೂ ಸಾಮರಸ್ಯದ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಯೋಗ ಸಹಕಾರಿ. ಆದರೆ ಯೋಗ ದಿನದ ಸಂಭ್ರಮಾಚರಣೆಯ ಜೊತೆಗೆ ಮೂಡಿದ ಬಿರುಕುಗಳ ಬಗೆಗೂ ಎಚ್ಚರ ವಹಿಸಬೇಕು. ಏಕ ಸಂಸ್ಕೃತಿಯ ಪ್ರಸಾರಕ್ಕೆ ಇಂತಹ ಆಚರಣೆಗಳು ನಾಂದಿಯಾಗಬಾರದು. ಯೋಗವನ್ನು ಮಾಡುವುದು, ಬಿಡುವುದು ವ್ಯಕ್ತಿಗಳ ಆಯ್ಕೆಗೆ ಸಂಬಂಧಿಸಿದ್ದು ಎಂಬ ವಿಚಾರವನ್ನು ಯೋಗ ದಿನ ಆಚರಣೆ ಸಂದರ್ಭದಲ್ಲೂ ಸರ್ಕಾರ ಸ್ಪಷ್ಟ ಪಡಿಸಿದ್ದು ಸರಿ. ಆದರೆ ವಿಭಿನ್ನ ನೆಲೆಯಲ್ಲಿ ಒತ್ತಡ ಹೇರುವುದರ ಬಗೆಗೂ ಎಚ್ಚರ ಅಗತ್ಯ. ಯೋಗಾಭ್ಯಾಸ ಮಾಡದವರಿಗೆ ದೇಶಭಕ್ತಿ ಇಲ್ಲ ಎಂಬಂತಹ ಧೋರಣೆ ಪ್ರದರ್ಶಿಸುವುದೂ ಸಲ್ಲದು. ಉಪರಾಷ್ಟ್ರಪತಿ ಅವರು ಯೋಗ ದಿನದಲ್ಲಿ ಪಾಲ್ಗೊಳ್ಳದ ವಿಚಾರ ಅನಗತ್ಯ ವಿವಾದವಾಯಿತು. ಸ್ವಚ್ಛ ಭಾರತ ಅಭಿಯಾನ ಸಂದರ್ಭದಲ್ಲಿ ಪೊರಕೆ ಹಿಡಿದ ಮೋದಿ ಹಾಗೂ ಯೋಗ ದಿನದಂದು ಆಸನಗಳನ್ನು ಹಾಕಿದ ಮೋದಿಯವರ ಕ್ರಿಯೆಗಳು ಬರೀ ಪ್ರದರ್ಶನ ಆಗಬಾರದು. ನಿಜ ಅರ್ಥದಲ್ಲಿ ‘ಚಿತ್ತವೃತ್ತಿ ನಿರೋಧ’ ಸಾಧನೆ ಸಾಧ್ಯವಾಗಬೇಕು. ವ್ಯಕ್ತಿ ಹಾಗೂ ಸಮುದಾಯ ನೆಲೆಯಲ್ಲಿ ಪ್ರಜ್ಞೆಯೊಳಗಿನ ಪೂರ್ವಗ್ರಹಗಳು ನಾಶವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.