ರಚನಾತ್ಮಕ ಚಿಂತನೆಯಿಂದ ನವಚೇತನ ಸಾಧ್ಯ ಮಹೇಂದ್ರ ಸಿಂಗ್‌ ದೋನಿ ಅವರು ಭಾರತ ತಂಡದ ನಾಯಕತ್ವವನ್ನು ಬಿಡಲು ತಾವು ಸದಾ ಸಿದ್ಧ ಎಂದಿರುವುದು ದೇಶದ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ‘ನಾಯಕ ಸ್ಥಾನವನ್ನು ಬಿಡುವುದರಿಂದ ಈ ದೇಶದಲ್ಲಿ ಕ್ರಿಕೆಟ್‌ಗೆ ಒಳ್ಳೆಯದಾಗುವುದಾದರೆ, ನಾನು ಆ ತ್ಯಾಗಕ್ಕೂ ತಯಾರಿದ್ದೇನೆ’ ಎಂದು ನುಡಿದಿರುವುದು ಭಾರತ ಕ್ರಿಕೆಟ್‌ ರಂಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಧ್ವನಿಸುತ್ತದೆ. ಭಾರತದ ಕ್ರಿಕೆಟ್‌ ಪರಂಪರೆ ಮತ್ತು ಈ ಕ್ರೀಡೆಗೆ ಸಂಬಂಧಿಸಿದಂತೆ ಇಲ್ಲಿರುವ ಮೂಲಭೂತ ಸೌಲಭ್ಯಗಳಿಗೆ ಹೋಲಿಸಿದರೆ ಬಾಂಗ್ಲಾ ದೇಶ ಹಸುಗೂಸಿನಂತಿದೆ. ವಿಶ್ವ ಕ್ರಿಕೆಟ್ ದೈತ್ಯಶಕ್ತಿಗಳಲ್ಲಿ ಒಂದಾಗಿರುವ ಭಾರತ ತಂಡ ಈ ರಂಗದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಬಾಂಗ್ಲಾದ ಎದುರು ಏಕದಿನ ಅಂತರರಾಷ್ಟ್ರೀಯ ಪಂದ್ಯದ ಸರಣಿ ಸೋತಿರುವುದು ಮುಜುಗರ ಉಂಟು ಮಾಡಿದೆ. ಈಚೆಗೆ ಐಪಿಎಲ್‌ ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಆಟಗಾರರು ಮುಳುಗಿದ್ದರು. ಹಣ, ಮೋಜು, ಜೂಜುಗಳ ಆಗರದಂತಿರುವ ಐಪಿಎಲ್‌ ಗುಂಗಿನಲ್ಲಿದ್ದ ಭಾರತದ ಆಟಗಾರರಿಗೆ ಬಾಂಗ್ಲಾದ ಆಟಗಾರರು ಚಳ್ಳೆಹಣ್ಣು ತಿನ್ನಿಸಿದ್ದಾರೆ. ಈ ಸೋಲು ಭಾರತ ತಂಡದ ಆಟಗಾರರನ್ನು ಜಾಗೃತಗೊಳಿಸಿರ ಬಹುದು. ಆದರೆ ಈ ದೇಶದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬಾಂಗ್ಲಾ ಎದುರು ಸರಣಿ ಸೋತ ಘಟನೆ ಚರಿತ್ರೆಯಲ್ಲಿ ಉಳಿಯಲಿದೆ. ಇದು ಈ ದೇಶದ ಕ್ರಿಕೆಟ್‌ಪ್ರಿಯರ ಮನಸ್ಸಿಗೆ ನೋವು ಉಂಟುಮಾಡಿದೆ. ಇಂತಹ ಸಂದಿಗ್ಧದಲ್ಲಿ ದೋನಿಯವರು ‘ನಾನು ನಾಯಕತ್ವ ತ್ಯಜಿಸುವುದ ರಿಂದ ಈ ದೇಶದಲ್ಲಿ ಕ್ರಿಕೆಟ್‌ಗೆ ಅನುಕೂಲವಾಗುವುದಾದರೆ ಅದಕ್ಕೆ ಸಿದ್ಧ’ ಎಂದು ವ್ಯಂಗ್ಯವಾಗಿ ಮಾತನಾಡಿದ್ದು ಸರಿಯಲ್ಲ. ಆದರೆ ಈ ಸಂದರ್ಭದಲ್ಲಿ ನೇರ ಮಾತುಗಳ ಅಗತ್ಯವಿದೆ ಎಂಬುದನ್ನು ದೋನಿಯವರು ಅರಿತುಕೊಳ್ಳಬೇಕು. ಭಾರತದ ಆಟಗಾರರು ಎಡವಿದ್ದು ಎಲ್ಲಿ ಎಂಬುದಕ್ಕೆ ಸಂಬಂಧಿಸಿದಂತೆ ತಜ್ಞರ ಮಟ್ಟದಲ್ಲಿ ವಿಶ್ಲೇಷಣೆ ನಡೆಯಬೇಕು. ಇಂತಹ ತಪ್ಪುಗಳು ಮರುಕಳಿಸದಂತೆ ಮಾಡುವುದು ಹೇಗೆ ಎಂಬ ಬಗ್ಗೆ ರಚನಾತ್ಮಕವಾಗಿ ಮಾತನಾಡುವ ಅಗತ್ಯವಿದೆ. ಅದರ ಬದಲು ದೋನಿ ಪದತ್ಯಾಗದ ಮಾತನಾಡಿರುವುದು ಸರಿಯಲ್ಲ. ಇಷ್ಟಕ್ಕೂ ಇವರು ತಂಡದಲ್ಲಿ ನಾಯಕ ರಾಗಿರಬೇಕಾ, ಸಾಮಾನ್ಯ ಆಟಗಾರರಾಗಿ ಮುಂದು ವರಿಯಬೇಕಾ ಎಂದು ತೀರ್ಮಾನಿಸು ವವರು ಆಯ್ಕೆ ಸಮಿತಿ ಸದಸ್ಯರು ತಾನೆ? ಭಾರತದ ಕ್ರಿಕೆಟ್‌ಗೆ ದೋನಿಯವರ ಕೊಡುಗೆಯನ್ನು ಅಲ್ಲಗಳೆಯುವಂತೆಯೇ ಇಲ್ಲ. 2007ರಲ್ಲಿ ರಾಹುಲ್‌ ದ್ರಾವಿಡ್‌ ಅವರ ನಂತರ ದೋನಿಯವರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಭಾರತ ತಂಡಕ್ಕೆ ನಾಯಕರಾದರು. ಇವರ ನೇತೃತ್ವದಲ್ಲಿಯೇ ಭಾರತ ಟ್ವೆಂಟಿ–20 ವಿಶ್ವಕಪ್‌ ಗೆದ್ದಿತಲ್ಲದೆ, ನಾಲ್ಕು ವರ್ಷಗಳ ಹಿಂದೆ ಐವತ್ತು ಓವರುಗಳ ಏಕದಿನ ಪಂದ್ಯಗಳ ವಿಶ್ವಕಪ್‌ ಗೆದ್ದಿತು. ಇಂಗ್ಲೆಂಡ್‌ನಲ್ಲಿಯೂ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತು. ಭಾರತ ಟೆಸ್ಟ್‌ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಈ ಕ್ರೀಡೆಯ ಎಲ್ಲಾ ಮಾದರಿಗಳಲ್ಲಿಯೂ ಆಡಿರುವ ದೋನಿಯವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 14 ಸಾವಿರ ರನ್‌ ಗಳಿಸಿದ್ದಾರೆ. ತಂಡದ ನೇತೃತ್ವ ವಹಿಸುವುದರಿಂದ ಹೆಚ್ಚು ಒತ್ತಡ ಇರುತ್ತದೆ. ಇದರಿಂದ ವೈಯಕ್ತಿಕ ಆಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾ ಗುತ್ತದೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿಯೇ ಸಚಿನ್‌ ತೆಂಡೂಲ್ಕರ್‌ ಅವರು ಇಂತಹ ಜವಾ ಬ್ದಾರಿಯ ಅವಕಾಶಗಳು ಬಂದಾಗಲೆಲ್ಲಾ ಹಿಂದೆ ಸರಿದುಬಿಡುತ್ತಿದ್ದರು. ದೋನಿಯವರು ಸುದೀರ್ಘ ಏಳುಬೀಳುಗಳನ್ನು ಕಂಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಅವರು ಆವೇಶದಿಂದ ವರ್ತಿಸಿದ್ದು ಅಥವಾ ಮಾತನಾಡಿದ್ದು ಕಡಿಮೆ. ಸಂಯಮ ಮತ್ತು ಸಜ್ಜನಿಕೆಯ ನಡವಳಿಕೆಯಿಂದ ದೋನಿಯವರು ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವರು ಕಳೆದ ಡಿಸೆಂಬರ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿದ್ದಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ನಾಯಕತ್ವ ಬೇಡ ಎಂಬ ಅವರ ವ್ಯಂಗ್ಯದ ಹೇಳಿಕೆ ಅವರ ಗಂಭೀರ ವ್ಯಕ್ತಿತ್ವಕ್ಕೆ ಭಿನ್ನವಾದ ನಡವಳಿಕೆಯಾಗಿದೆ. ಅವರು ತಾಳ್ಮೆ ಕಳೆದುಕೊಂಡಿದ್ದಾ ರೆಂದರೆ ಅದರ ಹಿಂದೆ ಅದೆಂತಹ ಒತ್ತಡ ಇತ್ತು ಎಂಬುದೂ ಬಹಿರಂಗಗೊಳ್ಳಬೇಕಿದೆ. ‘ಅಂತಿಮವಾಗಿ ಭಾರತ ಗೆಲ್ಲಬೇಕಷ್ಟೆ, ಯಾರು ನಾಯಕ ಅನ್ನೋದು ಮುಖ್ಯ ಅಲ್ಲ’ ಎಂಬ ಅವರ ಮಾತೂ ಅರ್ಥಪೂರ್ಣವಾಗಿದೆ. ಕ್ರಿಕೆಟ್‌ ಇವತ್ತು ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಆಟಗಾರರಿಗೆ ರಾಷ್ಟ್ರೀಯ ತಂಡಕ್ಕಿಂತ ಕ್ಲಬ್‌ ಮತ್ತು ಫ್ರಾಂಚೈಸ್‌ಗಳ ಮೇಲೆಯೇ ಹೆಚ್ಚು ಆಸಕ್ತಿ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಪರಿಸ್ಥಿತಿ ಹೀಗಿರುವಾಗ ಬಾಂಗ್ಲಾದ ಎದುರಿನ ಸೋಲಿನಂತಹ ಪ್ರಕರಣಗಳೂ ನಿರೀಕ್ಷಿತ. ಇದೀಗ ಬಿಸಿಸಿಐ ಆಡಳಿತಗಾರರು, ದೋನಿ ಮತ್ತು ತಂಡದ ಆಟಗಾರರು ರಚನಾತ್ಮಕವಾಗಿ ಚಿಂತಿಸಬೇಕಾದ ಅಗತ್ಯವಿದೆ. ಆ ಮೂಲಕ ಭಾರತ ತಂಡದಲ್ಲಿ ನವಚೇತನ ಮೂಡಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.