ನಿಯಂತ್ರಣ ಹೇರಿಕೆ ಕಿರುಕುಳ ಆಗಬಾರದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗಲಿಂದ ವಿದೇಶಿ ದೇಣಿಗೆ ಪಡೆಯುವ ಸರ್ಕಾರೇತರ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕೈಗೊಂಡ ಮೊದಲ ಸುತ್ತಿನ ಕ್ರಮದ ಅನುಸಾರ 8,975 ಸರ್ಕಾರೇತರ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುವ ತಮ್ಮ ಲೈಸೆನ್ಸ್ ಕಳೆದುಕೊಂಡಿದ್ದವು. ಈಗ ಜೂನ್ ತಿಂಗಳಲ್ಲಿ 4,000ಕ್ಕೂ ಅಧಿಕ ಸಂಘಟನೆಗಳ ಮಾನ್ಯತೆ ರದ್ದು ಮಾಡಲಾಗಿದೆ. ಲೈಸೆನ್ಸ್ ಕಳೆದುಕೊಂಡ ಇತ್ತೀಚಿನ ಸಂಸ್ಥೆಗಳಲ್ಲಿ ದೆಹಲಿ ಯೂನಿವರ್ಸಿಟಿ ಹಾಗೂ ಜವಾಹರಲಾಲ್ ನೆಹರೂ ಯೂನಿವರ್ಸಿಟಿ ಸಹ ಸೇರಿವೆ. ರಿಟರ್ನ್ಸ್ ಸಲ್ಲಿಸದಿರುವುದು ಅಥವಾ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ನಿಯಮಗಳಿಗೆ ಈ ರಿಟರ್ನ್ಸ್ ಅನುಗುಣವಾಗಿರದೇ ಇರುವುದು ಈ ಮಾನ್ಯತೆ ರದ್ದತಿಗೆ ಕಾರಣ ಎನ್ನಲಾಗಿದೆ. ಎಫ್‌ಸಿಆರ್‌ಎ ಕಾಯಿದೆ ರೂಪುಗೊಂಡದ್ದು ಇಂದಿರಾ ಗಾಂಧಿ ಆಡಳಿತ ಇದ್ದ 1976ರಲ್ಲಿ. ಆ ಸಮಯದಲ್ಲಿ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಎಂಬುದನ್ನು ಸ್ಮರಿಸಬಹುದು. ಈಗ ಎನ್‌ಡಿಎ ಸರ್ಕಾರದ ಈ ಕ್ರಮ ವಿಮರ್ಶೆ, ಟೀಕೆಗಳನ್ನು ಹತ್ತಿಕ್ಕುವಂತಹದ್ದು ಎಂಬಂತಹ ಭಾವನೆಗಳಿಗೆ ಕಾರಣವಾಗಿದೆ. ಹಲವು ಕ್ಷೇತ್ರಗಳಲ್ಲಿ ಸರ್ಕಾರವೇ ಖುದ್ದಾಗಿ ಕೆಲಸ ಮಾಡಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಕೊರತೆಯನ್ನು ತುಂಬಿರುವುದು ಎನ್‌ಜಿಒಗಳು. ಇವು ಆರೋಗ್ಯ, ಶಿಕ್ಷಣ ಸೇರಿದಂತೆ ಕಾನೂನು ಹಾಗೂ ಮಾನವೀಯ ನೆರವು ನೀಡುತ್ತಿವೆ. ಅಲ್ಲದೆ ಮಾನವ ಹಕ್ಕುಗಳು ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಹೋರಾಟ, ಚಳವಳಿಗಳನ್ನು ಹುಟ್ಟುಹಾಕಿವೆ ಎಂಬುದನ್ನು ಮರೆಯಲಾಗದು. ಆದರೆ ಸರ್ಕಾರದ ನೀತಿಗಳು ಅದೂ ವಿಶೇಷವಾಗಿ ಕೆಲವು ಅಭಿವೃದ್ಧಿ ಯೋಜನೆಗಳ ವಿರುದ್ಧ ತೀವ್ರ ವಿರೋಧ, ಪ್ರತಿರೋಧ ಹುಟ್ಟುಹಾಕುವ ನಾಗರಿಕ ಸಮಾಜದ ಈ ಸಂಘಟನೆಗಳ ಸಾಮರ್ಥ್ಯ ಹೆಚ್ಚಳಕ್ಕೆ ವಿದೇಶಿ ದೇಣಿಗೆ ಕಾರಣ ಎಂಬುದನ್ನು ಸರ್ಕಾರಗಳು ಗುರುತಿಸಿವೆ ಎಂಬುದು ಸ್ಪಷ್ಟವಿದೆ. ಕೂಡಂಕುಳಂ ಅಣು ಶಕ್ತಿ ಘಟಕದ ವಿರುದ್ಧ 2011ರಲ್ಲಿ ಪ್ರತಿಭಟನೆಗಳು ನಡೆದಾಗ ವಿದೇಶಿ ಸಂಸ್ಥೆಗಳಿಂದ ಪ್ರತಿಭಟನಾಕಾರರಿಗೆ ಹಣಕಾಸು ನೆರವು ಸಿಗುತ್ತಿದೆ ಎಂದು ಯುಪಿಎ ಸರ್ಕಾರವೂ ದೂರಿತ್ತು. ಅಣು ಶಕ್ತಿ ಹಾಗೂ ಬೃಹತ್ ಕೈಗಾರಿಕಾ ಘಟಕಗಳ ವಿರುದ್ಧದ ಜನ ಚಳವಳಿಗಳನ್ನು ಸಂಘಟಿಸಿದ ಎನ್‌ಜಿಒಗಳಿಂದಾಗಿ ಭಾರತದ ಜಿಡಿಪಿ ವೃದ್ಧಿ ಕುಂಠಿತಗೊಂಡಿದೆ ಎಂದು ಕಳೆದ ವರ್ಷ ಜೂನ್‌ನಲ್ಲಿ ಸೋರಿಕೆಯಾದ ಗೂಢಚರ್ಯೆ ವರದಿಯೂ ತಿಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಣು ಇಂಧನ, ಆದಿವಾಸಿಗಳ ಸ್ಥಳಾಂತರ ಅಥವಾ ಅರಣ್ಯ ವಿನಾಶ ವಿರೋಧಿಸುವ ಸಂಗತಿಗಳನ್ನು ರಾಷ್ಟ್ರ ವಿರೋಧಿ ಎಂದು ಎಂದಿಗೂ ಹೇಳಲು ಸಾಧ್ಯವಿಲ್ಲ. ಭಾರತದ ಹಿತಕ್ಕೆ ತೊಂದರೆ ಮಾಡುವ ಎನ್‌ಜಿಒಗಳು ಮುಂದುವರಿಯಲು ಅವಕಾಶ ನೀಡಬೇಕೆಂದು ಯಾರೂ ಪ್ರತಿಪಾದಿಸುವುದಿಲ್ಲ. ಯಾವ ಸಂಘಟನೆಗಳನ್ನು ಅಥವಾ ಚಟುವಟಿಕೆಗಳನ್ನು ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಬಗ್ಗೆ ವಿವೇಚನೆ ಬಳಸುವುದು ಅಗತ್ಯ. ಸರ್ಕಾರದ ಟೀಕಾಕಾರರನ್ನು ಜನರ ಶತ್ರುಗಳಾಗಿ ಪರಿಭಾವಿಸುವ ಮನೋಭಾವ ಸರಿಯಲ್ಲ. ವಾಣಿಜ್ಯ ಚಟುವಟಿಕೆಗಳಿಗೆ ವಿದೇಶಿ ನೇರ ಹಣಹೂಡಿಕೆ (ಎಫ್‌ಡಿಐ) ಒಪ್ಪಿಕೊಳ್ಳಲು ಸರ್ಕಾರಕ್ಕಿರುವ ಕಾತುರತೆ ಎದ್ದುಕಾಣಿಸುವಂತಹದ್ದು. ಆದರೆ ಅದೇ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ನಿರಾಕರಣೆಗೊಳ್ಳುತ್ತಿರುವುದು ವಿಪರ್ಯಾಸ. ಅನೇಕ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆದುಕೊಳ್ಳುತ್ತಿರುವುದರಿಂದ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸುವುದು ಸಾಧ್ಯವಾಗುತ್ತಿದೆ. ಅನೇಕ ಸಂಶೋಧನಾ ಯೋಜನೆಗಳಿಗೆ ಇದರಿಂದ ಅನುಕೂಲವಾಗುತ್ತಿದೆ. ವಿದೇಶಿ ದೇಣಿಗೆಯನ್ನು ನಿಯಂತ್ರಣಕ್ಕೊಳಪಡಿಸುವ ನೀತಿ ಕಿರುಕುಳವಾಗದಂತೆ ಸರ್ಕಾರ ಎಚ್ಚರ ವಹಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.