ರೈಲ್ವೆಗೆ ಬೇಕಿದೆ ಕಾಯಕಲ್ಪ ದಿಟ್ಟ ಕ್ರಮ ಕೈಗೊಳ್ಳಿ ಅತ್ಯಂತ ಕಡಿಮೆ ದರದಲ್ಲಿ ಅತಿ ಶೀಘ್ರವಾಗಿ ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದೊಡ್ಡ ಪ್ರಮಾಣದಲ್ಲಿ ಜನರನ್ನು, ಸರಕು ಸಾಮಗ್ರಿಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಇರುವುದು ರೈಲ್ವೆಗೆ ಮಾತ್ರ. ಆದರೆ ನಮ್ಮ ದೇಶದಲ್ಲಿ ಅದನ್ನು ಪರಿಣಾಮಕಾರಿ ಸಂಪರ್ಕ ಸಾಧನಕ್ಕಿಂತ ಹೆಚ್ಚಾಗಿ ವೋಟ್ ಬ್ಯಾಂಕ್ ರಾಜಕಾರಣದ ದಾಳವಾಗಿ ಬಳಸಿಕೊಂಡ ಉದಾಹರಣೆಗಳೇ ಜಾಸ್ತಿ. ರೈಲು ಮಂತ್ರಿಗಳಾಗಿದ್ದವರು ತಮ್ಮ ತಮ್ಮ ಇಷ್ಟಾನಿಷ್ಟಗಳು, ರಾಜಕೀಯ ಸಿದ್ಧಾಂತಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಲಾಖೆಯನ್ನು ನಡೆಸುತ್ತ ಬಂದರು. ವೃತ್ತಿನೈಪುಣ್ಯದ ಕೊರತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅದಕ್ಷತೆಗಳಂತಹ ಎಲ್ಲ ಪ್ರತಿಕೂಲಗಳ ನಡುವೆಯೂ ರೈಲ್ವೆ, ದೇಶದ ಅತ್ಯಂತ ದೊಡ್ಡ ಸಮೂಹ ಸಾರಿಗೆಯಾಗಿ ಎಲ್ಲ ವರ್ಗದ ಪ್ರಯಾಣಿಕರನ್ನೂ ಆಕರ್ಷಿಸುತ್ತಲೇ ಇದೆ ಎನ್ನುವುದು ದೊಡ್ಡ ಸೋಜಿಗ. ನಿತ್ಯ 2.3 ಕೋಟಿ ಪ್ರಯಾಣಿಕರು, 30 ಲಕ್ಷ ಟನ್ ಸರಕನ್ನು ಸಾಗಿಸುವ, 16 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಈ ರೈಲ್ವೆ ವ್ಯವಸ್ಥೆ ಹಳಿ ತಪ್ಪುತ್ತಿದೆ. ಇದನ್ನು ಸರಿದಾರಿಗೆ ತರದೇ ಹೋದರೆ ದುಬಾರಿ ಬೆಲೆ ತೆರಬೇಕಾದ ದಿನಗಳು ದೂರವಿಲ್ಲ. ಅದಕ್ಕಾಗಿಯೇ ಹಾಲಿ ಸರ್ಕಾರ ಭಾರತೀಯ ರೈಲ್ವೆಯ ಸುಧಾರಣೆ ಮತ್ತು ಪುನರ್ ರಚನೆಗೆ ನೀತಿ ಆಯೋಗದ ಸದಸ್ಯ ವಿವೇಕ್ ದೇಬ್ರಾಯ್ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿತ್ತು. ಸಮಿತಿ ದೂರಗಾಮಿ ಪರಿಣಾಮ ಬೀರುವ ಅನೇಕ ಶಿಫಾರಸುಗಳನ್ನು ಮಾಡಿದೆ. ರೈಲುಗಳನ್ನು ಓಡಿಸಲು ಖಾಸಗಿ ಸಂಸ್ಥೆಗಳಿಗೂ ಅವಕಾಶ ನೀಡಬೇಕು ಎಂಬ ಅದರ ಪ್ರಮುಖ ಸಲಹೆಯಲ್ಲಿ ಸಾಕಷ್ಟು ಅರ್ಥವೂ ಇದೆ. ದೂರಸಂಪರ್ಕ, ರಸ್ತೆ ಸಾರಿಗೆ, ವಿಮಾನಯಾನ ಕ್ಷೇತ್ರದಲ್ಲಿ ಸರ್ಕಾರಿ ಏಕಸ್ವಾಮ್ಯ ಇದ್ದಾಗ ಸ್ಥಿತಿ ಹೇಗಿತ್ತು ಎಂಬುದನ್ನೂ ನೋಡಿದ್ದೇವೆ. ಜನಸಾಮಾನ್ಯರಿಗೂ ಸಹ ಕೈಗೆಟಕುವ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ದೊರೆತಿದ್ದು, ಖಾಸಗಿಯವರು ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟ ನಂತರವೇ. ಅಂದರೆ ಪೈಪೋಟಿಯ ಬಾಗಿಲು ತೆರೆದಷ್ಟೂ ಬಳಕೆದಾರರಿಗೆ ಲಾಭ. ಅದರಿಂದ ರೈಲ್ವೆ ಕೂಡ ಹೊರತಲ್ಲ ಎಂಬುದನ್ನು ಖಾಸಗಿಯವರ ಪ್ರವೇಶವನ್ನು ವಿರೋಧಿಸುವವರು ಅರಿತುಕೊಳ್ಳಬೇಕು. ದೇಶ ಇಂದು ಕಾಣುತ್ತಿರುವ ಪ್ರಗತಿಯಲ್ಲಿ ಖಾಸಗಿ ವಲಯದ ಪಾಲು ದೊಡ್ಡದು. ಅಲ್ಲದೆ ಸಮಿತಿ ಹೇಳಿರುವುದು ಖಾಸಗೀಕರಣ ಅಲ್ಲ. ಖಾಸಗಿಯವರ ಪ್ರವೇಶಕ್ಕೆ ಅವಕಾಶ ಮಾತ್ರ. ರೈಲ್ವೆಯ ಮುಖ್ಯ ಉದ್ದೇಶ ಜನ ಮತ್ತು ಸರಕು ಸಾಗಣೆ. ಆದರೆ ಆಸ್ಪತ್ರೆ, ಶಾಲೆಗಳನ್ನು ನಡೆಸುವುದು, ಊಟೋಪಚಾರ, ರಿಯಲ್ ಎಸ್ಟೇಟ್, ವಸತಿ ಮತ್ತು ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ವಹಣೆ, ಬೋಗಿಗಳು ಮತ್ತು ಎಂಜಿನ್‌ಗಳ ತಯಾರಿಕೆ ಮತ್ತಿತರ ಉಪ ವ್ಯವಹಾರಗಳಲ್ಲೂ ಅದು ತೊಡಗಿಸಿಕೊಂಡಿರುವುದು ಅನಗತ್ಯ. ಈ ಹೊರೆಗಳಿಂದ ಅದು ಹೊರ ಬರಬೇಕು. ತನ್ನೆಲ್ಲ ಶಕ್ತಿ, ಸಾಮರ್ಥ್ಯವನ್ನು ಸಾಗಾಟಕ್ಕೆ ವಿನಿಯೋಗಿಸಬೇಕು ಎಂಬ ಸಮಿತಿಯ ಇನ್ನೊಂದು ಪ್ರಮುಖ ಸಲಹೆಯೂ ಮುಖ್ಯವಾದದ್ದು. ಅದರಿಂದ ಪ್ರಯಾಣಿಕ ಮತ್ತು ಸರಕು ಸಾಗಣೆ ಸೇವೆಗಳ ಸುಧಾರಣೆಗೆ ಗಮನ ಕೊಡಲು ರೈಲ್ವೆಗೆ ಸಾಧ್ಯವಾಗುತ್ತದೆ. ಸುರೇಶ್ ಪ್ರಭು ಅವರು ರೈಲ್ವೆ ಸಚಿವರಾದ ನಂತರ ನೀತಿ ನಿರ್ಧಾರ, ಖರೀದಿ ವಿಷಯಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿದ್ದಾರೆ. ಆದರೆ ಅದು ವಲಯ ವ್ಯವಸ್ಥಾಪಕರ ಮಟ್ಟಕ್ಕೇ ನಿಂತಿದೆ. ಇದನ್ನು ವಿಭಾಗೀಯ ಮ್ಯಾನೇಜರ್‌ಗಳ ಮಟ್ಟಕ್ಕೂ ವಿಕೇಂದ್ರೀಕರಣಗೊಳಿಸಬೇಕು ಎಂದೂ ಸಮಿತಿ ಸೂಚಿಸಿದೆ. ರೈಲು ಸೇವೆಯ ದರಗಳನ್ನು ನಿಗದಿಪಡಿಸಲು ರೈಲ್ವೆ ನಿಯಂತ್ರಣ ಆಯೋಗ ರಚನೆ ಹಾಗೂ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ರದ್ದತಿಗೆ ನೀಡಿರುವಂತಹ ಸಲಹೆ, ರೈಲ್ವೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸುವ ದಿಟ್ಟ ಹೆಜ್ಜೆಯಾಗಬಲ್ಲದು. ಸ್ವಾತಂತ್ರ್ಯ ಬಂದಾಗ ನಮ್ಮಲ್ಲಿ 53,596 ಕಿ.ಮೀ. ರೈಲು ಮಾರ್ಗ ಇತ್ತು. ಈಗ ಅದು 66 ಸಾವಿರ ಕಿ.ಮೀ.ಗೆ ಅಂದರೆ 67 ವರ್ಷಗಳಲ್ಲಿ ಕೇವಲ ಶೇ 22ರಷ್ಟು ಏರಿದೆ. ಆದರೆ ಪ್ರಯಾಣಿಕರ ಸಂಖ್ಯೆ 20 ಪಟ್ಟು ವೃದ್ಧಿಸಿದೆ. ಹೀಗಾಗಿ ರೈಲ್ವೆಯ ಬೆಳವಣಿಗೆ ಹಾಗೂ ಅದು ವೃತ್ತಿಪರತೆ ಮೈಗೂಡಿಸಿಕೊಳ್ಳಲು ಕಾಯಕಲ್ಪ ಅನಿವಾರ್ಯ. ಚೀನಾದ ರೈಲ್ವೆ ಕ್ರಾಂತಿ ಮೆಚ್ಚುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಸುರೇಶ್ ಪ್ರಭು ಈಗ ಈ ಅವಕಾಶ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.