ಆಧಿಪತ್ಯಕ್ಕಾಗಿ ಮೇಲಾಟ ಬಿಡಿ ಅಭಿವೃದ್ಧಿ ಕಡೆ ಗಮನ ಕೊಡಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಆಡಳಿತ ಪಕ್ಷಗಳ ನಡುವಣ ಗುದ್ದಾಟ ಬೀದಿರಂಪವಾಗಿ ಮಾರ್ಪಟ್ಟಿದೆ. ‘ವೋಟಿಗಾಗಿ ನೋಟು’ ಪ್ರಕರಣವೊಂದು ದಿನಕ್ಕೊಂದು ಹೊಸ ಆಯಾಮ ಪಡೆದು, ನಾನಾ ಬಗೆಯ ಗಾಳಿಸುದ್ದಿಗಳಿಗೆ ಗ್ರಾಸ ಒದಗಿಸಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹಾಗೂ ತೆಲುಗುದೇಶಂ ಪಕ್ಷ (ಟಿಡಿಪಿ) ಪರಸ್ಪರ ವಿರುದ್ಧ ನೆಲೆಗಳಲ್ಲಿ ನಿಂತು ಅಸ್ತ್ರ–ಪ್ರತಿಅಸ್ತ್ರಗಳನ್ನು ಬಿಡುತ್ತಿವೆ. ರಾಜ್ಯ ವಿಭಜನೆಗೆ ವರ್ಷ ತುಂಬಿದ ಹೊತ್ತಲ್ಲಿ ಮುನ್ನೋಟಗಳು ಮುನ್ನೆಲೆಗೆ ಬರುವ ಬದಲು, ಆಧಿಪತ್ಯಕ್ಕಾಗಿ ನಡೆಸಿರುವ ರಾಜಕೀಯ ಮೇಲಾಟ ಸುದ್ದಿ ಮಾಡುತ್ತಿರುವುದು ದುರದೃಷ್ಟಕರ. ತೆಲಂಗಾಣ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಲು ನಾಮನಿರ್ದೇಶಿತ ಸದಸ್ಯ ಎಲ್ವಿಸ್‌ ಸ್ಟೀಫನ್ಸನ್‌ ಅವರಿಗೆ ಹಣದ ಆಮಿಷವೊಡ್ಡಿದ ಪ್ರಕರಣದಲ್ಲಿ ತೆಲುಗುದೇಶಂ ಶಾಸಕ ರೇವಂತ ರೆಡ್ಡಿ ಅವರನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ್ದೇ ಈ ರಾದ್ಧಾಂತದ ಮೂಲ. ಇದರ ಬೆನ್ನಿಗೇ, ಸ್ಟೀಫನ್ಸನ್‌ ಜತೆ ಆಂಧ್ರ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರೂ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿತ ಸಂಭಾಷಣೆಯನ್ನು ಟಿ.ವಿ. ವಾಹಿನಿಯೊಂದು ಪ್ರಸಾರ ಮಾಡಿತು. ಇದರಿಂದಾಗಿ, ವೋಟಿಗಾಗಿ ನೋಟು ಪ್ರಕರಣ ಮತ್ತೊಂದು ಆಯಾಮ ಪಡೆಯಿತು. ಧ್ವನಿಸುರುಳಿಯಲ್ಲಿನ ಧ್ವನಿಯ ಸಾಚಾತನದ ಬಗ್ಗೆ ವಾದ–ವಿವಾದಗಳು ಎದ್ದವು. ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷಗಳ ಮುಖಂಡರು, ಬಾಬು ರಾಜೀನಾಮೆಗೆ ಆಗ್ರಹಿಸಿದ್ದೂ ಆಯಿತು. ಆದರೆ ಇದೇ ಅಂಶ ಟಿಡಿಪಿಗೆ ಗುರಾಣಿಯಾಗಿ ಒದಗಿಬಂದಿದೆ. ಆ ಧ್ವನಿ ಬಾಬು ಅವರದೇ ಆಗಿದ್ದಲ್ಲಿ ಅವರ ದೂರವಾಣಿ ಸಂಭಾಷಣೆಯನ್ನು ಧ್ವನಿಮುದ್ರಿಸಿದ್ದು ಯಾರು, ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು ಎಂದು ಟಿಡಿಪಿ ಮುಖಂಡರು ತಿರುಗೇಟು ಕೊಟ್ಟಿದ್ದಾರೆ. ವೋಟಿಗಾಗಿ ನೋಟು ಪ್ರಕರಣ ಈ ಮೂಲಕ ದೂರವಾಣಿ ಕದ್ದಾಲಿಕೆಯ ರೂಪ ಪಡೆದಿದೆ. ಟಿಆರ್ಎಸ್‌, ವೋಟಿಗಾಗಿ ನೋಟು ಪ್ರಕರಣದ ಚುಂಗು ಹಿಡಿದು ದಂಡ ಝಳಪಿಸುತ್ತಿದೆ. ಇದೇ ಪ್ರಕರಣದಡಿ ಧ್ವನಿ ಪರೀಕ್ಷೆಗೆ ಹಾಜರಾಗುವಂತೆ ಬಾಬು ಅವರಿಗೂ ನೋಟಿಸ್‌ ನೀಡಲು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ನಿರ್ಧರಿಸಿದೆ ಎಂದು ವರದಿಯಾಗಿದೆ. ಒಂದು ರಾಜ್ಯದ ಪೊಲೀಸರು, ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೆ ನೋಟಿಸ್‌ ನೀಡಲು ಅವಕಾಶ ಇದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇತ್ತ ಟಿಡಿಪಿಯು ಕದ್ದಾಲಿಕೆಯನ್ನು ಪ್ರತಿಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರಕ್ಕೂ ದೂರು ಮುಟ್ಟಿಸಿದೆ. ಕದ್ದಾಲಿಕೆಗೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ವೋಟಿಗಾಗಿ ನೋಟು ಪ್ರಕರಣ ನಿಯಮಾನುಸಾರ ತನಿಖೆಗೆ ಒಳಪಡಬೇಕು. ಆದರೆ ಅದು, ರಾಜ್ಯ ವಿಭಜನೆಗೆ ಸಂಬಂಧಿಸಿದ ವಿಷಯಗಳನ್ನೂ ಹೊರಗೆ ಎಳೆದು ಗೋಜಲಾಗಿಸಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲ ರಾಜಕೀಯ ತಂತ್ರಗಾರಿಕೆಯ ಹಿಂದೆ ಇರುವುದು ಆಧಿಪತ್ಯದ ಪ್ರಶ್ನೆ. ತೆಲಂಗಾಣದಲ್ಲಿ ಟಿಡಿಪಿ ಪ್ರಾಬಲ್ಯವನ್ನು ಕುಗ್ಗಿಸಬೇಕು ಎಂಬುದು ಟಿಆರ್‌ಎಸ್‌ನ ಪ್ರಧಾನ ಗುರಿ. ಅಲ್ಲಿಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು; ಸಾಧ್ಯವಾದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬುದು ಟಿಡಿಪಿ ಹೆಬ್ಬಯಕೆ. ಇದಕ್ಕಾಗಿ ನಡೆಸುತ್ತಿರುವ ರಾಜಕೀಯ ಸಂಘರ್ಷಕ್ಕೆ ಉಳಿದೆಲ್ಲವೂ ದಾಳವಾಗುತ್ತಿವೆ. ಟಿಡಿಪಿಯ ನಾಲ್ಕೈದು ಶಾಸಕರನ್ನು ಟಿಆರ್‌ಎಸ್‌ ಈಗಾಗಲೇ ತನ್ನೆಡೆಗೆ ಸೆಳೆದುಕೊಂಡಿದೆ. ಒಬ್ಬರಿಗೆ ಸಚಿವ ಸಂಪುಟದಲ್ಲೂ ಸ್ಥಾನ ಕಲ್ಪಿಸಿದೆ. ಪಕ್ಷಾಂತರಿ ಶಾಸಕರ ಅನರ್ಹತೆ ಪ್ರಶ್ನೆ ಸ್ಪೀಕರ್‌ ಎದುರು ಬಿದ್ದಿದೆ. ರಾಜಕೀಯ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅವಧಿ ಕೊನೆಯಲ್ಲಿ ರಾಜ್ಯ ವಿಭಜಿಸಿದ ಈ ಹಿಂದಿನ ಯುಪಿಎ ಸರ್ಕಾರ, ವಿಭಜನೆ ಸಂದರ್ಭದ ವಾಗ್ದಾನವನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿರುವ ಎನ್‌ಡಿಎ ಸರ್ಕಾರ ಕೂಡ ತೆಲಂಗಾಣ–ಆಂಧ್ರದ ನಡುವಣ ಸಂಘರ್ಷಕ್ಕೆ ಪರೋಕ್ಷವಾಗಿ ಕಾರಣ. ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಸಿದ ಹೋರಾಟ ಮತ್ತು ರಾಜಕೀಯ ಅಸ್ಥಿರತೆಯಿಂದ ಅವಿಭಜಿತ ಆಂಧ್ರದ ಜನ ನೊಂದಿದ್ದಾರೆ. ಆ ಗಾಯಕ್ಕೆ ಮುಲಾಮು ಹಚ್ಚುವ ಬದಲು ಉಪ್ಪು ಸವರುವುದರಿಂದ ರಾಜ್ಯಗಳ ಹಿತಾಸಕ್ತಿ ಕಾಯಲಾಗದು. ಅಲ್ಲಿನ ಆಡಳಿತ ಪಕ್ಷಗಳು ಈ ಸತ್ಯ ಅರಿತು ಸಂಯಮ ಪಾಲಿಸಬೇಕು. ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಷ್ಟಕ್ಕೂ, ಇವೆರಡೂ ಯುದ್ಧಕ್ಕೆ ತೊಡೆತಟ್ಟಿ ಆಹ್ವಾನಿಸುವ ಎದುರಾಳಿ ದೇಶಗಳಂತೆ ನಡೆದುಕೊಳ್ಳಬಾರದು. ತಾವಿರುವುದು ಒಂದೇ ದೇಶದ ಸಹೋದರ ರಾಜ್ಯಗಳಲ್ಲಿ ಎಂಬ ಪ್ರಜ್ಞೆ ರಾಜಕೀಯ ನಾಯಕರಲ್ಲಿ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.