ನಗದು ಚಲಾವಣೆ ಕಡಿತ ಪೂರಕ ಕ್ರಮಗಳು ಅಗತ್ಯ ಕಾಗದದ ಹಣ ಮರೆತು ವಿದ್ಯುನ್ಮಾನ ವಹಿವಾಟಿನತ್ತ ಆಧುನಿಕ ಸಮಾಜ ಸಾಗಬೇಕೆಂದರೆ ಎಲ್ಲರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡುವುದು ಅಗತ್ಯ. ಸರಕು ಮತ್ತು ಸೇವೆಗಳ ಖರೀದಿಯಲ್ಲಿ ಹಣದ ಚಲಾವಣೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಇಂಟರ್ ನೆಟ್ ಬ್ಯಾಂಕ್ ವಹಿವಾಟು ಉತ್ತೇಜಿಸಲು ಗ್ರಾಹಕರು ಮತ್ತು ವರ್ತಕರಿಗೆ ತೆರಿಗೆ ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ. ಲೆಕ್ಕಕ್ಕೆ ಸಿಗದ ಕಪ್ಪು ಹಣ ನಿಯಂತ್ರಣಕ್ಕೆ ಇದು ಸಹಕಾರಿ. ಹೀಗಾಗಿ ಈ ಪ್ರಯತ್ನ ಸ್ವಾಗತಾರ್ಹ. ಈ ಸಂಬಂಧದ ಕರಡು ಪ್ರಸ್ತಾವವನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗಿದೆ. ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ವಿದ್ಯುನ್ಮಾನ ರೂಪದಲ್ಲಿಯೇ ನಿರ್ವಹಿಸುವುದನ್ನು ಕಡ್ಡಾಯ ಮಾಡಲು ಹೊರಟಿರುವುದು ಕಪ್ಪು ಹಣದ ಚಲಾವಣೆಯ ಪ್ರಮಾಣ ತಗ್ಗಿಸಲು ಖಂಡಿತವಾಗಿಯೂ ನೆರವಾಗಲಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ನಗದು ಅನುಪಾತವು ವಿಶ್ವದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಶೇ 86ರಷ್ಟು ನಗದು ವಹಿವಾಟು ಮತ್ತು ₹ 7,600 ಕೋಟಿಗಳಷ್ಟು ನೋಟುಗಳು ಚಲಾವಣೆಯಲ್ಲಿ ಇರುವುದು ನಮ್ಮಲ್ಲಿನ ಹಣ ಕೇಂದ್ರಿತ ಅರ್ಥ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಕಾಗದ ಹಣದ ಮುದ್ರಣ ಮತ್ತು ಚಲಾವಣೆಗೆ ಆಗುವ ವೆಚ್ಚಕ್ಕೆ ಕಡಿವಾಣ ವಿಧಿಸುವುದೂ ಸರ್ಕಾರದ ಈ ಚಿಂತನೆಗೆ ಪ್ರೇರಣೆ ನೀಡಿದೆ. ಸದ್ಯಕ್ಕೆ ವರ್ಷವೊಂದರಲ್ಲಿ ಗ್ರಾಹಕರು ಕ್ರೆಡಿಟ್ ಕಾರ್ಡ್ ನಿಂದ ₹ 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟು ನಡೆಸಿದ್ದರೆ ಅದನ್ನು ಬ್ಯಾಂಕ್ ಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಲು ಅವಕಾಶ ಇದೆ. ಈ ಮೊತ್ತವನ್ನು ಈಗ ₹ 5 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಿರುವುದು ಗ್ರಾಹಕರ ಪಾಲಿಗೆ ಉತ್ತೇಜನಕಾರಿ ಸಂಗತಿಯಾಗಿದೆ. ಕರೆನ್ಸಿಗಳ ಮುದ್ರಣ, ಸುರಕ್ಷತಾ ಕ್ರಮಗಳ ಅಳವಡಿಕೆ, ನಕಲಿ ನೋಟುಗಳ ಹಾವಳಿ ತಡೆ ಮುಂತಾದ ಸಮಸ್ಯೆಗಳು ಹಣದ ಚಲಾವಣೆ ಜತೆ ತಳುಕು ಹಾಕಿಕೊಂಡಿವೆ. ನಗದು ಚಲಾವಣೆ, ನಗದು ಪಾವತಿ ಮತ್ತು ಕಪ್ಪು ಹಣದ ಮಧ್ಯೆ ನೇರ ಸಂಬಂಧ ಇರುವುದು ಗುಟ್ಟಿನ ಸಂಗತಿ ಏನಲ್ಲ. ಸದ್ಯಕ್ಕೆ ವಿದ್ಯುನ್ಮಾನ ವಹಿವಾಟನ್ನು ತಾರತಮ್ಯ ಧೋರಣೆಯಿಂದ ಪರಿಗಣಿಸಲಾಗುತ್ತಿರುವುದೂ ಸುಳ್ಳಲ್ಲ. ಬ್ಯಾಂಕ್ ಮತ್ತು ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟಿನ ಮೇಲೆ ಶುಲ್ಕ ವಿಧಿಸುತ್ತಿವೆ. ಕಾಗದದ ಹಣ ಚಲಾವಣೆಯಲ್ಲಿಯೂ ಅನೇಕ ಮರೆಮಾಚಿದ ವೆಚ್ಚಗಳೂ ಇವೆ. ನೇರ ನಗದು ವಹಿವಾಟಿನಲ್ಲಿ ಹಣದ ಮೂಲ ಅಥವಾ ಅದರ ಜಾಡು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಸದ್ಯದ ಕೊಳ್ಳುಬಾಕ ಸಂಸ್ಕೃತಿಗೆ ಮಾರು ಹೋಗಿರುವ ಗ್ರಾಹಕರು ಆದಾಯ ತೆರಿಗೆ ಉತ್ತೇಜನ ಕಾರಣಕ್ಕೆ ನಗದುರಹಿತ ವಹಿವಾಟಿಗೆ ಮಾರು ಹೋಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೂ ಮೌಲ್ಯವರ್ಧಿತ (ವ್ಯಾಟ್) ತೆರಿಗೆ ಪಾವತಿಯಲ್ಲಿ ರಿಯಾಯಿತಿ ಮತ್ತಿತರ ಉತ್ತೇಜನ ನೀಡಲು ನಿರ್ಧರಿಸಿರುವುದು ಟೀಕೆಗೆ ಗುರಿಯಾಗಿದ್ದರೂ, ಸರ್ಕಾರದ ಉದ್ದೇಶ ಸಾಧನೆಗೆ ಇದು ಅನಿವಾರ್ಯವಾಗಲಿದೆ. ತೆರಿಗೆ ತಪ್ಪಿಸುವ ಏಕೈಕ ಉದ್ದೇಶಕ್ಕೆ ವರ್ತಕರು, ಹೋಟೆಲ್ ಮಾಲೀಕರು, ವೈದ್ಯರು, ವಕೀಲರು ಸೇರಿದಂತೆ ಅನೇಕ ಮಂದಿ ತಮ್ಮ ಗಳಿಕೆಯ ವಿವರ ಮುಚ್ಚಿಕೊಳ್ಳಲು ನಗದು ಹಣಕ್ಕೇ ಜೋತು ಬಿದ್ದಿರುವುದು, ನಗದು ಪಾವತಿಗೆ ಪಟ್ಟು ಹಿಡಿಯುವುದು ಮಾಮೂಲು. ಅವರನ್ನೆಲ್ಲ ಹೊಸ ವ್ಯವಸ್ಥೆಗೆ ಒಳಪಡಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಲಿದೆ. ಇದಕ್ಕಾಗಿ ಸರ್ಕಾರ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದೀತು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೊತ್ತವು ಆಯಾ ದಿನವೇ ವ್ಯಾಪಾರಿಗಳ ಸೇವಾದಾತರ ಖಾತೆಗೆ ಭರ್ತಿಯಾಗುವಂತಾದರೆ, ತೆರಿಗೆ ಅಧಿಕಾರಿಗಳ ಕಿರುಕುಳ ತಪ್ಪುವಂತಾದರೆ ವಣಿಕ ಸಮುದಾಯವೂ ಹೊಸ ವ್ಯವಸ್ಥೆಗೆ ಸೂಕ್ತವಾಗಿ ಸ್ಪಂದಿಸೀತು. ಆಧುನಿಕ ಸಮಾಜವು ಕಾಗದದ ಹಣ ಮರೆತು ವಿದ್ಯುನ್ಮಾನ ವಹಿವಾಟಿನತ್ತ ಸಾಗಲು ಎಲ್ಲರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡುವುದೂ ಮುಖ್ಯವಾಗಿದೆ. ಈಗಾಗಲೇ ರೂಪೆ ಡೆಬಿಟ್ ಕಾರ್ಡ್ ಬಳಕೆ, ಜನಧನ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದರೂ ವಿದ್ಯುನ್ಮಾನ ವಹಿವಾಟಿನ ಸುರಕ್ಷತೆ, ಬ್ಯಾಂಕಿಂಗ್ ಮತ್ತು ಹಣಕಾಸು ಸಾಕ್ಷರತೆ ಪ್ರಮಾಣ ಕಡಿಮೆ ಇರುವುದು ಈ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಇಂತಹ ಸವಾಲುಗಳನ್ನು ಬಗೆಹರಿಸಲೂ ಸರ್ಕಾರ ಕಾರ್ಯೋನ್ಮುಖವಾಗಬೇಕು. ಗ್ರಾಹಕ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವ ಸಂಸ್ಥೆಗಳೂ ಡೆಬಿಟ್, ಕ್ರೆಡಿಟ್ ಕಾರ್ಡ್ ಖರೀದಿದಾರರಿಗೆ ಹಲವು ರಿಯಾಯಿತಿ ಮತ್ತು ಪುರಸ್ಕಾರಗಳನ್ನು ನೀಡಲು ಮುಂದಾಗಬೇಕಾಗಿದೆ. ಈ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಲು ಗ್ರಾಹಕರು, ವ್ಯಾಪಾರಿಗಳು, ತೆರಿಗೆ ಇಲಾಖೆ, ಬ್ಯಾಂಕ್ ಗಳು ಪೂರ್ಣಪ್ರಮಾಣದಲ್ಲಿ ಸಹಕರಿಸುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.