ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದು ಬೇಡ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆಸುವ ಪ್ರವೃತ್ತಿ ಈಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಉತ್ತರಪ್ರದೇಶ, ಮಧ್ಯ ಪ್ರದೇಶದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಇದರ ಹಿಂದೆ ದುಷ್ಟಶಕ್ತಿಗಳ ಕೈವಾಡ ಇರುವ ದಟ್ಟ ಅನುಮಾನ ಇದೆ. ಭ್ರಷ್ಟರು, ಪೊಲೀಸರು, ರಾಜಕಾರಣಿಗಳು ಮತ್ತು ಮಾಫಿಯಾಗಳ ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆಯಲು ಯತ್ನಿಸುವ ಪತ್ರಕರ್ತರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಗಣಿ ಮಾಫಿಯಾದ ದುಷ್ಟ ಕೆಲಸಗಳನ್ನು ಬಯಲಿಗೆ ಎಳೆಯಲು ಯತ್ನಿಸಿದ ಉತ್ತರಪ್ರದೇಶದ ಜಗೇಂದ್ರ ಸಿಂಗ್‌, ಮಧ್ಯಪ್ರದೇಶದ ಸಂದೀಪ್‌ ಕೊಠಾರಿ ಒಂದು ವಾರದ ಅಂತರದಲ್ಲಿ ಜೀವ ತೆತ್ತಿದ್ದಾರೆ. ಮಾಫಿಯಾಗಳಿಂದ ದಾಳಿಗೊಳಗಾದ ಉತ್ತರ ಪ್ರದೇಶದ ಮತ್ತಿಬ್ಬರು ಪತ್ರಕರ್ತರಾದ ಹೈದರ್‌ ಖಾನ್‌, ದೀಪಕ್‌ ಮಿಶ್ರ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಜಗೇಂದ್ರ ಸಿಂಗ್‌ ಸುಟ್ಟಗಾಯಗಳಿಂದ ಸತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಸಿಂಗ್‌ ಕುಟುಂಬದ ಸದಸ್ಯರು ನಡೆಸಿದ ಧರಣಿಗೆ ಬೆಲೆ ಸಿಕ್ಕಿಲ್ಲ. ಪ್ರಕರಣದ ತನಿಖೆ ನಡೆಸಲು ರಾಜ್ಯ ಪೊಲೀಸ್‌ ವ್ಯವಸ್ಥೆಯೇ ಸಮರ್ಥವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಪ್ರತಿಪಾದಿಸುತ್ತಿದ್ದಾರೆ. ಅವರದೇ ಸರ್ಕಾರದ ಮಂತ್ರಿ ರಾಮ್‌ಮೂರ್ತಿ ವರ್ಮಾ ಅವರ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ‘ವರ್ಮಾ ಕಡೆಯ ಗೂಂಡಾಗಳು ನನ್ನನ್ನು ಥಳಿಸಿ, ಬೆಂಕಿ ಹಚ್ಚಿದರು’ ಎಂದು ಸಿಂಗ್‌ ಅವರು ಸಾಯುವ ಮುನ್ನ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮಂತ್ರಿಗಳ ವಿರುದ್ಧವೇ ದೂರು ಬಂದಾಗ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸುವರೇ ಎಂದು ಅನುಮಾನ ಬರುವುದು ಸಹಜ. ಈ ಸಂಶಯಗಳಿಗೆ ಪುಷ್ಟಿ ಕೊಡುವಂತೆ, ಸಿಂಗ್ ಅವರದು ಆತ್ಮಹತ್ಯೆ ಎಂದು ಬಿಂಬಿಸುವ ತಂತ್ರ ನಡೆದಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ವರ್ಮಾ ತಲೆಮರೆಸಿಕೊಂಡಿದ್ದಾರೆ. ಸಚಿವರ ರಕ್ಷಣೆಗೆ ರಾಜ್ಯ ಸರ್ಕಾರವೇ ನಿಂತಿದೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ. ಉತ್ತರಪ್ರದೇಶ ಸರ್ಕಾರ ಆರೋಪಗಳಿಂದ ಹೊರ ಬರಲು ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಲು ಇನ್ನೂ ಕಾಲ ಮಿಂಚಿಲ್ಲ. ಮಧ್ಯಪ್ರದೇಶದ ಪತ್ರಕರ್ತ ಸಂದೀಪ್ ಕೊಠಾರಿ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಗೆಳೆಯನ ಜತೆ ಬೈಕ್‌ ಮೇಲೆ ಹೊರಟಿದ್ದ ಅವರನ್ನು ಅಪಹರಿಸಿಕೊಂಡು ಹೋಗಿ ಹತ್ಯೆ ಮಾಡಲಾಗಿದೆ. ಸುಟ್ಟು ಕರಕಲಾದ ದೇಹದ ಅವಶೇಷಗಳು ರೈಲ್ವೆ ಹಳಿ ಬಳಿ ದೊರೆತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಅನೇಕರು ತಲೆ ಮರೆಸಿಕೊಂಡಿದ್ದಾರೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಗೆ ಈ ರಾಜ್ಯ ಅಥವಾ ಆ ರಾಜ್ಯ ಎಂಬ ಭೇದವಿಲ್ಲ. ಈ ಪಕ್ಷದ ಸರ್ಕಾರ, ಆ ಪಕ್ಷದ ಸರ್ಕಾರ ಎಂಬ ವ್ಯತ್ಯಾಸವೂ ಇಲ್ಲ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಭಾರತ ಪತ್ರಿಕಾ ಮಂಡಳಿಯ ಸಮೀಕ್ಷೆ ಪ್ರಕಾರ ಕಳೆದ 25 ವರ್ಷಗಳಲ್ಲಿ ಸುಮಾರು 79 ಮಂದಿ ಪತ್ರಕರ್ತರು ದೌರ್ಜನ್ಯಗಳಿಗೆ ಬಲಿಯಾಗಿದ್ದಾರೆ. ನಿಷ್ಠುರವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಸೂಕ್ತ ಭದ್ರತೆ ಸಿಗುತ್ತಿಲ್ಲ. ಸಂವಿಧಾನ ಖಾತರಿಗೊಳಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೋತಿವೆ. ದೌರ್ಜನ್ಯಕ್ಕೊಳಗಾಗಿರುವ ಪತ್ರಕರ್ತರ ಪರವಾಗಿ ದನಿ ಎತ್ತಬೇಕಾದ ವೃತ್ತಿಪರ ಸಂಸ್ಥೆಗಳು ದುರ್ಬಲವಾಗಿವೆ. ಪತ್ರಕರ್ತರ ಮೇಲಿನ ದೌರ್ಜನ್ಯಗಳನ್ನು ತಡೆಯದಿದ್ದರೆ ಅಕ್ರಮಗಳು, ಹಗರಣಗಳನ್ನು ಬಯಲಿಗೆಳೆಯುವ ಕೆಲಸಗಳಿಗೆ ಪತ್ರಕರ್ತರು ಕೈಹಾಕುವ ಸಾಹಸ ಮಾಡುವುದಿಲ್ಲ. ಪ್ರಭಾವಿ ಕುಳಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಷ್ಟು ಕುತ್ತು ತರುವ ಅಪಾಯವೂ ಇಲ್ಲದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.