ಸ್ವಾಯತ್ತತೆಗೆ ಧಕ್ಕೆ ತರುವ ಕರಡು ಮಸೂದೆ ಕೈಬಿಡಿ ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್ ಆಫ್‌ ಮ್ಯಾನೇಜ್‌ಮೆಂಟ್ (ಐಐಎಂ) ಕರಡು ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ. ಮ್ಯಾನೇಜ್ ಮೆಂಟ್ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ನೀತಿ ವಿಷಯಗಳಲ್ಲಿ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾವಕ್ಕೆ ತೀವ್ರ ರೀತಿಯ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಕರಡು ಮಸೂದೆಯಲ್ಲಿ ಅನೇಕ ವಿವಾದಾಸ್ಪದ ಅಂಶಗಳಿವೆ. ಮೊದಲಿಗೆ ಇಂತಹದ್ದೊಂದು ಮಸೂದೆಯ ಅಗತ್ಯ ಏನೆಂಬುದೇ ಸ್ಪಷ್ಟವಾಗಿಲ್ಲ. ದೇಶದಲ್ಲಿ 13 ಐಐಎಂಗಳಿವೆ. ಇವುಗಳಲ್ಲಿ ಐದು ಹಳೆಯ ಐಐಎಂಗಳು ಪ್ರಮುಖ ವಾಣಿಜ್ಯ ಶಾಲೆಗಳೆಂದು ಹೆಸರು ಮಾಡಿವೆ. ಎಲ್ಲ ಸಂಸ್ಥೆಗಳೂ, ಮ್ಯಾನೇಜ್‌ಮೆಂಟ್‌ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿವೆ. ಪ್ರಸ್ತುತ ಐಐಎಂಗಳು ನೀಡುತ್ತಿರುವ ಡಿಪ್ಲೊಮಾವನ್ನು ಪದವಿಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಈ ಮಸೂದೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂಬ ಕಾರಣವನ್ನು ನೀಡಲಾಗಿದೆ. ಆದರೆ ಪ್ರಮಾಣಪತ್ರದ ಹೆಸರು ಬದಲಿಸಿದಲ್ಲಿ ಆಗುವ ವ್ಯತ್ಯಾಸವಾದರೂ ಏನು? ಐಐಎಂಗಳಿಂದ ಡಿಪ್ಲೊಮಾ ಪಡೆದವರು ವಾಣಿಜ್ಯ, ಸಾರ್ವಜನಿಕ ಸೇವೆ, ಉದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಇತರ ಶಾಲೆಗಳಿಂದ ಪದವಿ ಪಡೆದವರಿಗಿಂತಲೂ ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಐಐಎಂಗಳು ಈ ಬಗೆಯ ಸ್ಥಾನಮಾನ ಪಡೆದಿರುವುದಕ್ಕೆ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಯಾವುದೇ ರೀತಿ ಹೊರಗಿನ ಮಧ್ಯಪ್ರವೇಶ ಇಲ್ಲದೆ, ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರುವುದೇ ಕಾರಣ. ಇಂತಹ ಸ್ವಾಯತ್ತತೆಗೆ ಉದ್ದೇಶಿತ ಮಸೂದೆಯು ಧಕ್ಕೆ ತರಲಿದೆ. ಒಂದು ವೇಳೆ ಮಸೂದೆ ಅಂಗೀಕೃತಗೊಂಡಿದ್ದೇ ಆದರೆ, ಐಐಎಂಗಳು ತಮ್ಮ ಬಹುತೇಕ ನಿರ್ಧಾರಗಳಿಗೆ ಸರ್ಕಾರದ ಒಪ್ಪಿಗೆ ಪಡೆಯಬೇಕಾಗುತ್ತದೆ. ಅಧ್ಯಕ್ಷರ ಆಯ್ಕೆ ಸೇರಿದಂತೆ ಆಡಳಿತ ಮಂಡಳಿಯ ರಚನೆಯಲ್ಲೂ ಸರ್ಕಾರದ ಪಾತ್ರ ಇರುತ್ತದೆ. ಜೊತೆಗೆ ಹಲವು ವಿಷಯಗಳ ಸಮಾಲೋಚನೆ ಹಾಗೂ ಕೇಂದ್ರ ಸರ್ಕಾರ ನಿರ್ಧರಿಸಿದ ವಿಷಯಗಳ ಕಾರ್ಯ ನಿರ್ವಹಣೆಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಕೇಂದ್ರ, ರಾಜ್ಯ ಸಚಿವರು ಹಾಗೂ ಇತರರನ್ನು ಒಳಗೊಂಡ ಸಮನ್ವಯ ವೇದಿಕೆ ರಚನೆಗೂ ಮಸೂದೆ ಅವಕಾಶ ಕಲ್ಪಿಸುತ್ತದೆ. ಹೀಗೆ ತೀರ್ಮಾನಗಳು ಎಲ್ಲಿ ಆಗಲಿವೆ ಎಂಬ ಬಗ್ಗೆ ಈ ಹೊಸ ವಿಧಾನಗಳು ಸ್ಪಷ್ಟ ಸೂಚನೆ ನೀಡುತ್ತವೆ. ಇದರ ಜೊತೆಗೆ ಸಿಬ್ಬಂದಿ ನೇಮಕ, ಶುಲ್ಕ ವ್ಯವಸ್ಥೆ, ವಿಸ್ತರಣಾ ಯೋಜನೆಗಳು, ಹೊಸ ವಿಭಾಗಗಳ ಆರಂಭ ಮಾತ್ರವಲ್ಲದೆ, ಕಟ್ಟಡಗಳ ನಿರ್ಮಾಣದ ಮೇಲೂ ಪ್ರಭಾವ ಬೀರುವ ಅಧಿಕಾರ ಸರ್ಕಾರಕ್ಕೆ ಬರುತ್ತದೆ. ಇಂತಹ ಹಸ್ತಕ್ಷೇಪವು ಈ ಸಂಸ್ಥೆಗಳನ್ನು ಕೆಳಮಟ್ಟಕ್ಕೆ ಇಳಿಸುತ್ತದೆ ಮತ್ತು ಅವು ನೀಡುವ ಶಿಕ್ಷಣದ ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದ ಯಾವುದೇ ಉನ್ನತ ಶೈಕ್ಷಣಿಕ ಸಂಸ್ಥೆ ದೇಶದಲ್ಲಿ ಇಲ್ಲ. ಆದರೆ ಐಐಟಿಗಳು ಮತ್ತು ಐಐಎಸ್‌ಸಿಯ ಜೊತೆಗೆ ಐಐಎಂಗಳು ಉತ್ತಮ ಕಲಿಕಾ ಕೇಂದ್ರಗಳೆಂದು ಗುರುತಿಸಿಕೊಂಡಿವೆ. ಐಐಟಿಗಳಿಗೆ ಸಂಬಂಧಿಸಿದ ಹಿಂದಿನ ನಿರ್ಧಾರಗಳು ಮತ್ತು ಪ್ರಸಕ್ತ ನಡೆಯನ್ನು ಗಮನಿಸಿದರೆ, ಈಗ ಅವೂ ಬೆದರಿಕೆಯನ್ನು ಎದುರಿಸುತ್ತಿರುವುದು ತಿಳಿಯುತ್ತದೆ. ಈ ಸಂಸ್ಥೆಗಳಿಗೆ ಸಾರ್ವಜನಿಕ ಬೊಕ್ಕಸದಿಂದ ಹಣಕಾಸು ಪೂರೈಸಲಾಗುತ್ತದೆ. ಆದರೆ ಅವು ಉನ್ನತಿಯನ್ನು ಸಾಧಿಸಲು ಸಾಧ್ಯವಾಗಿರುವುದು ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧನೆಯ ವಿಷಯದಲ್ಲಿ ತಮಗಿರುವ ಸ್ವಾತಂತ್ರ್ಯದಿಂದಾಗಿ. ನಿಯಂತ್ರಣದ ಹೆಸರಿನಲ್ಲಿ ಇಂತಹ ಸ್ವಾತಂತ್ರ್ಯದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಬಾರದು. ಐಐಎಂಗಳ ನಿರ್ದೇಶಕರು ಹಾಗೂ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳು ಈ ಮಸೂದೆಯ ಕರಾರುಗಳನ್ನು ಖಂಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ, ಮಸೂದೆಯನ್ನು ಅಥವಾ ಕನಿಷ್ಠ ಅದರ ಅಸಂಗತ ಕರಾರುಗಳನ್ನಾದರೂ ಕೈಬಿಡಲೇಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.