ಗ್ರೀಸ್ ಸಾಲ ಬಿಕ್ಕಟ್ಟು ನಿರ್ವಹಣೆಗೆ ಸನ್ನದ್ಧತೆ ಅಗತ್ಯ ಐರೋಪ್ಯ ಒಕ್ಕೂಟದ ಪುಟ್ಟ ರಾಷ್ಟ್ರ ಗ್ರೀಸ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರುತ್ತದೆ. ಆದರೆ ಅದು ಈಗ ಸಾಲದ ಸುಳಿಯಲ್ಲಿ ಸಿಲುಕಿರುವುದು ಜಾಗತಿಕವಾಗಿ ದೊಡ್ಡ ವಿದ್ಯಮಾನವಾಗಿದೆ. ಐರೋಪ್ಯ ಒಕ್ಕೂಟ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಗಳಿಂದ (ಐಎಂಎಫ್) ಅದು ಪಡೆದುಕೊಂಡಿರುವ ಸಾಲ ಅಪಾರ. ಇನ್ನು ಸಾಲ ನೀಡಲಾಗದು ಎಂಬಂತಹ ಸ್ಥಿತಿ ಈಗ ಸೃಷ್ಟಿಯಾಗಿದೆ. ಜೊತೆಗೆ ಜೂನ್ 30ಕ್ಕೆ ಐಎಂಎಫ್ ಸಾಲ ಮರುಪಾವತಿಯ ಗಡುವು ಇತ್ತು. ಆದರೆ ಐಎಂಎಫ್‌ನಿಂದ ಪಡೆದ ಅಪಾರ ಮೊತ್ತದ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಘೋಷಿಸುವ ಮೂಲಕ ಯುರೋವಲಯದಲ್ಲಿ ಗ್ರೀಸ್ ಮೊದಲ ಸುಸ್ತಿದಾರ ರಾಷ್ಟ್ರವಾಗಿದೆ. ಹೀಗಾಗಿ ಯುರೊ ವಲಯದಿಂದ ಗ್ರೀಸ್ ಹೊರಹೋಗುವ ಆತಂಕ ಹೆಚ್ಚಾಗಿದೆ. ಗ್ರೀಸ್ ದೇಶದ ಜನತೆಗೆ ಅವರು ಹೊಂದಿಕೊಂಡಿರುವಂತಹ ಅವರದೇ ಜೀವನಶೈಲಿ ಇದೆ. ಆದರೆ ಈಗ ಸೊರಗುತ್ತಿರುವ ವರಮಾನದಿಂದಾಗಿ ಈ ಜೀವನಶೈಲಿಯನ್ನು ತಾಳಿಕೊಳ್ಳಲಾಗದ ಸ್ಥಿತಿ ಆ ರಾಷ್ಟ್ರದಲ್ಲಿ ಉಂಟಾಗಿದೆ. ಹೀಗಿದ್ದೂ, ಮತ್ತಷ್ಟು ಸಾಲ ನೀಡಲು ಐರೋಪ್ಯ ಒಕ್ಕೂಟ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹಾಗೂ ಐಎಂಎಫ್ ವಿಧಿಸುತ್ತಿರುವ ಮಿತವ್ಯಯದ ಷರತ್ತುಗಳನ್ನು ಒಪ್ಪಿಕೊಳ್ಳಲು ಗ್ರೀಸ್ ಜನ ವಿರೋಧಿಸುತ್ತಿದ್ದಾರೆ. ತಮ್ಮ ಮೇಲೆ ಮಿತವ್ಯಯ ಕ್ರಮಗಳನ್ನು ಹೇರುವುದಿಲ್ಲ ಎಂಬಂತಹ ಭರವಸೆಯ ಮೇಲೆಯೇ ಈ ವರ್ಷ ಜನವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಎಡ ಪಂಥದ ಸಿದ್ಧಾಂತವಿರುವ ಪಕ್ಷದ ಸರ್ಕಾರವನ್ನು ಗ್ರೀಕರು ಆಯ್ಕೆ ಮಾಡಿದ್ದರು. ಈಗ ದಿವಾಳಿ ಘೋಷಿಸಬೇಕೊ ಅಥವಾ ಮಿತವ್ಯಯದ ಕುರಿತು ಐರೋಪ್ಯ ಒಕ್ಕೂಟದ ದೇಶಗಳು ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಂಡು ಹೊಸ ಸಾಲ ಪಡೆದು ಆರ್ಥಿಕ ಪುನರ್ ರಚನೆಗೆ ಮುಂದಾಗಬೇಕೊ ಎಂಬ ವಿಚಾರದ ಬಗ್ಗೆ ಗ್ರೀಕರು ನಿರ್ಧರಿಸಬೇಕಾಗಿದೆ. ಇದಕ್ಕಾಗಿ ಜುಲೈ 5ರಂದು ಜನಮತಗಣನೆಗೆ ಗ್ರೀಸ್ ಸರ್ಕಾರ ಮುಂದಾಗಿದೆ. ಗ್ರೀಸ್ ದೇಶದ ಸಾಲದ ಪ್ರಮಾಣ ಸದ್ಯಕ್ಕೆ ಆ ರಾಷ್ಟ್ರದ ಒಟ್ಟು ರಾಷ್ಟ್ರೀಯ ವರಮಾನಕ್ಕಿಂತ ದುಪ್ಪಟ್ಟು ಇದೆ. ವೆಚ್ಚದ ಮೇಲೆ ಕಡಿತ ಮಾಡಿದಲ್ಲಿ ಅದು ಬೆಳವಣಿಗೆಗೆ ಮಾರಕ. ಸಾಲ ಮರುಪಾವತಿಸುವುದಕ್ಕಾಗಿ ಬೆಳವಣಿಗೆ ಕುಂಠಿತಗೊಳ್ಳಬಾರದು ಎಂಬುದು ತಜ್ಞರ ಅಭಿಪ್ರಾಯ. ಒಂದು ವೇಳೆ ಯುರೊವಲಯದಿಂದ ಹೊರಹೋಗಲು ಗ್ರೀಸ್ ನಿರ್ಧರಿಸಿದಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಯುರೋಪಿಯನ್ ಒಕ್ಕೂಟ ಗಮನ ಕೇಂದ್ರೀಕರಿಸಿದೆ. ಯುರೋಪಿಯನ್ ಒಕ್ಕೂಟದೊಳಗೇ ಗ್ರೀಸ್ ಉಳಿಯುವಂತಾಗುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲೂ ಚಿಂತನೆಗಳಾಗುತ್ತಿವೆ. ಗ್ರೀಸ್ ದೇಶದ ಈ ಬಿಕ್ಕಟ್ಟು ಜಾಗತಿಕ ಷೇರುಪೇಟೆ ಸೇರಿದಂತೆ ಆರ್ಥಿಕ ವಹಿವಾಟುಗಳ ಮೇಲೆಯೂ ಪರಿಣಾಮ ಬೀರುವಂತಹದ್ದು. ಭಾರತದಲ್ಲೂ ಸೋಮವಾರ ಕುಸಿತ ದಾಖಲಿಸಿದ್ದ ಷೇರುಪೇಟೆ ಮಂಗಳವಾರ ಮತ್ತು ಬುಧವಾರ ಚೇತರಿಸಿಕೊಂಡಿದೆ. ಗ್ರೀಸ್ ಜೊತೆ ಭಾರತದ ಆರ್ಥಿಕತೆ ನೇರ ಸಂಬಂಧ ಹೊಂದಿಲ್ಲ. ಆದರೆ ಐರೋಪ್ಯ ಒಕ್ಕೂಟದ ಮೇಲೆ ಆಗುವ ಪರಿಣಾಮಗಳ ಕರಿಛಾಯೆ ಭಾರತವನ್ನೂ ಆವರಿಸಬಹುದು ಎಂಬ ಆತಂಕ ಇದೆ. ವಿಶೇಷವಾಗಿ ಸಾಫ್ಟ್‌ವೇರ್ ಹಾಗೂ ಎಂಜಿನಿಯರಿಂಗ್ ರಫ್ತು ವಹಿವಾಟಿಗೆ ಹೊಡೆತ ಬೀಳಬಹುದು. ಇದಕ್ಕೆ ಸನ್ನದ್ಧವಾಗಿರಬೇಕಾದುದು ಅಗತ್ಯ. ಆದರೆ ಸದ್ಯದ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ ದೃಢವಾಗಿದೆ. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಆದಂತಹ ತೀವ್ರ ಪರಿಣಾಮಗಳಾಗುವುದಿಲ್ಲ ಎಂದೂ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ರಾಷ್ಟ್ರದಲ್ಲಿ ಚಾಲ್ತಿ ಖಾತೆ ಕೊರತೆ ಆತಂಕಕಾರಿಯಾಗಿಲ್ಲ. ಜೊತೆಗೆ ವಿದೇಶಿ ವಿನಿಮಯ ಮೀಸಲು ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಯುರೋಪ್‌ಗೆ ಭಾರತದ ರಫ್ತು ವಹಿವಾಟು ಕಡಿಮೆಯಾಗಿದೆ. ಒಟ್ಟು ರಫ್ತು ವಹಿವಾಟಿನಲ್ಲಿ ಯುರೋಪ್‌ಗೆ ಭಾರತದ ರಫ್ತು ಪ್ರಮಾಣ ಕೇವಲ ಶೇ 17. ಆಮದು ಪ್ರಮಾಣ ಶೇ 11 ರಷ್ಟಿದೆ. ಈ ಎಲ್ಲಾ ಸಮಾಧಾನಕರ ಅಂಶಗಳ ನಡುವೆಯೂ ಯಾವುದೇ ಬಗೆಯ ಬಿಕ್ಕಟ್ಟು ಎದುರಿಸಲು ಸನ್ನದ್ಧವಾಗಿರಬೇಕಾದುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.