ಅತ್ಯಾಚಾರ: ನ್ಯಾಯಾಂಗ ಸೂಕ್ಷ್ಮತೆ ಪ್ರದರ್ಶಿಸಲಿ ಅತ್ಯಾಚಾರ ಯತ್ನ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಯಾವುದೇ ರೀತಿಯ ರಾಜಿ ಹಾಗೂ ಮಧ್ಯಸ್ಥಿಕೆ ವಹಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ. ಅದರಲ್ಲೂ ವಿವಾಹದ ಪ್ರಸ್ತಾಪವನ್ನು ಅತ್ಯಾಚಾರಿ ಮುಂದಿಡುವಂತಹದ್ದು ಚಾಕ ಚಕ್ಯತೆಯಿಂದ ಪರೋಕ್ಷ ಒತ್ತಡವನ್ನು ಸಂತ್ರಸ್ತೆಯ ಮೇಲೆ ಹೇರುವಂತಹದ್ದಾಗಿರುತ್ತದೆ. ಜೊತೆಗೆ ಬಲೆಗೆ ಬೀಳಿಸುವಂತಹದ್ದು. ಇಂತಹ ಪ್ರಕರಣಗಳಲ್ಲಿ ಕೋರ್ಟ್‌ಗಳು ಮೃದು ಧೋರಣೆ ತಾಳುವಂತಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿ ಯಾದುದು. ಇಂತಹ ತೀರ್ಪುಗಳು ಮಹಿಳೆಯ ಘನತೆಯನ್ನು ಗಣನೆಗೇ ತೆಗೆದುಕೊಳ್ಳದೆ ಅಸೂಕ್ಷ್ಮತೆ ಪ್ರದರ್ಶಿಸುವಂತಹವು. ಮಧ್ಯಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಶಿಕ್ಷೆ ವಿಧಿಸಿತ್ತು. ಆದರೆ ಆರೋಪಿ ಜೊತೆ ಬಾಲಕಿಯ ತಂದೆ ತಾಯಿ ರಾಜಿಸಂಧಾನ ಮಾಡಿಕೊಂಡಿದ್ದಾರೆಂದು ಅತ್ಯಾಚಾರ ಆರೋಪವನ್ನು ಲೈಂಗಿಕ ದುರ್ವರ್ತನೆಯಾಗಿ ಬದಲಿಸಿ ಶಿಕ್ಷೆ ಪ್ರಮಾಣವನ್ನು ಮಧ್ಯಪ್ರದೇಶ ಹೈಕೋರ್ಟ್ ಕಡಿಮೆ ಮಾಡಿರುವ ವಿಚಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದು ಕೊಂಡಿರುವುದು ಸರಿಯಾಗಿದೆ. ಅತ್ಯಾಚಾರ ಎಂಬುದು ಸಮಾಜದ ವಿರುದ್ಧದ ರಾಜಿಸಂಧಾನಕ್ಕೆ ಅವಕಾಶವಿಲ್ಲದ ಅಪರಾಧ. ಈ ವಿಚಾರದಲ್ಲಿ ಇತ್ಯರ್ಥ ಮಾಡಿಕೊಳ್ಳಲು ಬಾಲಕಿಯ ತಂದೆತಾಯಿಗೆ ಹಕ್ಕಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟನುಡಿಗಳಲ್ಲಿ ಹೇಳಿದೆ. ಇತ್ತೀಚೆಗೆ ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವ ಬಗ್ಗೆ ರಾಜೀಸಂಧಾನ ಮಾಡಿಕೊಳ್ಳುವುದಕ್ಕಾಗಿ ಶಿಕ್ಷೆಗೊಳಗಾಗಿದ್ದ ಅತ್ಯಾಚಾರಿಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದ ವಿಚಾರವಂತೂ ವ್ಯಾಪಕ ಟೀಕೆಗೆ ಒಳಗಾಗಿತ್ತು. ‘ಎದ್ದು ಕಾಣಿಸುವ ತಪ್ಪು’ ಈ ನಿರ್ಧಾರದಲ್ಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಯಾವುದೇ ಬಗೆಯಲ್ಲಿ ಮಧ್ಯಸ್ಥಿಕೆ ವಹಿಸು ವುದು ಅಕ್ರಮ ಎಂದು ಸ್ಪಷ್ಟಪಡಿಸಿದೆ. ಆಘಾತದ ಸಂಗತಿ ಎಂದರೆ 15 ವರ್ಷದವಳಾಗಿದ್ದಾಗ ಅತ್ಯಾ ಚಾರಕ್ಕೆ ಒಳಗಾಗಿ ಹೆಣ್ಣುಮಗುವಿನ ತಾಯಿಯೂ ಆಗಿ ಈಗ 21 ವರ್ಷದವಳಾಗಿರುವ ಅತ್ಯಾಚಾರ ಸಂತ್ರಸ್ತೆಯ ಒಪ್ಪಿಗೆಯನ್ನೇನೂ ಕೇಳದೆ ಈ ಆಕ್ಷೇ ಪಾರ್ಹ ನಿರ್ದೇಶನವನ್ನು ಮದ್ರಾಸ್ ಹೈಕೋರ್ಟ್ ನೀಡಿತ್ತು. ಅತ್ಯಾಚಾರಿಯ ವಿವಾಹ ಪ್ರಸ್ತಾಪವನ್ನು ಕಟ್ಟುನಿಟ್ಟಾಗಿ ನಿರಾಕರಿಸಿರುವ ಈ ಸಂತ್ರಸ್ತೆ, ತನ್ನ ತಂದೆ ಅತ್ಯಾಚಾರಿ ಎಂಬುದನ್ನು ಮಗಳಿಗೆ ತಿಳಿ ಹೇಳುವುದಾಗಿಯೂ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ಇಂತಹ ತೀರ್ಪುಗಳ ಹಿಂದೆ ಕೆಲಸ ಮಾಡುವ ಪಿತೃಪ್ರಧಾನ ಸಂಸ್ಕೃತಿಯ ಪೂರ್ವಗ್ರಹಗಳು, ಸಂವಿಧಾನಬದ್ಧ ನ್ಯಾಯದಾನಕ್ಕೆ ತೊಡಕಾಗುವಂತಹವು ಎಂಬುದನ್ನು ನ್ಯಾಯಾಂಗ ಅರಿಯಬೇಕು. ಅತ್ಯಾಚಾರಿಗೆ ಈ ಬಗೆಯ ಉದಾರ ಅವಕಾಶಗಳನ್ನು ನೀಡುವುದು ವಿವಾಹದ ನೆಪದಲ್ಲಿ ಅತ್ಯಾಚಾರ ಅಪರಾಧವನ್ನು ಮಾಮೂಲುಗೊಳಿಸುವಂತಹ ಪ್ರವೃತ್ತಿಗೆ ಅವಕಾಶ ಮಾಡಿಕೊಡುತ್ತದೆ ಎಂಬುದು ನೆನಪಿರಬೇಕು. ಹಾಗೆಯೇ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳು ವಂತೆ ಸಂತ್ರಸ್ತೆಯ ಮೇಲೆ ಹಿರಿಯರು, ಜನಸಮು ದಾಯ ಅಥವಾ ಪೊಲೀಸರೂ ಒತ್ತಡ ಹೇರು ವಂತಹದ್ದು ಮಾಮೂಲಾಗಿಬಿಡಬಹುದು. ಹಣ ಅಥವಾ ಆಸ್ತಿ ನೀಡಿ ಸಂಧಾನ ಮಾಡಿಕೊಂಡು ಶಿಕ್ಷೆ ತಪ್ಪಿಸಿಕೊಳ್ಳಲು ಅತ್ಯಾಚಾರಿಗಳಿಗೆ ಸ್ವತಃ ನ್ಯಾಯಾಲಯಗಳೇ ಮಾರ್ಗ ಹಾಕಿಕೊಟ್ಟಂತೆ ಆಗುತ್ತದೆ. ಅತ್ಯಾಚಾರ ಪ್ರಕರಣವನ್ನು ಮದುವೆ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತಾದಲ್ಲಿ ಜೀವನವಿಡೀ ಹಿಂಸಾತ್ಮಕ, ಅಭದ್ರತೆಯ ವೈವಾಹಿಕ ಬದುಕಿನಲ್ಲಿ ಸಂತ್ರಸ್ತೆ ನರಳು ವಂತಾಗಬಹುದು ಎಂಬುದನ್ನು ನ್ಯಾಯಾಲಯಗಳು ಅರ್ಥ ಮಾಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವ ವಿಚಾರದ ಬಗ್ಗೆ ಅನೇಕ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಭಾರತೀಯ ದಂಡ ಸಂಹಿತೆ ಹಾಗೂ ನ್ಯಾಯಾಂಗ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಅನುಸರಿಸದೆ ಅಗೌರವ ತೋರಿಸುವುದು ಸರಿಯಲ್ಲ. ಆದರೆ ಈ ಹಿಂದೆ, ಅತ್ಯಾಚಾರಿಯನ್ನು ವಿವಾಹವಾಗಲು ಸಂತ್ರಸ್ತೆ ಮುಂದಾದಲ್ಲಿ ಅದಕ್ಕೆ ಅವಕಾಶವಿರಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ಅವರೂ ಹೇಳಿದ್ದರು. ಈ ಬಗೆಯ ದೋಷಪೂರ್ಣ ತೀರ್ಮಾನಗಳಿಗೆ ನ್ಯಾಯಾಧೀಶರು ಬರುವುದನ್ನು ತಪ್ಪಿಸಲು ಬಲವಾದ ಕಾನೂನಿನ ಅಗತ್ಯವಿದೆ. ನ್ಯಾಯಾಧೀಶರ ವಿರುದ್ಧವೂ ದೂರು ನೀಡಲು ಅವಕಾಶ ಇರುವ 2012ರ ನ್ಯಾಯಾಂಗ ಮಾದರಿ ಹಾಗೂ ಉತ್ತರದಾಯಿ ಮಸೂದೆ ನನೆಗುದಿಗೆ ಸಿಲುಕಿರುವುದು ದುರದೃಷ್ಟಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.