ಡಿಜಿಟಲ್‌ ಸಬಲೀಕರಣ ಪ್ರಜಾಸತ್ತೆ ಗಟ್ಟಿಗೊಳಿಸಲಿ ಕಳೆದ ವರ್ಷದ ಮೇ ತಿಂಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿ ಕೊಂಡಾಗಿನಿಂದ ಅನೇಕ ರೀತಿಯ ದೊಡ್ಡ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸ್ವಚ್ಛ ಭಾರತ, ಜನ್ ಧನ್ ಯೋಜನೆ, ಸ್ಮಾರ್ಟ್ ಸಿಟೀಸ್, ಮೇಕ್ ಇನ್ ಇಂಡಿಯಾ ಇತ್ಯಾದಿ ಅಭಿಯಾನಗಳನ್ನು ಭಾರಿ ಪ್ರಚಾರದೊಂದಿಗೆ ಆರಂಭಿಸಲಾಗಿದೆ. ಈ ಸರಣಿಯಲ್ಲಿ ಹೊಸ ಸೇರ್ಪಡೆ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆ. ಇದು ಒಂದು ಹೊಸ ದೃಷ್ಟಿಕೋನವನ್ನೂ ಪ್ರತಿಪಾದಿಸುತ್ತದೆ. ಇ- ಆಡಳಿತ, ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆ, ಸೈಬರ್ ಭದ್ರತೆ ಹಾಗೂ ಹಣಕಾಸು ಒಳಗೊಳ್ಳುವಿಕೆಯನ್ನು ಈ ಯೋಜನೆ ಒಳಗೊಳ್ಳಲಿದೆ. ಮೇಕ್ ಇನ್ ಇಂಡಿಯಾ ಭಾರಿ ಪ್ರಚಾರದೊಂದಿಗೆ ಆರಂಭವಾಯಿತು. ಆದರೆ ಆ ಅಬ್ಬರದ ಪ್ರಚಾರಕ್ಕೆ ಅನುಗುಣವಾಗಿ ವಾಸ್ತವದಲ್ಲಿ ಅಷ್ಟೇನೂ ಹಣ ಹೂಡಿಕೆಯಾಗಲಿಲ್ಲ. ಮೋದಿ ನೇತೃತ್ವದ ಸರ್ಕಾರದ ಅನೇಕ ಯೋಜನೆಗಳಿಗೆ ಖಾಸಗಿ ವಲಯದಿಂದ ಉದಾಸೀನ ಧೋರಣೆ ವ್ಯಕ್ತವಾಗಿದೆ. ಆದರೆ ಡಿಜಿಟಲ್ ಇಂಡಿಯಾ ಯೋಜನೆಗೆ ಉನ್ನತ ಕೈಗಾರಿಕೋದ್ಯಮಿಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂಬುದು ಆಸಕ್ತಿಯ ಸಂಗತಿ. ಈ ವಲಯದಲ್ಲಿ ಅಪಾರ ಪ್ರಮಾಣದ ಹೂಡಿಕೆಗೆ ಭಾರತದ ಕೈಗಾರಿಕೋದ್ಯಮಿಗಳು ಹಸಿರು ನಿಶಾನೆ ತೋರಿದ್ದಾರೆ. ಆದರೆ ಈ ಯೋಜನೆ, ತಾವು ಈ ಹಿಂದೆ ಆರಂಭಿಸಿದ್ದ ನ್ಯಾಷನಲ್ ಇ– ಗವರ್ನೆನ್ಸ್ ಯೋಜನೆಯ ಹೊಸ ಅವತಾರ ಅಷ್ಟೇ ಎಂದು ಕಾಂಗ್ರೆಸ್ ಟೀಕಿಸಿದೆ. ಇದೇನೇ ಇರಲಿ ‘ಡಿಜಿಟಲ್ ಇಂಡಿಯಾ’ ನುಡಿಗಟ್ಟು ಭವಿಷ್ಯದ ಭಾರತದ ಕನಸಿಗೆ ರೆಕ್ಕೆ ಕಟ್ಟುವಂತಹದ್ದು. ಸಂಪರ್ಕ ಹಾಗೂ ತಂತ್ರಜ್ಞಾನಗಳು ಒದಗಿಸಿಕೊಡಬಹುದಾದ ಅವಕಾಶಗಳಿಂದ 21ನೇ ಶತಮಾನದ ಡಿಜಿಟಲ್ ಭಾರತವನ್ನು ಕಟ್ಟಲು ಇದು ಮುನ್ನುಡಿ ಆಗಬಹುದು. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿರು ವಂತಹ ರಾಷ್ಟ್ರ ಭಾರತ. ಆದರೆ ಈಗಲೂ ಅನೇಕ ಮಂದಿಗೆ ಡಿಜಿಟಲ್ ಸಂಪರ್ಕ ಕನಸಾಗಿದೆ ಎಂಬುದೂ ವಾಸ್ತವ. ನಗರ ಪ್ರದೇಶಗಳಿಂದ ದೂರ ಇರುವ ಹಳ್ಳಿಗಳಲ್ಲಿ ಡಿಜಿಟಲ್ ಸಂಪರ್ಕ ಕಷ್ಟ. ಕಳೆದ 20 ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದರೂ ಡಿಜಿಟಲ್ ಅಂತರ ಇದ್ದೇ ಇದೆ. ಈಗ ಪ್ರಧಾನಿ ಅವರ ‘ಡಿಜಿಟಲ್ ಇಂಡಿಯಾ’ ಉಪಕ್ರಮ ಈ ನಿಟ್ಟಿನಲ್ಲಿ ಮುಖ್ಯ. 2019ರೊಳಗೆ ಎರಡೂವರೆ ಲಕ್ಷ ಗ್ರಾಮಗಳ ಜೊತೆ ಸಂಪರ್ಕ ಸಾಧಿಸುವ ಆಶಯ ಹೊಂದಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವುದು ಒಳ್ಳೆಯದೇ. ಈ ಎಲ್ಲಾ ಪ್ರಯತ್ನಗಳು ಅಗತ್ಯವಾದವು. ಏಕೆಂದರೆ 103 ಕೋಟಿ ಭಾರತೀಯರ ಪೈಕಿ 10 ಕೋಟಿ ಜನರು ಮಾತ್ರ ಬ್ರಾಡ್ ಬ್ಯಾಂಡ್ ಚಂದಾದಾರರು. ಹಾಗೆಯೇ ಅಂತರ್ಜಾಲ ವೇಗ ಕೂಡ ಹೆಚ್ಚಿನದಾಗಿಲ್ಲ. ಸರ್ಕಾರವೂ ಕಳೆದ ಅನೇಕ ವರ್ಷಗಳಲ್ಲಿ ‘ಇ– ಆಡಳಿತ’ದಲ್ಲಿ ಪ್ರಗತಿ ಸಾಧಿಸಿದೆ. ಆದರೆ ಈವರೆಗೆ ಸಾಧಿಸಿರುವುದು ಕಡಿಮೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಭ್ರಷ್ಟಾಚಾರ ಮತ್ತು ವಿಳಂಬ ನೀತಿ ನಿಯಂತ್ರಣಕ್ಕೆ ಡಿಜಿಟಲೀಕರಣ ಮದ್ದು ಎಂಬುದು ತೀರಾ ಆದರ್ಶದ ಮಾತಾಗಬಹುದು. ಡಿಜಿಟಲ್ ಇಂಡಿಯಾ ವಾಸ್ತವವಾದಾಗ ಅನೇಕ ಮುಖ್ಯ ಹಾಗೂ ಮೂಲ ಸಮಸ್ಯೆಗಳೇನೂ ಪರಿಹಾರವಾಗುವುದಿಲ್ಲ ಎಂಬ ಗ್ರಹಿಕೆಯೂ ಇರುವುದು ಅಗತ್ಯ. ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳೂ ಇಲ್ಲದ ಗ್ರಾಮಗಳಲ್ಲಿ ಸೈಬರ್ ಸಂಪರ್ಕ ಮಾತ್ರ ಸಾಧಿಸುವುದರಿಂದ ಹೆಚ್ಚಿನ ಪ್ರಯೋಜನ ಆಗದು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಬರೀ ಬ್ರಾಡ್ ಬ್ಯಾಂಡ್ ಸಂಪರ್ಕ ಮಾತ್ರದಿಂದ ಸಾಧ್ಯವಾಗುವುದಿಲ್ಲ ಎಂಬ ವಾಸ್ತವವನ್ನು ಅರಿಯಬೇಕು. ಬ್ರಾಡ್ ಬ್ಯಾಂಡ್ ಸಂಪರ್ಕ ಎಂಬುದು ಅಭಿವೃದ್ಧಿ ಸಾಧನೆಯಲ್ಲಿ ಮಾರ್ಗವಾಗಬೇಕೇ ಹೊರತು ಅದೇ ಗುರಿಯಾಗುವುದು ಸಾಧ್ಯವಿಲ್ಲ. ಡಿಜಿಟಲ್ ಇಂಡಿಯಾಗೆ ಅಕ್ಷರಸ್ಥ ಸಮಾಜದ ಅಗತ್ಯ ಇದೆ. ಆದರೆ ಗ್ರಾಮೀಣ ಭಾರತದಲ್ಲಿ ಸಾಕ್ಷರತೆ ಕ್ಷೇತ್ರದಲ್ಲಿ ನಾವಿನ್ನೂ ಸಾಧಿಸಬೇಕಾದದು ಬಹಳಷ್ಟಿದೆ ಎಂಬುದನ್ನು ಇತ್ತೀಚಿನ 2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ಅಂಕಿಅಂಶಗಳು ಬಿಚ್ಚಿಟ್ಟಿವೆ. ಸ್ಥಳೀಯ ಭಾಷೆಗಳಲ್ಲಿ ಮಾಹಿತಿಗಳು ಲಭ್ಯವಾಗುವುದೂ ಮುಖ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಲಿ. ಡಿಜಿಟಲ್ ಸಬಲೀಕರಣ ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.