ಲೋಕಾಯುಕ್ತರು ತಕ್ಷಣ ರಾಜೀನಾಮೆ ನೀಡಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿವರಗಳು ಬಹಿರಂಗಗೊಳ್ಳುವುದು ಮುಂದುವರಿದಿದೆ. ಈ ಭ್ರಷ್ಟಾಚಾರ ಆರೋಪ ಲೋಕಾಯುಕ್ತರ ಮನೆಬಾಗಿಲಿಗೇ ಬಂದು ಎಷ್ಟೋ ದಿನಗಳಾದವು. ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕರಣಗಳ ಭ್ರಷ್ಟಾಚಾರದ ವಿವರಗಳು ಎಳೆ ಎಳೆಯಾಗಿ ವರದಿಯಾಗುತ್ತಿರುವುದು ಸಾರ್ವಜನಿಕರಲ್ಲಿನ ಸಂಶಯವನ್ನು ಹೆಚ್ಚಿಸುತ್ತಿದೆ. ಲೋಕಾಯುಕ್ತ ದಾಳಿ ಬೆದರಿಕೆ ಒಡ್ಡಿ ಸರ್ಕಾರದ ಅಧಿಕಾರಿಗಳಿಂದ ಹಣ ಕೀಳುವ ಕಾರ್ಯಾಚರಣೆಯಲ್ಲಿ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಸೇರಿದಂತೆ ಲೋಕಾಯುಕ್ತ ಕಚೇರಿಯೊಳಗಿನ ಅನೇಕ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ. ಅದೂ ಲೋಕಾಯುಕ್ತ ಕಚೇರಿ ಹಾಗೂ ಲೋಕಾಯುಕ್ತರ ಮನೆಗೇ ಕರೆಸಿ ಇಂತಹ ಬೆದರಿಕೆಗಳನ್ನು ಒಡ್ಡಲಾಗಿದೆ ಎಂಬ ಆರೋಪ ಗಂಭೀರವಾದದ್ದು. ಅಶ್ವಿನ್ ರಾವ್ ವಿರುದ್ಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಫ್.ಐ.ಆರ್. ಕೂಡ ದಾಖಲಿಸಿದ್ದಾರೆ.ಒಬ್ಬರು ಅಧಿಕಾರಿ ನೀಡಿರುವ ದೂರಿನ ಸುತ್ತ ತನಿಖೆ ನಡೆಯುತ್ತಿದ್ದರೂ ಹಣ ನೀಡುವಂತೆ ಬೆದರಿಕೆ ಒಡ್ಡಿರುವ ಬಗ್ಗೆ ಅನೇಕ ಪ್ರಕರಣಗಳು ವರದಿಯಾಗುತ್ತಿರುವುದು ನಿಂತಿಲ್ಲ ಎಂಬುದು ಈ ಭ್ರಷ್ಟ ಕಾರ್ಯಾಚರಣೆಯ ಸಂಘಟಿತ ಸ್ವರೂಪವನ್ನು ಎತ್ತಿ ತೋರುತ್ತದೆ. ಆದರೆ ಈ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧದ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಲೋಕಾಯುಕ್ತರು ನಡೆಸಿದ್ದಾರೆ ಎಂಬಂಥ ಸಂಶಯ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಹೀಗಾಗಿ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರ ರಾಜೀನಾಮೆಗೆ ಒತ್ತಾಯಗಳು ಹೆಚ್ಚುತ್ತಿವೆ. ಲೋಕಾಯುಕ್ತ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಹಾಗೂ ನಿವೃತ್ತ ಲೋಕಾ ಯುಕ್ತ ಎನ್. ಸಂತೋಷ ಹೆಗ್ಡೆ ಈ ವಿಚಾರದಲ್ಲಿ ಬೀದಿಗಿಳಿದಿದ್ದಾರೆ. ಲೋಕಾಯುಕ್ತರು ರಾಜೀನಾಮೆ ನೀಡಬೇಕೆಂದು ರಾಜ್ಯ ವಕೀಲರ ಸಂಘವೂ ನಿರ್ಣಯ ಅಂಗೀಕರಿಸಿದೆ. ಅಷ್ಟೇ ಅಲ್ಲ, ಲೋಕಾ ಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ, ರಾಜ್ಯ ವಿಧಾನ ಮಂಡಲದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲೋಕಾಯುಕ್ತರ ಪದಚ್ಯುತಿಗೆ ಒತ್ತಾಯಿಸಲಾಗಿದೆ. ಸದನದ ಪ್ರಜ್ಞೆಯನ್ನು ಅರಿತು ಲೋಕಾಯುಕ್ತರು ನಿರ್ಧಾರ ಕೈಗೊಳ್ಳಬೇಕು ಎಂಬಂಥ ಮಾತುಗಳು ವಿಧಾನಸಭೆಯಲ್ಲಿ ಕೇಳಿ ಬಂದಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ, ಲೋಕಾಯುಕ್ತ ಸಂಸ್ಥೆ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತಂತೆ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಗೆ ನಿಷ್ಪಕ್ಷಪಾತ ವಾತಾವರಣ ಸೃಷ್ಟಿಸಲು ಅಗತ್ಯವಾದ ನಿರ್ಣಯವನ್ನು ಲೋಕಾಯುಕ್ತರು ಪ್ರಕಟಿಸಿಲ್ಲ. ಕರ್ನಾಟಕ ಲೋಕಾಯುಕ್ತ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ಹೆಸರು ಗಳಿಸಿದೆ. ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಟ್ಟ ಹಾಕಲು ಹುಟ್ಟಿಕೊಂಡ ಈ ಸಂಸ್ಥೆ, ಕಾನೂನಿನ ಭೀತಿಯನ್ನು ಒಂದಿಷ್ಟಾದರೂ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಬೇಕಾದ ಈ ಸಂಸ್ಥೆಯೇ ಭ್ರಷ್ಟಾಚಾರದ ನೆಲೆಯಾಗುತ್ತಿರುವುದು ವಿಪರ್ಯಾಸ. ಇದು ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆ, ಗೌರವ, ಘನತೆಯನ್ನು ಕೆಳಗಿಳಿಸಿದಂತಾಗಿದೆ. ಈ ವಿಚಾರದಲ್ಲಿ ಲೋಕಾಯುಕ್ತ ಭಾಸ್ಕರ ರಾವ್ ಅವರು ಜವಾಬ್ದಾರಿಯಿಂದ ನುಣಚಿ ಕೊಳ್ಳಲಾಗದು. ಇದು ನೈತಿಕ ಪ್ರಶ್ನೆಯೂ ಹೌದು. ಲೋಕಾಯುಕ್ತ ವಿಶ್ವಾಸಾರ್ಹತೆಗೆ ಕುಂದು ತರುತ್ತಿರುವ ವಿದ್ಯಮಾನಗಳು ಗಂಭೀರವಾದವು ಎಂಬುದನ್ನು ಅವರು ಪರಿಗಣಿಸಬೇಕು. ಪ್ರಾಮಾಣಿಕತೆ, ನಿಷ್ಪಕ್ಷಪಾತತೆ ಎತ್ತಿ ಹಿಡಿಯಬೇಕಾದ ಸಂಸ್ಥೆಯಲ್ಲಿ ಕಾನೂನಿನ ಕಟ್ಟಳೆಗಳಿಗಿಂತ ನೈತಿಕ ಪ್ರಶ್ನೆಗಳೂ ಪ್ರಾಧಾನ್ಯ ಪಡೆಯಬೇಕು.ಏಕೆಂದರೆ ಲೋಕಾಯುಕ್ತ ಎಂಬ ವ್ಯಕ್ತಿಗಿಂತ ಲೋಕಾಯುಕ್ತ ಸಂಸ್ಥೆ ಮುಖ್ಯ. ಸಂಸ್ಥೆಯ ಪ್ರತಿಷ್ಠೆ, ಗೌರವವನ್ನು ಕಾಪಾಡುವುದು ಮುಖ್ಯ ಎಂಬುದನ್ನು ತಿಳಿದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ರಾಜೀನಾಮೆ ನೀಡಬೇಕು. ಇದು ಈ ಸಂದರ್ಭದ ಅನಿವಾರ್ಯ.ಇದೇ ಸಂದರ್ಭದಲ್ಲಿ ಲೋಕಾಯುಕ್ತ ಕಾನೂನಿಗೆ ತಿದ್ದುಪಡಿ ತರುವಂತಹ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಲೋಕಾಯುಕ್ತ ಸಂಸ್ಥೆಯಲ್ಲಿನ ದುರದೃಷ್ಟಕರವಾದ ಈ ಬೆಳವಣಿಗೆಗಳಿಂದಾಗಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಇವು ಅನುವು ಮಾಡಿಕೊಡಬಾರದು ಎಂಬ ಎಚ್ಚರ ಇರು ವುದು ಅಗತ್ಯ. ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ಈ ಬೆಳವಣಿಗೆಗಳು ನೆಪವಾಗಬಾರದು. ಭ್ರಷ್ಟರ ವಿರುದ್ಧ ಲೋಕಾಯುಕ್ತ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗಿ ರೂಪುಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.