ಪರಮಾಣು ಒಪ್ಪಂದಕ್ಕೆ ಇರಾನ್‌ ಸಹಿಯಿಂದ ವಿಶ್ವಶಾಂತಿಗೆ ಬಲ ಸುಮಾರು ಒಂದು ದಶಕದಿಂದ ಅನುಭವಿಸುತ್ತಿದ್ದ ಆರ್ಥಿಕ, ವಾಣಿಜ್ಯ ದಿಗ್ಬಂಧನದಿಂದ ಇರಾನ್ ಹೊರಬರುವ ಕಾಲ ಸನಿಹದಲ್ಲಿದೆ. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದಿಂದ ಆತಂಕಗೊಂಡಿದ್ದ ವಿಶ್ವ ನೆಮ್ಮದಿಯ ನಿಟ್ಟುಸಿರು ಬಿಡಲಿದೆ. ವಿಯೆನ್ನಾದಲ್ಲಿ ಅಮೆರಿಕ ನೇತೃತ್ವ ದಲ್ಲಿ ಆರು ಪ್ರಮುಖ ದೇಶಗಳು ಮತ್ತು ಇರಾನ್ ನಡುವೆ ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಸಹಿ ಬಿದ್ದಿರುವುದರ ಪರಿಣಾಮ ಇದು. ಎರಡೂ ಕಡೆಯವರು ವಿವೇಕ, ಪ್ರಬುದ್ಧತೆ ಪ್ರದರ್ಶಿಸಿರುವುದು ಮುಖ್ಯ. ಒಪ್ಪಂದದ ಫಲಶ್ರುತಿ ಎಂದರೆ ಇರಾನ್ ಅಣ್ವಸ್ತ್ರ ಸಜ್ಜಿತ ದೇಶ ವಾಗುವುದಿಲ್ಲ. ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ದಿಗ್ಬಂಧನದಿಂದ ನಲುಗಿದ್ದ ಇರಾನ್‌ಗೆ ಪ್ರಗತಿ ಸಾಧಿಸಲು, ವಿಶ್ವದ ಇತರ ದೇಶಗಳ ಜತೆ ವ್ಯಾಪಾರ, ವ್ಯವಹಾರ ನಡೆಸಲು ದಾರಿ ತೆರೆದುಕೊಳ್ಳಲಿದೆ. ಅದರ ಅಣುಸ್ಥಾವರಗಳು ಮತ್ತು ಸೇನಾ ನೆಲೆಗಳ ಕೆಲವೊಂದು ಪ್ರದೇಶಗಳ ತಪಾಸಣೆ ನಡೆಸಲು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಗೆ ಅವಕಾಶ ಸಿಗಲಿದೆ. ಉತ್ತರ ಕೊರಿಯಾ, ಪಾಕಿಸ್ತಾನ ಮತ್ತಿತರ ದೇಶಗಳು ಗುಟ್ಟಾಗಿ ಪೂರೈಸಿದ ತಂತ್ರಜ್ಞಾನದ ನೆರವಿನಿಂದ ಅಣ್ವಸ್ತ್ರ ಅಭಿವೃದ್ಧಿಪಡಿಸಲು ಮುಂದಾಗಿ ಇರಾನ್ ವಿಶ್ವದ ಪ್ರಭಾವಿ ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ತನ್ನದು ಶಾಂತಿಯುತ ಉದ್ದೇಶದ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ಎಂದು ಇರಾನ್ ಹೇಳುತ್ತಲೇ ಬಂದಿದ್ದರೂ ನಂಬುವ ಸ್ಥಿತಿ ಇರಲಿಲ್ಲ. ಇರಾನ್ ಅನ್ನು ಮಣಿಸುವ, ಮನವೊಲಿಸುವ ಪ್ರಯತ್ನಗಳು ವಿಫಲವಾದಾಗ ವಿಶ್ವಸಂಸ್ಥೆ ಆರ್ಥಿಕ ದಿಗ್ಬಂಧನ ಹೇರಿತ್ತು. ಅತ್ಯಂತ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಬೇಕಾಗುವಷ್ಟೇ ಪ್ರಮಾಣದ ಕಚ್ಚಾ ತೈಲ ಮಾರಲು ಅನುಮತಿ ಕೊಟ್ಟಿತ್ತು. ಇದರಲ್ಲಿ ಬಲಾಢ್ಯ ದೇಶಗಳ ಸ್ವಾರ್ಥ, ಮೇಲುಗೈ ಸಾಧಿಸುವ ಹುನ್ನಾರವೂ ಇತ್ತು. ಆದರೆ ಇರಾನ್ ನಡವಳಿಕೆಯೂ ಅನುಮಾನಾಸ್ಪದವಾಗಿಯೇ ಇತ್ತು. ಇದೇನೇ ಇದ್ದರೂ ದಶಕಗಳಷ್ಟು ಸುದೀರ್ಘ ಬಹಿಷ್ಕಾರದ ಕಷ್ಟ ಅನುಭವಿಸಿದವರು ಇರಾನ್‌ನ ಜನಸಾಮಾನ್ಯರು. ಇದನ್ನೆಲ್ಲ ಮನಗಂಡು ವಾಸ್ತವದ ಕೂಗಿಗೆ, ಐತಿಹಾಸಿಕ ಅನಿವಾರ್ಯಕ್ಕೆ ಓಗೊಟ್ಟು ಧೈರ್ಯದಿಂದ ಒಪ್ಪಂದಕ್ಕೆ ಮುಂದಾದ ಇರಾನ್‌ನ ಹಾಲಿ ಅಧ್ಯಕ್ಷ ಹಸನ್ ರೌಹಾನಿ ಮತ್ತು ಒಪ್ಪಂದಕ್ಕೆ ಎರಡು ವರ್ಷಗಳಿಂದ ಭೂಮಿಕೆ ಸಿದ್ಧಪಡಿಸುತ್ತ ಬಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ಲಾಘನೆಗೆ ಅರ್ಹರು. ಒಪ್ಪಂದವನ್ನು ಇಸ್ರೇಲ್‌ ಸಾರಾಸಗಟಾಗಿ ತಿರಸ್ಕರಿಸಿದೆ. ಅಮೆರಿಕದ ಒಳಗೂ ವಿರೋಧ ಇದೆ. ಅದನ್ನೆಲ್ಲ ನಿಭಾಯಿಸುವ ಹೊಣೆಗಾರಿಕೆ ಒಬಾಮ ಮೇಲಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡಿರುವ ಒಬಾಮ ಅವರು ಇರಾನ್ ಹಾಗೂ ಕ್ಯೂಬಾ ಜೊತೆಗಿದ್ದ ವಿವಾದಗಳನ್ನು ಪರಿಹರಿಸುವಲ್ಲಿ ಯಶಸ್ಸು ಸಾಧಿಸಿರುವುದು ರಾಜತಾಂತ್ರಿಕತೆಗೆ ಸಂದ ವಿಜಯ. ಈ ಒಪ್ಪಂದ ಮತ್ತು ದಿಗ್ಬಂಧನ ತೆರವಿನಿಂದ ಭಾರತಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಮ್ಮದು ತೈಲ ಬಳಕೆಯಲ್ಲಿ ವಿಶ್ವದ ನಾಲ್ಕನೇ ದೊಡ್ಡ ಮತ್ತು ಇರಾನ್‌ನಿಂದ ಅತಿಹೆಚ್ಚು ಕಚ್ಚಾ ತೈಲ ಖರೀದಿಸುವ ಎರಡನೇ ದೊಡ್ಡ ದೇಶ. ಈಗ ಕಚ್ಚಾ ತೈಲದ ಬೆಲೆ ಇಳಿಯುವುದರಿಂದ ನಮ್ಮ ವಿದೇಶಿ ವಿನಿಮಯದ ಹೊರೆ ತಗ್ಗಲಿದೆ. ಅಲ್ಲಿನ ತೈಲಕ್ಷೇತ್ರದಲ್ಲಿ ಬಂಡವಾಳ ಹೂಡಲು ನಮ್ಮ ಕಂಪೆನಿಗಳಿಗೆ ಅವಕಾಶ ದೊರೆಯಲಿದೆ. ಇರಾನ್ ಮೂಲಕ ಭಾರತ, ರಷ್ಯಾ ಹಾಗೂ ಮಧ್ಯ ಏಷ್ಯಾದ ದೇಶಗಳನ್ನು ಜೋಡಿಸುವ ಯೋಜನೆ, ಇರಾನ್‌ನ ಛಬಾಹರ್ ಬಂದರು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಈಗ ನಮಗೆ ಲಭ್ಯವಾಗಲಿದೆ. ಹಾಗೆಯೇ ಟರ್ಕ್‌ಮೆನಿಸ್ತಾನ್, ಆಫ್ಘಾನಿಸ್ತಾನ, ಪಾಕಿಸ್ತಾನ, ಇಂಡಿಯಾ (ಟಾಪಿ) ಅನಿಲ ಮಾರ್ಗ ಯೋಜನೆ ತ್ವರಿತಗೊಳಿಸುವ ಅವಕಾಶವೂ ಲಭ್ಯವಾದಂತಾಗಿದೆ. ಆದರೆ ಇರಾನ್ ಮೇಲೆ ಆರ್ಥಿಕ ನಿರ್ಬಂಧಗಳಿದ್ದಾಗಲೂ, ಮೊದಲಿನಿಂದಲೂ ಭಾರತದ ಮಿತ್ರರಾಷ್ಟ್ರವಾಗಿರುವ ಇರಾನ್ ಜೊತೆ ಭಾರತದ ವ್ಯಾಪಾರ ವಹಿವಾಟು ಸುಗಮವಾಗಿ ನಡೆದುಕೊಂಡೇಬಂದಿತ್ತು. ಆದರೆ ಈಗ ಇತರ ರಾಷ್ಟ್ರಗಳೂ ಇರಾನ್ ಜೊತೆ ವಹಿವಾಟು ಆರಂಭಿಸಲಿರುವುದರಿಂದ ಭಾರತಕ್ಕೆ ಜಾಗತಿಕ ಸ್ಪರ್ಧೆಯ ಭೀತಿ ಎದುರಾಗಬಹುದು. ಇದೇನೇ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕಾಗಿ ಬಾಂಧವ್ಯ ವೃದ್ಧಿಗೆ ಶ್ರಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.