ಜನಸಂಖ್ಯೆ ಹೆಚ್ಚಳ ಸವಾಲು ಎದುರಿಸಲು ಸನ್ನದ್ಧತೆ ಬೇಕು ಭಾರತದ ಜನಸಂಖ್ಯೆ ಪ್ರಮಾಣ ಇನ್ನು ಏಳು ವರ್ಷಗಳಲ್ಲೇ ಚೀನಾವನ್ನು ಮೀರಿಸಲಿದೆ. ಈಗಿರುವ ಮೊದಲ ಸ್ಥಾನದಿಂದ ಚೀನಾ ಎರಡನೇ ಸ್ಥಾನಕ್ಕೆ ಇಳಿಯಲಿದೆ. ಹೀಗಾಗಿ 2022ರಲ್ಲಿ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಈ ಹಿಂದೆ, ಭಾರತದ ಜನಸಂಖ್ಯೆ ಚೀನಾ ಜನಸಂಖ್ಯೆಯನ್ನು 2028ರೊಳಗೆ ಮೀರಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಎಂಬಂತಹ ಪಟ್ಟವನ್ನು ಭಾರತ ಇನ್ನೂ ಮುಂಚೆಯೇ ಪಡೆದುಕೊಳ್ಳುವ ಕಾಲ ಸನಿಹದಲ್ಲೇ ಇದೆ ಎಂದಾಯಿತು. ಈ ವರದಿಯನ್ನು ಎಚ್ಚರಿಕೆ ಗಂಟೆಯಾಗಿ ರಾಷ್ಟ್ರ ಪರಿಗಣಿಸಬೇಕಿದೆ. ಈಗಾಗಲೇ ಕಡಿಮೆಯಾಗುತ್ತಿರುವ ಸಂಪನ್ಮೂಲಗಳ ಮೇಲೆ ಜನಸಂಖ್ಯೆ ಹೆಚ್ಚಳದ ಒತ್ತಡ ಗಂಭೀರ ಪರಿಣಾಮಗಳನ್ನು ಬೀರಬಹುದು. ಹೀಗಾಗಿ ಭವಿಷ್ಯದ ಸವಾಲುಗಳನ್ನು ಎದುರಿಸುವ ಸನ್ನದ್ಧತೆ ಅಗತ್ಯ. ವಿಶ್ವದ ಅತಿ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿರುವುದು ಅನೇಕ ಜವಾಬ್ದಾರಿಗಳನ್ನೂ ಹೊತ್ತು ತರುತ್ತದೆ. ಎಲ್ಲರಿಗೂ ಆಹಾರ, ವಸತಿ, ಉದ್ಯೋಗ, ಆರೋಗ್ಯ, ಶಿಕ್ಷಣ ಒದಗಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗೆಯೇ ಪರಿಸರದ ಮೇಲಿನ ಒತ್ತಡವೂ ಹೆಚ್ಚುತ್ತದೆ. ಜನಸಂಖ್ಯೆ ಹೆಚ್ಚಳದಿಂದ ವಾಯು ಮಾಲಿನ್ಯ, ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ಬೃಹದಾಕಾರ ತಾಳಲಿವೆ. ಈಗಾಗಲೇ ವಿಶ್ವದ ಮಾಲಿನ್ಯಯುಕ್ತ ನಗರ ಎಂಬಂಥ ಕುಖ್ಯಾತಿಯನ್ನು ನವದೆಹಲಿ ಹೊಂದಿದೆ. ಹೀಗಾಗಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವ ನೀತಿಗಳು ಅವಶ್ಯ. ಹೆಚ್ಚಿನ ಜನಸಂಖ್ಯೆಗೆ ಆಹಾರ ಒದಗಿಸುವ ಸವಾಲು ಅತ್ಯಂತ ದೊಡ್ಡದು. ಇತ್ತೀಚಿನ ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆಯಲ್ಲಿ ಭಾರತ ಗಣನೀಯ ಸುಧಾರಣೆ ಸಾಧಿಸಿದೆ ಎಂಬುದೇನೋ ನಿಜ. ಆದರೆ ಕೃಷಿ ಬಗ್ಗೆ ಕುಸಿಯುತ್ತಿರುವ ಆಕರ್ಷಣೆ, ರೈತರ ಆತ್ಮಹತ್ಯೆ, ನೀರಿನ ಲಭ್ಯತೆ ಕುಸಿತ ಮುಂಬರುವ ದಿನಗಳಲ್ಲಿ ಆಹಾರ ಭದ್ರತೆಯ ಬಗ್ಗೆ ಆತಂಕಕಾರಿ ಪ್ರಶ್ನೆಗಳನ್ನು ಎತ್ತಲಿದೆ. ಈ ವಿಚಾರವನ್ನು ಈಗಲೇ ಗಂಭೀರವಾಗಿ ಪರಿಗಣಿಸುವುದು ಅವಶ್ಯ. ಹೆಚ್ಚಿನ ಜನರಿಗೆ ಉದ್ಯೋಗಗಳ ಸೃಷ್ಟಿಯೂ ಮುಖ್ಯವಾದದ್ದು. ತಯಾರಿಕಾ ಕ್ಷೇತ್ರಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 2022ರೊಳಗೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದಾರೆ. ಆದರೆ ಜಾಗತಿಕ ಅರ್ಥ ವ್ಯವಸ್ಥೆ ಇನ್ನೂ ಚೇತರಿಕೆ ಕಂಡಿಲ್ಲ. ಹೀಗಾಗಿ ಮೋದಿ ಅವರ ಕನಸಿನ ‘ಭಾರತದಲ್ಲೇ ತಯಾರಿಸಿ’ (‘ಮೇಕ್ ಇನ್ ಇಂಡಿಯಾ’) ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳ್ಳಲು ಇನ್ನೂ ಸಮಯ ಬೇಕಿದೆ. ವಿಶ್ವದ ಮಾನವ ಸಂಪನ್ಮೂಲ ರಾಜಧಾನಿ ಎಂದು ಭಾರತವನ್ನು ಪ್ರಧಾನಿ ಮೋದಿ ಅವರೇನೊ ಬಣ್ಣಿಸುತ್ತಿದ್ದಾರೆ. ಹಾಗೆಯೇ, ಜಾಗತಿಕ ಮಟ್ಟದಲ್ಲಿ ಕಾರ್ಮಿಕರ ವಲಸೆಗೆ ಇರುವ ಅಡೆತಡೆಗಳನ್ನು ಐರೋಪ್ಯ ರಾಷ್ಟ್ರಗಳು ತೆಗೆದು ಹಾಕುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಭಾರತದ ಕಾರ್ಮಿಕರ ಹೊರೆಯನ್ನು ವಿದೇಶಿ ಆರ್ಥಿಕತೆಗಳು ಹೊತ್ತುಕೊಳ್ಳಬಹುದು ಎಂಬ ನಿರೀಕ್ಷೆ ಸಾಧ್ಯವಿಲ್ಲ. ಜನಸಂಖ್ಯಾ ಬೆಳವಣಿಗೆ ವಿಚಾರ ಮಾತನಾಡುವಾಗ ಹೆಚ್ಚಿನ ಜನಸಂಖ್ಯೆಯಿಂದಾಗುವ ಲಾಭದ (ಡೆಮಾಗ್ರಫಿಕ್ ಡಿವಿಡೆಂಡ್) ಪರಿಕಲ್ಪನೆ ಕುರಿತು ಬಹಳಷ್ಟು ಹೇಳುತ್ತಿರುತ್ತೇವೆ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಜನರ ಜೀವನಮಟ್ಟ ಸುಧಾರಿಸುವಂತಹ ಅನೇಕ ವಲಯಗಳಲ್ಲಿ ಹಣಹೂಡಿಕೆ ಅಗತ್ಯವಾಗುತ್ತದೆ. ಎರಡು ಏಷ್ಯನ್ ದೈತ್ಯ ರಾಷ್ಟ್ರಗಳಾದ ಭಾರತ ಹಾಗೂ ಚೀನಾ ವಿಶ್ವದ ಸುಮಾರು ಶೇ 40ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ವಿಶ್ವದ ಒಟ್ಟು ಜನಸಂಖ್ಯೆ ಈಗ 730 ಕೋಟಿ. 2030ರಲ್ಲಿ ವಿಶ್ವದ ಜನಸಂಖ್ಯೆ 850 ಕೋಟಿಯಾಗಲಿದೆ ಎಂಬುದು ಅಂದಾಜು. ಬಿಸಿಯೇರುತ್ತಿರುವ ಭೂಮಿಯಲ್ಲಿ ಏರುತ್ತಿರುವ ಸಂಖ್ಯೆಯ ಜನರನ್ನು ಸಂಭಾಳಿಸುವ ಸಂಗತಿ ದೊಡ್ಡದಾಗಿರುತ್ತದೆ. ಹಾಗೆಯೇ ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ 10 ರಾಷ್ಟ್ರಗಳಲ್ಲಿ ಭಾರತದಲ್ಲಿರುವ ಲಿಂಗ ಅನುಪಾತ ಅತ್ಯಂತ ಕಡಿಮೆ ಇದ್ದು ಇಳಿಮುಖವಾಗುತ್ತಲೇ ಸಾಗುತ್ತಿರುವುದೂ ಮತ್ತೊಂದು ಆತಂಕದ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.