ಲೋಕಾಯುಕ್ತ ತಿದ್ದುಪಡಿ ಎಚ್ಚರಿಕೆ ಅಗತ್ಯ ಲೋಕಾಯುಕ್ತರನ್ನು ಅಥವಾ ಉಪ ಲೋಕಾಯುಕ್ತರನ್ನು ಅಧಿಕಾರದಿಂದ ಇಳಿಸಲು ಅವಕಾಶ ಕಲ್ಪಿಸುವ ಮಸೂದೆಗೆ ವಿಧಾನ ಮಂಡಲದ ಎರಡೂ ಸದನಗಳ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ, ದುರ್ನಡತೆ ಸಾಬೀತಾದ ಸಂದರ್ಭದಲ್ಲಿ ಪದಚ್ಯುತಿ ಸುಲಭವಾಗಲಿದೆ. ಸುಮಾರು ಮೂರು ದಶಕದಷ್ಟು ಹಳೆಯ ಲೋಕಾಯುಕ್ತ ಮೂಲ ಕಾಯ್ದೆಯಲ್ಲಿ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಷ್ಟು ದಿನ ಅದರ ಅಗತ್ಯವೂ ಕಂಡಿರಲಿಲ್ಲ. ಮುಂದೊಂದು ದಿನ ಲೋಕಾಯುಕ್ತರೇ ಅನುಮಾನ, ಆರೋಪಗಳ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಆಗ ಕಾನೂನು ಮಾಡಿದವರೂ ಊಹಿಸಿರಲಿಕ್ಕಿಲ್ಲ. ಅಷ್ಟಕ್ಕೂ, ಭ್ರಷ್ಟಾಚಾರವನ್ನು ಮಟ್ಟ ಹಾಕಲು ಅಸ್ತಿತ್ವಕ್ಕೆ ಬಂದ ಲೋಕಾಯುಕ್ತ ವ್ಯವಸ್ಥೆ ಮತ್ತು ಲೋಕಾಯುಕ್ತರ ಮೇಲೆ ಹಿಂದೆಂದೂ ದುರ್ನಡತೆ, ಭ್ರಷ್ಟಾಚಾರದ ಆರೋಪ ಇರಲಿಲ್ಲ. ಅವರ ಕಾರ್ಯ ವಿಧಾನಗಳ ಬಗ್ಗೆ ಆಗಾಗ ಜನಪ್ರತಿನಿಧಿಗಳಿಂದ ಅಸಮಾಧಾನ ವ್ಯಕ್ತವಾಗುತ್ತಿತ್ತು. ಅದು ಸಹಜವೂ ಹೌದು. ಆದರೆ ಯಾವಾಗ ಹಾಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಅವರ ಮಗ ಮತ್ತು ಲೋಕಾಯುಕ್ತದ ಕೆಲ ಉನ್ನತಾಧಿಕಾರಿಗಳ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂತೋ, ಆ ಕ್ಷಣದಿಂದಲೇ ಲೋಕಾಯುಕ್ತ ವ್ಯವಸ್ಥೆ ಮೇಲೆ ಸಾರ್ವಜನಿಕರು ಇಟ್ಟಿದ್ದ ನಂಬಿಕೆಗೆ ಪೆಟ್ಟು ಬಿತ್ತು. ಇಂಥ ಸನ್ನಿವೇಶದಲ್ಲಿ ಲೋಕಾಯುಕ್ತ ಭಾಸ್ಕರರಾವ್ ಅವರು ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಬೇಕಾಗಿತ್ತು. ಕೊನೇ ಪಕ್ಷ, ಅವರದೇ ಕೋರಿಕೆಯಂತೆ ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ವಿಚಾರಣೆ ಮುಗಿಯುವವರೆಗಾದರೂ ಅವರು ದೀರ್ಘಾವಧಿ ರಜೆ ಮೇಲೆ ಹೋಗಬಹುದಿತ್ತು. ಅಂತಹ ಯಾವ ಸೌಜನ್ಯ, ದೊಡ್ಡತನವನ್ನೂ ಅವರು ಪ್ರದರ್ಶಿಸಲೇ ಇಲ್ಲ. ರಾಜಕಾರಣಿಗಳನ್ನೂ ನಾಚಿಸುವಂತೆ ಅಧಿಕಾರದ ಕುರ್ಚಿಗೆ ಗಟ್ಟಿಯಾಗಿ ಅಂಟಿಕೊಂಡರು. ಈ ವಿದ್ಯಮಾನ, ಕಾನೂನು ತಿದ್ದುಪಡಿಗೆ ಪ್ರೇರಕವಾದದ್ದು ಸಹಜ ಬೆಳವಣಿಗೆ. ಸಾರ್ವಜನಿಕ ವ್ಯವಸ್ಥೆಯನ್ನು ಕಾಪಾಡಲು, ಅದಕ್ಕೆ ಮೆತ್ತಿಕೊಂಡ ಕಪ್ಪು ಕಲೆ ತೊಳೆಯಲು, ಜನ ಮತ್ತೆ ವಿಶ್ವಾಸ ಇಡುವಂತೆ ಮಾಡಲು ದೃಢ ಕ್ರಮ ಅನಿವಾರ್ಯ. ಆದರೆ, ಒಬ್ಬ ವ್ಯಕ್ತಿಯ ಪದಚ್ಯುತಿಯನ್ನು ನಿರ್ದಿಷ್ಟ ಗುರಿಯಾಗಿ ಇಟ್ಟುಕೊಂಡು ಕಾಯ್ದೆಯೊಂದಕ್ಕೆ ತಿದ್ದುಪಡಿ ತರಬೇಕಾಗಿ ಬಂದುದು ಒಳ್ಳೆಯ ಬೆಳವಣಿಗೆಯಲ್ಲ. ಕಳೆದ ತಿಂಗಳು ಮಂಡಿಸಿದ್ದ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ಮಸೂದೆಯಲ್ಲಿ ಲೋಕಾಯುಕ್ತರ ಪದಚ್ಯುತಿಗೆ ಸರಳ ಬಹುಮತ ಸಾಕು ಎಂಬ ಅಂಶ ಇತ್ತು. ಲೋಕಾಯುಕ್ತರನ್ನು ಪರೋಕ್ಷವಾಗಿ ಅಂಕೆಯಲ್ಲಿ ಇಟ್ಟುಕೊಳ್ಳಲು ಆಳುವ ಪಕ್ಷಕ್ಕೆ ಇದು ಸುಲಭದ ದಾರಿಯಾಗುತ್ತಿತ್ತು. ವಿರೋಧ ಪಕ್ಷಗಳ ಸಲಹೆಯಂತೆ ಅದನ್ನೀಗ ‘ಮೂರನೇ ಎರಡರಷ್ಟು ಬಹುಮತ ಬೇಕು’ ಎಂದು ಪರಿಷ್ಕರಿಸಿದ್ದು ಒಳ್ಳೆಯದು. ಆದರೆ ವಿವಾದ, ಆರೋಪದ ಅವಕಾಶವನ್ನು ಬಳಸಿಕೊಂಡು ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸುವ ಪ್ರಯತ್ನಕ್ಕೆ ಚುನಾಯಿತ ಪ್ರತಿನಿಧಿಗಳು ಕೈ ಹಾಕಬಾರದು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಗಂಭೀರವಾಗಿಲ್ಲ ಎಂಬುದು ಈಗಾಗಲೇ ಸರ್ವವಿದಿತ. ಲೋಕಪಾಲ್ ಹುದ್ದೆ ಖಾಲಿಯೇ ಇದೆ. ಈ ವಿಷಯದಲ್ಲಿ ಸದಾ ಕಟ್ಟೆಚ್ಚರ ವಹಿಸಬೇಕಾದ ಹೊಣೆ ಸಾರ್ವಜನಿಕರ ಮೇಲಿದೆ. ಭ್ರಷ್ಟಾಚಾರದಿಂದ ಆಡಳಿತದ ಹದ ತಪ್ಪುತ್ತದೆ. ಅಭಿವೃದ್ಧಿಯ ಗತಿ ಕುಂಠಿತಗೊಳ್ಳುತ್ತದೆ ಎಂಬುದು ನೆನಪಿರಬೇಕು. ಪೊಲೀಸ್ ತನಿಖೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ವೃತ್ತಿಪರವಾಗಿಸಲು ಪೊಲೀಸ್ ಸುಧಾರಣೆಗೂ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.