ಐತಿಹಾಸಿಕ ಒಪ್ಪಂದ: ಶಾಂತಿ ಸ್ಥಾಪನೆಗೆ ಹೊಸ ಹೆಜ್ಜೆ ನಾಗಾ ಪ್ರತ್ಯೇಕತಾವಾದಿ ಬಣ, ನ್ಯಾಷನಲಿಸ್ಟ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ನ (ಎನ್‌ಎಸ್‌ಸಿಎನ್) ಐಎಂ ಬಣದ ನಾಯಕರಲ್ಲಿ ಒಬ್ಬರಾದ ಟಿ. ಮುಯ್ ವಾ ಅವರೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಶಾಂತಿ ಒಪ್ಪಂದ ಐತಿಹಾಸಿಕವಾದುದು. ಪ್ರತ್ಯೇಕತಾವಾದಿಗಳ ಬಂಡುಕೋರ ಚಟುವಟಿಕೆಗಳಿಂದಾಗಿ ಕಳೆದ ಆರು ದಶಕಗಳಿಂದ ನಲುಗಿರುವ ನಾಗಾಲ್ಯಾಂಡ್‌ನಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ್ದು. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡ ಪ್ರಮುಖ ರಾಜಕೀಯ ನಿರ್ಧಾರ ಇದು. 20 ಲಕ್ಷ ನಾಗಾ ಬುಡಕಟ್ಟು ಜನರಿಗೆ ಸ್ವತಂತ್ರ ಮಾತೃಭೂಮಿ ಬೇಕೆಂಬುದು ಬಂಡುಕೋರರ ಆಗ್ರಹವಾಗಿತ್ತು. ಕಳೆದ 60 ವರ್ಷಗಳಿಂದ ಈ ಸಶಸ್ತ್ರ ಹೋರಾಟ ನಡೆದುಕೊಂಡು ಬಂದಿದೆ. ಈಗ ಅತ್ಯಂತ ಹಳೆಯದಾದ ಈ ಬಂಡಾಯ ಶಮನ ವಾಗುವಂತಿದೆ. ಶಸ್ತ್ರಾಸ್ತ್ರ ಪರಿತ್ಯಜಿಸಲು ಇತರ ಸಣ್ಣ ಗುಂಪುಗಳಿಗೂ ಈ ಒಪ್ಪಂದ ಪ್ರೇರಣೆಯಾಗುವಂತಾಗಬೇಕು. ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಈಶಾನ್ಯ ರಾಜ್ಯಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಇದು ಮುಖ್ಯವಾದ ನಡೆ ಎಂದು ಪರಿಭಾವಿಸಬಹುದು. ಪಿ.ವಿ. ನರಸಿಂಹ ರಾವ್ ಅವರ ಕಾಲದಲ್ಲೂ ಶಾಂತಿ ಪ್ರಯತ್ನಗಳು ನಡೆದಿದ್ದವು. ಈ ಬಂಡುಕೋರರ ಸಮಸ್ಯೆ ಕಾನೂನು ಸುವ್ಯವಸ್ಥೆ ಸಮಸ್ಯೆಯಲ್ಲ, ಇದು ‘ರಾಜಕೀಯ ಸಮಸ್ಯೆ’ ಎಂಬುದನ್ನು ಮೊದಲಿಗೆ ಗ್ರಹಿಸಿದವರಲ್ಲಿ ನರಸಿಂಹ ರಾವ್ ಮುಖ್ಯರು. ನಂತರ 1997ರಲ್ಲಿ ಐ.ಕೆ. ಗುಜ್ರಾಲ್ ನೇತೃತ್ವದ ಸರ್ಕಾರದ ಜೊತೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಆ ನಂತರದ ಯಾವುದೇ ಚರ್ಚೆಯೂ ನಿರ್ಣಾಯಕ ಆಗಿರಲಿಲ್ಲ. ಈಗ ನರೇಂದ್ರ ಮೋದಿಯವರ ಕಾಲದಲ್ಲಿ ಆರು ದಶಕಗಳ ಸಂಘರ್ಷಮಯ ವಾತಾವರಣ ಅಂತ್ಯವಾಗಿ ಒಂದಷ್ಟು ಸಹಜ ಸ್ಥಿತಿ ಮರುಕಳಿಸಬಹು ದೇನೋ ಎಂಬ ಆಶಾಕಿರಣ ಮೂಡಿರುವುದಂತೂ ನಿಜ. ಏಕೆಂದರೆ ಸರ್ಕಾರ, ಭದ್ರತಾಪಡೆ ಹಾಗೂ ಬಂಡುಕೋರರ ನಡುವೆ ಸಿಲುಕಿ ಸಹಜ ಜೀವನವೇ ಅಸಾಧ್ಯವಾಗಿದ್ದಂತಹ ಜನರಿಗೆ ಈ ಒಪ್ಪಂದ, ಒಂದಿಷ್ಟಾದರೂ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಬಹುದು. ಚೀನಾ ಜೊತೆ ಗಡಿ ಹಂಚಿಕೊಂಡಿರುವ ಈಶಾನ್ಯ ರಾಜ್ಯಗಳ ವಿಚಾರ ಭಾರತಕ್ಕೆ ಸೂಕ್ಷ್ಮವಾದುದು. ಈಶಾನ್ಯದ ಆಯಕಟ್ಟಿನ ಅನೇಕ ಪ್ರದೇಶಗಳ ಮೇಲೆ ಹಕ್ಕುಸ್ಥಾಪನೆಗೆ ಚೀನಾ ಅನೇಕ ಬಾರಿ ಮುಂದಾಗಿರುವುದೂ ಉಂಟು. ಕೇಂದ್ರ ಸರ್ಕಾರದ ತೀವ್ರತರವಾದ ರಾಜತಾಂತ್ರಿಕ ಕ್ರಮಗಳಿಂದ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳಲ್ಲಿ ಪ್ರತ್ಯೇಕತಾವಾದದ ತೀವ್ರತೆ ಈಗ ಕಡಿಮೆಯಾಗುತ್ತಿದೆ. ಈಗ ನಾಗಾಲ್ಯಾಂಡ್‌ನಲ್ಲಿ ಶಾಂತಿ ಸ್ಥಾಪನೆಗೆ ಈ ಒಪ್ಪಂದ ವನ್ನು ಸರ್ಕಾರ ಹೇಗೆ ಕಾರ್ಯಗತಗೊಳಿಸುತ್ತದೆ ಎಂಬುದು ಮುಂದಿರುವ ಸವಾಲು. ನಾಗಾಲ್ಯಾಂಡ್ ಅಲ್ಲದೆ ಮಣಿಪುರ, ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಲ್ಲೂ ನಾಗಾ ಬುಡಕಟ್ಟು ಪ್ರದೇಶಗಳು ಹಂಚಿಹೋಗಿವೆ. ಈ ಪ್ರದೇಶಗಳನ್ನು ಒಗ್ಗೂಡಿಸ ಬೇಕು ಎಂಬಂಥ ಎನ್‌ಎಸ್‌ಸಿಎನ್–ಐಎಂ ಪ್ರಮುಖ ಬೇಡಿಕೆಯನ್ನು ಈ ಒಪ್ಪಂದದಲ್ಲಿ ಈಡೇ ರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ನಾಗಾ ಬಂಡುಕೋರರ ದೊಡ್ಡ ಬಣವಾದ ಎನ್‌ಎಸ್‌ ಸಿಎನ್– ಐಎಂ ಕದನ ವಿರಾಮ ಒಪ್ಪಂದ ಪಾಲಿಸಿಕೊಂಡು ಬರುತ್ತಿದ್ದರೆ, ಮ್ಯಾನ್ಮಾರ್‌ನಲ್ಲಿ ನೆಲೆ ಹೊಂದಿರುವ ಎಸ್.ಎಸ್. ಕಪ್ಲಾಂಗ್ ನೇತೃತ್ವದ ಇನ್ನೊಂದು ಬಣ ನಿರಂತರವಾಗಿ ಹಿಂಸಾಚಾರ ನಡೆಸಿಕೊಂಡು ಬರುತ್ತಿದೆ ಎಂಬುದನ್ನು ಮರೆಯುವಂತಿಲ್ಲ. ಮಣಿಪುರದಲ್ಲಿ ಜೂನ್ ತಿಂಗಳಿನಲ್ಲಿ ಸೇನೆಯ ಮೇಲೆ ನಡೆದ ದಾಳಿಯಲ್ಲಿ 18 ಯೋಧರು ಸತ್ತಿದ್ದರು. ಈ ದಾಳಿಯಲ್ಲಿ ಈ ಬಣದ ಕೈವಾಡವಿತ್ತು ಎಂದು ನಂಬಲಾಗಿದೆ. ಹೀಗಾಗಿ ಈ ಸಮಸ್ಯೆ ಮುಂದುವರಿಯುವುದಲ್ಲದೆ ಕಪ್ಲಾಂಗ್ ಬಣವನ್ನು ನಿರ್ವಹಿಸಬೇಕಾದ ಸವಾಲೂ ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಮೂಲ ಸೌಕರ್ಯಗಳನ್ನು ಸೃಷ್ಟಿಸುವುದಲ್ಲದೆ ಉದ್ಯೋಗ ಸೃಷ್ಟಿಗೂ ಗಮನ ನೀಡುವುದು ಶಾಂತಿ ಸ್ಥಾಪನೆಯಲ್ಲಿ ಪ್ರಮುಖ ಹೆಜ್ಜೆಯಾಗುತ್ತದೆ. ಭಾರತದ ಈಶಾನ್ಯ ವಲಯವನ್ನು ಆಗ್ನೇಯ ಏಷ್ಯಾದ ವಾಣಿಜ್ಯ ನೆಲೆಯಾಗಿಸುವ ಆಶಯವನ್ನು ಭಾರತದ ‘ಪೂರ್ವದ ಕಡೆ ದೃಷ್ಟಿ’ (ಲುಕ್ ಈಸ್ಟ್ ಪಾಲಿಸಿ)tನೀತಿ ಹೊಂದಿದೆ. ಈ ನೀತಿ ಯಶಸ್ವಿಯಾಗಲು ಈಶಾನ್ಯ ಪ್ರದೇಶಗಳಲ್ಲಿ ಶಾಂತಿ ನೆಲೆಸಬೇಕು. ಹಲವು ಪ್ರಮುಖ ಯೋಜನೆಗಳಿಗೆ ಈ ವಲಯದಲ್ಲಿ ಶಾಂತಿ ನೆಲೆಸುವುದು ಅಗತ್ಯ. ಬಾಂಗ್ಲಾದೇಶ, ಭೂತಾನ್, ನೇಪಾಳ, ಭಾರತದ ನಡುವೆ ರಸ್ತೆ ಸಂಪರ್ಕ ಯೋಜನೆಗೆ ಈ ವಲಯದಲ್ಲಿ ಶಾಂತಿ ಇರುವುದು ಅಗತ್ಯ. ಹೀಗಾಗಿ ನಾಗಾ ಸಮಸ್ಯೆ ಇತ್ಯರ್ಥಗೊಳ್ಳುವುದು ಎಂದಾದಲ್ಲಿ ಶಾಂತಿ ಸ್ಥಾಪನೆ ಯತ್ತ ಬಾಗಿಲು ತೆರೆದಂತೆ, ಈ ಒಪ್ಪಂದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.