ಪ್ರಜಾಸತ್ತೆಯ ಆಶಯಗಳಿಗೆ ಧಕ್ಕೆ ತರುವುದು ಬೇಡ ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಿ ಎರಡು ವಾರಗಳೇ ಕಳೆದಿವೆ. ಒಂದು ದಿನವೂ ಕಲಾಪ ಸುಗಮವಾಗಿ ನಡೆದಿಲ್ಲ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌, ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಹಟ ತೊಟ್ಟು ನಿಂತಿದೆ. ಹಗರಣಗಳಿಗೆ ಸಂಬಂಧಪಟ್ಟ ನಾಯಕರು ಮೊದಲು ರಾಜೀನಾಮೆ ನೀಡಬೇಕು, ನಂತರವಷ್ಟೇ ಚರ್ಚೆ ಎಂಬಂಥ ನಿಲುವಿಗೆ ಕಾಂಗ್ರೆಸ್ ಅಂಟಿಕೊಂಡಿದೆ. ಈ ಒತ್ತಡ ತಂತ್ರಕ್ಕೆ ಮಣಿಯದ ಆಡಳಿತಾರೂಢ ಬಿಜೆಪಿ, ಲೋಕಸಭೆಯಲ್ಲಿ ಸ್ಪೀಕರ್‌ ಮೂಲಕ 25 ಕಾಂಗ್ರೆಸ್‌ ಸದಸ್ಯರನ್ನು ಐದು ದಿನಗಳ ಅವಧಿಗೆ ಅಮಾನತುಗೊಳಿಸಿದೆ. ಒಂದೇ ಬಾರಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಎಂ.ಪಿ.ಗಳನ್ನು ಅಮಾನತು ಮಾಡಿದ್ದು ಇದೇ ಮೊದಲ ಬಾರಿ. ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರದ ಹಗರಣಗಳ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವಲ್ಲಿ ಮತ್ತು ಅಷ್ಟರಮಟ್ಟಿಗೆ ರಾಜಕೀಯವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ ಎನ್ನುವುದೇನೋ ನಿಜ. ಆದರೆ ಸತತವಾಗಿ ಎರಡು ವಾರಗಳಿಂದ ಸಂಸತ್ತಿನಲ್ಲಿ ಬರೀ ಗದ್ದಲವುಂಟಾಗಿ, ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿರುವ ಕಾರಣದಿಂದಾಗಿ ಜನಾಭಿಪ್ರಾಯ ಕಾಂಗ್ರೆಸ್ಸಿನ ವಿರುದ್ಧವೇ ರೂಪುಗೊಳ್ಳುವ ಸೂಚನೆಗಳಿದ್ದವು. ಈ ಹಂತದಲ್ಲಿ ಕಾಂಗ್ರೆಸ್ಸಿನ 25 ಲೋಕಸಭಾ ಸದಸ್ಯರನ್ನು ಅಮಾನತು ಮಾಡುವ ಮೂಲಕ, ಆಳುವ ಪಕ್ಷ ತನ್ನ ವಿರುದ್ಧವೇ ತಾನು ಕಾರ್ಯಾಚರಿಸಿದಂತಾಗಿದೆ. ಲೋಕಸಭೆಯಲ್ಲಿ ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್‌ ಮುಂತಾಗಿ ಬಹುತೇಕ ವಿರೋಧ ಪಕ್ಷಗಳು ಕಾಂಗ್ರೆಸ್‌ ಸದಸ್ಯರ ಅಮಾನತನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿವೆ. ಅಮಾನತುಗೊಂಡ ಸದಸ್ಯರ ಪರವಾಗಿ ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಎಲ್ಲ ಸದಸ್ಯರೂ ಕಲಾಪಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸಂಸತ್‌ ಒಳಗಿನ ತನ್ನ ‘ಗದ್ದಲಕೋರ ಹೋರಾಟ’ದಲ್ಲಿ ಏಕಾಂಗಿಯಾಗುವತ್ತ ಸಾಗಿದ್ದ ಕಾಂಗ್ರೆಸ್‌ಗೆ ಉಳಿದ ವಿರೋಧ ಪಕ್ಷಗಳ ಈ ಬೆಂಬಲದಿಂದ ಆನೆಬಲ ಬಂದಂತಾಗಿದೆ. ಸಂಸತ್ತಿನ ಒಳಗಿನ ಈ ವ್ಯೂಹಗಾರಿಕೆಯ ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ನೋಡಿದರೆ, ಕಳೆದ ಎರಡು ವಾರಗಳಿಂದ ಪ್ರಜಾಪ್ರಭುತ್ವದ ಅಡಿ ಪಾಯಕ್ಕೇ ಗೆದ್ದಲು ಹಿಡಿಯುತ್ತಿರುವುದು ಗೋಚರಿಸುತ್ತಿದೆ. ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಕಲಾಪ ತಡೆಯುವುದೇ ದೊಡ್ಡತನ ಎಂದುಕೊಂಡ ಕಾಂಗ್ರೆಸ್‌ನಂತೆಯೇ, ಅಮಾನತು ಮಾಡುವುದೇ ಸೂಕ್ತ ರಾಜಕೀಯ ಕ್ರಮ ಎಂದುಕೊಂಡಿರುವ ಬಿಜೆಪಿಯೂ ತಪ್ಪು ಮಾಡಿದೆ. ಹೀಗೆ ಅಮಾನತು ಮಾಡುವ ಪ್ರಸಂಗ ಸಂಸತ್‌ನಲ್ಲಿ ಅಪರೂಪದ್ದು. ದೇಶದ ಪ್ರಜೆಗಳ ತೆರಿಗೆ ಹಣ ಪೋಲಾಗುವುದನ್ನು ತಡೆಯುವಲ್ಲಿ ತಮಗೆ ಅಂತಹ ಕಾಳಜಿಯೇನೂ ಇಲ್ಲ ಎನ್ನುವುದನ್ನು ಎರಡೂ ಪಕ್ಷಗಳು ಈ ಮೂಲಕ ತೋರಿಸಿ ಕೊಟ್ಟಿವೆ. ಎರಡು ವಾರಗಳಲ್ಲಿ ಶೇಕಡ 91ರಷ್ಟು ಕಲಾಪ ಅವಧಿ ಈಗಾಗಲೆ ಗದ್ದಲದಲ್ಲಿ ಕೊಚ್ಚಿ ಹೋಗಿದೆ. ಅಧಿಕೃತ ಕಲಾಪ ಪಟ್ಟಿಯ ಪ್ರಕಾರ, ಮಳೆಗಾಲದ ಅಧಿವೇಶನದಲ್ಲಿ ಬಾಕಿ ಇರುವ 11 ಮಸೂದೆಗಳ ಚರ್ಚೆ ನಡೆಯಬೇಕಿತ್ತು. 9 ಹೊಸ ಮಸೂದೆಗಳ ಮಂಡನೆಯಾಗಬೇಕಿತ್ತು. ಅದರಲ್ಲೂ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮತ್ತು ಪರಿಶಿಷ್ಟ ಜಾತಿ, ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ-2014, ಜಿಎಸ್‌ಟಿ ಮಸೂದೆ ಮುಂತಾದ ಮಹತ್ವದ ಮಸೂದೆಗಳು ಅಂಗೀಕಾರಕ್ಕೆ ಕಾದಿವೆ. ಮುಂಗಾರು ಅಧಿವೇಶನಕ್ಕೆ ಸರ್ಕಾರ ಖರ್ಚು ಮಾಡುವ ಒಟ್ಟು ಹಣ ಸುಮಾರು ₨ 260 ಕೋಟಿ ಎನ್ನುವುದನ್ನು ಲೆಕ್ಕ ಹಾಕಿದರೆ, ತೆರಿಗೆದಾರರ ಹಣ ಹೇಗೆ ವ್ಯರ್ಥವಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಎನ್‌ಡಿಎ ಸರ್ಕಾರದ ಮೇಲಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಜನರ ಗಮನ ಸೆಳೆದು, ಜನರಲ್ಲಿ ಆಕ್ರೋಶ ಹುಟ್ಟಿಸಬೇಕು ಎನ್ನುವ ಕಾಂಗ್ರೆಸ್‌ ನಿಲುವು ಸರಿಯೇ; ಆದರೆ ಅದಕ್ಕಾಗಿ ಸಂಸತ್ತಿನ ಪೂರ್ಣ ಅಧಿವೇಶನವನ್ನೇ ಆಪೋಶನ ಪಡೆದುಕೊಳ್ಳುವುದು ಸರಿಯಲ್ಲ. ಸಂಸತ್ತಿನ ಕೆಲಸ ಮುಖ್ಯವಾಗಿ ಶಾಸನಗಳ ರಚನೆ. ಅಲ್ಲದೆ ಸಮರ್ಥ ವಾದದ ಮೂಲಕ ಆಡಳಿತದ ಲೋಪದೋಷಗಳನ್ನು ಬಹಿರಂಗಪಡಿಸಲು ಇರುವ ವಾಗ್ವಾದದ ವೇದಿಕೆ ಇದು. ಸಂಸತ್ತಿನ ಹೊರಗೂ ಜನಾಭಿಪ್ರಾಯವನ್ನು ರೂಪಿಸುವ ಹೋರಾಟಗಳನ್ನು ರೂಪಿಸಲು ಪ್ರಜಾಪ್ರಭುತ್ವದಲ್ಲಿ ಮುಕ್ತ ಅವಕಾಶವಿದೆ. ಇಂತಹ ಹೋರಾಟದ ಮೂಲಕ ಕಾಂಗ್ರೆಸ್‌ ಈಗಾಗಲೆ ನೆಲೆ ಕಳೆದುಕೊಂಡಿರುವ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಮತ್ತೆ ಗಟ್ಟಿಗೊಳಿಸಬಹುದು ಎಂಬುದನ್ನು ಅರಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.