ಸ್ಮಾರ್ಟ್‌ ಸಿಟಿ ಯೋಜನೆ ಸಮಗ್ರ ನೋಟ ಬೇಕು ದೇಶದಾದ್ಯಂತ ನೂರು ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಒಂದು ಹೆಜ್ಜೆ ಮುಂದೆ ಸರಿದಿದೆ. ‘ಸ್ಮಾರ್ಟ್‌ ಸಿಟಿ’ಗಳಾಗಲಿರುವ ಒಟ್ಟು 98 ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಇವುಗಳಲ್ಲಿ ಕರ್ನಾಟಕದ ಆರು ನಗರಗಳಿದ್ದು, ರಾಜಧಾನಿ ಬೆಂಗಳೂರು ಸೇರಿಲ್ಲ. ಆದರೆ ದೇಶದ ವಿವಿಧ ರಾಜ್ಯಗಳ 24 ರಾಜಧಾನಿ ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸ್ಮಾರ್ಟ್‌ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಸೇರದೇ ಇದ್ದುದಕ್ಕೆ ರಾಜಕೀಯ ಕಾರಣವೇ ಅಥವಾ ಸಹಜವಾಗಿ ಕೇಂದ್ರ ಸರ್ಕಾರ ರೂಪಿಸಿದ ಮಾನದಂಡಗಳ ಕಾರಣದಿಂದ ಬೆಂಗಳೂರಿಗೆ ಈ ಅವಕಾಶ ಕೈತಪ್ಪಿತೇ ಎನ್ನುವುದು ಚರ್ಚಾರ್ಹ ಸಂಗತಿ. ಅದೇನೇ ಇದ್ದರೂ, ನಗರೀಕರಣದ ಹೊಡೆತಕ್ಕೆ ಸಿಕ್ಕು ಯದ್ವಾತದ್ವಾ ಬೆಳೆಯುತ್ತಿರುವ ಮಹಾನಗರಗಳಲ್ಲಿ ಜನಜೀವನ ಸಹ್ಯವಾಗಬೇಕೆಂದರೆ ಇಂತಹದ್ದೊಂದು ಯೋಜನಾಬದ್ಧ ಅಭಿವೃದ್ಧಿ ಸೂಚಿಯನ್ನು ಜಾರಿಗೆ ತರಲೇಬೇಕಿದೆ. ಇದೊಂದು ಸ್ವಾಗತಾರ್ಹ ಯೋಜನೆ. ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಉದ್ಯೋಗ ಮತ್ತು ಬದುಕು ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ 2050ರೊಳಗೆ ಒಟ್ಟು ಜನಸಂಖ್ಯೆಯ ಶೇಕಡ 70ರಷ್ಟು ಜನ ನಗರಗಳಲ್ಲೇ ವಾಸವಾಗಲಿದ್ದಾರೆ. ಈ ಬೆಳವಣಿಗೆಗೆ ಭಾರತವೂ ಹೊರತಲ್ಲ. ಅಂದರೆ, ಈಗಾಗಲೆ ಕುಡಿಯುವ ನೀರು, ತಲೆಗೊಂದು ಸೂರು, ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಪರದಾಡುತ್ತಿರುವ ನಗರಗಳು ಇನ್ನಷ್ಟು ಕೊಳೆಗೇರಿಗಳನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ. ಸ್ಮಾರ್ಟ್‌ ಸಿಟಿಗಳೆಂದರೆ, ಶುದ್ಧ ನೀರು, ಸ್ವಚ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಆದ್ಯತೆ ನೀಡುವ ನಗರಗಳು. ನಗರಗಳು ಎದುರಿಸುತ್ತಿರುವ ಆಡಳಿತದ ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡರೆ ಮಾಲಿನ್ಯವೂ ಕಡಿಮೆಯಾಗಿ ಜನರ ಆರೋಗ್ಯ ಸುಧಾರಿಸಲಿದೆ. ಒಟ್ಟಾರೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಸ್ಮಾರ್ಟ್‌ಸಿಟಿಗಳ ಮೂಲ ಕಾರ್ಯತಂತ್ರವಾಗಿದೆ. ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಹಿಂದೆಯೂ ಜೆ-ನರ್ಮ್‌ ಸಹಿತ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ ಅವುಗಳಲ್ಲಿ ಬಹುತೇಕ ಯೋಜನೆಗಳು ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ ಎನ್ನುವುದು ಸರ್ವವಿದಿತ. ಸ್ಮಾರ್ಟ್‌ ಸಿಟಿ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಆಡಳಿತ ತಜ್ಞರು ಮತ್ತು ಆಳುವವರು ಕುಳಿತುಕೊಂಡು ಹಿಂದಿನ ವೈಫಲ್ಯಗಳಿಗೆ ಸಕಾರಣಗಳನ್ನು ಗುರುತಿಸಬೇಕು. ಹೊಸ ಯೋಜನೆಗಳು ವಿಫಲವಾಗದಂತೆ, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಡಳಿತವನ್ನು ತಳಮಟ್ಟದಿಂದ ಸಜ್ಜುಗೊಳಿಸಬೇಕು. ಕೇಂದ್ರ ಸರ್ಕಾರ ಈಗಾಗಲೆ 100 ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಗೆ ₹48,000 ಕೋಟಿ ವಿನಿಯೋಗಿಸುವುದಾಗಿ ಪ್ರಕಟಿಸಿದೆ. ಹಾಗೆ ನೋಡಿದರೆ ಈ ಹಣ ಏನನೂ ಸಾಲದು. ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಯೋಜನೆ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ. ಖಾಸಗಿ ಸಹಭಾಗಿತ್ವದ ಬಗ್ಗೆಯೂ ಕೇಂದ್ರ ಸರ್ಕಾರ ಒಲವು ಪ್ರಕಟಿಸಿದ್ದು, ಹಾಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಹೊಣೆಗಾರಿಕೆಯೂ ರಾಜ್ಯ ಸರ್ಕಾರಗಳ ಮೇಲಿದೆ. ಈ ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳಲು ನಗರಗಳ ಜನರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಇದೇ ವೇಳೆ, ಎಲ್ಲವೂ ನಗರಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂದುಕೊಂಡರೂ ತಪ್ಪಾಗುತ್ತದೆ. ಸ್ಮಾರ್ಟ್‌ ಸಿಟಿಗಳ ಪರಿಕಲ್ಪನೆಯಂತೆಯೇ ಸ್ಮಾರ್ಟ್‌ ಹಳ್ಳಿಗಳ ಅಭಿವೃದ್ಧಿಯ ಬಗ್ಗೆಯೂ ಸರ್ಕಾರಗಳು ಗಮನ ಹರಿಸಬೇಕು. ನಗರಗಳ ವಲಸೆಯನ್ನು ಇನ್ನಷ್ಟು ಆಕರ್ಷಕಗೊಳಿಸಿ, ಹಳ್ಳಿಗಳೆಲ್ಲ ಭಣಗುಡುವುದಾದಲ್ಲಿ ಅದನ್ನು ಸುಸ್ಥಿರ ಅಭಿವೃದ್ಧಿ ಎನ್ನಲಾಗದು. ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಯಲ್ಲಿ ನಗರದ ಬಡವರ ಪಾತ್ರವೇನು ಎನ್ನುವ ಬಗ್ಗೆಯೂ ಖಚಿತ ನಿಲುವುಗಳನ್ನು ಪ್ರಕಟಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.