ಆತ್ಮವಿಶ್ವಾಸ ಹೆಚ್ಚಿಸಿದ ಒಲಿಂಪಿಕ್ಸ್‌ ರಹದಾರಿ ರಿಯೊ ಡಿ ಜನೈರೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡಲು ಭಾರತದ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿರುವುದು ಸಂತಸದ ಸಂಗತಿ. ರಿಯೊದಲ್ಲಿ ಅತ್ಯುತ್ತಮವಾಗಿ ಆಡುವ ನಿಟ್ಟಿನಲ್ಲಿ ತಯಾರಿ ನಡೆಸಲು ಭಾರತಕ್ಕೆ ಇನ್ನು ಹತ್ತು ತಿಂಗಳ ಸಮಯಾವಕಾಶ ಸಿಕ್ಕಿರುವುದೂ ಭಾರತದ ವನಿತೆಯರು ಖುಷಿಪಡಲು ಕಾರಣವಾಗಿದೆ. ಕಳೆದ ತಿಂಗಳು ಬೆಲ್ಜಿಯಂನ ಆಂಟ್ವರ್ಪ್‌ನಲ್ಲಿ ನಡೆದಿದ್ದ ವಿಶ್ವಲೀಗ್‌ ಸೆಮಿಫೈನಲ್‌ನಲ್ಲಿ ಭಾರತ ಐದನೇ ಸ್ಥಾನ ಪಡೆದಿತ್ತು. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಕನಸು ಆಗ ನನಸಾಗಿರಲಿಲ್ಲ. ಎರಡು ದಿನಗಳ ಹಿಂದೆ ಯೂರೊ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಬ್ರಿಟನ್‌ ಆಟಗಾರ್ತಿಯರು ಸ್ಪೇನ್‌ ತಂಡವನ್ನು ಸೋಲಿಸುತ್ತಿದ್ದಂತೆ ಇತ್ತ ಭಾರತ ಸಂಭ್ರಮಪಟ್ಟಿದೆ. ಈ ಸೋಲಿನಿಂದ ಸ್ಪೇನ್‌ ತಂಡದ ಒಲಿಂಪಿಕ್ಸ್‌ ಕನಸು ಕಮರಿಹೋಯಿತು. ಫೈನಲ್‌ ತಲುಪಿದ ಬ್ರಿಟನ್‌ ಮತ್ತು ನೆದರ್‌ಲೆಂಡ್ಸ್‌ ತಂಡಗಳೆರಡೂ ಅದಾಗಲೇ ರಿಯೊಗೆ ರಹದಾರಿ ಪಡೆದಾಗಿದೆ. ಹೀಗಾಗಿ ಆಂಟ್ವರ್ಪ್‌ನಲ್ಲಿ ಐದನೇ ಸ್ಥಾನ ಪಡೆದ ಭಾರತಕ್ಕೆ ಅರ್ಹತೆಯ ಅದೃಷ್ಟ ಒಲಿದು ಬಂದಿದೆ. ಇದು ಅನಿರೀಕ್ಷಿತ. ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಹುಟ್ಟುಹಬ್ಬದ ದಿನವೇ ಇಂತಹದ್ದೊಂದು ಸುದ್ದಿ ಬಂದಿರುವುದು ಅರ್ಥಪೂರ್ಣ. ಮಾಸ್ಕೊದಲ್ಲಿ 1980ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಹಾಕಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಆ ಸಲ ಭಾರತ 4ನೇ ಸ್ಥಾನ ಗಳಿಸಿತ್ತು. ಆ ಕೂಟವನ್ನು ಅಮೆರಿಕ ಮತ್ತು ಅದರ ಬೆಂಬಲಿತ ದೇಶಗಳು ಬಹಿಷ್ಕರಿಸಿದ್ದವು. ಹೀಗಾಗಿ ಹಾಕಿಯ ಪ್ರಬಲ ಶಕ್ತಿಗಳು ಅಲ್ಲಿ ಪಾಲ್ಗೊಂಡಿರಲಿಲ್ಲ. ಆ ಒಲಿಂಪಿಕ್ಸ್‌ ಮುಗಿದು 36 ವರ್ಷಗಳು ಉರುಳಿದ ನಂತರ ಮೊದಲ ಬಾರಿಗೆ ಭಾರತ ಅರ್ಹತೆ ಗಳಿಸಿರುವುದರಿಂದ ಇದೊಂದು ಮಹತ್ತರ ಸಂಗತಿಯೇ ಆಗಿದೆ. ಏಷ್ಯನ್‌ ಕ್ರೀಡಾಕೂಟದ ಚಾಂಪಿಯನ್ಸ್‌ ದಕ್ಷಿಣ ಕೊರಿಯ, ಪಾನ್‌ ಅಮೆರಿಕ ಕ್ರೀಡಾಕೂಟದ ಚಾಂಪಿಯನ್ಸ್‌ ಅರ್ಜೆಂಟಿನಾ ಅಲ್ಲದೆ ಬ್ರಿಟನ್‌, ನೆದರ್‌ಲೆಂಡ್ಸ್‌, ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಅಮೆರಿಕ, ಜರ್ಮನಿ ತಂಡಗಳು ರಿಯೊ ಒಲಿಂಪಿಕ್ಸ್‌ನಲ್ಲಿ ಆಡಲಿವೆ. ಈ ಬಲಿಷ್ಠ ತಂಡಗಳ ಎದುರು ಭಾರತ ಅದೆಷ್ಟರ ಮಟ್ಟಿಗೆ ಸವಾಲು ಒಡ್ಡಲಿದೆ ಎನ್ನುವುದು ಕುತೂಹಲದ ಸಂಗತಿ. ಮಹಿಳಾ ಹಾಕಿ ಲೋಕದಲ್ಲಿ ಭಾರತಕ್ಕೆ ಹೆಮ್ಮೆಯ ಪರಂಪರೆ ಇದೆ. ಸರಿಯಾಗಿ ಒಂದು ದಶಕದ ಹಿಂದೆ ಭಾರತ ತಂಡದ ಆಟಗಾರ್ತಿಯರನ್ನು ‘ಚಿನ್ನದ ಹುಡುಗಿಯರು’ ಎಂದೇ ಕರೆಯಲಾಗುತ್ತಿತ್ತು. ಆಗ ಮೂರು ವರ್ಷಗಳ ಅವಧಿಯಲ್ಲಿ ಕಾಮನ್‌ವೆಲ್ತ್‌, ಆಫ್ರೋ ಏಷ್ಯಾ ಮತ್ತು ಏಷ್ಯಾ ಕಪ್‌ ಕ್ರೀಡಾಕೂಟಗಳಲ್ಲಿ ಭಾರತದ ಆಟಗಾರ್ತಿಯರು ಬಂಗಾರದ ಸಾಧನೆ ಮಾಡಿದ್ದರು. ತಮ್ಮ ಶ್ರೇಷ್ಠ ಸಾಮರ್ಥ್ಯದಿಂದ ಒಂದು ಪೀಳಿಗೆಯ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಆ ತಂಡದ ಸಾಧನೆಯ ಪ್ರಭಾವಕ್ಕೆ ಒಳಗಾಗಿ ಬಾಲಿವುಡ್‌ನಲ್ಲಿ ಚಲನಚಿತ್ರವೊಂದು ನಿರ್ಮಾಣಗೊಂಡಿತ್ತು. ಅದೂ ಜನಪ್ರಿಯವಾಗಿತ್ತು. ನಂತರದ ದಿನಗಳಲ್ಲಿ ಭಾರತದ ಆಟಗಾರ್ತಿಯರು ಒಂದಿಲ್ಲಾ ಒಂದು ಪ್ರಮುಖ ಟೂರ್ನಿಯಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುತ್ತಲೇ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಬಲ ಚೀನಾವನ್ನು ಮಣಿಸಿ ಮೂರನೇ ಸ್ಥಾನಕ್ಕೇರಿದ್ದರೆ, ಹೋದವರ್ಷ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗಳಿಸಿತ್ತು. ಜಪಾನ್‌, ಚೀನಾ, ದಕ್ಷಿಣ ಕೊರಿಯಾ ತಂಡಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸೋಲಿಸಿರುವ ಭಾರತ ತಂಡ, ಮಹಿಳಾ ಹಾಕಿಯಲ್ಲಿ ಏಷ್ಯಾದ ಮಟ್ಟಿಗೆ ಶಕ್ತಿಕೇಂದ್ರ ಎನ್ನುವುದಂತೂ ನಿಜ. 40 ವರ್ಷಗಳ ಹಿಂದೆ ನಡೆದಿದ್ದ ಮೊದಲ ಮಹಿಳಾ ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತ, ಎರಡು ವರ್ಷಗಳ ಹಿಂದೆ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದಿದೆ. ವಿಶ್ವ ಲೀಗ್‌ನಲ್ಲಿ ಈ ವರ್ಷ ತಾನು ಆಡಿದ ಬಹುತೇಕ ಪಂದ್ಯಗಳಲ್ಲಿ ಭಾರತ ಸಮಬಲದ ಸಾಮರ್ಥ್ಯ ತೋರಿದೆ. ಜಪಾನ್‌ ತಂಡವನ್ನು ಮಣಿಸಿದ ಪರಿಯಂತೂ ರೋಚಕ. ಆಕ್ರಮಣ, ರಕ್ಷಣಾ ವ್ಯೂಹಗಳಲ್ಲೆಲ್ಲಾ ಗಮನ ಸೆಳೆದಿದೆ. ಕೆನಡಾದ ಮಥಿಯಾಸ್‌ ಅರೆನ್ಸ್‌ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡ ರಿಯೊದಲ್ಲಿ ಪದಕ ಗೆಲ್ಲುವ ಮಹದಾಸೆ ಇರಿಸಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.