ಅರ್ಥವ್ಯವಸ್ಥೆಯ ಚಹರೆ ಬದಲು ಆರ್ಥಿಕ ಸೇರ್ಪಡೆಯ ದೃಢ ಹೆಜ್ಜೆ ಸಣ್ಣ ಉದ್ದಿಮೆದಾರರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಹಣ ಪಾವತಿ ಮತ್ತು ಸ್ವೀಕೃತಿಯಂತಹ ಕನಿಷ್ಠ ಬ್ಯಾಂಕಿಂಗ್‌ ಸೌಲಭ್ಯಗಳನ್ನು ವಿಸ್ತರಿಸುವ ಮೂಲ ಉದ್ದೇಶದ ಪೇಮೆಂಟ್ಸ್‌ ಬ್ಯಾಂಕ್‌ಗಳ ಸ್ಥಾಪನೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತಾತ್ವಿಕ ಅನುಮತಿ ನೀಡಿದೆ. ಇದು ಆರ್ಥಿಕ ಸೇರ್ಪಡೆ ಮತ್ತು ಇನ್ನಷ್ಟು ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ಮಹತ್ವದ ನಿರ್ಧಾರ. ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆ ಸೇರಿದಂತೆ ಖಾಸಗಿ ವಲಯದ 11 ಸಂಸ್ಥೆಗಳಿಗೆ ಪೇಮೆಂಟ್ಸ್‌ ಬ್ಯಾಂಕ್‌ ಸ್ಥಾಪನೆಗೆ ನೀಡಿರುವ ಅನುಮತಿಯು ಮುಂಬರುವ ದಿನಗಳಲ್ಲಿ ದೇಶಿ ಹಣಕಾಸು ಸೇವಾ ರಂಗದಲ್ಲಿ ಗುಣಾತ್ಮಕ ಬದಲಾವಣೆಗೆ ಖಂಡಿತವಾಗಿಯೂ ಕಾರಣವಾಗಲಿದೆ. ಜನರ ಬ್ಯಾಂಕಿಂಗ್ ವಹಿವಾಟಿನ ಪ್ರವೃತ್ತಿಯನ್ನೇ ಇವು ಬದಲಿಸಲಿರುವುದರಿಂದ ಒಟ್ಟಾರೆ ಅರ್ಥವ್ಯವಸ್ಥೆಯ ಚಹರೆಯೇ ಬದಲಾಗಲಿದೆ. ಆರ್ಥಿಕ ಚಟುವಟಿಕೆಗಳಿಂದ ದೂರ ಇದ್ದವರೂ ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್‌ ಚಟುವಟಿಕೆಗಳ ವ್ಯಾಪ್ತಿಗೆ ಬರುವುದರಿಂದ ದೇಶಿ ಅರ್ಥ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಬಹುದಾಗಿದೆ. ‘ಆರ್‌ಬಿಐನ ಈ ನಡೆಯು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಮಾರಕವಾಗಲಿದೆ. ಈ ಬ್ಯಾಂಕ್‌ಗಳ ಜೀವಾಳವಾಗಿರುವ ಠೇವಣಿಗಳ ಸಂಗ್ರಹಕ್ಕೆ ಹೊಡೆತ ಬಿದ್ದು, ಅವುಗಳ ಬೇರುಗಳನ್ನೇ ಕತ್ತರಿಸಿದಂತಾಗುತ್ತದೆ’ ಎನ್ನುವ ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ (ಎಐಬಿಇಎ) ಆತಂಕದಲ್ಲಿ ಯಾವುದೇ ಹುರುಳಿಲ್ಲ. ಆದರೆ, ಪಿಎಸ್‌ಬಿಗಳಿಗೆ ತೀವ್ರ ಸ್ಪರ್ಧೆ ಎದುರಾಗಲಿರುವುದು ಮತ್ತು ದೀರ್ಘಾವಧಿಯಲ್ಲಿ ಅವುಗಳ ಮಾರುಕಟ್ಟೆಯಲ್ಲಿನ ಪಾಲನ್ನೂ ನುಂಗಿ ಹಾಕುವ ಅಪಾಯ ಇರುವುದಂತೂ ನಿಜ. ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿಗಳಷ್ಟು ಭಾರಿ ಮೊತ್ತದ ಬಂಡವಾಳ ನೆರವು ಘೋಷಿಸಿರುವಾಗ ಮುಂಬರುವ ದಿನಗಳಲ್ಲಿಯೂ ಅವುಗಳ ಅಸ್ತಿತ್ವ ಮತ್ತು ಮಹತ್ವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಒದಗಲಾರದು. ಪೇಮೆಂಟ್ಸ್‌ ಬ್ಯಾಂಕ್‌ಗಳು ಯಾವುದೇ ಬಗೆಯ ಸಾಲ ನೀಡುವುದರ ಮೇಲೆ ನಿರ್ಬಂಧ ಇರುವುದರಿಂದ ಮತ್ತು ತೀವ್ರ ಸ್ವರೂಪದ ಹೊಸ ಪೈಪೋಟಿಯ ದಿನಗಳಲ್ಲಿ, ಸಾಲ ನೀಡಿಕೆ ಮತ್ತು ವಸೂಲಾಗದ ಸಾಲಗಳ ವಸೂಲಾತಿಯಲ್ಲಿ ಧೋರಣೆ ಬದಲಿಸಿಕೊಂಡರೆ ಮಾತ್ರ ಪಿಎಸ್‌ಬಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಾವು. ದೇಶದೆಲ್ಲೆಡೆ ಚಾಲ್ತಿಗೆ ಬರಲಿರುವ ಹೊಸ ಸ್ವರೂಪದ ಪೇಮೆಂಟ್ಸ್ ಬ್ಯಾಂಕ್‌ಗಳು ಠೇವಣಿ ಸ್ವೀಕಾರ, ಎಟಿಎಂ / ಡೆಬಿಟ್‌ ಕಾರ್ಡ್‌, ಮೊಬೈಲ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ವಿಮೆ,‌ಮ್ಯುಚುವಲ್ ಫಂಡ್‌ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಿದ್ದರೂ, ಸಾಲ ನೀಡಿಕೆ ಮತ್ತು ಕ್ರೆಡಿಟ್‌ ಕಾರ್ಡ್‌ ಸೇವೆ ಒದಗಿಸುವುದಿಲ್ಲ. ಒಂದೂವರೆ ವರ್ಷದೊಳಗೆ ನಿಗದಿತ ನಿಬಂಧನೆಗಳನ್ನು ಪೂರ್ಣಗೊಳಿಸಿ ಇಂತಹ ಬ್ಯಾಂಕ್‌ಗಳನ್ನು ಕಾರ್ಯಾರಂಭ ಮಾಡಬೇಕಾಗಿದೆ. ದೂರದ ಗ್ರಾಮೀಣ ಪ್ರದೇಶಗಳಲ್ಲೂ ಡಿಜಿಟಲ್‌ ಹಣಕಾಸು ಸೇರ್ಪಡೆ ಮತ್ತು ಇ– ವಾಣಿಜ್ಯ ಚಟುವಟಿಕೆಗಳಿಗೆ ಅಂಚೆ ಇಲಾಖೆಯ ವ್ಯಾಪಕವಾದ ಸೇವಾ ಜಾಲವು ಇನ್ನಷ್ಟು ಚೇತರಿಕೆ ನೀಡಲಿದೆ. ಬಹುತೇಕ ಖಾಸಗಿ ಸಂಸ್ಥೆಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಅಂಚೆ ಇಲಾಖೆಯೂ ರಚನಾತ್ಮಕವಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಇಲಾಖೆಯ ಸರ್ವ ವ್ಯಾಪಕತೆಯು ಈ ನಿಟ್ಟಿನಲ್ಲಿ ಸಾಕಷ್ಟು ಅನುಕೂಲ ಕಲ್ಪಿಸಲಿದೆ. ಅಂಚೆ ಇಲಾಖೆಯೂ ಸೇರಿದಂತೆ ಅನುಮತಿ ಪಡೆದಿರುವ ಕೆಲ ಸಂಸ್ಥೆಗಳು ಪರಸ್ಪರ ಪಾಲುದಾರಿಕೆಯಡಿ ಇಂತಹ ಬ್ಯಾಂಕ್‌ಗಳನ್ನು ಆರಂಭಿಸುವ ಆಲೋಚನೆ ಹೊಂದಿದ್ದು, ಈ ಬಗ್ಗೆ ಆರ್‌ಬಿಐ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಬೇಕಾಗಿದೆ. ಪೇಮೆಂಟ್ಸ್‌ ಬ್ಯಾಂಕ್‌ಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಪ್ರತಿಕೂಲ ಸ್ಪರ್ಧೆ ಬದಲಿಗೆ, ಆರೋಗ್ಯಕರ ಸಂಘಟಿತ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೆ, ಬ್ಯಾಂಕಿಂಗ್‌ ಸೇವೆಗಳ ಶುಲ್ಕವೂ ಕಡಿಮೆಯಾಗಿ, ಸೇವಾ ಗುಣಮಟ್ಟವೂ ಸುಧಾರಿಸಲಿದೆ. ಜತೆಗೆ ಸಮಾಜದ ಎಲ್ಲ ವರ್ಗದವರಿಗೂ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಕನಸೂ ನಿಜವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.