ಮೆಟ್ರೊ ವಿಳಂಬ ಸ್ವಯಂಕೃತ ತಂತ್ರಜ್ಞರ ಸಲಹೆ ಗೌರವಿಸಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ‘ನಮ್ಮ ಮೆಟ್ರೊ’ ಕುಂಟುತ್ತ ಸಾಗಿದೆ. ನಿಗದಿತ ಗಡುವಿಗಿಂತ ಸುಮಾರು ಮೂರು ವರ್ಷಗಳಷ್ಟು ಹಿಂದೆ ಬಿದ್ದಿದೆ. ಮೂಲ ಯೋಜನೆಯ ಪ್ರಕಾರ ಇದು 2013ರಲ್ಲಿ ಪೂರ್ಣಗೊಂಡು ಸಾರ್ವಜನಿಕರ ಸಂಪೂರ್ಣ ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಎಂಟು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯ ವೇಗ ನೋಡಿದರೆ 2016ರ ಮಾರ್ಚ್‌ನ ಪರಿಷ್ಕೃತ ಗಡುವಿನಲ್ಲಿಯೂ ಮುಗಿಯುತ್ತದೆ ಎನ್ನುವ ವಿಶ್ವಾಸವಿಲ್ಲ. ವೆಚ್ಚವಂತೂ ಈಗಲೇ ಶೇ 60ರಷ್ಟು ಹೆಚ್ಚಾಗಿದೆ. ಅದೇ ರೀತಿ ದಶಕಗಳ ಕನಸಿನ ಬೆಂಗಳೂರು- ಮೈಸೂರು ಅತಿ ವೇಗದ ರೈಲು ಯೋಜನೆಯದ್ದೂ ಇದೇ ಸ್ಥಿತಿ. ಇನ್ನೂ ‘ಸಮೀಕ್ಷೆ, ಪರಿಶೀಲನೆ, ನೋಡೋಣ- ಮಾಡೋಣ’ ಹಂತದಲ್ಲಿಯೇ ಇದೆ. ಒಂದೊಂದು ದಿನದ ವಿಳಂಬ ಕೂಡ ಬೊಕ್ಕಸದ ಮೇಲೆ ಹೊರೆಯಷ್ಟೇ ಅಲ್ಲ; ನಾಗರಿಕರಿಗೆ ಸಿಗಬೇಕಾದ ಸೌಲಭ್ಯವನ್ನು ವಂಚಿಸಿದಂತೆ. ಮೆಟ್ರೊ ರೈಲು ಯೋಜನೆ ವಿಷಯದಲ್ಲಿ ವಿಶ್ವ ಮಟ್ಟದಲ್ಲಿಯೂ ಖ್ಯಾತಿ ಗಳಿಸಿರುವ ‘ಮೆಟ್ರೊಮ್ಯಾನ್‌’ ಇ. ಶ್ರೀಧರನ್‌ ಅವರು, ನಮ್ಮ ರಾಜ್ಯದ ಈ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳ ಲೋಪದೋಷಗಳಿಗೆ ಸರಿಯಾಗಿಯೇ ಕನ್ನಡಿ ಹಿಡಿದಿದ್ದಾರೆ. ‘ನಮ್ಮ ಮೆಟ್ರೊ’ ವಿಳಂಬದಿಂದ ಬೆಂಗಳೂರಿನ ನಾಗರಿಕರಲ್ಲಿ ಮಾತ್ರವಲ್ಲ; ಇಡೀ ದೇಶದ ಜನರಲ್ಲಿಯೂ ಭ್ರಮನಿರಸನವಾಗಿದೆ ಎಂಬ ಅವರ ವಿಶ್ಲೇಷಣೆಯಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಈ ಯೋಜನೆಗೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ತರಲಾಗಿದೆ. ಅದರ ಬಡ್ಡಿಯ ಭಾರವನ್ನೂ ತೆರಿಗೆದಾರ ಪ್ರಜೆಗಳು ಹೊರಬೇಕಾಗುತ್ತದೆ. ಅತ್ತ ಸೌಕರ್ಯವೂ ಇಲ್ಲ, ಇತ್ತ ವಿನಾಕಾರಣ ಬಡ್ಡಿ ಕಟ್ಟಬೇಕು. ಇದಕ್ಕೆಲ್ಲ ಮುಖ್ಯ ಕಾರಣ, ಆಯಾ ಕಾಲದಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಧೋರಣೆ, ದೂರದೃಷ್ಟಿಯ ಕೊರತೆ ಎಂಬುದರಲ್ಲಿ ಎರಡನೇ ಮಾತಿಲ್ಲ. ನಮ್ಮ ಸರ್ಕಾರಗಳಿಗೆ ಏನಾಗುತ್ತಿದೆಯೋ ಗೊತ್ತಿಲ್ಲ. ಅವಕ್ಕೆ ಐಎಎಸ್ ಅಧಿಕಾರಿಗಳ ಮೇಲೆ ವಿಪರೀತ ವ್ಯಾಮೋಹ, ಮಿತಿಮೀರಿದ ಭರವಸೆ. ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳಾದರೆ ಸರಿ. ಆದರೆ ತಾಂತ್ರಿಕ ಜ್ಞಾನ, ಅನುಭವ ಬೇಡುವ ಹುದ್ದೆಗಳಿಗೂ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡುವ ಚಪಲ. ನಮ್ಮ ಮೆಟ್ರೊ ಇದುವರೆಗೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ಕಂಡಿದೆ. ಆದರೆ ಅವರ್‍ಯಾರೂ ಮೆಟ್ರೊದಂಥ ಮಹತ್ವದ ಯೋಜನೆಗೆ ಬೇಕಾದ ತಾಂತ್ರಿಕ ಪರಿಣತಿ ಹೊಂದಿದವರಲ್ಲ. ಬೆಂಗಳೂರಿನ ಈ ಅನುಭವಕ್ಕೆ ವ್ಯತಿರಿಕ್ತವಾಗಿ, ಶ್ರೀಧರನ್‌ ಅವರಂತಹ ತಾಂತ್ರಿಕ ತಜ್ಞರೊಬ್ಬರ ನೇತೃತ್ವದಲ್ಲಿ ದೆಹಲಿ ಮೆಟ್ರೊ ಯೋಜನೆ ಕಾಲಮಿತಿಯಲ್ಲಿ ಮುಗಿದಿದೆ. ನಿತ್ಯ ಸಂಚರಿಸುವ ಲಕ್ಷಾಂತರ ಜನರ ಸಮಯ ಉಳಿಸಿದೆ, ಪ್ರಯಾಣ ಕಾಲದ ಸಂಕಷ್ಟ ಕಡಿಮೆ ಮಾಡಿದೆ, ದೇಶದ ಇತರ ನಗರಗಳಿಗೂ ಸ್ಫೂರ್ತಿಯಾಗಿದೆ. ಅದರಿಂದಾಗಿಯೇ 12 ನಗರಗಳು ಮೆಟ್ರೊ ಅಳವಡಿಸಿಕೊಳ್ಳಲು ಕ್ರಮ ಕೈಗೊಂಡಿವೆ. ಏಳು ನಗರಗಳಲ್ಲಿ ಈಗಾಗಲೆ ಕಾಮಗಾರಿ ಭರದಿಂದ ನಡೆಯುತ್ತಿದೆ. ನೆರೆ ರಾಜ್ಯ ಕೇರಳದ ಕೊಚ್ಚಿಯಲ್ಲಿ ಮೆಟ್ರೊ ಯೋಜನೆ ಮೂರೇ ವರ್ಷಗಳಲ್ಲಿ ಮುಗಿಯುವತ್ತ ದಾಪುಗಾಲು ಹಾಕುತ್ತಿದೆ. ‘ಬೆಂಗಳೂರು ಮೆಟ್ರೊ ಉಸ್ತುವಾರಿ ಅಧಿಕಾರಿಗಳು ಅಹಂ ಬಿಡಬೇಕು. ಬೇರೆ ಕಡೆಯ ಕಾಮಗಾರಿಗಳ ಅನುಭವದಿಂದ ಕಲಿಯಬೇಕು’ ಎಂಬ ಶ್ರೀಧರನ್ ಅವರ ಹಿತವಚನ ನಮ್ಮ ಜನಪ್ರತಿನಿಧಿಗಳ, ಅಧಿಕಾರಿಗಳ ತಲೆಗೆ ಹೋಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರು ಮೆಟ್ರೊ ಯೋಜನೆಗೆ ಖರ್ಚಾಗುತ್ತಿರುವುದು ಸಾರ್ವಜನಿಕರ ಹಣ. ಆದರೆ ಪ್ರಜೆಗಳಿಗೆ ಅದು ಕಾಲಕಾಲಕ್ಕೆ ಪ್ರಗತಿಯ ಪಟ್ಟಿ ಸಲ್ಲಿಸಿದ ಉದಾಹರಣೆಯೇ ಇಲ್ಲ. ಮುಖ್ಯಮಂತ್ರಿಯಾದ ಹೊಸದರಲ್ಲಿ ಚೀನಕ್ಕೆ ಹೋಗಿ ಬಂದ ಸಿದ್ದರಾಮಯ್ಯನವರು ಅಲ್ಲಿಯ ಮಾದರಿಯಲ್ಲಿ ಬೆಂಗಳೂರು– ಮೈಸೂರು ಮಧ್ಯೆ ಬುಲೆಟ್‌ ರೈಲು ಯೋಜನೆ ಕೈಗೆತ್ತಿಕೊಳ್ಳುವ ಘೋಷಣೆ ಮಾಡಿದ್ದರು. ಆದರೆ ‘100 ಕಿ.ಮೀ. ಅಂತರದ ಪ್ರಯಾಣಕ್ಕೆ ಬುಲೆಟ್‌ ರೈಲು ಅನಗತ್ಯ, ಅದಕ್ಕೆ ಖರ್ಚೂ ಹೆಚ್ಚು, ಅಷ್ಟೊಂದು ಪ್ರಯೋಜನವಿಲ್ಲ’ ಎಂದು ವಿವರಿಸಿ, ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ವೇಗದ ರೈಲು ಯೋಜನೆ ಹೇಗೆ ಕಾರ್ಯತಗೊಳಿಸಬಹುದು ಎಂದು ಶ್ರೀಧರನ್‌, ಮುಖ್ಯಮಂತ್ರಿಗಳಿಗೆ ಸಾಧ್ಯತಾ ವರದಿ ಕಳಿಸಿದ್ದರು. ಆದರೆ ಎರಡು ವರ್ಷ ಕಳೆದರೂ ಆ ಪತ್ರಕ್ಕೆ ಉತ್ತರಿಸುವ ಸೌಜನ್ಯವಾಗಲಿ, ಪುರುಸೊತ್ತಾಗಲಿ ನೂರಾರು ಸಿಬ್ಬಂದಿ ಸೈನ್ಯವನ್ನು ಹೊಂದಿದ ಮುಖ್ಯಮಂತ್ರಿ ಕಚೇರಿಗೆ ಇಲ್ಲ. ಇದು ತಾಂತ್ರಿಕ ಪರಿಣತರನ್ನು ಸರ್ಕಾರ ನಡೆಸಿಕೊಳ್ಳುವ ರೀತಿ. ಇನ್ನಾದರೂ ಇಂಥ ಉದಾಸೀನ ಬಿಟ್ಟು, ಶ್ರೀಧರನ್‌ ನೀಡಿದ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.