ಹೂಡಿಕೆದಾರರ ವಿಶ್ವಾಸ ವೃದ್ಧಿಸುವ ಕ್ರಮ ಅಗತ್ಯ ಚೀನಾದ ಕರೆನ್ಸಿ ಯುವಾನ್‌ ಅಪಮೌಲ್ಯ ಮತ್ತು ಅದರ ಆರ್ಥಿಕ ಆರೋಗ್ಯಕ್ಕೆ ಸಂಬಂಧಿಸಿದ ಆತಂಕವು ಮುಂಬೈ ಷೇರುಪೇಟೆ (ಬಿಎಸ್‌ಇ) ಸೇರಿದಂತೆ ವಿಶ್ವದ ಪ್ರಮುಖ ಹಣಕಾಸು ಪೇಟೆಗಳ ಸೋಮವಾರದ ವಹಿವಾಟಿನಲ್ಲಿ ಭಾರಿ ತಲ್ಲಣ ಮೂಡಿಸಿದೆ. ಷೇರುಗಳ ಮಾರಾಟದ ಸುನಾಮಿ ಹೊಡೆತಕ್ಕೆ ಷೇರುಪೇಟೆಗಳು ತತ್ತರಿಸಿ ಹೋಗಿವೆ. ಮುಂಬೈ ಷೇರುಪೇಟೆ ವಹಿವಾಟು ದಿನವೊಂದರ ವಹಿವಾಟಿನಲ್ಲಿ ಇದುವರೆಗಿನ ಗರಿಷ್ಠ ಕುಸಿತ ಕಾಣಲು ಬಾಹ್ಯ ವಿದ್ಯಮಾನಗಳ ಪ್ರಭಾವವೇ ಪ್ರಮುಖ ಕಾರಣ. ಇದು ನಮ್ಮ ಹಣಕಾಸು ಸಂಸ್ಥೆಗಳ ಪಾಲಿಗೆ ಪರೀಕ್ಷೆಯ ಕಾಲವೂ ಹೌದು ಎಂದರೂ, ಎಲ್ಲೆಡೆ ‘ಮಾರಾಟದ ಉನ್ಮಾದ’ ಕಂಡು ಬಂದಿರುವುದು ಅತಿಯಾದ ಪ್ರತಿಕ್ರಿಯೆ ಎಂದೂ ಭಾಸವಾಗುತ್ತದೆ. ಶಾಂಘೈನಿಂದ ಆರಂಭವಾದ ಈ ಕುಸಿತವು ಜಪಾನ್, ಯುರೋಪ್, ಭಾರತ ಮತ್ತು ಅಮೆರಿಕದ ಷೇರುಪೇಟೆಗಳ ಪಾಲಿಗೆ ‘ಕಪ್ಪು ಸೋಮವಾರ’ವಾಗಿ ಕಾಡಿದೆ. ಭಾರತದ ಹಣಕಾಸು ಮತ್ತು ಕರೆನ್ಸಿ ಮಾರುಕಟ್ಟೆಗಳಂತೂ ಒಂದೇ ದಿನದಲ್ಲಿ ಕುಸಿತದ ಆಘಾತಕ್ಕೆ ತತ್ತರಿಸಿ ಹೋದವು. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರಿಗೆ ₨ 7 ಲಕ್ಷ ಕೋಟಿಗಳಷ್ಟು ಸಂಪತ್ತಿನ ನಷ್ಟ ಉಂಟಾಗಿದೆ. ಹೂಡಿಕೆದಾರರ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಡಾಲರ್‌ ಎದುರಿನ ರೂಪಾಯಿ ವಿನಿಮಯ ಮೌಲ್ಯವು ಎರಡು ವರ್ಷಗಳ ಹಿಂದಿನ ಕನಿಷ್ಠ ಬೆಲೆಯಾದ ₨ 66.64ಕ್ಕೆ ಕುಸಿದಿದೆ. ಡಾಲರ್‌ ಹೂಡಿಕೆದಾರರು ವಿಶ್ವದಾದ್ಯಂತ ಅಪಮೌಲ್ಯಗೊಳ್ಳುತ್ತಿರುವ ಕರೆನ್ಸಿಗಳ ಆರ್ಥಿಕತೆಯಿಂದ ದೂರ ಸರಿಯುತ್ತಿರುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಷೇರುಪೇಟೆ ವಹಿವಾಟು ದೇಶವೊಂದರ ಅರ್ಥ ವ್ಯವಸ್ಥೆಯ ನಾಡಿ ಮಿಡಿತ ಇದ್ದಂತೆ. ವಹಿವಾಟಿನ ಏರಿಳಿತವು ಅದರ ಸಾಮಾನ್ಯ ಲಕ್ಷಣ. ಹೀಗಾಗಿ ಹೂಡಿಕೆದಾರರು ಹೆಚ್ಚು ಆತಂಕಪಡಬೇಕಾದ ಅಗತ್ಯ ಇಲ್ಲ. ‘ಷೇರುಪೇಟೆಯಲ್ಲಿನ ಈ ಕುಸಿತವು ತಾತ್ಕಾಲಿಕ. ದೇಶದ ಆರ್ಥಿಕ ತಳಹದಿ ಗಟ್ಟಿಯಾಗಿದೆ. ಹೂಡಿಕೆದಾರರು ಆತಂಕಪಡಬೇಕಾಗಿಲ್ಲ’ ಎಂದು ಹಣಕಾಸು ಸಚಿವರು ಭರವಸೆ ತುಂಬುವ ಮಾತುಗಳನ್ನಾಡಿರುವುದು ಸಕಾಲಿಕವಾಗಿದ್ದರೂ, ಭವಿಷ್ಯದಲ್ಲಿನ ಸಂಭವನೀಯ ಆರ್ಥಿಕ ಬಿಕ್ಕಟ್ಟು ತಡೆಗಟ್ಟಲು ಇನ್ನಷ್ಟು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದ್ದೇ ಇದೆ. ಕೆಳಮಟ್ಟದಲ್ಲಿ ಇರುವ ಚಾಲ್ತಿ ಖಾತೆ ಕೊರತೆ ಹಾಗೂ ವಿತ್ತೀಯ ಕೊರತೆಯ ಶಿಸ್ತು, ತೃಪ್ತಿದಾಯಕ ಮಟ್ಟದಲ್ಲಿ ಇರುವ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಕಾರಣದಿಂದಾಗಿ ದೇಶದ ಆರ್ಥಿಕ ತಳಹದಿ ಗಟ್ಟಿಯಾಗಿದೆ. ಹೀಗಾಗಿ ಹೂಡಿಕೆದಾರರು ಧೃತಿಗೆಡಬೇಕಾಗಿಲ್ಲ. ಜಾಗತಿಕ ಅನಿಶ್ಚಿತತೆ ಕೊನೆಗೊಳ್ಳುವವರೆಗೂ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುವುದು ಅವಶ್ಯ. ವಿದೇಶಿ ಸಾಂಸ್ಥಿಕ ಮತ್ತು ದೇಶದ ಸಾಮಾನ್ಯ ಹೂಡಿಕೆದಾರರೂ ಸೇರಿದಂತೆ ಎಲ್ಲರಲ್ಲೂ ಮನೆ ಮಾಡಿರುವ ಆತಂಕವನ್ನು ತುರ್ತಾಗಿ ಮತ್ತು ರಚನಾತ್ಮಕವಾಗಿ ದೂರ ಮಾಡಬೇಕಾಗಿದೆ. ಎಲ್ಲ ಬಗೆಯ ಹೂಡಿಕೆದಾರರು ಷೇರುಪೇಟೆ ವಹಿವಾಟಿನಿಂದ ದೂರ ಸರಿಯದಂತೆ ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಸದ್ಯದ ತುರ್ತು ಆದ್ಯತೆಯಾಗಿದೆ. ಈ ಬಿಕ್ಕಟ್ಟು ಒಂದರ್ಥದಲ್ಲಿ ಭಾರತದ ಪಾಲಿಗೆ ಒದಗಿ ಬಂದಿರುವ ಸದವಕಾಶ ಎಂದೂ ಪರಿಗಣಿಸಬಹುದಾಗಿದೆ. ಜಾಗತಿಕ ಬಿಕ್ಕಟ್ಟಿಗೆ ಭಾರತವು ಸ್ಪಂದಿಸುವ ಪರಿಯು ನಮ್ಮ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತಗೊಳಿಸಲಿದೆ. ರೂಪಾಯಿ ವಿನಿಮಯ ಮೌಲ್ಯ ಕಡಿಮೆಯಾಗಿರುವುದರಿಂದ ದೇಶಿ ಸರಕುಗಳ ರಫ್ತಿಗೆ ಉತ್ತೇಜನ ದೊರೆಯಲಿದೆ. ದೇಶದೊಳಗೆ ಸರಕುಗಳನ್ನು ತಂದು ಸುರಿಯುವುದರ ಮೇಲೆ ನಿರ್ಬಂಧ ವಿಧಿಸುವುದರ ಮೇಲೂ ಸರ್ಕಾರ ಗಮನ ಹರಿಸಬೇಕಾಗಿದೆ. ಸಕಾಲಕ್ಕೆ ಬಡ್ಡಿ ದರಗಳು ಇನ್ನಷ್ಟು ಕಡಿತವಾದರೆ ಅದರಿಂದ ಗ್ರಾಹಕರ ಮತ್ತು ಹೂಡಿಕೆದಾರರ ವಿಶ್ವಾಸ ಇನ್ನಷ್ಟು ಹೆಚ್ಚಲಿದೆ. ಸದ್ಯಕ್ಕೆ ಉದ್ಭವಿಸಿರುವ ಅಸ್ಥಿರ ಪರಿಣಾಮವೂ ದೂರವಾಗಲಿದೆ. ದೇಶಿ ಹಣಕಾಸು ಮಾರುಕಟ್ಟೆಯ ಸ್ಥಿರತೆಯು ವಿದೇಶಿ ಹೂಡಿಕೆದಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವಾಗ ಬಾಹ್ಯ ಬಂಡವಾಳ ಹೂಡಿಕೆ ಉತ್ತೇಜಿಸುವ ಸವಾಲನ್ನು ಸರ್ಕಾರ ಮತ್ತು ಆರ್‌ಬಿಐ ಸಮರ್ಥವಾಗಿ ನಿಭಾಯಿಸುವಂತಾದರೆ, ಪೇಟೆಯಲ್ಲಿ ಹೂಡಿಕೆದಾರರ ಅದರಲ್ಲೂ ವಿಶೇಷವಾಗಿ ವಿದೇಶಿಗರ ವಿಶ್ವಾಸ ಮರಳಿ ಬಂದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.