ಬಂದ್‌, ರಸ್ತೆ ತಡೆಯಿಂದ ಅನನುಕೂಲ ಯಾರಿಗೆ? ಮಹಾದಾಯಿ ನದಿಯನ್ನು ಮಲಪ್ರಭಾಕ್ಕೆ ಜೋಡಣೆ ಮಾಡಬೇಕು ಎಂದು ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಮತ್ತು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ರೈತರು ನಡೆಸುತ್ತಿರುವ ಚಳವಳಿ ತೀವ್ರಗೊಂಡಿದ್ದು ಹಿಂಸೆಗೆ ತಿರುಗಿದೆ. ಹುಬ್ಬಳ್ಳಿ, ಧಾರವಾಡ, ನವಲಗುಂದ, ನರಗುಂದಗಳು ಪದೇ ಪದೇ ಬಂದ್‌ನಿಂದಾಗಿ ನಲುಗಿವೆ. ಸೋಮವಾರ ದೆಹಲಿಗೆ ತೆರಳಿದ್ದ ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಭರವಸೆ ನೀಡುತ್ತಾರೆ ಎಂಬ ಅಚಲ ವಿಶ್ವಾಸವನ್ನು ಚಳವಳಿಗಾರರು ಹೊಂದಿದ್ದರು. ಆದರೆ ಖಚಿತ ಭರವಸೆ ದೊರೆತಿಲ್ಲ. ರಾಜಕೀಯ ಒಮ್ಮತ ಮೂಡಿಸಬೇಕು ಎಂಬ ಸಲಹೆಯ ಮಟ್ಟಿಗಷ್ಟೇ ಪ್ರಧಾನಿ ಹೇಳಿಕೆ ಸೀಮಿತಗೊಂಡದ್ದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಸೋಮವಾರ ಸಂಜೆ ಈ ವರ್ತಮಾನ ಹೊರಬೀಳುತ್ತಿದ್ದಂತೆ ನವಲಗುಂದ ಮತ್ತು ನರಗುಂದಗಳಲ್ಲಿ ಚಳವಳಿ ಹಿಂಸಾಚಾರಕ್ಕೆ ತಿರುಗಿತು. ಚಳವಳಿ ತೀವ್ರಗೊಳ್ಳುವುದಕ್ಕೆ ಸರ್ಕಾರದ ನಿಧಾನಗತಿ ಧೋರಣೆಯೇ ಕಾರಣ. ತಿಂಗಳುಗಟ್ಟಲೆ ಧರಣಿ ಸತ್ಯಾಗ್ರಹ ನಡೆಸಿದರೂ ಆಗ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಬದಲಿಗೆ ಚಳವಳಿಯನ್ನು ನಿರ್ಲಕ್ಷಿಸಿತು. ರೈತರ ಮನವೊಲಿಸುವ, ಸರ್ವಪಕ್ಷ ಸಭೆ ನಡೆಸುವ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಿಯೋಗ ಕೊಂಡೊಯ್ಯುವ ಯಾವುದೇ ಪ್ರಯತ್ನಗಳೂ ಆಗಲಿಲ್ಲ. ಈ ಎಲ್ಲ ಅಂಶಗಳು ರೈತರನ್ನು ಕೆರಳಿಸಿದವು. ಚಳವಳಿ ಹಿಂಸಾಚಾರಕ್ಕೆ ತಿರುಗಿದಾಗಷ್ಟೇ ಸರ್ಕಾರ ಸ್ಪಂದಿಸಿದ್ದು. ಆದರೆ ಈ ರೀತಿಯ ಹಿಂಸಾಚಾರ, ಇಡೀ ದಿನದ ರಸ್ತೆ ತಡೆಯಿಂದಾಗಿ ನಮ್ಮ ಜನರಿಗೇ ತೊಂದರೆಯಾಗುತ್ತಿದೆ. ಮೊದಲೇ ಹಳ್ಳಿಗಳಲ್ಲಿ ಆಸ್ಪತ್ರೆ ಸೌಕರ್ಯವಿಲ್ಲ. ತೊಂದರೆಯಲ್ಲಿರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ನಗರಗಳಿಗೆ ಕರೆದೊಯ್ಯಲು ರಸ್ತೆ ತಡೆಯಂತಹ ಚಳವಳಿ ಅಡ್ಡಿಯಾಗುತ್ತಿದೆ. ಪದೇ ಪದೇ ಬಂದ್‌ಗೆ ಕರೆ ನೀಡುವುದರಿಂದ ಅರ್ಥ ವ್ಯವಸ್ಥೆ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರ ನಷ್ಟವೂ ನಮಗೇ. ನೀರು ಸಿಗದಿರುವ ನಷ್ಟದೊಂದಿಗೆ ಆರ್ಥಿಕ ನಷ್ಟವೂ ಸೇರಿಕೊಂಡು ಸಂಕಷ್ಟ ಹೆಚ್ಚಾಗುತ್ತದೆ. ಹಾಗಾಗಿ ಹಿಂಸಾಚಾರಕ್ಕಿಳಿಯುವುದು ಸರಿಯಲ್ಲ. ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಂದಲೆ ನಡೆಸುವುದರಿಂದ ಯಾವುದಾದರೂ ಸಮಸ್ಯೆ ಇತ್ಯರ್ಥವಾಗಲು ಸಾಧ್ಯವೇ? ಬಸ್‌ಗಳಿಗೆ ಬೆಂಕಿ ಹಚ್ಚಿದರೆ ನಾಲೆಗಳಲ್ಲಿ ನೀರು ಹರಿಯುತ್ತದೆಯೇ? ತಹಶೀಲ್ದಾರ್ ಕಚೇರಿಯಲ್ಲಿನ ದಾಖಲೆಗಳನ್ನು ನಾಶಪಡಿಸಿದರೆ ಯಾರಿಗೆ ನಷ್ಟ? ಆ ದಾಖಲೆಗಳು ಯಾರವು? ಅಲ್ಲಿನ ಕುರ್ಚಿ, ಟೇಬಲ್‌, ಕಂಪ್ಯೂಟರ್‌ಗಳನ್ನು ಒಡೆದುಹಾಕಿದರೆ ಹಾನಿ ಯಾರಿಗೆ? ಚಳವಳಿ ಮಾಡುವವರು ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ನಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯ. ಆದರೆ ಅದು ಸಾತ್ವಿಕ ರೂಪದಲ್ಲಿರಬೇಕು. ರಸ್ತೆ ತಡೆ ಕೂಡ ಸಾಂಕೇತಿಕವಾಗಿರಬೇಕು. ಚಳವಳಿ ಬೆಂಬಲಿಸುತ್ತಿರುವ ಮಠಾಧೀಶರು ಈ ಕುರಿತಂತೆ ವಿವೇಕದ ದಾರಿ ತೋರಬೇಕು. ಮಹಾದಾಯಿ ನದಿಯಲ್ಲಿ ಹರಿಯುವುದು ನಮ್ಮ ರಾಜ್ಯದ ನೀರು ಮಾತ್ರವಲ್ಲ. ಇದು ಅಂತರರಾಜ್ಯ ಜಲ ವಿವಾದವಾದ್ದರಿಂದ ಪ್ರಕರಣ ನ್ಯಾಯಮಂಡಳಿ ಮುಂದಿದೆ. ಪ್ರಕರಣ ತ್ವರಿತವಾಗಿ ಇತ್ಯರ್ಥವಾಗಲು ಬೇಕಾದ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೇ, ಮೂರೂ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು ಒಮ್ಮತದ ಅಭಿಪ್ರಾಯ ತಳೆದು ನ್ಯಾಯಮಂಡಳಿಯ ಹೊರಗೆ ರಾಜಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬಹುದು. ಆ ಇಚ್ಛಾಶಕ್ತಿಯನ್ನು ಈ ರಾಜಕೀಯ ಮುಖಂಡರು ಪ್ರದರ್ಶಿಸಬೇಕಷ್ಟೇ. ಆದರೆ ರಾಜಕಾರಣಿಗಳು ಯಾವಾಗಲೂ ಇಂತಹ ಸಂಗತಿಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ದಶಕಗಳ ಹಿಂದೆ ಕಳಸಾ–ಬಂಡೂರಿ ನಾಲಾ ಹೋರಾಟವನ್ನು ಬಳಸಿಕೊಂಡು ರಾಜಕೀಯವಾಗಿ ಮೇಲೇರಿದವರು ಹಲವರಿದ್ದಾರೆ. ಈಗ ನರಗುಂದ ಮತ್ತು ನವಲಗುಂದದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದಿದ್ದರೂ ಅವರಾರೂ ಅತ್ತ ತಿರುಗಿಯೂ ನೋಡಿಲ್ಲ. ಇದು, ಬೇಡಿಕೆಗೆ ಸಂಬಂಧಿಸಿದಂತೆ ಅವರು ಯಾವ ಬದ್ಧತೆಯನ್ನೂ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ. ಚಳವಳಿಗಾರರು ಇನ್ನಾದರೂ ಇಂತಹವರ ಬಗ್ಗೆ ಎಚ್ಚರ ವಹಿಸಬೇಕು. ಜಲ ಸಮಸ್ಯೆ ಯಾವುದೇ ಕಾರಣಕ್ಕೂ ರಾಜಕಾರಣಿಗಳ ಏಳಿಗೆಗೆ ಏಣಿಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ನೀಗುವ ಯೋಜನೆ ಅನುಷ್ಠಾನಕ್ಕೆ ಆಡಳಿತದ ಚುಕ್ಕಾಣಿ ಹಿಡಿದವರು ಅಡ್ಡಿಯಾಗಬಾರದು. ತ್ವರಿತವಾಗಿ ಯೋಜನೆಗಳಿಗೆ ಮಂಜೂರಾತಿ ನೀಡಿ, ಅವು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸಲು ಅಧಿಕಾರಸ್ಥರು ಮುಂದಾಗಬೇಕು. ಮೂರು ದಶಕಗಳ ಹಿಂದೆ ಇಂತಹದ್ದೇ ರೈತ ಬಂಡಾಯದಿಂದಲೇ ಈ ಊರುಗಳು ನಲುಗಿದ್ದವು. ಎಚ್ಚರ ತಪ್ಪಿದರೆ ಈಗಲೂ ಅಂತಹ ಪರಿಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.