ಮೀಸಲು ನೀತಿಯ ತರ್ಕಕ್ಕೆ ಪೆಟ್ಟು , ಆತಂಕಕಾರಿ ಬೆಳವಣಿಗೆ ಇತರ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಟೇಲ್ ಸಮುದಾಯ ಗುಜರಾತ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಸ್ವತಃ ಪ್ರಧಾನಿ, ಶಾಂತಿಗೆ ಮನವಿ ಮಾಡಿದ್ದಾರೆ. ಸುಮಾರು ಎರಡು ತಿಂಗಳಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಈ ಹೋರಾಟದ ನೇತೃತ್ವ ವಹಿಸಿರುವವರು 22 ವರ್ಷದ ಹಾರ್ದಿಕ್ ಪಟೇಲ್. ಮುಖ್ಯಮಂತ್ರಿ ಆನಂದಿ ಬಾಯಿ ಪಟೇಲ್ ಸೇರಿದಂತೆ ಅನೇಕ ಪ್ರಭಾವಿ ರಾಜಕೀಯ ನಾಯಕರನ್ನು ಹೊಂದಿದ ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲು ಆಗ್ರಹಿಸಿ ಹಾರ್ದಿಕ್ ಪಟೇಲ್ ದಿಢೀರನೆ ಪ್ರಚಾರಕ್ಕೆ ಬಂದಿರುವುದು ಅಚ್ಚರಿದಾಯಕ ಬೆಳವಣಿಗೆ. ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ಪ್ರಬಲವಾಗಿರುವ ಪಟೇಲ್ ಸಮುದಾಯ, ಸರ್ಕಾರದ ಶಿಕ್ಷಣ ಹಾಗೂ ಉದ್ಯೋಗಗಳಿಗಾಗಿ ಮೀಸಲು ಕೇಳುತ್ತಿರುವಂತಹ ಸ್ಥಿತಿ ಸೃಷ್ಟಿಯಾಗಿರುವುದು ಆತಂಕಕಾರಿ. ಗುಜರಾತ್‌ನ ಪ್ರಮುಖ ಪಟ್ಟಣಗಳಲ್ಲಿ ಸಾಮಾಜಿಕ ಉದ್ವಿಗ್ನತೆ ಉಂಟುಮಾಡಿರುವ ಪ್ರಸ್ತುತ ಸ್ಥಿತಿ, 1960ರ ದಶಕದಿಂದಲೂ ಗುಜರಾತ್‌ನಲ್ಲಿ ನಡೆದುಕೊಂಡು ಬಂದಿರುವ ವಿದ್ಯಾರ್ಥಿ ಚಳವಳಿ, ಮೀಸಲು ವಿರೋಧಿ ಚಳವಳಿ ಹಾಗೂ 2002ರ ಕೋಮು ಹಿಂಸಾಚಾರಗಳನ್ನು ನೆನಪಿಗೆ ತರುತ್ತದೆ. ಮೀಸಲಿನ ಪ್ರಮಾಣದಲ್ಲಿ ಶೇಕಡ 50ರ ಮಿತಿಯನ್ನು ಸುಪ್ರೀಂ ಕೋರ್ಟ್ ವಿಧಿಸಿರುವುದರಿಂದ ಮೀಸಲು ನೀತಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡುವುದು ಗುಜರಾತ್‌ಗೆ ಸಾಧ್ಯವಿಲ್ಲ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವಂತಹ ವಿಶೇಷ ಯೋಜನೆಯೊಂದನ್ನಷ್ಟೇ ನೀಡಬಹುದು ಎಂದು ಮುಖ್ಯಮಂತ್ರಿ ಆನಂದಿ ಬಾಯಿ ಪಟೇಲ್ ಹೇಳಿರುವುದು ಸರಿಯಾಗಿಯೇ ಇದೆ. ಮೀಸಲು ನೀತಿಯ ತರ್ಕವನ್ನೇ ಈ ಚಳವಳಿ ಬುಡಮೇಲು ಮಾಡುವಂತಿದೆ. ಗುಜರಾತ್‌ನಲ್ಲಿ ಈಗಾಗಲೇ 146 ಜಾತಿ ಹಾಗೂ ಸಮುದಾಯಗಳು ಒಬಿಸಿ ವರ್ಗದಡಿ ಇವೆ. ಈ ಪಟ್ಟಿಯಲ್ಲಿ ಪಟೇಲ್ ರನ್ನೂ ಸೇರಿಸುವುದರಿಂದ ಈ ಸಮುದಾಯವೇ ಸಿಂಹಪಾಲು ಪಡೆದುಕೊಂಡಂತಾಗುತ್ತದೆ. ಅಗತ್ಯ ಇರುವವರಿಗೆ ದಕ್ಕುವುದಿಲ್ಲ ಎಂಬಂತಹ ಆತಂಕ ಸಹಜವಾದದ್ದು. ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದು ಈ ಚಳವಳಿಗೆ ಪ್ರೇರಣೆಯೇ ಎಂಬುದರ ವಿಶ್ಲೇಷಣೆಯಾಗಬೇಕು. ಜವಳಿ, ವಜ್ರ ವ್ಯಾಪಾರ ಇತ್ಯಾದಿ ಅನೇಕ ಉದ್ಯಮಗಳಲ್ಲಿ ಪಟೇಲ್ ಸಮುದಾಯದ ಹಿಡಿತವಿದ್ದರೂ ಅಂತಹವರ ಸಂಖ್ಯೆ ಕಡಿಮೆ. ಇದಕ್ಕೆ ತದ್ವಿರುದ್ಧವಾಗಿ, ಪಟೇಲ್ ಸಮುದಾಯದ ಸಾಧಾರಣ ಕುಟುಂಬಗಳು ನೆಚ್ಚಿಕೊಂಡಿರುವ ಕೃಷಿಯಲ್ಲಿ ಆದಾಯ ಕಡಿಮೆಯಾಗುತ್ತಿದೆ. ಹಾಗೆಯೇ ಈ ಸಮುದಾಯ ನಡೆಸುತ್ತಿರುವ ಸಣ್ಣ ಹಾಗೂ ಮಧ್ಯಮ ಹಂತದ ಕೈಗಾರಿಕೆಗಳ ಅನೇಕ ಘಟಕಗಳು ನಷ್ಟದಲ್ಲಿವೆ. ವಜ್ರಗಳ ರಫ್ತು ವಹಿವಾಟು ಹೆಚ್ಚಳ ಕಂಡಿದೆ ನಿಜ. ಆದರೆ ಸೂರತ್ ನಲ್ಲಿ ವಜ್ರ ಪಾಲಿಷ್ ಮಾಡುವ ಅನೇಕ ಘಟಕಗಳು ನೆಲ ಕಚ್ಚಿವೆ. ಇದರಿಂದ ಉದ್ಯೋಗಗಳಿಲ್ಲದ ಸ್ಥಿತಿ ಎದುರಾಗಿದ್ದು ಯುವಜನರಲ್ಲಿ ಹತಾಶೆ ಆವರಿಸಿದೆ. ಅಭಿವೃದ್ಧಿಗೆ ಮಾದರಿ ಎಂಬಂತೆ ಬಿಂಬಿಸಲಾಗುತ್ತಿದ್ದ ಗುಜರಾತ್‌ನಲ್ಲಿ ಈ ಬೆಳೆವಣಿಗೆ ಉಂಟಾಗಿರುವುದು ವಿಪರ್ಯಾಸ. ಅಭಿವೃದ್ಧಿ ಮಾರ್ಗಗಳ ಮರುಪರಿಶೀಲನೆಯ ಅಗತ್ಯವನ್ನು ಇದು ಪ್ರತಿಪಾದಿಸುತ್ತದೆ. ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಐದು ರಾಜ್ಯಗಳಲ್ಲಿ ಪ್ರಬಲರಾಗಿರುವ ಜಾಟ್ ಸಮುದಾಯವೂ ಮೀಸಲಿಗಾಗಿ ಆಗ್ರಹಿಸುತ್ತಿದೆ. ಹಿಂದಿನ ಯುಪಿಎ ಸರ್ಕಾರ ಚುನಾವಣೆ ತಂತ್ರವಾಗಿ ಜಾಟ್ ಸಮುದಾಯಕ್ಕೆ ಮೀಸಲು ನೀತಿಯನ್ನು ಪ್ರಕಟಿಸಿಯೂ ಇತ್ತು. ಆದರೆ ನಂತರ ಸುಪ್ರೀಂ ಕೋರ್ಟ್ ಇದನ್ನು ತಳ್ಳಿಹಾಕಿತ್ತು. ಜಾಟ್ ಸಮುದಾಯ ಹಾಗೂ ಈಗಿನ ಪಟೇಲ್ ಸಮುದಾಯದ ಚಳವಳಿ, ಮೀಸಲು ನೀತಿಯನ್ನು ಕುರಿತಂತೆ ಮರು ಅಧ್ಯಯನದ ಅವಶ್ಯಕತೆಯನ್ನು ಎತ್ತಿ ಹಿಡಿಯುವಂತಿದೆ. ಪೂರ್ತಿ ಜಾತಿ ಆಧಾರಿತ ಮೀಸಲು ವ್ಯವಸ್ಥೆಯ ಸಾಧಕ ಬಾಧಕಗಳ ಪುನರ್ ಪರಿಶೀಲನೆಯಾಗಬೇಕೆ ಎಂಬ ಬಗ್ಗೆ ಚಿಂತನೆಗಳು ನಡೆಯಬೇಕು. ಮೀಸಲು ನೀತಿಯಿಂದ ಕೆನೆ ಪದರವನ್ನು ಕೈಬಿಡುವ ಚರ್ಚೆಯನ್ನು ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಮಟ್ಟ ಹಾಕಿದ್ದರು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ತಾತ್ಕಾಲಿಕ ಕ್ರಮವಾಗಿ 10 ವರ್ಷಗಳವರೆಗೆ ಮೀಸಲು ನೀತಿಯನ್ನು ಸಂವಿಧಾನ ನಿರ್ಮಾಪಕರು ರೂಪಿಸಿದ್ದರು. ಆದರೆ ಬರಬರುತ್ತಾ ಮೀಸಲು ನೀತಿ ಎಂಬುದು ರಾಜಕೀಯ ಪಕ್ಷಗಳಿಗೆ ಮತ ಬ್ಯಾಂಕ್ ಸೃಷ್ಟಿಯ ದಾಳವಾಗಿದೆ. ಹಾಗೆಯೇ, ಶಿಕ್ಷಣ ಹಾಗೂ ಉದ್ಯೋಗಗಳಿಗೆ ಸಂಬಂಧಿಸಿದಂತೆ ಯುವಜನರ ಆಶೋತ್ತರಗಳ ಈಡೇರಿಕೆಯಲ್ಲಿ ಖಾಸಗಿ ವಲಯದ ಮಿತಿಗಳನ್ನು ಭಾರತದ ರಾಜಕೀಯ ವ್ಯವಸ್ಥೆ ಗ್ರಹಿಸಬೇಕಿದೆ . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.