ರಾಷ್ಟ್ರವಾಪಿ ಎಂಎನ್‌ಪಿ ಮಹತ್ವದ ಹೆಜ್ಜೆ ಭಾರತದ ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕ್ರಾಂತಿಗೆ ಕಾರಣವಾದ ಮೊಬೈಲ್ ಫೋನ್ ಕ್ಷೇತ್ರ ‘ಒಂದು ದೇಶ, ಒಂದೇ ಮೊಬೈಲ್ ಸಂಖ್ಯೆ’ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. 2012ರ ಟೆಲಿಕಾಂ ನೀತಿಯಲ್ಲಿದ್ದ ಈ ಭರವಸೆ ಒಂದೆರಡು ವರ್ಷಗಳ ಹಿಂದೆಯೇ ನಿಜವಾಗಬೇಕಿತ್ತು. ಆದರೆ ಸಾರ್ವಜನಿಕ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇರಿದಂತೆ ಮೊಬೈಲ್ ಸೇವೆ ನೀಡುವ ಕಂಪೆನಿಗಳು ಹೊಸ ಸವಲತ್ತಿಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಹೊಂದಿರಲಿಲ್ಲ. ಈಗ ಮೊಬೈಲ್ ಸೇವೆ ನೀಡುವ ಎಲ್ಲಾ ಪ್ರಮುಖ ಕಂಪೆನಿಗಳು ಹೊಸ ಸವಲತ್ತಿಗೆ ಅಗತ್ಯವಿರುವ ತಾಂತ್ರಿಕ ಮೂಲ ಸೌಕರ್ಯವನ್ನು ಹೊಂದಿವೆ. ಈ ತಿಂಗಳ 3ರಿಂದ ಹೊಸ ಸವಲತ್ತು ಎಲ್ಲಾ ಗ್ರಾಹಕರಿಗೂ ಲಭ್ಯವಾಗುತ್ತಿದೆ. ನಿರ್ದಿಷ್ಟ ಟೆಲಿಕಾಂ ವೃತ್ತದಲ್ಲಿ ಪಡೆದುಕೊಂಡ ಮೊಬೈಲ್ ಸಂಖ್ಯೆಯನ್ನು ದೇಶದ ಯಾವುದೇ ಭಾಗದಲ್ಲೂ ಬಳಸಬಹುದು. ಆ ಸಂಖ್ಯೆಗೆ ಗ್ರಾಹಕ ತಾನು ಇಚ್ಛಿಸಿದ ಸೇವಾದಾತರಿಂದ ಮೊಬೈಲ್ ಸೇವೆಯನ್ನು ಪಡೆಯಬಹುದು. ಮೊಬೈಲ್ ನಂಬರ್ ಪೊರ್ಟಬಿಲಿಟಿ (ಎಂಎನ್‌ಪಿ) ಪರಿಕಲ್ಪನೆ ಗ್ರಾಹಕರಿಗೆ ಹೊಸತೇನೂ ಅಲ್ಲ. 2011ರಲ್ಲಿಯೇ ಇದು ಜಾರಿಗೆ ಬಂದಿತ್ತು. ಇದರ ಅನ್ವಯ ನಿರ್ದಿಷ್ಟ ಟೆಲಿಕಾಂ ವೃತ್ತಗಳ ಒಳಗೆ ಸೇವಾದಾತರನ್ನು ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಇತ್ತು. ಈಗ ಈ ಸವಲತ್ತನ್ನು ರಾಷ್ಟ್ರವ್ಯಾಪಿಯಾಗಿ ಬಳಸುವುದಕ್ಕೆ ಸಾಧ್ಯವಿದೆ. ಭಾರತದ ಮೊಬೈಲ್ ಸೇವಾ ಕ್ಷೇತ್ರದಲ್ಲಿರುವ ಸ್ಪರ್ಧೆ ಗ್ರಾಹಕರ ಮಟ್ಟಿಗೆ ಧನಾತ್ಮಕ ಪರಿಣಾಮ ಬೀರಿದೆ. ಟೆಲಿಕಾಂ ವೃತ್ತದೊಳಗೆ ಎಂಎನ್‌ಪಿ ಜಾರಿಗೆ ಬಂದಾಗಲೂ ವಿವಿಧ ಸೇವಾದಾತ ಕಂಪೆನಿಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪೂರಕವಾಗಿ ಇದನ್ನು ಬಳಸಿಕೊಂಡಿವೆ. ರಾಷ್ಟ್ರವ್ಯಾಪಿಯಾಗಿರುವ ಎಂಎನ್‌ಪಿ ಸವಲತ್ತನ್ನೂ ಎಲ್ಲಾ ಕಂಪೆನಿಗಳು ಸ್ವಾಗತಿಸಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನಾಗಿ ಕಾಣುತ್ತಿವೆ. ಟೆಲಿಕಾಂ ವೃತ್ತದ ಹೊರಗೆ ತಮ್ಮ ದೂರವಾಣಿ ಸಂಖ್ಯೆಯನ್ನು ಬಳಸುವ ಗ್ರಾಹಕರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕಂಪೆನಿಗಳು ಮೇಲಾಟ ಆರಂಭಿಸಿವೆ. ತಮ್ಮದೇ ಸೇವೆಯನ್ನು ಹೊಸ ಟೆಲಿಕಾಂ ವೃತ್ತದಲ್ಲಿ ಬಳಸಿ ಕೊಳ್ಳುವ ಗ್ರಾಹಕರಿಗೆ ಉಚಿತ ರೋಮಿಂಗ್ ಸವ ಲತ್ತು ನೀಡುವ ಘೋಷಣೆಗಳು ಈಗಾಗಲೇ ಹೊರಬಿದ್ದಿವೆ. ರಾಷ್ಟ್ರವ್ಯಾಪಿ ಎಂಎನ್‌ಪಿ, ಗ್ರಾಹಕರಿಗೆ ಅನುಕೂಲ ಕಲ್ಪಿಸುತ್ತಿರುವುದೇನೋ ನಿಜ. ಆದರೆ ಇದರ ಫಲಾನುಭವಿಗಳ ಸಂಖ್ಯೆಯೇನೂ ಬಹಳ ದೊಡ್ಡದಲ್ಲ. ಒಟ್ಟು ಗ್ರಾಹಕರ ಸಂಖ್ಯೆಯ ಶೇಕಡ 12ರಷ್ಟು ಮಂದಿ ಮಾತ್ರ ರೋಮಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ. ಹೊಸ ಸವಲತ್ತು ಇವರಿಗೆ ಕೆಲಮಟ್ಟಿಗಿನ ಅನುಕೂಲವನ್ನು ಕಲ್ಪಿಸಬಹುದು. ‘ಒಂದು ದೇಶ. ಒಂದು ಮೊಬೈಲ್ ಸಂಖ್ಯೆ’ ಪರಿಕಲ್ಪನೆ ನಿಜಕ್ಕೂ ಪರಿಣಾಮಕಾರಿಯಾಗ ಬೇಕಾದರೆ ರೋಮಿಂಗ್ ಶುಲ್ಕದ ಪರಿಕಲ್ಪನೆಯಿಂದ ಮೊಬೈಲ್ ಸೇವಾಕ್ಷೇತ್ರ ಹೊರಬರಬೇಕಾಗಿದೆ. ಪ್ರಪಂಚದ ಬಹುತೇಕ ದೇಶಗಳಲ್ಲಿ ಈ ರೀತಿ ಶುಲ್ಕ ವಿಧಿಸುವ ಪರಿಪಾಠವಿಲ್ಲ. ಬಿಎಸ್‌ಎನ್‌ಎಲ್ ಈ ವಿಷಯದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದೆ. ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳೂ ಇದನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕಿದೆ. ಸರ್ಕಾರ ಇತ್ತೀಚೆಗೆ ಆರಂಭಿಸಿರುವ ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಇಂಥ ಸವಲತ್ತುಗಳು ಅತ್ಯಂತ ಅಗತ್ಯ. ಭಾರತದ ಮೊದಲ ತಲೆಮಾರಿನ ಇಂಟರ್‌ನೆಟ್ ಬಳಕೆದಾರರಲ್ಲಿ ಹೆಚ್ಚಿನವರು ಮೊಬೈಲ್ ಫೋನ್‌ಗಳ ಮೂಲಕ ಇಂಟರ್‌ನೆಟ್ ಬಳಸುತ್ತಾರೆ ಎಂಬ ಅಂಶವನ್ನು ಮರೆಯುವಂತಿಲ್ಲ. ಸರ್ಕಾರದ ಅಂದಾಜುಗಳು ಹೇಳುತ್ತಿರುವಂತೆ ಮೊಬೈಲ್ ಸಂಪರ್ಕಗಳ ಸಂಖ್ಯೆ ಈ ವರ್ಷದ ಕೊನೆಯ ಹೊತ್ತಿಗೆ 100 ಕೋಟಿಯನ್ನು ತಲುಪುತ್ತವೆ. ಈಗಿನದೇ ಪ್ರಮಾಣದಲ್ಲಿ ಮೊಬೈಲ್ ಸಂಪರ್ಕಗಳ ಪ್ರಮಾಣ ಹೆಚ್ಚುತ್ತಾ ಹೋದರೆ ಚೀನಾವನ್ನು ಭಾರತ ಹಿಂದಿಕ್ಕಲಿದೆ. ಈ ಹಿನ್ನೆಲೆಯಲ್ಲಿ ರೋಮಿಂಗ್ ‌ಶುಲ್ಕದಂಥ ಪರಿಕಲ್ಪನೆ ಗಳ ಕುರಿತು ಮರುಚಿಂತನೆ ಅಗತ್ಯವಿದೆ. ಸಣ್ಣ ಸಂಖ್ಯೆಯ ಗ್ರಾಹಕರಿರುವಾಗ ಈ ಬಗೆಯ ಶುಲ್ಕಗಳು ಟೆಲಿಕಾಂ ಕಂಪೆನಿಗಳ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗುತ್ತವೆ. ಆದರೆ ಈಗಿನ ತಂತ್ರಜ್ಞಾನ ರೋಮಿಂಗ್ ಪರಿಕಲ್ಪನೆಯನ್ನೇ ಅಪ್ರಸ್ತುತಗೊಳಿಸಿದೆ. ಮೊಬೈಲ್ ಫೋನುಗಳ ಬಳಕೆಯೀಗ ಕೇವಲ ಧ್ವನಿ ಕರೆಗಳಿಗಷ್ಟೇ ಸೀಮಿತವಾಗಿಯೂ ಇಲ್ಲ. ಇಂಟರ್‌ನೆಟ್ ಸೇವೆಯೀಗ ಮೊಬೈಲ್ ಸಂಪರ್ಕದ ಅವಿಭಾಜ್ಯ ಅಂಗವಾಗಿದೆ. ಸಹಜವಾಗಿಯೇ ಗ್ರಾಹಕ ಪಾವತಿಸುವ ಶುಲ್ಕದ ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ ರೋಮಿಂಗ್ ಶುಲ್ಕವನ್ನು ಇಲ್ಲವಾಗಿಸುವ ಹಾದಿಯಲ್ಲಿ ಟೆಲಿಕಾಂ ಕಂಪೆನಿಗಳು ಮುಂದಡಿಯಿಡಬೇಕಾಗಿದೆ. ಇದಕ್ಕೆ ಅಗತ್ಯವಿರುವ ನಿಯಮಗಳನ್ನು ರೂಪಿಸುವ ಹೊಣೆಗಾರಿಕೆ ಸರ್ಕಾರದ ಮೇಲೂ ಇದೆ. ಟ್ರಾಯ್‌ನ ಒತ್ತಡವಿಲ್ಲದೇ ಹೋಗಿದ್ದರೆ ಟೆಲಿಕಾಂ ಕಂಪೆನಿಗಳು ರಾಷ್ಟ್ರವ್ಯಾಪಿ ಎಂಎನ್‌ಪಿ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುತ್ತಿರಲಿಲ್ಲ ಎಂಬ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮುಂದಡಿ ಇಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.