ರಾಜಕೀಯಪ್ರೇರಿತ ಗೈರುಹಾಜರಿ ಒಕ್ಕೂಟ ವ್ಯವಸ್ಥೆಗೆ ಸಲ್ಲದು ನೀತಿ ಆಯೋಗದ ಸಭೆಗೆ ಹದಿನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಗೈರುಹಾಜರಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿರುವ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಗೈರುಹಾಜರಿಗೆ ಪಕ್ಷದ ವಕ್ತಾರರು ಉತ್ತರ ನೀಡಿದ್ದಾರೆ. ಇವರ ಹೊರತಾಗಿ ಸಭೆಯಿಂದ ದೂರ ಉಳಿದ ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮುಖ್ಯಮಂತ್ರಿಗಳೂ ತಮ್ಮದೇ ಆದ ಉತ್ತರಗಳನ್ನು ನೀಡುತ್ತಿದ್ದಾರೆ. ಎಲ್ಲರ ಭಿನ್ನಾಭಿಪ್ರಾಯಗಳು ಸಾರಾಂಶದಲ್ಲಿ ಭೂಸ್ವಾಧೀನ ಕಾಯ್ದೆಗೆ ಕೇಂದ್ರ ಸರ್ಕಾರ ತರಲು ಹೊರಟಿರುವ ತಿದ್ದುಪಡಿಗಳನ್ನು ವಿರೋಧಿಸುತ್ತಿವೆ. ಆದರೆ ನೀತಿ ಆಯೋಗದ ಸಭೆಯ ಕಾರ್ಯಸೂಚಿಯಲ್ಲಿ ಕೇವಲ ಭೂಸ್ವಾಧೀನ ಮಸೂದೆಯ ಉದ್ದೇಶಿತ ತಿದ್ದುಪಡಿಗಳ ಕುರಿತ ಚರ್ಚೆಯಷ್ಟೇ ಇರಲಿಲ್ಲ. ಇದರ ಜೊತೆಗೆ ಬಡತನ, ಆರೋಗ್ಯ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಕುರಿತ ವಿಚಾರಗಳೂ ಇದ್ದವು. ಈ ಹಿನ್ನೆಲೆಯಲ್ಲಿ ಹದಿನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಗೈರುಹಾಜರಿಯನ್ನು ನೋಡಿದರೆ ಮತ್ತೊಂದು ಚಿತ್ರ ಅನಾವರಣಗೊಳ್ಳುತ್ತದೆ. ಯೋಜನಾ ಆಯೋಗ ಹೊಸ ಹೆಸರನ್ನು ಪಡೆದು ನೀತಿ ಆಯೋಗವಾಗಿದ್ದರೂ ಅದು ನಿರ್ವಹಿಸುವ ಕೆಲಸದ ವಿಚಾರಕ್ಕೆ ಬಂದರೆ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಹಾಗೆ ನೋಡಿದರೆ ಹೊಸ ಸ್ವರೂಪದಲ್ಲಿ ಇದು ರಾಜ್ಯಗಳಿಗೆ ಹೆಚ್ಚಿನ ಪಾತ್ರ ನಿರ್ವಹಿಸುವ ಅವಕಾಶವನ್ನೂ ಸೃಷ್ಟಿಸಿದೆ. ಆದ್ದರಿಂದ ನೀತಿ ಆಯೋಗದ ಸಭೆಯಿಂದ ದೂರ ಉಳಿಯುವುದು ರಾಜ್ಯಗಳ ಒಟ್ಟು ಹಿತದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಒಂದು ವೇಳೆ ಕೇಂದ್ರದ ನಿರ್ದಿಷ್ಟ ನೀತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಕ್ಷೇಪವಿದ್ದರೂ ಅದನ್ನು ಮಂಡಿಸುವುದಕ್ಕೆ ಸರಿಯಾದ ವೇದಿಕೆ, ನೀತಿ ಆಯೋಗದ ಸಭೆಯೇ ಹೊರತು ಮಾಧ್ಯಮಗಳಲ್ಲ. ಕೇಂದ್ರ–ರಾಜ್ಯಗಳ ಯೋಜನೆಗಳು ಮತ್ತು ನೀತಿಗಳಲ್ಲಿ ಒಂದು ಸಮನ್ವಯವನ್ನು ಸಾಧಿಸುವ ನೀತಿ ಆಯೋಗದ ಮೂಲ ಉದ್ದೇಶವನ್ನೇ ಈ ಬಗೆಯ ರಾಜಕೀಯ ಪ್ರೇರಿತ ಗೈರುಹಾಜರಿಗಳು ವಿಫಲಗೊಳಿಸುತ್ತವೆ ಎಂಬ ಅಂಶ ವನ್ನಿಲ್ಲಿ ಗಮನಿಸಬೇಕಾಗುತ್ತದೆ. ಕಾಂಗ್ರೆಸ್ ವಕ್ತಾರರು ಹೇಳಿರುವಂತೆ ‘ಭೂಸ್ವಾಧೀನ ಕಾಯ್ದೆಗೆ ಸಂಬಂಧಿಸಿ ದಂತೆ ಕೇಂದ್ರದ ಆಡಳಿತಾರೂಢ ಎನ್‌ಡಿಎ ಮತ್ತು ಕಾಂಗ್ರೆಸ್‌ನ ನಿಲುವುಗಳು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿವೆ. ಆ ಕಾರಣದಿಂದ ಸಭೆಯಿಂದ ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿಗಳು ದೂರ ಉಳಿದಿದ್ದಾರೆ’. ಈ ಅಭಿಪ್ರಾಯವನ್ನು ವಾದ ಕ್ಕೋಸ್ಕರ ಒಪ್ಪಿಕೊಂಡರೂ ನೀತಿ ಆಯೋಗದ ಸಭೆಯಲ್ಲಿಯೇ ಸಕಾರಣಗಳೊಂದಿಗೆ ತಮ್ಮ ನಿಲುವುಗಳನ್ನು ಮಂಡಿಸಬೇಕಾದ ಜವಾಬ್ದಾರಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಗಳಿಗೆ ಇಲ್ಲವೇ ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ. ಸಭೆಗೆ ಗೈರುಹಾಜರಾಗಿರುವ ಇತರ ಮುಖ್ಯಮಂತ್ರಿ ಗಳಿಗೂ ಈ ಪ್ರಶ್ನೆ ಅನ್ವಯಿಸುತ್ತದೆ. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬೇ ಕೆಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಷ್ಟೇ ಬಯಸುತ್ತಿಲ್ಲ. ಉಳಿದ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೂ ಯುಪಿಎ ಅವಧಿಯಲ್ಲಿ ಜಾರಿಗೆ ಬಂದ ಭೂಸ್ವಾಧೀನ ಮಸೂದೆಯ ಕುರಿತಂತೆ ಕೆಲವು ಆಕ್ಷೇಪಗಳಿವೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಯೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕಾಯ್ದೆಯಲ್ಲಿ ಆಗಬೇಕಿರುವ ಮಾರ್ಪಾಡುಗಳ ಬಗ್ಗೆ ಹೇಳಿದ್ದರು. ಆದರೆ ಈ ಕುರಿತಂತೆ ಅಧಿಕೃತ ವೇದಿಕೆಯೊಂದರಲ್ಲಿ ಚರ್ಚಿಸುವ ಅವಕಾಶ ದೊರೆತಾಗ ರಾಜ್ಯ ದೂರ ಉಳಿದದ್ದು ಸರಿಯಲ್ಲ. ಈ ವಿಚಾರದಲ್ಲಿ ಎಲ್ಲರದೂ ದ್ವಂದ್ವ ನಿಲುವೇ. ಸಭೆಗೆ ಹಾಜರಾಗಿದ್ದರೆ ಜನರೆದುರು ಅವರ ಇಬ್ಬಂದಿತನ ಬಯಲಾಗುತ್ತಿತ್ತು. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಗೈರುಹಾಜರಿ ತಂತ್ರವನ್ನು ಬಳಸಿರುವಂತೆ ಕಾಣಿಸುತ್ತದೆ. ಸಭೆಗೆ ಹೋಗದೇ ಇರಲು ವಿಧಾನಮಂಡಲದ ಅಧಿವೇಶನವನ್ನು ಕರ್ನಾಟಕದ ಮುಖ್ಯಮಂತ್ರಿ ನೆಪ ಮಾಡಿಕೊಂಡಿದ್ದರ ಔಚಿತ್ಯವೂ ಪ್ರಶ್ನಾರ್ಹ. ಪಕ್ಷದ ವರಿಷ್ಠರು ಕರೆದಿದ್ದರೆ ಇವರು ಎಲ್ಲವನ್ನೂ ಬಿಟ್ಟು ಹೋಗುತ್ತಿರಲಿಲ್ಲವೇ? ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗೋದಾವರಿ ಪುಷ್ಕರ ವೇಳೆ ಸಂಭವಿಸಿದ ದುರಂತದ ಕಾರಣವನ್ನು ಮುಂದಿಟ್ಟುಕೊಂಡು ಗೈರುಹಾಜರಾಗಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿಯೇ ಖುದ್ದು ಹಾಜರಿದ್ದು ನಿಭಾಯಿಸುವ ಈ ಪರಿಪಾಠವೂ ಒಪ್ಪತಕ್ಕದ್ದಲ್ಲ. ಗೈರುಹಾಜರಿ ತಂತ್ರ ಕೆಲವರ ರಾಜಕೀಯ ಗುರಿ ಸಾಧನೆಗೆ ಬಳಕೆಯಾಗಿದೆ. ನೀತಿ ಆಯೋಗ ಒಂದು ನಿರ್ದಿಷ್ಟ ಕಾಯ್ದೆಯ ಕುರಿತಂತೆ ಚರ್ಚಿಸುವುದಕ್ಕೆ ಇರುವ ವೇದಿಕೆಯಲ್ಲ. ಇದು ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ಒಮ್ಮತದಿಂದ ರೂಪಿಸುವುದಕ್ಕೆ ಅಗತ್ಯವಿರುವ ಚರ್ಚೆಗಳಿಗೆ ವೇದಿಕೆ ಕಲ್ಪಿಸುವ ಮತ್ತು ಅನುಷ್ಠಾನದ ಹಾದಿಗಳನ್ನು ರೂಪಿಸುವ ಸಂಸ್ಥೆ. ಇದು ಪಕ್ಷ ರಾಜಕೀಯದ ಮೇಲಾಟಗಳಿಗೆ ಬಲಿಯಾಗಬಾರದು. ನೀತಿ ಆಯೋಗ ಪ್ರತಿಪಾದಿಸುವ ‘ಸಹಕಾರ ಒಕ್ಕೂಟ’ ವ್ಯವಸ್ಥೆ ಕುರಿತಂಥ ಆದರ್ಶ ನೀತಿಗೆ ಈ ಮನೋಭಾವ ಪೆಟ್ಟು ನೀಡುವಂತಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.