ತರಕಾರಿ ಬೆಲೆ ಏರಿಕೆ ತಡೆಗೆ ಕಠಿಣ ಕ್ರಮ ಅಗತ್ಯ ಈರುಳ್ಳಿ ದುಬಾರಿಯಾಗಿ ಖರೀದಿದಾರರ ಕಣ್ಣಲ್ಲಿ ನೀರು ತರಿಸುತ್ತಿರುವ ಹೊತ್ತಿನಲ್ಲಿಯೇ, ಟೊಮೆಟೊ, ಆಲೂಗೆಡ್ಡೆ, ಬದನೆ ಮತ್ತಿತರ ತರಕಾರಿಗಳ ಬೆಲೆಗಳು ದೇಶದಾದ್ಯಂತ ಶೇ 60ರಷ್ಟು ತುಟ್ಟಿಯಾಗಿರುವುದು ಎಲ್ಲ ವರ್ಗದ ಗ್ರಾಹಕರ ಆರ್ಥಿಕ ಸಂಕಟ ಹೆಚ್ಚಿಸಿದೆ. ಪ್ರಮುಖ ತರಕಾರಿಗಳ ಸಗಟು ಮತ್ತು ಚಿಲ್ಲರೆ ಮಾರಾಟ ದರಗಳಲ್ಲಿ ಭಾರಿ ವ್ಯತ್ಯಾಸ ಇರುವುದು ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ದಿನನಿತ್ಯದ ಅಡುಗೆಯಲ್ಲಿ ಬಳಸುವ ತರಕಾರಿಗಳ ಬೆಲೆ ದುಬಾರಿಯಾಗುತ್ತಿರುವುದರಿಂದ ಕುಟುಂಬಗಳ ಮಾಸಿಕ ಬಜೆಟ್‌ ಸಹಜವಾಗಿಯೇ ಏರುಪೇರಾಗುತ್ತಿದೆ. ತರಕಾರಿಗಳ ಬೆಲೆ ದುಬಾರಿಗೆ ಪೂರೈಕೆಯಲ್ಲಿನ ಲೋಪದೋಷಗಳೇ ಮುಖ್ಯ ಕಾರಣ ಎಂದು ಸಮೀಕ್ಷೆ ಬೊಟ್ಟು ಮಾಡಿ ತೋರಿಸಿರುವುದನ್ನು ಸರ್ಕಾರಗಳು ಹಗುರವಾಗಿ ಪರಿಗಣಿಸದೆ ಮೂಲ ಸಮಸ್ಯೆ ಬಗೆಹರಿಸಲು ಕಾರ್ಯೋನ್ಮುಖವಾಗಬೇಕಾಗಿದೆ. ಮುಂಗಾರು ಮಳೆಯು ಈ ಬಾರಿ ಈ ಮೊದಲಿನ ನಿರೀಕ್ಷೆಗೆ ವ್ಯತಿರಿಕ್ತವಾಗಿ ವಾಡಿಕೆಗಿಂತ ಕಡಿಮೆಯಾಗಿದ್ದರಿಂದ ತರಕಾರಿ ಉತ್ಪಾದನೆಯೂ ದೇಶದಾದ್ಯಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಇದು ಬೆಲೆ ಮಟ್ಟದ ಮೇಲೆ ಒತ್ತಡ ಹೆಚ್ಚಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತಲಾ ಕೆಜಿಗೆ ₹ 20ರಿಂದ ₹ 25ರ ಮಟ್ಟದಲ್ಲಿ ಸ್ಥಿರತೆ ಕಂಡಿದ್ದ ಈರುಳ್ಳಿಯ ಚಿಲ್ಲರೆ ಮಾರಾಟ ಬೆಲೆಯು ದೇಶದಾದ್ಯಂತ ದಿಢೀರನೆ ಕೆಜಿಗೆ ₹ 60ರವರೆಗೆ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ನವೆಂಬರ್‌ನಲ್ಲಿ ಹೊಸ ಫಸಲು ಮಾರುಕಟ್ಟೆಗೆ ಬರುವವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನುವುದು ಗ್ರಾಹಕರ ಸಂಕಟ ಹೆಚ್ಚಿಸಲಿದೆ. ಈ ಹಿಂದೆ ಈರುಳ್ಳಿ ಬೆಲೆಯು ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಿ ಅಧಿಕಾರಾರೂಢ ಸರ್ಕಾರಗಳನ್ನೇ ಕೆಳಗಿಳಿಸಿದ ನಿದರ್ಶನಗಳಿವೆ. 1980ರಲ್ಲಿ ಕೇಂದ್ರ ಸರ್ಕಾರದ ಪತನಕ್ಕೆ ಈರುಳ್ಳಿ ಬೆಲೆ ಏರಿಕೆ ಕಾರಣವಾಗಿತ್ತು. ರಾಜಕೀಯವಾಗಿ ಸೂಕ್ಷ್ಮವಾದ ಈರುಳ್ಳಿ ಬೆಲೆ ಏರಿಕೆ ವಿಚಾರವನ್ನು ಸರ್ಕಾರ ಹಗುರವಾಗಿ ಪರಿಗಣಿಸಲಾಗದು. ಈರುಳ್ಳಿ ಸೇರಿದಂತೆ ತರಕಾರಿಗಳ ಬೆಲೆ ಹೆಚ್ಚಳದ ಲಾಭವು ರೈತಾಪಿ ವರ್ಗಕ್ಕೆ ತಲುಪದಿರುವುದು ಇನ್ನೊಂದು ಆತಂಕಕಾರಿ ವಿದ್ಯಮಾನವಾಗಿದೆ. ಗ್ರಾಹಕರು ದುಬಾರಿ ಬೆಲೆ ತೆತ್ತು ತರಕಾರಿ ಖರೀದಿಸಿದರೂ ಅದರ ಲಾಭ ನ್ಯಾಯಯುತವಾಗಿ ಬೆಳೆಗಾರರಿಗೆ ತಲುಪಬೇಕು. ಅದು ನಮ್ಮಲ್ಲಿ ಸಾಧ್ಯವಾಗದಿರುವುದಕ್ಕೆ ವ್ಯವಸ್ಥೆಯಲ್ಲಿನ ಲೋಪದೋಷಗಳೇ ಕಾರಣ. ಬೆಲೆ ಏರಿಕೆಯ ಪೂರ್ಣ ಪ್ರಮಾಣದ ಲಾಭವು ಬೆಳೆಗಾರರಿಗೆ ತಲುಪದೇ ಮಧ್ಯವರ್ತಿಗಳ ಪಾಲಾಗುತ್ತಿರುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಅದಕ್ಕೆ ಇದುವರೆಗೂ ಕಡಿವಾಣ ವಿಧಿಸಲು ಸಾಧ್ಯವಾಗದಿರುವುದು ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿ ಕೊರತೆಗೆ ಕನ್ನಡಿ ಹಿಡಿಯುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬೆಲೆ ಏರಿಕೆಗೆ ‘ಕೃತಕ ಕೊರತೆ’ಯ ಕೊಡುಗೆಯೂ ಮುಖ್ಯವಾಗಿರುತ್ತದೆ. ದುಬಾರಿ ಬೆಲೆ ಪರಿಸ್ಥಿತಿ ಉದ್ಭವವಾಗಲು ವರ್ತಕರ ಮತ್ತು ಕಾಳಸಂತೆಕೋರರ ದುರಾಸೆ ಪ್ರವೃತ್ತಿಯೂ ಕಾರಣವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ತಮ್ಮ ಹೊಣೆಗಾರಿಕೆಯಿಂದ ಯಾವುದೇ ನೆಪ ಹೇಳಿ ನುಣುಚಿಕೊಳ್ಳುವಂತಿಲ್ಲ. ಕ್ಷಿಪ್ರವಾಗಿ ಕೊಳೆಯುವ ತರಕಾರಿಗಳ ಸಂರಕ್ಷಣೆಗೆ ಅಗತ್ಯ ಪ್ರಮಾಣದಲ್ಲಿ ಶೈತ್ಯಾಗಾರಗಳ ನಿರ್ಮಾಣ, ಮಾರುಕಟ್ಟೆಗೆ ತ್ವರಿತವಾಗಿ ಪೂರೈಸಲು ಸುಸಜ್ಜಿತ ರಸ್ತೆ ಮತ್ತಿತರ ಮೂಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲು ಸರ್ಕಾರಗಳು ಬಂಡವಾಳ ತೊಡಗಿಸುವ ಅಗತ್ಯ ಇದೆ. ಕಳ್ಳ ದಾಸ್ತಾನುದಾರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯನ್ನು ಕಠಿಣವಾಗಿ ಜಾರಿಗೆ ತಂದು ಶಿಕ್ಷಿಸುವಂತಾದರೆ ಮಾತ್ರ ಬೆಲೆ ಮಟ್ಟ ತಗ್ಗೀತು, ಬಳಕೆದಾರರು, ಬೆಳೆಗಾರರೂ ನೆಮ್ಮದಿಯ ನಿಟ್ಟುಸಿರುಬಿಟ್ಟಾರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.