ಭಾವೋದ್ವೇಗ ಬೇಡ ವಸ್ತುಸ್ಥಿತಿ ಮುಖ್ಯ ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಮಳೆ ಮತ್ತಿತರ ವಿವರಗಳ ಬಗ್ಗೆ ವರದಿ ಕೊಡಲು ಕೇಂದ್ರ ಜಲಸಂಪನ್ಮೂಲ ಆಯೋಗದ ಅಧ್ಯಕ್ಷರ ನೇತೃತ್ವದ ಸಮಿತಿ ರಚನೆಯಾಗಿದೆ. ಅದಕ್ಕೆ ವಸ್ತುಸ್ಥಿತಿ, ರಾಜ್ಯ ಎದುರಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಿಕೊಡುವುದು ರಾಜ್ಯ ಸರ್ಕಾರದ ಹೊಣೆ. ಮುಂಗಾರು ಮಳೆಯ ಅಭಾವದಿಂದಾಗಿ ಕಾವೇರಿ ಕಣಿವೆಯಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ ಎಂಬುದು ಕೇಂದ್ರ ಸರ್ಕಾರಕ್ಕೂ ಮನವರಿಕೆಯಾಗಿದೆ. ಹೀಗಾಗಿಯೇ ಮೊನ್ನೆ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಕಾವೇರಿ ಉಸ್ತುವಾರಿ ಸಮಿತಿಯ ಸಭೆ, ‘ಕರ್ನಾಟಕದಿಂದ ಕೂಡಲೆ ನೀರು ಬಿಡಿಸಬೇಕು’ ಎಂಬ ತಮಿಳುನಾಡಿನ ಬೇಡಿಕೆಯನ್ನು ಮಾನ್ಯ ಮಾಡಿಲ್ಲ. ಅದಕ್ಕೆ ಬದಲಾಗಿ, ಕಾವೇರಿ ಕೊಳ್ಳದ ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಮಳೆ ಮತ್ತಿತರ ಅಂಶಗಳ ವಸ್ತುಸ್ಥಿತಿ ಅಧ್ಯಯನಕ್ಕಾಗಿ ತಜ್ಞರು ಮತ್ತು ಎರಡೂ ರಾಜ್ಯಗಳ ಪ್ರತಿನಿಧಿಗಳು ಇರುವ ಉನ್ನತ ಸಮಿತಿ ರಚಿಸಿದೆ. ಎರಡು ವಾರಗಳಲ್ಲಿ ವರದಿ ನೀಡುವಂತೆ ಗಡುವು ಕೊಟ್ಟಿದೆ. ಆ ವರದಿ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಸಮಿತಿಯ ಸಭೆ ತೆಗೆದುಕೊಂಡ ಈ ನಿರ್ಧಾರ ನಮ್ಮ ರಾಜ್ಯದ ಮಟ್ಟಿಗಂತೂ ಮಹತ್ವಪೂರ್ಣ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಎಂದೇ ಹೇಳಬೇಕು. ತಮಿಳುನಾಡಿಗೆ ನೀರು ಬಿಡಲೇಬೇಕು ಎಂಬ ಆದೇಶ ಬಂದರೆ ಏನು ಮಾಡಬೇಕು ಎಂಬ ಸಂಕಟದಿಂದ ಅದು ಸದ್ಯಕ್ಕೆ ರಾಜ್ಯವನ್ನು ಪಾರು ಮಾಡಿದೆ. ರಾಜ್ಯದ ಕಾವೇರಿ ನದಿ ಪಾತ್ರದ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೆಆರ್ ಎಸ್ ಜಲಾಶಯಗಳಿಗೆ 247 ಟಿಎಂಸಿ ಅಡಿಗೆ ಬದಲಾಗಿ ಸೆ. 23ರ ವರೆಗೆ ಬಂದ ನೀರು ಕೇವಲ 155 ಟಿಎಂಸಿ ಅಡಿ. ಈಗ ಇರುವ ಸಂಗ್ರಹ 53 ಟಿಎಂಸಿ ಅಡಿ ಮಾತ್ರ. ಅಂದರೆ ಜಲಾಶಯಗಳು ಅರ್ಧಕ್ಕಿಂತ ಹೆಚ್ಚು ಖಾಲಿ ಇವೆ. ಮುಂಗಾರು ಮಳೆ ಕೈಕೊಟ್ಟಿದೆ. ಇನ್ನು, ಹಿಂಗಾರು ಮಳೆಯಿಂದಲೂ ಈ ಜಲಾಶಯಗಳಿಗೆ ನೀರು ಬರುವ ಸಾಧ್ಯತೆ ಅಷ್ಟಿಲ್ಲ. ಇರುವುದರಲ್ಲಿಯೇ ನಿರ್ವಹಣೆ ಮಾಡಬೇಕಿದೆ. ರಾಜ್ಯದ ಬೆಳೆಗಳಿಗೆ ಅಕ್ಟೋಬರ್ ನಂತರ 116 ಟಿಎಂಸಿ ಅಡಿ ನೀರು ಅಗತ್ಯವಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿಗಾಗಿಯೇ 24.5 ಟಿಎಂಸಿ ಅಡಿ ಬೇಕಿದೆ. ಹೀಗಿರುವಾಗ ತಮಿಳುನಾಡಿನ ಬೇಡಿಕೆಯಂತೆ ಮುಂದಿನ ನಾಲ್ಕು ತಿಂಗಳಲ್ಲಿ 48 ಟಿಎಂಸಿ ಅಡಿ ಮತ್ತು ಹಿಂದಿನ ನಾಲ್ಕು ತಿಂಗಳ ಬಾಕಿ 48 ಟಿಎಂಸಿ ಅಡಿ ನೀರು ಬಿಡುವುದು ಕಷ್ಟ. ಕರ್ನಾಟಕ ಕೂಡ ತೊಂದರೆಯಲ್ಲಿದೆ ಎಂಬುದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಕಾವೇರಿ ನ್ಯಾಯಮಂಡಳಿಯ ಐತೀರ್ಪಿನಂತೆ ಸಂಕಷ್ಟ ಕಾಲದ ನೀರು ಹಂಚಿಕೆ ಸೂತ್ರವನ್ನು ಗೌರವಿಸಬೇಕು. ಮಳೆರಾಯನ ಮುನಿಸಿನಿಂದ ಸೃಷ್ಟಿಯಾದ ಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಜಲವಿವಾದದಲ್ಲಿ ರಾಜಕೀಯ ಬೆರೆಸದೆ ಸಕಾರಾತ್ಮಕವಾಗಿ ಆಲೋಚನೆ ಮಾಡಿ ತೀರ್ಮಾನಿಸುವ ಔದಾರ್ಯ ಎರಡೂ ಕಡೆ ಇರಬೇಕು. ವಿನಾಕಾರಣ ಭಾವೋದ್ವೇಗ ಪ್ರದರ್ಶನದಿಂದ ಯಾರಿಗೂ ಒಳಿತಾಗುವುದಿಲ್ಲ. ನೀರು ಬಿಟ್ಟ ತಕ್ಷಣ ರಸ್ತೆ ತಡೆ ಮಾಡುವುದು, ಪ್ರಚೋದನಕಾರಿ ಹೇಳಿಕೆ ಕೊಡುವುದು, ನೀರು ಬಿಡದೇ ಇರುವುದನ್ನೇ ನೆಪ ಮಾಡಿಕೊಂಡು ಇನ್ನೊಂದು ರಾಜ್ಯದ ಮೇಲೆ ಜನರನ್ನು ಎತ್ತಿ ಕಟ್ಟುವುದು... ಇವೆಲ್ಲ ಅನಗತ್ಯ. ಇದರ ಜತೆಗೆ ದೀರ್ಘಾವಧಿ ಯೋಜನೆಗಳು ಬೇಕು. ನೀರಿನ ಬಳಕೆಯಲ್ಲಿ ಮಿತವ್ಯಯ ಮಾಡಬೇಕಾದುದು ಸದ್ಯದ ಅಗತ್ಯ. ಬೆಳೆ ವಿಧಾನದಲ್ಲಿಯೇ ಬದಲಾವಣೆ ಮಾಡಿಕೊಳ್ಳಲು ಎರಡೂ ರಾಜ್ಯಗಳ ರೈತರು ಸಿದ್ಧರಾಗಬೇಕು. ಏಕೆಂದರೆ ಮಳೆ ಹೀಗೇ ಬರುತ್ತದೆ, ಇಷ್ಟೇ ಬರುತ್ತದೆ ಎನ್ನುವ ಖಾತರಿ ಇಲ್ಲ. ಇನ್ನು, ಕಾವೇರಿಯಲ್ಲಿ ಹರಿದುಹೋಗುವ ನೀರು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಮತ್ತೆ ಆ ನೀರನ್ನು ತಮಿಳುನಾಡಿಗೇ ಹರಿಸುವ ಸದುದ್ದೇಶದಿಂದಲೇ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಯೋಜನೆಯನ್ನು ಕರ್ನಾಟಕ ರೂಪಿಸಿತ್ತು. ಆದರೆ ಅದಕ್ಕೂ ತಾನು ತಕರಾರು ಎತ್ತಿದ್ದು ಸರಿಯೇ ಎಂಬ ಬಗ್ಗೆ ತಮಿಳುನಾಡು ಸರ್ಕಾರ ಆತ್ಮಶೋಧನೆ ಮಾಡಿಕೊಳ್ಳಬೇಕು. 10, 20, 50 ಟಿಎಂಸಿ ಅಡಿ ನೀರಿಗಾಗಿ ನಾವಿಲ್ಲಿ ‘ಜಲ ಯುದ್ಧಕ್ಕೇ’ ನಿಂತಿದ್ದೇವೆ. ಆದರೆ ನೆರೆಯ ಆಂಧ್ರದಲ್ಲಿ ಗೋದಾವರಿಯಿಂದ 80 ಟಿಎಂಸಿ ಅಡಿ ನೀರನ್ನು ಕೃಷ್ಣೆಗೆ ಸೇರಿಸುವ ನದಿ ಜೋಡಣೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇದರಿಂದ ಪ್ರವಾಹ ನಿಯಂತ್ರಣ, 7 ಲಕ್ಷ ಎಕರೆಗೆ ಕಾಯಂ ನೀರಾವರಿ ಸೌಕರ್ಯ ಮತ್ತು ನೂರಾರು ಹಳ್ಳಿ- ಪಟ್ಟಣಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಲಿದೆ. ಅದು ಅವರ ದೂರದೃಷ್ಟಿ. ಇದು ಏಕೆ ನಮ್ಮೆರಡೂ ರಾಜ್ಯಗಳಿಗೆ ಮಾದರಿಯಾಗಬಾರದು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.