ಆರ್‌ಬಿಐನ ದಿಟ್ಟ ನಡೆ ಅರ್ಥ ವ್ಯವಸ್ಥೆಗೆ ಶಕ್ತಿವರ್ಧಕ ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ನಾಲ್ಕನೆ ದ್ವೈಮಾಸಿಕ ಹಣಕಾಸು ಪರಾಮರ್ಶೆ ನೀತಿಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಅಲ್ಪಾವಧಿ ಬಡ್ಡಿ ದರ ರೆಪೊವನ್ನು ಶೇ 0.50ರಷ್ಟು ಇಳಿಸಿ ಅಚ್ಚರಿ ಮೂಡಿಸಿದೆ. ಕೇಂದ್ರೀಯ ಬ್ಯಾಂಕ್‌ನ ಗವರ್ನರ್‌ ರಘುರಾಂ ರಾಜನ್‌ ಅವರ ಈ ಅಚ್ಚರಿದಾಯಕ ದಿಟ್ಟ ನಿರ್ಧಾರಕ್ಕೆ ಅನೇಕ ಸಮರ್ಥನೀಯ ಕಾರಣಗಳೂ ಇವೆ. ದೇಶಿ ಅರ್ಥ ವ್ಯವಸ್ಥೆ ಬಗ್ಗೆ ಆರ್‌ಬಿಐಗೆ ಇರುವ ವಿಶ್ವಾಸದ ದ್ಯೋತಕವೂ ಇದಾಗಿದೆ. ಈ ಬಡ್ಡಿ ದರ ಕಡಿತವು ಮೂರು ವರ್ಷಗಳ ಅವಧಿಯಲ್ಲಿಯೇ ಅತಿ ದೊಡ್ಡದಾಗಿದೆ. ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲದ ಬಡ್ಡಿಯಾಗಿರುವ ರೆಪೊ ದರವು ನಾಲ್ಕೂವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶೇ 7.25 ರಿಂದ ಶೇ 6.75ಕ್ಕೆ ಇಳಿದಿರುವುದು ಕೈಗಾರಿಕಾ ರಂಗ ಮತ್ತು ಗ್ರಾಹಕರ ಪಾಲಿಗೆ ಉತ್ತೇಜನಕಾರಿಯಾಗಿದೆ. ಹಣಕಾಸು ಮಾರುಕಟ್ಟೆಗೂ ಇದು ಚೇತೋಹಾರಿಯಾಗಿದ್ದು, ಬಂಡವಾಳ ಹೂಡಿಕೆ ಹೆಚ್ಚಲು ಇನ್ನಷ್ಟು ಇಂಬು ನೀಡಲಿದೆ. ದೇಶಿ ಅರ್ಥವ್ಯವಸ್ಥೆಗೆ ಇದರಿಂದ ಸಕಾಲದಲ್ಲಿ ಶಕ್ತಿವರ್ಧಕ ಸಿಕ್ಕಿದಂತಾಗಿದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಅರ್ಥ ವ್ಯವಸ್ಥೆಯು ಪುನಶ್ಚೇತನದ ಹಾದಿಗೆ ಮರಳುವ ನಿರೀಕ್ಷೆ ಇದೆ. ಮುಂಬರುವ ಸಾಲು ಸಾಲು ಹಬ್ಬಗಳ ಮುಂಚೆಯೇ ಮನೆ ನಿರ್ಮಾಣ, ವಾಹನ ಖರೀದಿ, ವೈಯಕ್ತಿಕ ಮತ್ತು ಕೈಗಾರಿಕಾ ಉದ್ದೇಶದ ಬ್ಯಾಂಕ್‌ ಸಾಲಗಳು ಅಗ್ಗವಾಗಲಿರುವುದು ಸಾಲಗಾರರ ಪಾಲಿಗೆ ದೀಪಾವಳಿ ಹಬ್ಬದ ಬೋನಸ್‌ ಆಗಿದೆ. ಒಂದೆಡೆ ಅಗ್ಗದ ಸಾಲವು ಹಬ್ಬದ ಸಂಭ್ರಮ ಮತ್ತು ಸಿಹಿ ಹೆಚ್ಚಿಸಲಿದ್ದರೆ, ಬ್ಯಾಂಕ್‌ಗಳ ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸೇರಿದಂತೆ ಹಲವಾರು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿರುವುದು ಅನೇಕರ ಪಾಲಿಗೆ ಕಹಿಯಾಗಲಿದೆ. ವಿವಿಧ ಸಾಲಗಳ ತಿಂಗಳ ಸಮಾನ ಕಂತುಗಳ ಮೊತ್ತ ಕಡಿಮೆಯಾಗುವುದರಿಂದ ಗ್ರಾಹಕರ ಬಳಿ ಉಳಿಯುವ ಹೆಚ್ಚುವರಿ ಹಣದಿಂದ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಗೊಂಡು ಉದ್ದಿಮೆಗಳ ಇನ್ನಷ್ಟು ಬೆಳವಣಿಗೆಗೆ ಕಾರಣವಾಗಲಿದೆ. ಇದುವರೆಗೆ ಆರ್‌ಬಿಐ ಬಡ್ಡಿ ದರ ಕಡಿತ ಮಾಡಿದ್ದರೂ ಸಾಲಗಳ ಮೇಲಿನ ಬಡ್ಡಿ ದರ ಇಳಿಸಲು ಮೀನಮೇಷ ಎಣಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಈ ಬಾರಿ ಅಂತಹ ಜಿಗುಟು ಧೋರಣೆ ಕೈಬಿಟ್ಟಿರುವುದೂ ಆಶಾದಾಯಕ ಬೆಳವಣಿಗೆಯಾಗಿದೆ. ಆರ್‌ಬಿಐ ಪ್ರಕಟಣೆಯ ಬೆನ್ನಲ್ಲೇ ಎಸ್‌ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಬಡ್ಡಿ ದರ ಇಳಿಸಿರುವುದರಿಂದ ಬ್ಯಾಂಕ್‌ ಸಾಲಗಳು ಸಹಜವಾಗಿಯೇ ಅಗ್ಗವಾಗಲಿವೆ. ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕ ಉತ್ಪನ್ನಗಳ ಬೇಡಿಕೆಯು ಗಮನಾರ್ಹವಾಗಿ ಹೆಚ್ಚಲಿರುವುದರಿಂದ ಮಂದಗತಿಯಲ್ಲಿ ಸಾಗುತ್ತಿರುವ ದೇಶಿ ಅರ್ಥ ವ್ಯವಸ್ಥೆ ಚೇತರಿಕೆಗೊಳ್ಳಲಿದೆ. ಜಾಗತಿಕ ಅರ್ಥ ವ್ಯವಸ್ಥೆಯ ನಿರಾಶಾದಾಯಕ ಚಿತ್ರಣಕ್ಕೆ ಹೋಲಿಸಿದರೆ ದೇಶಿ ಅರ್ಥ ವ್ಯವಸ್ಥೆಯ ವೃದ್ಧಿ ದರದ ಬಗ್ಗೆ ಆರ್‌ಬಿಐನ ಮುನ್ನೋಟ ಕೂಡ ಭರವಸೆ ಮೂಡಿಸುವಂತಿದೆ. ಆರ್‌ಬಿಐ, ಇತ್ತೀಚಿನ ದಿನಗಳಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.75ರಷ್ಟು ಇಳಿಸಿದ್ದರೂ, ಬ್ಯಾಂಕ್‌ಗಳ ಸಾಲಗಳ ಮೇಲಿನ ಬಡ್ಡಿ ದರ ಕೇವಲ ಶೇ 0.30ರಷ್ಟು ಕಡಿಮೆಯಾಗಿತ್ತು. ಬಡ್ಡಿ ದರ ಇಳಿಕೆಯ ಬಹುಭಾಗದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ವಾಣಿಜ್ಯ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಇನ್ನಷ್ಟು ಒತ್ತಡ ಹೇರಬೇಕಾಗಿದೆ. ಆರ್ಥಿಕ ಬೆಳವಣಿಗೆಗೆ ಒತ್ತು ಕೊಡುವುದರ ಜತೆಗೆ ಅರ್ಥ ವ್ಯವಸ್ಥೆಯ ಸಮತೋಲನ ತಪ್ಪದಂತೆ ನೋಡಿಕೊಳ್ಳುವುದೂ ಆರ್‌ಬಿಐನ ಉದ್ದೇಶವಾಗಿರುವುದು ಇಲ್ಲಿ ಸ್ಪಷ್ಟಗೊಳ್ಳುತ್ತದೆ. ತನ್ನ ಪಾಲಿನ ಕರ್ತವ್ಯವನ್ನು ಆರ್‌ಬಿಐ ಪೂರ್ಣಗೊಳಿಸಿದ್ದು, ದೇಶಿ ಅರ್ಥ ವ್ಯವಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಲ್ಲಿನ ಇತರ ಅಡಚಣೆಗಳನ್ನು ದೂರ ಮಾಡುವ ಹೊಣೆಗಾರಿಕೆಯು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಇದೆ. ಆರ್ಥಿಕ ವೃದ್ಧಿ ಬೆಳವಣಿಗೆಗೆ ಅಡ್ಡಿಯಾಗಿದ್ದ ಪ್ರಮುಖ ಕಂಟಕವನ್ನು ಆರ್‌ಬಿಐ ನಿವಾರಿಸಿದ್ದು, ಬೆಳವಣಿಗೆಯ ವೇಗ ಹೆಚ್ಚಿಸುವಲ್ಲಿನ ಇತರ ಅಡೆತಡೆಗಳನ್ನು ನಿವಾರಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಸರ್ಕಾರವು ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಇನ್ನಷ್ಟು ಆದ್ಯತೆ ನೀಡಿದರೆ ಮಾತ್ರ ಅಗ್ಗದ ಬಡ್ಡಿ ದರಗಳು ಆರ್ಥಿಕ ಪ್ರಗತಿಗೆ ನೆರವಾಗಲಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕಾರ್ಮಿಕ ಮತ್ತು ಭೂ ಸ್ವಾಧೀನ ಮಸೂದೆ ಜಾರಿ ಮತ್ತಿತರ ಸುಧಾರಣೆಗಳ ಜಾರಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕಾಗಿದೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಇನ್ನಷ್ಟು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸುಸ್ಥಿರ ಆರ್ಥಿಕ ಅಭಿವೃದ್ಧಿ ಕನಸು ನನಸಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.