ಆಸ್ಟ್ರೋಸ್ಯಾಟ್‌ ಉಡಾವಣೆ ಹೆಚ್ಚಿದ ಭಾರತದ ಹಿರಿಮೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ‘ಆಸ್ಟ್ರೋಸ್ಯಾಟ್‌’ ಉಡಾವಣೆಯ ಯಶಸ್ಸು ಕೇವಲ ಸಾಂಕೇತಿಕವಲ್ಲ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಉಡಾವಣೆ ಮಾಡಿರುವ ‘ಆಸ್ಟ್ರೋಸ್ಯಾಟ್‌’ ಖಗೋಳ ವೀಕ್ಷಣಾಲಯವು ಬಾಹ್ಯಾಕಾಶ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆಕಾಶಕಾಯಗಳು ಹಾಗೂ ಅಂತರಿಕ್ಷದಲ್ಲಿನ ವಿದ್ಯಮಾನಗಳ ಕುರಿತಾದ ಅಧ್ಯಯನಕ್ಕೆ ಬಾಹ್ಯಾಕಾಶದಲ್ಲಿಯೇ ಖಗೋಳ ವೀಕ್ಷಣಾಲಯ ಸ್ಥಾಪಿಸುವ ಮೂಲಕ ಭಾರತ ಇಂತಹ ಸೌಲಭ್ಯ ಹೊಂದಿರುವ ಆಯ್ದ ದೇಶಗಳ ಸಾಲಿಗೆ ಸೇರಿದೆ. ಅಮೆರಿಕ, ರಷ್ಯಾ, ಜಪಾನ್‌ ಹಾಗೂ ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಮಾತ್ರ ಬಾಹ್ಯಾಕಾಶದಲ್ಲಿ ಖಗೋಳ ವೀಕ್ಷಣಾಲಯ ಹೊಂದಿವೆ. ಬಾಹ್ಯಾಕಾಶ ವೀಕ್ಷಣಾಲಯಗಳ ಲಾಭವೆಂದರೆ ಅವುಗಳಿಗೆ ಆಕಾಶಕಾಯಗಳು ಹೊರಸೂಸುವ ಬೆಳಕು, ವಿವಿಧ ವಿದ್ಯುತ್ಕಾಂತೀಯ ಅಲೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಗ್ರಹಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಈಗ ಪುಣೆ ಹಾಗೂ ಲಡಾಕ್‌ನಲ್ಲಿ ನೆಲ ಮಟ್ಟದ ಟೆಲಿಸ್ಕೋಪ್‌ಗಳಿವೆ. ಇಂತಹ ವೀಕ್ಷಣಾಲಯಗಳ ಮುಖ್ಯ ಸಮಸ್ಯೆ ಭೂಮಿಯ ವಾತಾವರಣದ ಪದರ. ಕೋಟ್ಯಂತರ ಕಿ.ಮೀ. ದೂರವಿರುವ ನಕ್ಷತ್ರಗಳು, ಆಕಾಶಕಾಯಗಳು ಹೊರಸೂಸುವ ತರಂಗಗಳು, ವಿಕಿರಣಗಳು 400 ಕಿ.ಮೀ.ನಷ್ಟು ದಪ್ಪದಾದ ಭೂಮಿಯ ವಾತಾವರಣವನ್ನು ಹಾಯ್ದು ಬರುವಾಗ ಕ್ಷೀಣಿಸಿರುತ್ತವೆ. ಇಲ್ಲವೇ ನಶಿಸಿಹೋಗಿರುತ್ತವೆ. ಆಸ್ಟ್ರೋಸ್ಯಾಟ್‌ ಭೂಮಿಯಿಂದ 650 ಕಿ.ಮೀ. ಎತ್ತರದಲ್ಲಿ ಭೂಕಕ್ಷೆಯಲ್ಲಿ ಸುತ್ತುಹೊಡೆಯುತ್ತಿದೆ. ಅಮೆರಿಕದ ನಾಸಾ 1990ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ‘ಹಬಲ್‌’ ಟೆಲಿಸ್ಕೋಪ್‌ ಜಗತ್ತಿನ ಬಹುತೇಕ ಖಗೋಳ ವಿಜ್ಞಾನಿಗಳಿಗೆ ದತ್ತಾಂಶಗಳನ್ನು ಒದಗಿಸುತ್ತಿತ್ತು. ಆಸ್ಟ್ರೋಸ್ಯಾಟ್‌ ಭಾರತದ ಮೊದಲ ಬಹುತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯ. ಅದನ್ನು ಮಿನಿ ‘ಹಬಲ್‌’ ಟೆಲಿಸ್ಕೋಪ್‌ ಎಂದೇ ಬಣ್ಣಿಸಲಾಗಿದೆ. ಬಹಳಷ್ಟು ಖಗೋಳ ವೀಕ್ಷಣಾಲಯಗಳು ಕಿರಿದಾದ ತರಂಗಾಂತರ ವಲಯದಿಂದ ಆಕಾಶಕಾಯಗಳ ವಿದ್ಯುತ್ಕಾಂತೀಯ ಅಲೆಗಳನ್ನು ಹಾಗೂ ಬಿಂಬಗಳನ್ನು ಗ್ರಹಿಸುತ್ತವೆ. ಆದರೆ, ಆಸ್ಟ್ರೋಸ್ಯಾಟ್‌ನಲ್ಲಿ ಅಳವಡಿಸಲಾಗಿರುವ ಸೂಕ್ಷ್ಮ ಉಪಕರಣಗಳು ವಿಶಾಲ ವಿದ್ಯುತ್ಕಾಂತೀಯ ವಲಯದಿಂದ ಅಂದರೆ ದೃಗ್ಗೋಚರ, ಅತಿನೇರಳೆ, ದುರ್ಬಲ ಹಾಗೂ ಶಕ್ತಿಶಾಲಿ ಕ್ಷ–ಕಿರಣ ವಲಯಗಳಿಂದ ಮಾಹಿತಿ ಸಂಗ್ರಹಿಸಲಿವೆ. ನಕ್ಷತ್ರಗಳು, ಕಪ್ಪುರಂಧ್ರಗಳು ಸೇರಿದಂತೆ ಆಕಾಶಕಾಯಗಳ ಹುಟ್ಟು, ಸಾವು ಅವುಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ‘ಆಸ್ಟ್ರೋಸ್ಯಾಟ್‌’ ಉಡಾವಣೆಯ ಯಶಸ್ಸು ಸಾಂಕೇತಿಕವಲ್ಲ. ಚಂದ್ರ ಹಾಗೂ ಮಂಗಳಗ್ರಹಕ್ಕೆ ಅಂತರಿಕ್ಷ ನೌಕೆಗಳನ್ನು ಕಳುಹಿಸುವಾಗ ಆ ಗ್ರಹಗಳ ಮೇಲ್ಮೈ ಹಾಗೂ ರಾಸಾಯನಿಕ ಸಂಯೋಜನೆಯ ಅಧ್ಯಯನದ ಜತೆ ಉಡಾವಣೆಯಲ್ಲಿ ತಾಂತ್ರಿಕವಾಗಿ ಮೇಲುಗೈ ಸಾಧಿಸುವ ಉದ್ದೇಶವೂ ಇಸ್ರೊಕ್ಕೆ ಇತ್ತು. ಆದರೆ, ಆಸ್ಟ್ರೋಸ್ಯಾಟ್‌ ಉಡಾವಣೆಯಲ್ಲಿ ತಾಂತ್ರಿಕ ಮೇಲ್ಮೆಗಿಂತ ಅದು ಸಂಗ್ರಹಿಸುವ ದತ್ತಾಂಶಗಳು ಅಮೂಲ್ಯವಾದದ್ದು. ಆ ಮಾಹಿತಿಗಳು ಭಾರತೀಯ ಖಗೋಳ ವಿಜ್ಞಾನಿಗಳು ಸೇರಿದಂತೆ ಜಗತ್ತಿನ ಎಲ್ಲ ವಿಜ್ಞಾನಿಗಳ ಅಧ್ಯಯನಕ್ಕೆ ಆಕರಗಳನ್ನು ಒದಗಿಸಲಿವೆ. ಅಲ್ಲದೇ, ಈ ಯೋಜನೆಯಲ್ಲಿ ಇಸ್ರೊ ಜತೆ ಇದೇ ಮೊದಲ ಬಾರಿ ದೇಶದ ಇತರ ವೈಜ್ಞಾನಿಕ ಸಂಸ್ಥೆಗಳು ಕೈಜೋಡಿಸಿವೆ. ಆಸ್ಟ್ರೋಸ್ಯಾಟ್‌ನಲ್ಲಿ ಅಳವಡಿಸಿರುವ ಉಪಕರಣಗಳನ್ನು ಮುಂಬೈನ ಟಾಟಾ ಮೂಲವಿಜ್ಞಾನ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಭಾರತೀಯ ಖಗೋಳವಿಜ್ಞಾನ ಸಂಸ್ಥೆ ಹಾಗೂ ಪುಣೆಯ ಅಂತರ್‌ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಕೇಂದ್ರಗಳು ತಯಾರಿಸಿವೆ. ಈ ಸಂಸ್ಥೆಗಳು ಯೋಜನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಉಪಗ್ರಹ ಸಂಗ್ರಹಿಸುವ ದತ್ತಾಂಶಗಳನ್ನು ಒರೆಗೆ ಹಚ್ಚುವ ಅವಕಾಶವನ್ನು ಈ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅಲ್ಲದೇ ಒಂದು ವರ್ಷ ಕಾಲ ದತ್ತಾಂಶಗಳ ಮೇಲಿನ ಹಕ್ಕು ಈ ಸಂಸ್ಥೆಗಳದ್ದಾಗಿರುತ್ತದೆ. ಯೋಜನೆಯಲ್ಲಿ ಬೆಂಗಳೂರಿನ ವಿಜ್ಞಾನಿಗಳ ಪಾಲು ಸಾಕಷ್ಟಿದೆ. ಐದು ವರ್ಷಗಳ ಕಾಲ ಕಾರ್ಯನಿರ್ವಹಿಸುವಂತೆ ಆಸ್ಟ್ರೋಸ್ಯಾಟ್‌ ರೂಪಿಸಲಾಗಿದೆ. ಬೆಂಗಳೂರಿನ ಅಂತರಿಕ್ಷನೌಕೆಗಳ ನಿಯಂತ್ರಣ ಕೇಂದ್ರ ಈ ಅವಧಿಯಲ್ಲಿ ‘ವೀಕ್ಷಣಾಲಯ’ದ ನಿರ್ವಹಣೆ ಮಾಡಲಿದೆ. ಅದು ರವಾನಿಸುವ ದತ್ತಾಂಶಗಳನ್ನು ಬೆಂಗಳೂರು ಸಮೀಪದ ಬ್ಯಾಲಾಳುವಿನಲ್ಲಿರುವ ಬಾಹ್ಯಾಕಾಶ ದತ್ತಾಂಶ ಕೇಂದ್ರ ಸಂಸ್ಕರಿಸಲಿದೆ. ‘ಆಸ್ಟ್ರಾನಾಮಿಕಲ್‌ ಸೊಸೈಟಿ ಆಫ್‌ ಇಂಡಿಯಾ’ವು ಆಸ್ಟ್ರೋಸ್ಯಾಟ್‌ ಯೋಜನೆಯನ್ನು ಮುಂದಿಟ್ಟುಕೊಂಡು ಖಗೋಳವಿಜ್ಞಾನದ ಬಗ್ಗೆ ಜನಸಾಮಾನ್ಯರಲ್ಲಿ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ದರಿಂದ ಆಸ್ಟ್ರೋಸ್ಯಾಟ್‌ ಯೋಜನೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವ ಇಸ್ರೊಕ್ಕೆ ಮಾತ್ರ ಮಹತ್ವದ್ದಲ್ಲ. ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಹಾಗೂ ಮೂಲ ವಿಜ್ಞಾನದ ಬೆಳವಣಿಗೆಗೆ ಮಹತ್ತರ ಕೊಡುಗೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.