ಮನುಷ್ಯತ್ವ ಮರೆತಂತಹ ಅನಾಗರಿಕ ಘಟನೆ ಅಕ್ಷಮ್ಯ ಉತ್ತರ ಪ್ರದೇಶದ ದಾದ್ರಿ ಎಂಬ ಹಳ್ಳಿಯಲ್ಲಿ ಮನೆಯ ಫ್ರಿಜ್‌ನಲ್ಲಿ ಗೋಮಾಂಸ ಇಟ್ಟಿದ್ದಾರೆಂದು ಶಂಕಿಸಿ 52 ವರ್ಷ ವಯಸ್ಸಿನ ವೃದ್ಧ ಮೊಹಮ್ಮದ್‌ ಇಖ್ಲಾಕ್‌ ಎಂಬುವರನ್ನು ಮತಾಂಧರ ಗುಂಪೊಂದು ಥಳಿಸಿ ಕೊಂದು ಹಾಕಿರುವುದು ದೇಶದಾದ್ಯಂತ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಪ್ರಜಾಪ್ರಭುತ್ವದ ಆಡಳಿತ ಇರುವ ದೇಶವೊಂದರಲ್ಲಿ, ಜೀವಿಸುವ ಹಕ್ಕನ್ನು ನೀಡಿರುವ ಸಂವಿಧಾನ ಹಾಗೂ ಕಾನೂನು-ಶಿಸ್ತು ಪಾಲನೆಗೆ ಪೊಲೀಸ್‌ ವ್ಯವಸ್ಥೆ ಇರುವಲ್ಲಿ, ಇಂತಹ ಬರ್ಬರ ಘಟನೆ ನಡೆದಿರುವುದು ನೋಡಿದರೆ, ನಮ್ಮದು ಇಷ್ಟೊಂದು ಕ್ರೂರ ಮತ್ತು ಅನಾಗರಿಕ ಸಮಾಜವೇ ಎಂಬ ಪ್ರಶ್ನೆ ಕಾಡುತ್ತದೆ. ಸ್ಥಳೀಯ ದೇವಾಲಯವೊಂದರಲ್ಲಿ ಪೂಜಾರಿಯನ್ನು ಒತ್ತಾಯಿಸಿ, ಇಖ್ಲಾಕ್‌ರ ಮನೆಯಲ್ಲಿ ಗೋಮಾಂಸ ಬೇಯಿಸಿದ್ದಾರೆಂದು ಪ್ರಕಟಣೆ ಹೊರಡಿಸುವುದು, ಬಳಿಕ ಜನರ ಗುಂಪು ಅವರ ಮನೆ ಮೇಲೆ ದಾಳಿ ನಡೆಸಿ ಮನೆಯನ್ನೆಲ್ಲ ಧ್ವಂಸ ಮಾಡಿ ಹೊಡೆದು ಕೊಲ್ಲುವುದು ಮನುಷ್ಯತ್ವ ಇರುವ ಯಾರೂ ಸಮರ್ಥಿಸಲಾಗದ ಘಟನೆ. ಮನೆಯ ಫ್ರಿಜ್‌ನಲ್ಲಿ ಇದ್ದದ್ದು ದನದ ಮಾಂಸವಲ್ಲ, ಕುರಿಯದ್ದು ಎಂದು ಸ್ಥಳೀಯ ಪೊಲೀಸರು ತನಿಖೆಯ ಬಳಿಕ ಹೇಳಿರುವುದೂ ಇದು ಪೂರ್ವನಿಯೋಜಿತ ಕೃತ್ಯ ಎಂಬುದನ್ನೇ ಸೂಚಿಸುತ್ತದೆ. ಮತಾಂಧರ ದಾಳಿಯಲ್ಲಿ ಇಖ್ಲಾಕ್‌ರ ಮಗ ಡಾನಿಶ್‌ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಘಟನೆಯಿಂದ ದಿಗ್ಭ್ರಮೆಗೊಂಡಿರುವ ಆ ಊರಿನ ಸುಮಾರು 50 ಮುಸ್ಲಿಂ ಕುಟುಂಬಗಳ ಸದಸ್ಯರು ಊರು ತ್ಯಜಿಸುವುದಾಗಿ ಹೇಳಿದ್ದಾರೆ. ಎಂಟು ಮುಸ್ಲಿಂ ಕುಟುಂಬಗಳು ಮರುದಿನವೇ ಮನೆಗಳನ್ನು ಖಾಲಿ ಮಾಡಿವೆ. ‘ಇದೊಂದು ಆಕಸ್ಮಿಕ ಘಟನೆ. ತಪ್ಪು ತಿಳಿವಳಿಕೆಯಿಂದ ಉಂಟಾಗಿದೆ’ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಮಹೇಶ್‌ ಶರ್ಮಾ, ಆರೋಪಿಗಳನ್ನು ರಕ್ಷಿಸಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷದ ಸರ್ಕಾರವು ಕಾನೂನು- ಶಿಸ್ತು ಕಾಪಾಡುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಬಿಜೆಪಿಯ ಸಂಸದ ಯೋಗಿ ಆದಿತ್ಯನಾಥ್‌, ‘ಗೋಹತ್ಯೆ ನಿಲ್ಲಿಸದಿದ್ದರೆ ಇಂತಹ ಇನ್ನಷ್ಟು ಘಟನೆಗಳು ಪುನರಾವರ್ತನೆ ಆಗ ಬಹುದು’ ಎಂದು ಬಹಿರಂಗವಾಗಿ ಹೇಳಿರುವುದು ನೋಡಿದರೆ, ಉತ್ತರ ಪ್ರದೇಶದಲ್ಲಿ ಕಾನೂನೇ ಇಲ್ಲದ ಎಂತಹ ಅರಾಜಕ ಸ್ಥಿತಿಯಿದೆ ಎನ್ನುವುದು ಗೊತ್ತಾಗುತ್ತದೆ. ಯಾವುದೇ ಧರ್ಮದ ವ್ಯಕ್ತಿಯೊಬ್ಬ ಇಂತಹದ್ದೇ ಮಾಂಸವನ್ನು ತಿನ್ನಬೇಕು ಎಂದು ಕಾನೂನು ಮಾಡುವುದಾಗಲೀ, ಇಂತಹ ದಿನಗಳಲ್ಲಿ ಮಾಂಸವನ್ನೇ ತಿನ್ನಬಾರದು ಎಂದು ಕಟ್ಟುಪಾಡು ವಿಧಿಸುವುದಾಗಲೀ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ನಮ್ಮ ಸಂವಿಧಾನಕ್ಕೆ ಬಗೆಯುವ ಅಪಚಾರ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು, ಕ್ಷುಲ್ಲಕ ಮತಬ್ಯಾಂಕ್‌ ರಾಜಕೀಯ ನಡೆಸುವ ರಾಜಕೀಯ ಪಕ್ಷಗಳ ಕುಟಿಲತೆ ಈ ಪ್ರಕರಣದಲ್ಲೂ ಎದ್ದು ಕಾಣುತ್ತದೆ. ಘಟನೆಯ ಬಗ್ಗೆ ವರದಿ ಕಳುಹಿಸುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಆದರೆ ಇವೆಲ್ಲ ಕಣ್ಣೊರೆಸುವ ತಂತ್ರಗಳಂತೆ ಕಾಣಿಸುತ್ತದೆ. 2013ರಲ್ಲಿ ಉತ್ತರ ಪ್ರದೇಶದ ಮುಜಫ್ಫರ್‌ ನಗರದಲ್ಲಿ ನಡೆದ ಕೋಮುಗಲಭೆಯ ತನಿಖಾ ವರದಿ ಈಗಾಗಲೆ ರಾಜ್ಯಪಾಲರ ಕೈಸೇರಿದೆ. 60 ಜನರ ಮಾರಣಹೋಮ ನಡೆದು, 60 ಸಾವಿರ ಜನರು ಮನೆಮಾರುಗಳನ್ನು ಕಳೆದುಕೊಂಡ ಮುಜಫ್ಫರ್‌ನಗರ ಗಲಭೆಗಳ ತನಿಖಾ ವರದಿಯಲ್ಲಿ ‘ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ಮುಖಂಡರು ಪರಸ್ಪರರನ್ನು ಪ್ರಚೋದಿಸಿ ಗಲಭೆ ಹಬ್ಬಿಸಿದರು’ ಎಂದು ನಿವೃತ್ತ ನ್ಯಾಯಮೂರ್ತಿ ವಿಷ್ಣು ಸಹಾಯ್‌ ಸ್ಪಷ್ಟವಾಗಿ ಗುರುತಿಸಿದ್ದಾರೆ. ಆದರೆ ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ. ಈ ಗಲಭೆಯಲ್ಲಿ ಆರೋಪಿಯಾಗಿ ಕೆಲ ಕಾಲ ಜೈಲಿನಲ್ಲಿದ್ದ ರಾಜಕಾರಣಿಯೊಬ್ಬರು ಈಗ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈಗಿನ ಘಟನೆಯಲ್ಲಿ ನ್ಯಾಯ ದೊರಕುತ್ತದೆಂದು ಮೊಹಮ್ಮದ್‌ ಇಖ್ಲಾಕ್‌ ಕುಟುಂಬ ನಂಬುವುದಾದರೂ ಹೇಗೆ? ‘70 ವರ್ಷಗಳಿಂದ ಈ ಊರಿನಲ್ಲಿ ಗೌರವದಿಂದ ಬದುಕುತ್ತಿದ್ದೇನೆ. ಹಿಂದೆಂದೂ ಹೀಗಿರಲಿಲ್ಲ. ಇನ್ನು ಈ ಊರಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಬೇರೆ ರಾಜ್ಯಕ್ಕೆ ವಲಸೆ ಹೋಗುವುದೊಂದೇ ದಾರಿ’ ಎಂದು ಹತ್ಯೆಗೊಳಗಾದ ಇಖ್ಲಾಕ್‌ರ ತಾಯಿ ಹೇಳಿರುವ ಮಾತು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ. ಮತಬ್ಯಾಂಕ್‌ ಸೃಷ್ಟಿಗಾಗಿ ಪರಸ್ಪರ ಧರ್ಮಗಳನ್ನು ಎತ್ತಿಕಟ್ಟಿ, ಜನರನ್ನು ವಿಭಜಿಸುವ ಈ ವಿನಾಶಕಾರಿ ರಾಜಕೀಯ ಇಡೀ ದೇಶವನ್ನೇ ನಾಶ ಮಾಡುವ ಮುನ್ನ ಜನರು ಎಚ್ಚರಗೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.