ತಾಪಮಾನ ಏರಿಕೆ ತಡೆ ಅನಿವಾರ್ಯ, ಅತ್ಯಗತ್ಯ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಈಗಿರುವ ಅತಿದೊಡ್ಡ ಸವಾಲು. ಅದು ಅನಿವಾರ್ಯವೂ ಹೌದು. ಉಷ್ಣತೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಅದರಿಂದ ಆಗುವ ಅನಾಹುತಗಳು ಅಪಾರ.ಧ್ರುವಗಳಲ್ಲಿ ಹಿಮ, ನೀರ್ಗಲ್ಲು ಕರಗಿ ಸಮುದ್ರದ ಮಟ್ಟ ಏರಬಹುದು, ಕಡಲ ತಡಿಯ ಜನವಸತಿ ಪ್ರದೇಶಗಳು ಮುಳುಗಬಹುದು, ಆಹಾರ ಉತ್ಪಾದನೆ ಕುಸಿಯಬಹುದು, ಮಳೆ ಏರುಪೇರಾಗಬಹುದು, ಜೀವ ಸಂಕುಲ ತೊಂದರೆಗೆ ಒಳಗಾಗಬಹುದು. ಹೀಗೆ ಸರಣಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆಧುನೀಕರಣ, ಯಾಂತ್ರೀಕರಣ, ಕೈಗಾರಿಕೀಕರಣದಲ್ಲಿ ಮಾನವ ಅನುಸರಿಸುತ್ತಿರುವ ನೀತಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಇಂಗಾಲದ ಹೊರಸೂಸುವಿಕೆ, ಅರಣ್ಯ ಪ್ರದೇಶಗಳ ನಾಶ ತಾಪಮಾನ ಏರಿಕೆಗೆ ಅತಿದೊಡ್ಡ ಕಾಣಿಕೆ ಕೊಡುತ್ತಿವೆ. ಇವೆರಡನ್ನೂ ನಿಯಂತ್ರಿಸುವಲ್ಲಿ ಯಶಸ್ಸು ಸಿಕ್ಕರೆ ಅಲ್ಲಿಗೆ ಅರ್ಧ ಹಾದಿ ಕ್ರಮಿಸಿದಂತೆ. ವಿಶ್ವದಲ್ಲಿ ಅತಿ ಹೆಚ್ಚು ಇಂಗಾಲದ ಮಾಲಿನ್ಯ ಹೊರಸೂಸುವ ಪ್ರಮುಖ ದೇಶಗಳೆಂದರೆ ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟ ಮತ್ತು ಭಾರತ. ಆದ್ದರಿಂದ ಜಾಗತಿಕ ತಾಪಮಾನದ ಏರಿಕೆ ಈಗಿರುವುದಕ್ಕಿಂತ 2 ಡಿಗ್ರಿಯ ಮಿತಿ ದಾಟದಂತೆ ನಿಯಂತ್ರಿಸುವ ದೊಡ್ಡ ಹೊಣೆಗಾರಿಕೆ ಈ ದೇಶಗಳ ಮೇಲಿದೆ. ತಾಪಮಾನ ನಿಯಂತ್ರಣಕ್ಕಾಗಿ ಇಂಗಾಲದ ಹೊರಸೂಸುವಿಕೆ ಮೇಲೆ ಕಡಿವಾಣ ಹಾಕುವ, ಅಪಾಯಕಾರಿ ಹಸಿರು ಮನೆ ಅನಿಲ ಬಿಡುಗಡೆ ನಿಯಂತ್ರಿಸುವ ಕ್ರಿಯಾ ಯೋಜನೆಯನ್ನು ಒಳಗೊಂಡ ಕ್ಯೋಟೊ ಒಪ್ಪಂದ 2005 ಫೆಬ್ರುವರಿಯಲ್ಲಿ ಜಾರಿಗೆ ಬಂದಿತ್ತು. ಈ ಒಪ್ಪಂದಕ್ಕೆ ಸಹಿ ಹಾಕಿದ 83 ದೇಶಗಳು ಹಸಿರು ಮನೆ ಅನಿಲದ ದುಷ್ಪರಿಣಾಮ ಹೆಚ್ಚಿಸುವ ಅಪಾಯಕಾರಿ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಸಲ್ಫರ್ ಹೆಕ್ಸಾ ಫ್ಲೋರೈಡ್, ಎಚ್ಎಫ್‌ಸಿ ಮತ್ತು ಪಿಎಫ್‌ಸಿಗಳನ್ನು 1990ಕ್ಕೆ ಹೋಲಿಸಿದರೆ 2008-12ರ ಅವಧಿಯಲ್ಲಿ ಶೇಕಡ 5.2ರಷ್ಟು ತಗ್ಗಿಸಲು ಒಪ್ಪಿಕೊಂಡಿದ್ದವು. ವಿಶ್ವಸಂಸ್ಥೆಯೇ ಈ ವಿಷಯದಲ್ಲಿ ಮುಂದೆ ನಿಂತು ಪರಿಸರ ರಕ್ಷಣೆಯ ಕಾಳಜಿ ಮೆರೆದಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಇನ್ನೂ ಹೆಚ್ಚಿನ ನಿಯಂತ್ರಣದ ಅಗತ್ಯ ಕಂಡುಬಂದಿದೆ. ಕೈಗಾರಿಕೆಯಲ್ಲಿ ಮುಂದುವರಿದ ಸಿರಿವಂತ ದೇಶಗಳು ಕ್ಯೋಟೊ ಒಪ್ಪಂದದ ಮಿತಿಯನ್ನೂ ದಾಟಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿವೆ. ತಾವು ಪಾಲಿಸಬೇಕಾದ ಕಟ್ಟುಪಾಡುಗಳನ್ನು ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ವರ್ಗಾಯಿಸಿ ಸರಿದೂಗಿಸಲು ಯತ್ನಿಸುತ್ತಿವೆ. ಇದರಿಂದ ಪ್ರಯೋಜನವಿಲ್ಲ ಎಂಬ ಜ್ಞಾನೋದಯದ ಫಲವಾಗಿಯೇ ಇದೇ ನವೆಂಬರ್ 30ರಿಂದ ಪ್ಯಾರಿಸ್‌ನಲ್ಲಿ ವಿಶ್ವಸಂಸ್ಥೆ ಆಶ್ರಯದಲ್ಲಿ ಹವಾಮಾನ ಬದಲಾವಣೆ ಕುರಿತ ಶೃಂಗಸಭೆ ಏರ್ಪಾಡಾಗಿದೆ. ಅಲ್ಲಿ ಕ್ಯೋಟೊ ಒಪ್ಪಂದಕ್ಕೆ ಬದಲಾಗಿ ಹೊಸ ಒಪ್ಪಂದ ರೂಪುಗೊಳ್ಳಲಿದೆ. ಭಾರತ ಶುಕ್ರವಾರ ಪ್ರಕಟಿಸಿದ ಎಂಟು ಅಂಶಗಳ ಹವಾಮಾನ ಕ್ರಿಯಾ ಯೋಜನೆ, ಪ್ಯಾರಿಸ್ ಶೃಂಗಕ್ಕೆ ಪೂರ್ವಸಿದ್ಧತೆ ಎಂದೇ ಹೇಳಬಹುದು. ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವ ಬದ್ಧತೆ ಇಲ್ಲಿ ಪ್ರತಿಫಲನಗೊಂಡಿದೆ. ಇಂಗಾಲದ ಹೊರಸೂಸುವಿಕೆಯನ್ನು 2005ರ ಮಟ್ಟಕ್ಕೆ ಹೋಲಿಸಿದರೆ 2030ರ ವೇಳೆಗೆ ಶೇಕಡ 33ರಿಂದ 35ರಷ್ಟು ಇಳಿಸುವ ವಾಗ್ದಾನ ಇದರಲ್ಲಿದೆ. ವಾತಾವರಣದ ಶಾಖ ಹೆಚ್ಚಿಸುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳನ್ನು ಕಡಿಮೆ ಮಾಡಿ ಜಲ, ಸೌರ, ಗಾಳಿ ಮತ್ತು ಪರಮಾಣು ಆಧಾರಿತ ಘಟಕಗಳಿಂದಲೇ ಶೇಕಡ 40ರಷ್ಟು ವಿದ್ಯುತ್ ಉತ್ಪಾದನೆ, 1 ಕೋಟಿ ಹೆಕ್ಟೇರ್ ಅರಣ್ಯ ಬೆಳೆಸುವ ಮೂಲಕ 250- 300 ಕೋಟಿ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ. ಇದನ್ನು ಸಾಧಿಸುವುದಕ್ಕಾಗಿ ಮುಂದಿನ 15 ವರ್ಷಗಳಲ್ಲಿ ಸುಮಾರು ₹ 165 ಲಕ್ಷ ಕೋಟಿಯಷ್ಟು ಭಾರಿ ಮೊತ್ತವನ್ನು ವಿನಿಯೋಗಿಸಬೇಕಿದೆ. ಇದಕ್ಕಾಗಿ ಆರ್ಥಿಕ ಮತ್ತು ತಂತ್ರಜ್ಞಾನದ ನೆರವು ನೀಡುವ ಹೊಣೆಗಾರಿಕೆ ಸಿರಿವಂತ ದೇಶಗಳ ಮೇಲಿದೆ ಎಂಬುದನ್ನೂ ಭಾರತ ನೆನಪಿಸಿರುವುದು ಸರಿಯಾದ ಕ್ರಮ. ನಮ್ಮದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಆದರೂ ನಮ್ಮ ಹಿತಾಸಕ್ತಿಗಳನ್ನು ಬದಿಗೆ ಸರಿಸಿ ಪರಿಸರ ರಕ್ಷಣೆ, ತಾಪಮಾನ ತಡೆಯುವ ಬದ್ಧತೆಯ ವಿಷಯದಲ್ಲಿ ಅಮೆರಿಕ ಮತ್ತು ಚೀನಕ್ಕಿಂತ ನಾವು ಮುಂದಿದ್ದೇವೆ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಡೆಯಲು ಪೆಟ್ರೋಲಿಯಂ ಉತ್ಪನ್ನಗಳ ಸಬ್ಸಿಡಿ ಕಡಿತ, ಪರೋಕ್ಷ ತೆರಿಗೆ ಏರಿಕೆಗೂ ಒಪ್ಪಿಕೊಂಡಿದ್ದೇವೆ. ಇದರಿಂದ ನಮ್ಮ ಜನಸಾಮಾನ್ಯರ ಬದುಕಿನಲ್ಲಿ ಸ್ವಲ್ಪ ಮಟ್ಟಿಗೆ ಅನನುಕೂಲ ಆಗಬಹುದು. ತಾಪಮಾನ ಏರಿಕೆ ತಡೆಯುವುದರಿಂದ ಸಿಗುವ ಪ್ರಯೋಜನ, ಅನಿವಾರ್ಯತೆಗೆ ಹೋಲಿಸಿದಾಗ ಇವನ್ನೆಲ್ಲ ಸಹಿಸಿಕೊಳ್ಳುವುದು ಅನಿವಾರ್ಯ. ಏಕೆಂದರೆ ಈ ಭೂಮಂಡಲ ಉಳಿದರೆ ಮಾತ್ರ ಜೀವರಾಶಿಗಳಿಗೆ ಅಸ್ತಿತ್ವ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.