ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತದ ಕನಸು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಗಾದಿಯಲ್ಲಿ ಮತ್ತೆ ಶಶಾಂಕ್‌ ಮನೋಹರ್‌ ಕುಳಿತಿರುವುದು ಈ ದೇಶದಲ್ಲಿ ಕ್ರಿಕೆಟ್‌ಗೆ ಒಳ್ಳೆಯ ಕಾಲ ಕೂಡಿ ಬಂದಿರುವುದರ ದ್ಯೋತಕ. ನೇರ ನಡೆ ನುಡಿಯ, ಪ್ರಾಮಾಣಿಕ ಕ್ರೀಡಾ ಆಡಳಿತಗಾರ ಶಶಾಂಕ್‌ ಬಿಸಿಸಿಐನಲ್ಲಿ ಪಾರದರ್ಶಕತೆ ತರಲು ಮುತುವರ್ಜಿ ವಹಿಸುತ್ತಾರೆಂದು ನಂಬಬಹುದಾಗಿದೆ. ಏಕೆಂದರೆ ಇವರಿಗೆ ಇದು ಹೊಸ ಅನುಭವವೇನಲ್ಲ. 2008ರ ಸೆಪ್ಟೆಂಬರ್‌ನಿಂದ 2011ರವರೆಗೆ ಇವರು ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ದಕ್ಷ ಎನಿಸಿಕೊಂಡಿದ್ದರು. ಆಗ ತಮ್ಮ ಮಿತಿಯೊಳಗೆ ಉತ್ತಮ ಕೆಲಸ ಮಾಡಿದ್ದರು. ಈಚೆಗೆ ಜಗಮೋಹನ್‌ ದಾಲ್ಮಿಯ ಅವರ ನಿಧನದಿಂದ ಬಿಸಿಸಿಐ ಅಧ್ಯಕ್ಷ ಪಟ್ಟ ತೆರವಾದಾಗ, ಕ್ರಿಕೆಟ್‌ ಆಡಳಿತದ ‘ಶಕ್ತಿ ಕೇಂದ್ರ’ಗಳು ಮತ್ತೆ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದವು. ಹಿಂದೆ ಐಸಿಸಿ ಅಧ್ಯಕ್ಷರಾಗಿದ್ದ ಶರದ್‌ ಪವಾರ್‌ ಮತ್ತು ಐಸಿಸಿಯ ಈಗಿನ ಮುಖ್ಯಸ್ಥ ಎನ್‌.ಶ್ರೀನಿವಾಸನ್‌ ಕೂಡಾ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟು ದಾಳಗಳನ್ನು ಉರುಳಿಸತೊಡಗಿದ್ದರು. ಬಿಸಿಸಿಐ ಕಾರ್ಯದರ್ಶಿ ಅನುರಾಗ್‌ ಠಾಕೂರ್‌ ಕೂಡಾ ಕೇಂದ್ರ ಸಚಿವ ಅರುಣ್‌ ಜೇಟ್ಲಿಯವರ ಜತೆಗೂಡಿ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು. ಈ ನಡುವೆ ಏಕಾಏಕಿ ಪೂರ್ವ ವಲಯದ ಆರೂ ಘಟಕಗಳು ಶಶಾಂಕ್‌ ಬೆಂಬಲಕ್ಕೆ ನಿಂತವು. ಶರದ್ ಪವಾರ್‌ ಬಣ ಕೂಡಾ ಶಶಾಂಕ್‌ ಆಯ್ಕೆಗೆ ಒಲವು ತೋರಿತು. ಹೀಗಾಗಿ ತೀವ್ರ ಮುಖಭಂಗಕ್ಕೆ ಒಳಗಾದ ಎನ್‌.ಶ್ರೀನಿವಾಸನ್‌ ಸದ್ದಿಲ್ಲದೆ ಹಿಂದೆ ಸರಿದರು. ನಿರ್ಣಾಯಕ ಸಭೆಯಲ್ಲಿಯೂ ಶ್ರೀನಿವಾಸನ್‌ ಪಾಲ್ಗೊಳ್ಳಲಿಲ್ಲ. ಶಶಾಂಕ್‌ ಪಾಲಿಗೆ ಎಲ್ಲವೂ ಹೂವು ಎತ್ತಿಟ್ಟಷ್ಟು ಸರಾಗವಾಯಿತು. ಕಾನೂನು ವ್ಯವಹಾರಗಳಲ್ಲಿ ಪಾಂಡಿತ್ಯ ಹೊಂದಿರುವ ನಾಗಪುರದ ಈ ವಕೀಲ, ಭಾರತದ ಕ್ರಿಕೆಟ್‌ ರಂಗಕ್ಕೆ ಹೊಸ ಆಯಾಮ ನೀಡಲು ಉತ್ಸಾಹದಿಂದಿದ್ದಾರೆ. 2017ರ ಸೆಪ್ಟೆಂಬರ್‌ವರೆಗೆ ಇವರು ಅಧಿಕಾರದಲ್ಲಿರುತ್ತಾರೆ. ಎಂಟು ದಶಕಗಳ ಬಿಸಿಸಿಐನ ಚರಿತ್ರೆಯಲ್ಲಿ ಈಚೆಗಿನ ಕೆಲವು ವರ್ಷಗಳ ಹಲವು ಘಟನೆಗಳು ಕಪ್ಪು ಚುಕ್ಕೆಗಳಂತಿವೆ. ಬೆಟ್ಟಿಂಗ್‌, ಸ್ಪಾಟ್‌ ಫಿಕ್ಸಿಂಗ್‌ನಂತಹ ಹಗರಣಗಳು ಈ ದೇಶದ ಕ್ರಿಕೆಟ್‌ಗೆ ಕಳಂಕ ತಂದಿವೆ. ಐವತ್ತೆಂಟರ ಹರೆಯದ ಶಶಾಂಕ್‌, ಕ್ರಿಕೆಟ್‌ ಆಡಳಿತ ರಂಗದಲ್ಲಿ ‘ಮಿಸ್ಟರ್‌ ಕ್ಲೀನ್‌’ ಎಂದೇ ಪ್ರಸಿದ್ಧರು. ಇವರು ಈ ನಾಡಿನಲ್ಲಿ ಕ್ರಿಕೆಟ್‌ಗೆ ಅಂಟಿದ ಕಳಂಕವನ್ನು ತೊಳೆಯುವಲ್ಲಿ ಎಷ್ಟರಮಟ್ಟಿಗೆ ದಿಟ್ಟತನ ತೋರುತ್ತಾರೆನ್ನುವುದು ಇದೀಗ ಕುತೂಹಲದ ಪ್ರಶ್ನೆ. ಶಶಾಂಕ್‌ ಅವರು ಸಾಗಬೇಕಾದ ಹಾದಿ ಸುಗಮವಾಗೇನೂ ಇಲ್ಲ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇವತ್ತು ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರೀಡಾ ಚಟುವಟಿಕೆ ನಿಜ. ಆದರೆ ಇಲ್ಲಿ ಎಲ್ಲವೂ ಚೆನ್ನಾಗಿಲ್ಲ. ಹಿತಾಸಕ್ತಿ ಸಂಘರ್ಷದ ವಿವಾದ ಕ್ರಿಕೆಟ್‌ ಮಂಡಳಿಯ ಮಾನವನ್ನು ಬೀದಿಗೆ ತಂದಿದೆ. ಅದರ ಕೇಂದ್ರ ಬಿಂದುವಿನಂತಿರುವ ಎನ್‌.ಶ್ರೀನಿವಾಸನ್‌ ಕಾನೂನಿನ ದುರ್ಬಲ ಕೊಂಡಿಗಳನ್ನೇ ಹಿಡಿದುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಸದ್ಯಕ್ಕಂತೂ ಕ್ರಿಕೆಟ್‌ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಶ್ರೀನಿವಾಸನ್‌ ಅವರನ್ನು ಶಶಾಂಕ್‌ ಹೇಗೆ ನಿಭಾಯಿಸಲಿದ್ದಾರೆಂಬುದನ್ನೂ ನೋಡಬೇಕಿದೆ. ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ಫ್ರಾಂಚೈಸ್‌ಗಳ ಬಗ್ಗೆ ನ್ಯಾಯಾಲಯ ಕಠಿಣ ನಿಲುವು ತಳೆದಿದೆ. ಆದರೆ ಮುಂದಿನ ದಿನಗಳಲ್ಲಿ ಈ ಎರಡು ತಂಡಗಳ ಬಗ್ಗೆ ಬಿಸಿಸಿಐ ಯಾವ ಧೋರಣೆ ತಳೆಯುತ್ತದೆ ಎಂಬುದೂ ಮುಖ್ಯ. ಇನ್ನು ಮುಂದೆ ‘ಹಿತಾಸಕ್ತಿ ಸಂಘರ್ಷ’ದಂತಹ ಪ್ರಕರಣಗಳು, ಸ್ಪಾಟ್‌ ಫಿಕ್ಸಿಂಗ್‌ನಂತಹ ವಂಚನೆಗಳು ಮರುಕಳಿಸದಂತೆ ಶಶಾಂಕ್‌ ಯಾವ ತೆರನಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಕಾದು ನೋಡಬೇಕಿದೆ. ಹಿಂದೆ ತಾವು ಅಧ್ಯಕ್ಷರಾಗಿದ್ದಾಗಲೇ ಲಲಿತ್‌ ಮೋದಿಯವರ ‘ಮಹತ್ವಾಕಾಂಕ್ಷೆ’ಯನ್ನು ಪ್ರಶ್ನಿಸಿದ್ದ ಶಶಾಂಕ್‌, ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ಶ್ರೀನಿವಾಸನ್‌ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎರಡು ವರ್ಷಗಳ ಹಿಂದೆಯೇ ಒತ್ತಾಯಿಸಿದ್ದರು. ಐಪಿಎಲ್‌ ಹಗರಣಗಳು ಬಯಲುಗೊಂಡ ತಕ್ಷಣ ಪ್ರತಿಕ್ರಿಯಿಸಿದ್ದ ಇವರು ಆ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಕೆಲವು ಪ್ರಭಾವಿಗಳ ವಿರೋಧ ಕಟ್ಟಿಕೊಂಡರೂ, ತಮ್ಮ ನ್ಯಾಯ ನಿಷ್ಠುರತೆಯಿಂದ ಕ್ರಿಕೆಟ್‌ ವಲಯದಲ್ಲಿ ಜನಮನ್ನಣೆ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.